Darshan case update today : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ (ಅಪ್ರೂವರ್) ಪುರಸ್ಕರಿಸಿದ 59ನೇ ಸಿಸಿಎಚ್ ಸೆಷನ್ಸ್ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ
ಸೆಷನ್ಸ್ ಕೋರ್ಟ್ ನೀಡಿರುವ ಆದೇಶ ನಿಯಮಬಾಹಿರವಾಗಿದೆ. ಆರೋಪಿ ಪ್ರದೋಷ್ ಜೈಲಿನಲ್ಲಿದ್ದಾಗ ಬೇರೊಬ್ಬ ವಿಚಾರಣಾಧೀನ ಬಂದಿಯ ಐಡಿ ಬಳಸಿ ಅಕ್ರಮವಾಗಿ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ಪತ್ನಿ ಹಾಗೂ ಇತರರೊಂದಿಗೆ ಮೊಬೈಲ್ ಸಂಪರ್ಕದಲ್ಲಿದ್ದ ಬಳಿಕವೇ ಆತನ ಮನಸ್ಥಿತಿ ಬದಲಾಗಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಮಾಫಿ ಸಾಕ್ಷಿಯಾಗಲು ಪ್ರಾಸಿಕ್ಯೂಷನ್ ನೀಡಿರುವ ಕಾರಣಗಳು ಸೂಕ್ತವಾಗಿಲ್ಲ. ಪ್ರಕರಣದ 10ನೇ ಆರೋಪಿ ವಿನಯ್ ಕೂಡ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿದ್ದರೂ, ಅದನ್ನು ಪರಿಗಣಿಸದೇ ಪ್ರದೋಷ್ ಅರ್ಜಿಯನ್ನು ಮಾತ್ರ ಪರಿಗಣಿಸಲಾಗಿದೆ.
ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ
ಪ್ರದೋಷ್ ಅಕ್ರಮವಾಗಿ ಮೊಬೈಲ್ ಬಳಸಿರುವುದು ಸುಳ್ಳು. ಅವರು ಜೈಲಿನಲ್ಲಿ ಲಭ್ಯವಿರುವ ಅಧಿಕೃತ ದೂರವಾಣಿ ಸೌಲಭ್ಯವನ್ನಷ್ಟೇ ಬಳಸಿಕೊಂಡಿದ್ದಾರೆ. ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳು ಹಾಗೂ ಮೃತರ ತಾಯಿ ಪ್ರಾಸಿಕ್ಯೂಷನ್ ವಿರುದ್ಧ ಹೇಳಿಕೆ ನೀಡುತ್ತಿರುವುದರಿಂದ, ಪ್ರಕರಣದ ನೈಜ ಸತ್ಯಾಸತ್ಯತೆ ಹೊರಬರಲು ಮಾಫಿ ಸಾಕ್ಷಿಯ ಅಗತ್ಯವಿದೆ.
ನ್ಯಾಯಪೀಠದ ಮುಖ್ಯ ಅಭಿಪ್ರಾಯಗಳು
ವಿಚಾರಣೆ ನಡೆಸಿದ ನ್ಯಾ. ವಿ. ಶ್ರೀಶಾನಂದ ಅವರ ಪೀಠವು ಮಾಫಿ ಸಾಕ್ಷಿಯ ಜತೆಗೆ ಜೈಲಿನಲ್ಲಿದ್ದಾಗ ಆತ ಏನು ಮಾಡುತ್ತಿದ್ದ, ದೂರವಾಣಿ ಕರೆ ಮಾಡಿದ ವಿಚಾರ ಹಾಗೂ ಆತನ ಸ್ಥಿತಿಗತಿಗಳ ಕುರಿತು ವಿಚಾರಣೆ (ಪಾಟೀಸವಾಲು) ವೇಳೆಯಲ್ಲಿ ಪ್ರಶ್ನಿಸಲು ದರ್ಶನ್ ಪರ ವಕೀಲರಿಗೆ ಪೂರ್ಣ ಅವಕಾಶವಿದೆ ಎಂದು ಸ್ಪಷ್ಟಪಡಿಸಿತು. ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಯನ್ನು ವಿರೋಧಿಸುವ ಅಥವಾ ಪ್ರಶ್ನಿಸುವ ನೇರ ಹಕ್ಕು ಸಹ ಆರೋಪಿಗೆ ಇರುವುದಿಲ್ಲ. ಇನ್ನು ದರ್ಶನ್ ಪರವಾಗಿ ಅವರ ಪತ್ನಿ ವಿಜಯಲಕ್ಷ್ಮಿ ಅರ್ಜಿ ಸಲ್ಲಿಸಿರುವ ಕುರಿತು ಉಲ್ಲೇಖಿಸಿದ ಪೀಠ, ಪತಿ ಹೊರಬರಬೇಕೆಂದು ಪತ್ನಿ ಒದ್ದಾಡುತ್ತಿದ್ದಾರೆ; ಹೀಗಿರುವಾಗ ಅವರ ಹಕ್ಕಿನ ಬಗ್ಗೆ ಪ್ರಶ್ನಿಸುವುದು ಬೇಡ ಎಂದು ಅಭಿಪ್ರಾಯಪಟ್ಟಿತು.
ಹೈಕೋರ್ಟ್ ಅಂತಿಮ ಆದೇಶ
ವಿಚಾರಣಾ ನ್ಯಾಯಾಲಯ (59ನೇ ಸಿಸಿಎಚ್ ಕೋರ್ಟ್) ನೀಡಿರುವ ಆದೇಶದಲ್ಲಿ ಯಾವುದೇ ಕಾನೂನುಬಾಹಿರ ಅಂಶಗಳಿಲ್ಲ. ಸಾಕ್ಷಿಗಳ ವಿಚಾರಣೆ ಹಾಗೂ ಕ್ರಾಸ್ ಎಕ್ಸಾಮಿನೇಷನ್ ವೇಳೆ ಪ್ರದೋಷ್‌ನ ಹೇಳಿಕೆಗಳನ್ನು ಪ್ರಶ್ನಿಸುವ ಅವಕಾಶ ದರ್ಶನ್ ಪರ ವಕೀಲರಿಗಿರುವುದರಿಂದ, ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.