SOCIAL MEDIA

Newsletter

PARTNER SITES
Select Language Select State

ಮಾಲಾಶ್ರೀ ಜೊತೆ ಪ್ರಯಾಣಿಸುವಾಗ ಭೀಕರ ಅಪಘಾತ; 30ನೇ ವಯಸ್ಸಿನಲ್ಲೇ ಕೊನೆಯುಸಿರೆಳೆದ ಖ್ಯಾತ ನಟ!

ಕನ್ನಡ ಚಿತ್ರರಂಗದ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದರು. ಆದರೆ, ಕೇವಲ 30ನೇ ವಯಸ್ಸಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಅವರ ಬದುಕನ್ನೇ ಅಂತ್ಯಗೊಳಿಸಿತು.

Written By Chetana Devarmani
Published: Nov 17, 2026, 15:24 IST | Updated: Nov 17, 2026, 15:30 IST
Join

1990ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ಸುನೀಲ್ ಅವರ ದುರಂತ ಅಂತ್ಯ ಇಂದಿಗೂ ಅಭಿಮಾನಿಗಳ ಮನದಲ್ಲಿ ನೋವು ಮೂಡಿಸುತ್ತದೆ. ಸುಂದರ ರೂಪ, ಸೌಮ್ಯ ಸ್ವಭಾವ ಹಾಗೂ ಸಹಜ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದ್ದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ಕನ್ನಡ ಚಿತ್ರರಂಗದ ಭರವಸೆಯ ನಟನಾಗಿ ಗುರುತಿಸಿಕೊಂಡಿದ್ದರು. ಆದರೆ, ಕೇವಲ 30ನೇ ವಯಸ್ಸಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಅವರ ಬದುಕನ್ನೇ ಅಂತ್ಯಗೊಳಿಸಿತು. ಅಂದು ನಟಿ ಮಾಲಾಶ್ರೀ ಅವರೊಂದಿಗಿದ್ದ ಸುನೀಲ್ ಪ್ರಯಾಣದ ನಡುವೆ ಪ್ರಾಣ ಕಳೆದುಕೊಂಡಿದ್ದರು. ಹಾಗಾದರೆ, ಆ ಕರಾಳ ರಾತ್ರಿ ನಡೆದಿದ್ದೇನು?

ಸುನೀಲ್ ಅವರ ಮೂಲ ಹೆಸರು ರಾಮಕೃಷ್ಣ ಮಲ್ಲಿ. 1964ರ ಏಪ್ರಿಲ್ 1ರಂದು ಮಂಗಳೂರಿನಲ್ಲಿ ಜನಿಸಿದ ಅವರು, ಬಾಲ್ಯವನ್ನು ಕರಾವಳಿ ಭಾಗದಲ್ಲೇ ಕಳೆದಿದ್ದರು. ಕುಟುಂಬವು ಬಳಿಕ ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಸೈಬರ್‌ಕಟ್ಟೆಗೆ ಸ್ಥಳಾಂತರಗೊಂಡಿತ್ತು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಬಾರ್ಕೂರಿನ ನ್ಯಾಷನಲ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಪ್ರತಿದಿನ ಶಾಲೆಗೆ ಹೋಗಲು ಹಲವು ಕಿಲೋಮೀಟರ್ ನಡೆದುಕೊಂಡೇ ಸಾಗುತ್ತಿದ್ದ ದಿನಗಳೂ ಅವರ ಬದುಕಿನ ಭಾಗವಾಗಿದ್ದವು.

ಚಿಕ್ಕಂದಿನಿಂದಲೇ ಕಲೆ ಮತ್ತು ಅಭಿನಯದ ಬಗ್ಗೆ ಆಸಕ್ತಿ ಹೊಂದಿದ್ದ ಸುನೀಲ್ ಯಕ್ಷಗಾನದಲ್ಲಿಯೂ ತೊಡಗಿಸಿಕೊಂಡಿದ್ದರು. ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ತರಬೇತಿ ಪಡೆದು ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದರು. ಪಿಯುಸಿ ಬಳಿಕ ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದ ಅವರು, ಇಂಜಿನಿಯರಿಂಗ್ ಓದುತ್ತಿದ್ದಾಗಲೇ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಲು ಆರಂಭಿಸಿದ್ದರು.

ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ‘ಶ್ರುತಿ’ ಸಿನಿಮಾಕ್ಕಾಗಿ ಹೊಸ ಮುಖಗಳ ಹುಡುಕಾಟ ನಡೆಸುತ್ತಿದ್ದಾಗ ಆಡಿಷನ್ ನೀಡಿದ ರಾಮಕೃಷ್ಣ ಆಯ್ಕೆಯಾದರು. ಚಿತ್ರರಂಗದಲ್ಲಿ ಈಗಾಗಲೇ ಅದೇ ಹೆಸರಿನ ನಟರಿದ್ದ ಕಾರಣ, ಅವರಿಗೆ ‘ಸುನೀಲ್’ ಎಂದು ನಾಮಕರಣ ಮಾಡಲಾಯಿತು. 1990ರಲ್ಲಿ ಬಿಡುಗಡೆಯಾದ ‘ಶ್ರುತಿ’ ಸಿನಿಮಾ ಯಶಸ್ಸು ಕಂಡ ಬಳಿಕ ಅವರ ಸಿನಿಪಯಣ ವೇಗ ಪಡೆದುಕೊಂಡಿತು.

‘ಬೆಳ್ಳಿ ಮೋಡಗಳು’, ‘ತವರು ಮನೆ ಉಡುಗೊರೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ ಅವರು, ನಾಯಕ ನಟನಾಗಿ ಮಾತ್ರವಲ್ಲದೆ ಲವರ್ ಬಾಯ್ ಪಾತ್ರಗಳ ಮೂಲಕವೂ ಪ್ರೇಕ್ಷಕರ ಮನಗೆದ್ದರು. 1990ರಿಂದ 1994ರ ನಡುವಿನ ಅಲ್ಪಾವಧಿಯಲ್ಲಿಯೇ ಕನ್ನಡ ಸೇರಿದಂತೆ ತುಳು ಮತ್ತು ತೆಲುಗು ಭಾಷೆಗಳ ಸುಮಾರು 33 ಸಿನಿಮಾಗಳಲ್ಲಿ ನಟಿಸಿದ್ದರು.

ಆ ಕಾಲದ ಜನಪ್ರಿಯ ನಟಿ ಮಾಲಾಶ್ರೀ ಮತ್ತು ಸುನೀಲ್ ತೆರೆಮೇಲೆ ಯಶಸ್ವಿ ಜೋಡಿಯಾಗಿ ಗುರುತಿಸಿಕೊಂಡಿದ್ದರು. ಮಾಲಾಶ್ರೀ ಅಭಿನಯದ ಹಲವು ಸಿನಿಮಾಗಳಲ್ಲಿ ಸುನೀಲ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ಆಪ್ತ ಒಡನಾಟದ ಬಗ್ಗೆಯೂ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಅಭಿಮಾನಿಗಳ ನಡುವೆ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾಗಬಹುದು ಎಂಬ ನಿರೀಕ್ಷೆಯಿತ್ತು.

ಸುನೀಲ್ ಅವರ ಕುಟುಂಬದವರು ಹಾಗೂ ಆಪ್ತರು ಹಂಚಿಕೊಂಡಿರುವ ನೆನಪುಗಳ ಪ್ರಕಾರ, ಮಾಲಾಶ್ರೀ ಅವರೊಂದಿಗೆ ಸುನೀಲ್ ಉತ್ತಮ ಸ್ನೇಹ ಹೊಂದಿದ್ದರು. ಅವರು ಸುನೀಲ್ ಅವರ ಊರಿನ ಮನೆಗೂ ಆಗಾಗ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

1994ರ ಜುಲೈ 24 ಕನ್ನಡ ಚಿತ್ರರಂಗ ಮರೆಯಲಾಗದ ದಿನ. ಬಾಗಲಕೋಟೆ ಸಮೀಪದ ಹೊಸಪೇಟೆ ಭಾಗದಲ್ಲಿ ಬಸವರಾಜು ಅವರ ನಾಟಕ ಕಂಪನಿಯ ಕಾರ್ಯಕ್ರಮವೊಂದಕ್ಕೆ ನಟಿ ಮಾಲಾಶ್ರೀ ಮತ್ತು ಸುನೀಲ್ ಮುಖ್ಯ ಅತಿಥಿಗಳಾಗಿ ತೆರಳಿದ್ದರು. ಕಾರ್ಯಕ್ರಮ ಮುಗಿಯುವಷ್ಟರಲ್ಲಿ ರಾತ್ರಿ ಆಗಿತ್ತು. ಪ್ರಯಾಣದ ಆಯಾಸದಿಂದ ಸುನೀಲ್ ಅಲ್ಲಿಯೇ ಉಳಿದುಕೊಳ್ಳುವ ಆಸೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಆದರೆ, ಕಾರು ಚಾಲಕ ಕೃಷ್ಣ ಅವರಿಗೆ ಮರುದಿನ ತಮ್ಮ ಮಗಳ ಹುಟ್ಟುಹಬ್ಬವಿದ್ದ ಕಾರಣ ರಾತ್ರಿ ಪ್ರಯಾಣ ಆರಂಭಿಸುವಂತೆ ಮನವಿ ಮಾಡಿದ್ದರು. ಚಾಲಕನ ಮನವಿಗೆ ಒಪ್ಪಿದ ಸುನೀಲ್, ಬೆಂಗಳೂರಿನತ್ತ ಹೊರಡಲು ನಿರ್ಧರಿಸಿದರು.

ರಾತ್ರಿ ಸುಮಾರು 1 ಗಂಟೆಗೆ ಕಾಂಟೆಸ್ಸಾ ಕಾರಿನಲ್ಲಿ ಪ್ರಯಾಣ ಆರಂಭವಾಯಿತು. ಕಾರಿನ ಮುಂಭಾಗದಲ್ಲಿ ಚಾಲಕ ಕೃಷ್ಣ ಮತ್ತು ಸುನೀಲ್ ಅವರ ಸಂಬಂಧಿ ಸಚಿನ್ ಕುಳಿತಿದ್ದರು. ಹಿಂಬದಿಯ ಸೀಟಿನಲ್ಲಿ ಸುನೀಲ್ ಮತ್ತು ನಟಿ ಮಾಲಾಶ್ರೀ ಪ್ರಯಾಣಿಸುತ್ತಿದ್ದರು.

ಪ್ರಯಾಣದ ಆರಂಭದಲ್ಲಿ ಎಲ್ಲರೂ ಪರಸ್ಪರ ಮಾತನಾಡುತ್ತಾ ಸಾಗಿದ್ದರು. ರಾತ್ರಿ ಸುಮಾರು 3.30ರವರೆಗೂ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆದರೆ, ಮುಂಜಾನೆ ಸುಮಾರು 4 ಗಂಟೆಯ ವೇಳೆಗೆ ಚಿತ್ರದುರ್ಗದ ಸಮೀಪ ಎದುರಿನಿಂದ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು.

ಈ ಭೀಕರ ಅಪಘಾತದಲ್ಲಿ ಕಾರು ಚಾಲಕ ಕೃಷ್ಣ ಸ್ಥಳದಲ್ಲೇ ಮೃತಪಟ್ಟರು. ಸುನೀಲ್ ಅವರಿಗೂ ಗಂಭೀರ ಗಾಯಗಳಾಗಿದ್ದವು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಸಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದರು. ಆಗ ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಕಾರಿನಲ್ಲಿದ್ದ ಮಾಲಾಶ್ರೀ ಮತ್ತು ಸಚಿನ್ ತೀವ್ರವಾಗಿ ಗಾಯಗೊಂಡರೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಸುನೀಲ್ ಅವರ ನಿಧನದ ಸುದ್ದಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿತ್ತು. ಅವರ ಮೃತದೇಹವನ್ನು ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಎಡ್ತಾಡಿಯಲ್ಲಿರುವ ಸ್ವಂತ ಮನೆಗೆ ತರಲಾಯಿತು. ಭಾರಿ ಮಳೆಯ ನಡುವೆಯೂ ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಚಿತ್ರರಂಗದ ಹಲವು ಗಣ್ಯರು ಮತ್ತು ಆಪ್ತರು ಅವರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದರು.

ಅಭಿಮಾನಿಗಳ ಒತ್ತಾಯದ ಮೇರೆಗೆ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸ್ಮಾರಕವನ್ನೂ ನಿರ್ಮಿಸಲಾಗಿದೆ ಎಂದು ಅವರ ಆಪ್ತರು ನೆನಪಿಸಿಕೊಳ್ಳುತ್ತಾರೆ.

ಸಿನಿಮಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಕನಸು ಕಂಡಿದ್ದ ಸುನೀಲ್ ಅವರಿಗೆ ರಾಜಕೀಯದಲ್ಲಿಯೂ ಆಸಕ್ತಿ ಇತ್ತು ಎನ್ನಲಾಗಿದೆ. ಅವರು ಬದುಕಿದ್ದರೆ ಉತ್ತಮ ನಟನಾಗಿ ಮಾತ್ರವಲ್ಲದೆ ನಿರ್ಮಾಪಕ ಮತ್ತು ರಾಜಕಾರಣಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದರು ಎಂಬುದು ಅವರ ಆಪ್ತರ ಅಭಿಪ್ರಾಯ.

ಕೇವಲ ನಾಲ್ಕು ವರ್ಷಗಳ ಸಿನಿಪಯಣದಲ್ಲಿ 33ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಸುನೀಲ್ ಅವರ ಬದುಕು ದುರಂತದಲ್ಲಿ ಅಂತ್ಯಗೊಂಡರೂ, ಅವರ ಅಭಿನಯ ಮತ್ತು ಮಾಲಾಶ್ರೀ ಜೊತೆಗಿನ ಜನಪ್ರಿಯ ಜೋಡಿ ಇಂದಿಗೂ ಕನ್ನಡ ಚಿತ್ರರಂಗದ ನೆನಪುಗಳಲ್ಲಿ ಉಳಿದಿದೆ.

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES