SOCIAL MEDIA

Newsletter

PARTNER SITES
Select Language Select State

ಸೆನ್ಸಾರ್​ ಮಂಡಳಿಯಿಂದ ಹೊಸ ರೂಲ್ಸ್‌ : ಫಿಲ್ಮ್ ರಿಲೀಸ್‌ ಡೇಟ್‌ ನೆಪಕ್ಕೆ ಇನ್ಮುಂದೆ ವಿನಾಯಿತಿ ಇಲ್ಲ

ಸಿನಿಮಾ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕೊನೆ ಕ್ಷಣದಲ್ಲಿ ಬರುವ ಮನವಿಗಳಿಗೆ ಸಿಬಿಎಫ್‌ಸಿ ತಡೆಯೊಡ್ಡಿದೆ. ಇನ್ಮುಂದೆ ಸಂಪೂರ್ಣವಾಗಿ ಸಿದ್ಧಗೊಂಡ ಸಿನಿಮಾಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ. ರಫ್ ಕಟ್ ಅಥವಾ ಅರ್ಧಂಬರ್ಧ ಕೆಲಸದ ಸಿನಿಮಾಗಳನ್ನು ಬೋರ್ಡ್ ಸ್ವೀಕರಿಸುವುದಿಲ್ಲ ಎಂದು ಖಡಕ್‌ ಆಗಿ ಹೇಳಿದೆ.

Written By Ramya. R. Gowda
Published: Nov 02, 2026, 06:36 PM IST | Updated: Nov 02, 2026, 06:41 PM IST
Join

ಸಿನಿಮಾ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕೊನೆ ಕ್ಷಣದಲ್ಲಿ ಬರುವ ಮನವಿಗಳಿಗೆ ಸಿಬಿಎಫ್‌ಸಿ  ತಡೆಯೊಡ್ಡಿದೆ. ಇನ್ಮುಂದೆ ಸಂಪೂರ್ಣವಾಗಿ ಸಿದ್ಧಗೊಂಡ ಸಿನಿಮಾಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ. ರಫ್ ಕಟ್ ಅಥವಾ ಅರ್ಧಂಬರ್ಧ ಕೆಲಸದ ಸಿನಿಮಾಗಳನ್ನು ಬೋರ್ಡ್ ಸ್ವೀಕರಿಸುವುದಿಲ್ಲ ಎಂದು ಖಡಕ್‌ ಆಗಿ ಹೇಳಿದೆ.

ಬೆಂಗಳೂರು : ಸಿನಿಮಾ ತಂಡಗಳು ಮತ್ತು ಸೆನ್ಸಾರ್ ಮಂಡಳಿ ನಡುವಿನ ತಿಕ್ಕಾಟಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಸೆನ್ಸಾರ್ ಮಂಡಳಿಯ ನಿಯಮಗಳಿಂದ ಸಿನಿಮಾ ತಂಡಗಳು ತೊಂದರೆ ಅನುಭವಿಸುತ್ತಿವೆ ಎಂಬ ಆರೋಪಗಳ ನಡುವೆಯೇ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಈ ಬದಲಾವಣೆಗಳು ಚಿತ್ರರಂಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.

ಇನ್ಮುಂದೆ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬಂದಿದೆ ಎಂಬ ಕಾರಣಕ್ಕೆ ಸೆನ್ಸಾರ್ ಪ್ರಮಾಣಪತ್ರ ಪಡೆಯಲು ಕೊನೆಯ ಕ್ಷಣದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ರಿಲೀಸ್ ಡೇಟ್ ಘೋಷಣೆ ಮಾಡಿದ್ದೇವೆ, ಪ್ರಚಾರ ಆರಂಭಿಸಿದ್ದೇವೆ ಅಥವಾ ಪ್ರೀಮಿಯರ್ ಶೋ ನಿಗದಿಯಾಗಿದೆ ಎಂಬ ನೆಪದಲ್ಲಿ ಯಾವುದೇ ವಿಶೇಷ ವಿನಾಯಿತಿ ನೀಡುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಸ್ಪಷ್ಟಪಡಿಸಿದೆ.ಸಿಬಿಎಫ್‌ಸಿಯ ಸಿಇಒ ರಾಜೇಂದ್ರ ಸಿಂಗ್  ಈ ಹೊಸ ಆದೇಶಕ್ಕೆ ಸಹಿ ಹಾಕಿದ್ದಾರೆ. ಅದರಂತೆ, ಸಿನಿಮಾದ ಸಂಪೂರ್ಣ ಕೆಲಸಗಳು ಮುಗಿದ ನಂತರವೇ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕು. ಅರ್ಧ ಸಂಕಲನಗೊಂಡ ಚಿತ್ರಗಳು ಅಥವಾ ರಫ್ ಕಟ್ ಆವೃತ್ತಿಗಳನ್ನು ಪರಿಶೀಲನೆಗೆ ಸ್ವೀಕರಿಸುವುದಿಲ್ಲ. ಸಿನಿಮಾದ ಪೂರ್ಣ ಆವೃತ್ತಿಯನ್ನೇ ಮಂಡಳಿಗೆ ಸಲ್ಲಿಸಬೇಕಾಗುತ್ತದೆ ಎನ್ನಲಾಗಿದೆ.

ಚಿತ್ರದ ಹಿನ್ನೆಲೆ ಸಂಗೀತ ಮತ್ತು ಧ್ವನಿ ಸಂಯೋಜನೆ ಸಂಪೂರ್ಣವಾಗಿ ಮುಗಿದಿರಬೇಕು. ಗ್ರಾಫಿಕ್ಸ್, ವಿಎಫ್‌ಎಕ್ಸ್ ಹಾಗೂ ಕಲರಿಂಗ್ ಕೆಲಸಗಳು ಪೂರ್ಣಗೊಂಡಿರಬೇಕು. ಸಬ್‌ಟೈಟಲ್ಸ್ ಕೂಡ ಸಿದ್ಧವಾಗಿರಬೇಕು. ತಾತ್ಕಾಲಿಕ ಸಂಗೀತ ಅಥವಾ ಅಪೂರ್ಣ ತಾಂತ್ರಿಕ ಕೆಲಸಗಳಿರುವ ಸಿನಿಮಾಗಳನ್ನು ಮಂಡಳಿ ತಿರಸ್ಕರಿಸಬಹುದು.

ಇನ್ನು ಸಿನಿಮಾದ ಟೈಟಲ್‌ಗೂ ಹೊಸ ನಿಯಮ ಅನ್ವಯವಾಗಲಿದೆ. ಮಂಡಳಿಯ ಅಧಿಕೃತ ಅನುಮೋದನೆ ದೊರೆತ ಬಳಿಕವೇ ಚಿತ್ರದ ಶೀರ್ಷಿಕೆಯನ್ನು ಅಧಿಕೃತ ಎಂದು ಪರಿಗಣಿಸಲಾಗುತ್ತದೆ. ವಿವಾದಾತ್ಮಕ ಟೈಟಲ್‌ಗಳಿದ್ದರೆ ಅವುಗಳನ್ನು ಬದಲಿಸುವಂತೆ ಮಂಡಳಿ ಸೂಚನೆ ನೀಡುವ ಅಧಿಕಾರ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹೊಸ ನಿಯಮಗಳು ವಿಶೇಷವಾಗಿ ದೊಡ್ಡ ಬಜೆಟ್ ಸಿನಿಮಾಗಳಿಗೆ ತಲೆನೋವಾಗುವ ಸಾಧ್ಯತೆಯಿದೆ. ಹಲವು ಚಿತ್ರಗಳಲ್ಲಿ ಬಿಡುಗಡೆ ದಿನಾಂಕದವರೆಗೂ ಸಿಜಿಐ, ವಿಎಫ್‌ಎಕ್ಸ್ ಮತ್ತು ಕಲರಿಂಗ್ ಕೆಲಸಗಳು ನಡೆಯುತ್ತಿರುತ್ತವೆ. ಇದೀಗ ಇಂತಹ ಚಿತ್ರತಂಡಗಳು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಒಟ್ಟಿನಲ್ಲಿ, ಸೆನ್ಸಾರ್ ಮಂಡಳಿಯ ಪ್ರಕ್ರಿಯೆಯಲ್ಲಿ ಕೊನೆಯ ಕ್ಷಣದ ಒತ್ತಡ ಮತ್ತು ವಿನಾಯಿತಿಗಳಿಗೆ ಕಡಿವಾಣ ಹಾಕಲು ಸಿಬಿಎಫ್‌ಸಿ ಮುಂದಾಗಿದೆ. ಇದರಿಂದ ಚಿತ್ರತಂಡಗಳು ಹೆಚ್ಚು ಶಿಸ್ತಿನಿಂದ ಕಾರ್ಯನಿರ್ವಹಿಸ ಬೇಕಾಗಿದ್ದು, ಸಿನಿಮಾ ಬಿಡುಗಡೆ ಮುಂದೂಡುವ ಪರಿಸ್ಥಿತಿಗಳನ್ನು ತಪ್ಪಿಸುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

Add Zee News as a Preferred Source

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES