SOCIAL MEDIA

Newsletter

PARTNER SITES
Select Language Select State

ಅತಿ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಕನ್ನಡ ನಟಿ ಯಾರು?

Sandalwood Evergreen Actress: ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ನಟಿ ಯಾರು? 161 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ಬಿ. ಸರೋಜಾದೇವಿ ಅವರ ಸಿನಿಮಾ ಪಯಣ, ದಾಖಲೆ ಮತ್ತು ರಾಜ್‌ಕುಮಾರ್ ಜೊತೆಗಿನ ಜನಪ್ರಿಯ ಜೋಡಿಯ ಸಂಪೂರ್ಣ ಮಾಹಿತಿ.

Reported By Chetana Devarmani Written By Chetana Devarmani
Published: Sep 12, 2026, 10:25 PM IST | Updated: Sep 17, 2026, 04:02 PM IST
Join

Sandalwood Evergreen Actress: ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ನಾಯಕಿಯಾಗಿ ಮಿಂಚಿದ ಅನೇಕ ಪ್ರತಿಭಾವಂತ ನಟಿಯರಿದ್ದಾರೆ. ಇಂದಿನ ಕಾಲದಲ್ಲಿ ಒಬ್ಬ ನಟಿ ವರ್ಷಕ್ಕೆ ಒಂದೆರಡು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವುದೇ ದೊಡ್ಡ ಮಾತು ಎಂಬಂತಾಗಿದೆ. ಆದರೆ ನಾಯಕಿಯರು ನಿರಂತರವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಒಂದು ಕಾಲವಿತ್ತು. ಅಂತಹ ದಿಗ್ಗಜ ನಟಿಯರ ಪೈಕಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ನಟಿಯರ ವಿಚಾರ ಬಂದಾಗ ಕೇಳಿಬರುವ ಪ್ರಮುಖ ಹೆಸರು ಬಿ. ಸರೋಜಾದೇವಿ. ನೋಡಲು ಅಪ್ರತಿಮ ಸುಂದರಿ. ಅಭಿನಯ ಸರಸ್ವತಿ ನಟಿ ಸರೋಜಾದೇವಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಿ. ಸರೋಜಾದೇವಿ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಅವರಿಗೆ ‘ಅಭಿನಯ ಸರಸ್ವತಿ’ ಎಂಬ ಗೌರವ ದೊರೆತಿದೆ. ತಮ್ಮ ಸೌಂದರ್ಯ, ಅಭಿನಯ, ನೃತ್ಯದ ಮೂಲಕ ಬಿ. ಸರೋಜಾದೇವಿ ವಿಶೇಷ ಗುರುತು ಪಡೆದವರು. ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರೊಂದಿಗೆ ಅಭಿನಯಿಸಿದ ಸಿನಿಮಾಗಳು ಹಿಟ್‌ ಆದವು. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಡಾ. ರಾಜ್‌ಕುಮಾರ್ ಮತ್ತು ಬಿ. ಸರೋಜಾದೇವಿ ಒಬ್ಬರಾಗಿದ್ದರು.

ಬಿ. ಸರೋಜಾದೇವಿ ಅವರು 1950ರ ದಶಕದಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದರು. 1955ರಲ್ಲಿ ಬಿಡುಗಡೆಯಾದ ‘ಮಹಾಕವಿ ಕಾಳಿದಾಸ’ ಅವರ ಪ್ರಮುಖ ಆರಂಭಿಕ ಸಿನಿಮಾಗಳಲ್ಲಿ ಒಂದಾಗಿತ್ತು. ಆ ನಂತರ ಅವರ ಸಿನಿಮಾ ಪಯಣ ವೇಗವಾಗಿ ಬೆಳೆಯಿತು. ಅಲ್ಪಾವಧಿಯಲ್ಲೇ ಅವರು ಕನ್ನಡ ಚಿತ್ರರಂಗದ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡರು. ಸರೋಜಾದೇವಿ ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಸರೋಜಾದೇವಿ ಅವರ ಜನಪ್ರಿಯತೆ ದಕ್ಷಿಣ ಭಾರತವನ್ನು ಮೀರಿ ದೇಶಾದ್ಯಂತ ವಿಸ್ತರಿಸಿತು.

161 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ದಾಖಲೆ

ಬಿ. ಸರೋಜಾದೇವಿ ಅವರ ಸಿನಿಮಾ ವೃತ್ತಿಜೀವನದಲ್ಲಿ ಅತಿ ಹೆಚ್ಚು ಬಾರಿ ನಾಯಕಿ ಪಾತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ, ಸರೋಜಾದೇವಿ ಅವರು 161 ಸಿನಿಮಾಗಳಲ್ಲಿ ಸತತವಾಗಿ ನಾಯಕಿಯಾಗಿ ನಟಿಸಿದ ಅಪರೂಪದ ದಾಖಲೆ ಹೊಂದಿದ್ದಾರೆ. ಮತ್ತೊಂದು ದಾಖಲೆ ಪ್ರಕಾರ, 1955 ರಿಂದ 1978 ರ ವರೆಗೆ ಸುಮಾರು 23 ವರ್ಷಗಳ ಅವಧಿಯಲ್ಲಿ ಅವರು 154 ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.

ಬಿ. ಸರೋಜಾದೇವಿ ಅವರ ಹೆಸರನ್ನು ಕನ್ನಡ ಪ್ರೇಕ್ಷಕರು ನೆನಪಿಸಿಕೊಂಡಾಗ ಡಾ. ರಾಜ್‌ಕುಮಾರ್ ಅವರೊಂದಿಗಿನ ಅವರ ಜೋಡಿ ಕೂಡ ನೆನಪಿಗೆ ಬರುತ್ತದೆ. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಾಯಕ-ನಾಯಕಿ ಜೋಡಿಗಳಲ್ಲಿ ರಾಜ್‌ಕುಮಾರ್ ಮತ್ತು ಸರೋಜಾದೇವಿ ಅವರ ಜೋಡಿಗೂ ವಿಶೇಷ ಸ್ಥಾನವಿದೆ. ಇಬ್ಬರೂ ಹಲವು ಯಶಸ್ವಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ‘ಕಿತ್ತೂರು ಚೆನ್ನಮ್ಮ’, ‘ಭಕ್ತ ಕುಂಬಾರ’, ‘ಚಂದ್ರಹಾಸ’, ‘ನಾಗಪೂಜಾ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಕನ್ನಡ ಮಾತ್ರವಲ್ಲ, ತಮಿಳು ಚಿತ್ರರಂಗದಲ್ಲೂ ದೊಡ್ಡ ಹೆಸರು

ಸರೋಜಾದೇವಿಯವರ ಜನಪ್ರಿಯತೆ ಕನ್ನಡಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತಮಿಳು ಚಿತ್ರರಂಗದಲ್ಲೂ ಬಹುಬೇಡಿಕೆಯ ನಾಯಕಿಯಾಗಿದ್ದರು. ಎಂಜಿಆರ್ ಮತ್ತು ಶಿವಾಜಿ ಗಣೇಶನ್ ಅವರಂತಹ ದಿಗ್ಗಜ ನಟರೊಂದಿಗೆ ಅವರು ಅಭಿನಯಿಸಿದ್ದಾರೆ. ತಮಿಳು ಸಿನಿಮಾಗಳಲ್ಲಿಯೂ ಅಪಾರ ಮೆಚ್ಚುಗೆ ದೊರೆಯಿತು. ಈ ಕಾರಣದಿಂದಲೇ ಅವರು ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿಯೂ ಅವರು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಹೀಗಾಗಿ ನಾಲ್ಕು ಪ್ರಮುಖ ಭಾರತೀಯ ಭಾಷೆಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಅಪರೂಪದ ನಟಿಯರಲ್ಲಿ ಅವರು ಒಬ್ಬರು.

ಸರೋಜಾದೇವಿ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಕೌಟುಂಬಿಕ ಮತ್ತು ಪ್ರೇಮಕಥಾ ಸಿನಿಮಾಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದರು. ಅವರ ಅಭಿನಯದ ಜೊತೆಗೆ ಅವರ ನೃತ್ಯ ಮತ್ತು ಸಂಭಾಷಣೆ ಹೇಳುವ ಶೈಲಿಗೂ ಪ್ರೇಕ್ಷಕರಿಂದ ಮೆಚ್ಚುಗೆ ದೊರೆಯುತ್ತಿತ್ತು. ಸಿನಿಮಾ ವೃತ್ತಿಜೀವನದ ನಂತರದ ಹಂತದಲ್ಲಿ ಸರೋಜಾದೇವಿ ನಾಯಕಿ ಪಾತ್ರಗಳ ಜೊತೆಗೆ ಪೋಷಕ ಪಾತ್ರಗಳಲ್ಲಿಯೂ ಕಾಣಿಸಿಕೊಂಡರು. ಕಾಲ ಬದಲಾದಂತೆ ಅವರ ಪಾತ್ರಗಳ ಸ್ವರೂಪವೂ ಬದಲಾಯಿತು. ಯುವ ನಾಯಕಿಯ ಪಾತ್ರಗಳಿಂದ ತಾಯಿ, ಹಿರಿಯ ಮಹಿಳೆ ಮತ್ತು ಕುಟುಂಬದ ಪ್ರಮುಖ ಪಾತ್ರಗಳವರೆಗೆ ಅವರು ಹಲವು ರೀತಿಯ ಪಾತ್ರಗಳನ್ನು ನಿರ್ವಹಿಸಿದರು. ಇದರಿಂದಾಗಿ ಅವರ ಸಿನಿಮಾ ಪಯಣ ಒಂದು ನಿರ್ದಿಷ್ಟ ಕಾಲಘಟ್ಟಕ್ಕೆ ಸೀಮಿತವಾಗದೆ ಹಲವು ತಲೆಮಾರುಗಳವರೆಗೆ ಮುಂದುವರಿಯಿತು.

ಬಿ.ಸರೋಜಾದೇವಿ ನಟಿಸಿದ ಹಲವು ಸಿನಿಮಾಗಳು ಇಂದಿಗೂ ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾಗಳಾಗಿ ಪರಿಗಣಿಸಲ್ಪಡುತ್ತವೆ. ನಟಿ ಬಿ.ಸರೋಜಾದೇವಿಯವರ ಜೊತೆಗೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪಂಡರಿಬಾಯಿ, ಜಯಂತಿ, ಆರತಿ, ಲಕ್ಷ್ಮಿ, ಭಾರತಿ, ಕಲ್ಪನಾ ಸೇರಿದಂತೆ ಹಲವು ನಟಿಯರು ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಜಯಂತಿ ಅವರು ಕನ್ನಡ ಚಿತ್ರರಂಗದ ಅತ್ಯಂತ ಬಹುಮುಖ ನಟಿಯರಲ್ಲಿ ಒಬ್ಬರು. ನಾಯಕಿ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳವರೆಗೆ ಅವರು ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ಅಭಿನಯಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳೂ ದೊರೆತಿವೆ. ಅದೇ ರೀತಿ ಕಲ್ಪನಾ, ಆರತಿ ಮತ್ತು ಭಾರತಿ ಅವರಂತಹ ನಟಿಯರು ಕನ್ನಡ ಚಿತ್ರರಂಗದ ಸುವರ್ಣಯುಗದಲ್ಲಿ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು.

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES