ಬೆಂಗಳೂರು : ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ 'ಕೆವಿಎನ್ ಪ್ರೊಡಕ್ಷನ್ಸ್' (KVN Productions) ಹೆಸರಿನಲ್ಲಿ ಮೋಸ ಮಾಡಿರುವುದಾಗಿ ಸುಪ್ರೀತ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 'ಬಲರಾಮನ ದಿನಗಳು' ಚಿತ್ರದ ನಿರ್ಮಾಪಕರು (ಪದ್ಮಾವತಿ ಫಿಲ್ಮ್ಸ್) ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಅಧಿಕೃತ ದೂರು ನೀಡಿದ್ದು, ಕೆವಿಎನ್ ಸಂಸ್ಥೆಯಿಂದ ತಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಜೂನ್ 26, 2026 ರಂದು 'ಬಲರಾಮನ ದಿನಗಳು' ಚಿತ್ರವನ್ನು ಕೆವಿಎನ್ ಸಂಸ್ಥೆ ಮೂಲಕ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಗೂ ಮುನ್ನ ಸುಪ್ರೀತ್ ನಿರ್ಮಾಪಕರನ್ನು ಭೇಟಿಯಾಗಿ, ಸಂಸ್ಥೆಯ ಪ್ರಭಾವ ಬಳಸಿ ಟಿವಿ ಹಾಗೂ ಡಿಜಿಟಲ್ (OTT) ಹಕ್ಕುಗಳನ್ನು ಒಳ್ಳೆಯ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ವಿತರಣೆಯ ಹಕ್ಕುಗಳನ್ನು ಪಡೆದುಕೊಂಡ ನಂತರ ಯಾವುದೇ ರೀತಿಯ ಡಿಜಿಟಲ್ ಅಥವಾ ಟಿವಿ ರೈಟ್ಸ್ ಮಾರಾಟ ಮಾಡಿಕೊಡದೆ ವಂಚಿಸಿದ್ದಾರೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಚಿತ್ರಮಂದಿರಗಳ ಹಂಚಿಕೆ ಮತ್ತು ಕಲೆಕ್ಷನ್ ಲೆಕ್ಕದಲ್ಲಿ ಗೋಲ್‌ಮಾಲ್?
ಚಿತ್ರವನ್ನು ಉತ್ತಮ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ, ಕೆವಿಎನ್ ಸಂಸ್ಥೆಗೆ ಸಂಬಂಧಿಸಿದ ಚಿತ್ರಮಂದಿರಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಜೊತೆಗೆ, ಕಲೆಕ್ಷನ್ ವಿಚಾರದಲ್ಲೂ ದೊಡ್ಡ ಮಟ್ಟದ ಮೋಸ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಕೆವಿಎನ್ ನೀಡಿದ ಲೆಕ್ಕದ ಪ್ರಕಾರ ₹45,000 ಗಿಂತ ಹೆಚ್ಚು ಕಲೆಕ್ಷನ್ ಆದರೆ ಮಾತ್ರ ಶೇರ್ ಸಿಗುತ್ತದೆ ಎಂದು ಹೇಳಲಾಗಿತ್ತು.
ಆದರೆ ನಿರ್ಮಾಪಕರು ಚಿತ್ರಮಂದಿರಗಳಿಗೆ ನೇರವಾಗಿ ಭೇಟಿ ನೀಡಿ ವಿಚಾರಿಸಿದಾಗ, ಎಲ್ಲಾ ಥಿಯೇಟರ್‌ಗಳವರು ನೆಟ್ ಕಲೆಕ್ಷನ್ ಮೇಲೆ 50% ಶೇರ್ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಥಿಯೇಟರ್ ಶೇರ್‌ನಲ್ಲಿಯೂ ನಿರ್ಮಾಪಕರಿಗೆ ಒಂದು ರೂಪಾಯಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕೆವಿಎನ್ ಹೆಸರು, ಎಸ್.ಎಸ್.ಎಸ್ ಎಂಟರ್‌ಪ್ರೈಸಸ್ ವ್ಯವಹಾರ: ಜಿಎಸ್‌ಟಿ ವಂಚನೆ ಆರೋಪ
ಪೋಸ್ಟರ್‌ಗಳಲ್ಲಿ 'ಕೆವಿಎನ್ ಪ್ರೊಡಕ್ಷನ್ಸ್' ಮೂಲಕ ಬಿಡುಗಡೆ ಎಂದು ಪ್ರಚಾರ ಮಾಡಿದ್ದರೂ, ಒಳಗಿನ ಎಲ್ಲಾ ವ್ಯವಹಾರಗಳನ್ನು 'ಎಸ್.ಎಸ್.ಎಸ್ ಎಂಟರ್‌ಪ್ರೈಸಸ್' (SSS Enterprises) ಹೆಸರಿನಲ್ಲಿ ನಡೆಸಲಾಗಿದೆ. ಬಿಲ್ ಹಾಗೂ ಇನ್‌ವಾಯ್ಸ್‌ಗಳನ್ನು ಎಸ್.ಎಸ್.ಎಸ್ ಎಂಟರ್‌ಪ್ರೈಸಸ್ ಹೆಸರಿನಲ್ಲೇ ಮಾಡಲಾಗಿದ್ದು, ಜಿಎಸ್‌ಟಿ ವಿಚಾರದಲ್ಲಿ ಸರ್ಕಾರಕ್ಕೂ ಹಾಗೂ ನಿರ್ಮಾಪಕರಿಗೂ ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
₹2 ಕೋಟಿ ಪರಿಹಾರಕ್ಕೆ ಮನವಿ
ಕೆವಿಎನ್ ಸಂಸ್ಥೆ ಹೆಸರಿನಲ್ಲಿ ಸುಪ್ರೀತ್ ಮಾಡಿದ ಮೋಸದಿಂದಾಗಿ ತಮಗೆ ಅಪಾರ ನಷ್ಟವಾಗಿದ್ದು, ಸಂಸ್ಥೆಯಿಂದ ₹2,00,00,000 (ಎರಡು ಕೋಟಿ ರೂಪಾಯಿ) ಪರಿಹಾರ ಕೊಡಿಸಬೇಕೆಂದು ನಿರ್ಮಾಪಕರ ಸಂಘಕ್ಕೆ ಕೋರಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ 'ಲ್ಯಾಂಡ್‌ಲಾರ್ಡ್' ಸಿನಿಮಾ ನಿರ್ಮಾಪಕರಿಗೂ ಇದೇ ರೀತಿ ವಂಚನೆಯಾಗಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದು, ಸುಪ್ರೀತ್ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಇನ್ನಾವ ನಿರ್ಮಾಪಕರಿಗೂ ಇಂತಹ ಸ್ಥಿತಿ ಬರಬಾರದು ಎಂದು ಸಂಘಕ್ಕೆ ನೀಡಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.