SOCIAL MEDIA

Newsletter

PARTNER SITES
Select Language Select State

ಶಿವಣ್ಣಗೆ 'ಹ್ಯಾಟ್ರಿಕ್ ಹೀರೋ' ಬಿರುದು ಬಂದಿದ್ದು ಹೇಗೆ ಗೊತ್ತೆ..? ಫ್ಯಾನ್ಸ್‌ಗೂ ಈ ವಿಚಾರ ಗೊತ್ತಿಲ್ಲ

ಶಿವಣ್ಣ.. ಇದು ಕೇವಲ ಒಂದು ಹೆಸರಲ್ಲ.. ಕನ್ನಡಿಗರ ಅಸ್ಮಿತೆ. ದೊಡ್ಮನೆ ವಂಶದ ಕುಡಿ ಇಂದು ಕರುನಾಡ ಚಕ್ರವರ್ತಿಯಾಗಿ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿದ್ದಾರೆ.. ಅಂದಹಾಗೆ, ಡಾ. ಶಿವರಾಜ್‌ಕುಮಾರ್‌ ಅವರಿಗೆ "ಹ್ಯಾಟ್ರೀಕ್‌ ಹೀರೋ" ಎಂಬ ಬಿರುದು ಬಂದಿದ್ದು ಹೇಗೆ ಗೊತ್ತೆ..? ಇದರ ಹಿಂದೆ ಒಂದು ರೋಚಕ ಕಥೆಯೇ ಇದೆ..

Reported By Krishna NK Written By Krishna NK
Published: Sep 12, 2026, 05:46 PM IST | Updated: Sep 17, 2026, 04:05 PM IST
Image Credit: real story behind of How Dr Shiva Rajkumar Earned the Iconic Hat trick Hero Title
Join

Dr. Shivarajkumar achievements : ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಡಾ. ಶಿವರಾಜ್‌ಕುಮಾರ್ ಅವರಿಗೆ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದು ಸಿಕ್ಕಿದ್ದು ಅವರ ವೃತ್ತಿಜೀವನದ ಆರಂಭಿಕ ಅಭೂತಪೂರ್ವ ಯಶಸ್ಸಿನಿಂದ. 1986ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವಣ್ಣ, ತಮ್ಮ ಮೊದಲ ಮೂರು ಸಿನಿಮಾಗಳಲ್ಲೇ ಸತತ ಶತದಿನೋತ್ಸವ ಕಾಣುವ ಮೂಲಕ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ದಾಖಲೆ ಬರೆದರು..

ಹೌದು.. ಅವರ ಮೊದಲ ಚಿತ್ರ 'ಆನಂದ್' (1986) ಬಿಡುಗಡೆಯಾಗಿ ರಾಜ್ಯಾದ್ಯಂತ 100ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು ಸೂಪರ್ ಹಿಟ್ ಆಯಿತು. ಅದಾದ ನಂತರ ಬಂದ ಎರಡನೇ ಸಿನಿಮಾ 'ರಥಸಪ್ತಮಿ' (1986) ಕೂಡ ಬಾಕ್ಸ್ ಆಫೀಸ್‌ನಲ್ಲಿ 100 ದಿನ ಪೂರೈಸಿ ಭರ್ಜರಿ ಯಶಸ್ಸು ಗಳಿಸಿತು. ಮೂರನೇ ಚಿತ್ರ 'ಮನಮೆಚ್ಚಿದ ಹುಡುಗಿ' (1987) ಸಹ ಚಿತ್ರಮಂದಿರಗಳಲ್ಲಿ ಶತದಿನೋತ್ಸವ (100+ ದಿನ) ಆಚರಿಸಿಕೊಂಡಿತು.

ಹೀಗೆ ವೃತ್ತಿಜೀವನದ ಆರಂಭದಲ್ಲೇ ಸತತ ಮೂರು ಸಿನಿಮಾಗಳು 100 ದಿನಗಳ ಕಾಲ ಪ್ರದರ್ಶನ ಕಂಡು 'ಸಿಲ್ವರ್ ಜುಬಿಲಿ' (Silver Jubilee) ಬ್ಲಾಕ್‌ಬಸ್ಟರ್ ಆದ ಅಪರೂಪದ ಸಾಧನೆ ಕಂಡ ಕನ್ನಡ ಚಿತ್ರರಂಗ, ಮಾಧ್ಯಮಗಳು ಮತ್ತು ಅಭಿಮಾನಿಗಳು ಶಿವರಾಜ್‌ಕುಮಾರ್ ಅವರಿಗೆ ಪ್ರೀತಿಯಿಂದ "ಹ್ಯಾಟ್ರಿಕ್ ಹೀರೋ" ಎಂಬ ಶಾಶ್ವತ ಬಿರುದನ್ನು ನೀಡಿದರು.

ಸ್ಯಾಂಡಲ್‌ವುಡ್‌ ನಾಯಕ ನಟರಾಗಿ ಶಿವಣ್ಣ ಎಂಟ್ರಿ : ವರನಟ ಡಾ. ರಾಜ್‌ಕುಮಾರ್ ಅವರ ಹಿರಿಯ ಮಗನಾಗಿ ಚಿತ್ರರಂಗಕ್ಕೆ ಬಂದ ಶಿವರಾಜ್‌ ಕುಮಾರ್‌ ಅವರ ಮೇಲೆ ದೊಡ್ಡ ಜವಾಬ್ದಾರಿ ಬಿದ್ದಿತ್ತು. 1986ರಲ್ಲಿ 'ಆನಂದ್' ಚಿತ್ರದ ಮೂಲಕ ಶಿವಣ್ಣ ಪ್ರಮುಖ ನಾಯಕ ನಟನಾಗಿ ಕನ್ನಡ ಸಿನಿಲೋಕ ಪ್ರವೇಶಿಸಿದರು. ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶಿಸಿದ ಈ ಪ್ರೇಮಕಥಾ ಚಿತ್ರದಲ್ಲಿ ನಟಿ ಸುಧಾರಾಣಿ ನಾಯಕಿಯಾಗಿ ಅಭಿನಯಿಸಿದರು. ಶಿವಣ್ಣ ತಮ್ಮದೇ ಆದ ವಿಶಿಷ್ಟ ನೃತ್ಯ ಶೈಲಿ, ಅದ್ಭುತ ಶಕ್ತಿ (energy) ಮತ್ತು ಸಹಜ ಅಭಿನಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. 'ಆನಂದ್' ಸಿನಿಮಾ ಬ್ಲಾಕ್‌ಬಸ್ಟರ್ ಆಗಿ, ಶಿವಣ್ಣ ಅವರಿಗೆ ಚಿತ್ರರಂಗದಲ್ಲಿ ಗಟ್ಟಿ ಬುನಾದಿ ಹಾಕಿಕೊಟ್ಟಿತು. ಅಂದಹಾಗೆ, ಶಿವರಾಜ್‌ಕುಮಾರ್ ಅವರು ನಾಯಕ ನಟನಾಗುವ ಮುನ್ನವೇ ತಮ್ಮ ತಂದೆ, 'ವರನಟ' ಡಾ. ರಾಜ್‌ಕುಮಾರ್ ಅವರ ಜೊತೆ ಬಾಲನಟನಾಗಿ ಬೆಳ್ಳಿಪರದೆಯಲ್ಲಿ ಅಭಿನಯಿಸಿದ್ದು, ನಟನೆಯನ್ನು ಕರತಲಾಮಲಕ ಮಾಡಿಕೊಳ್ಳಲು ಮತ್ತಷ್ಟು ಸಹಕಾರಿಯಾಗಿತ್ತು ಅನ್ನೋದನ್ನ ಮರೆಯುವಂತಿಲ್ಲ.

ತಂದೆಯ ಜೊತೆ ಪರದೆಯ ಮೇಲೆ ಬಾಲ ಶಿವಣ್ಣ : ಶಿವಣ್ಣ ಅವರು ಬಾಲನಟನಾಗಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆಯ ಈ ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಂಡರು. 1968 ರಲ್ಲಿ ತೆರೆಕಂಡ ಧೂಮಕೇತು ಎಂಬ ಸಿನಿಮಾದಲ್ಲಿ ಅಪ್ಪನ ಜೊತೆ ನಟಿಸಿದ್ದರು.. ಅಷ್ಟೇ ಅಲ್ಲದೆ, ಸಾವ್ರಕಾಲಿಕ ಶ್ರೇಷ್ಠ ಸಿನಿಮಾ ಶ್ರೀ ಶ್ರೀನಿವಾಸ ಕಲ್ಯಾಣ (1974)ದಲ್ಲಿಯೂ ಶಿವಣ್ಣ 'ಮಾಸ್ಟರ್ ಪುಟ್ಟಸ್ವಾಮಿ' ಎಂಬ ಹೆಸರಿನಲ್ಲಿ ಪದ್ಮಾವತಿಯ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮಗನ ಚಿತ್ರದಲ್ಲಿಯೂ ರಾಜ್‌ ಮಿಂಚು : ಶಿವಣ್ಣ ನಾಯಕ ನಟರಾದ ಮೇಲೆಯೂ ಮಗನ ಸಿನಿಮಾದಲ್ಲಿ ರಾಜ್‌ ಪ್ರವೇಶ ಇರುತ್ತಿತ್ತು. ಈ ಪೈಕಿ "ಶಿವ ಮೆಚ್ಚಿದ ಕಣ್ಣಪ್ಪ (1988) ಚಿತ್ರದಲ್ಲಿ ಶಿವನಾಗಿ ಅಣ್ಣಾವ್ರು ಕಾಣಿಸಿಕೊಂಡಿದ್ದರು. ಗಂಧದ ಗುಡಿ ಮುಂದುವರೆದ ಭಾಗ 2 (1994) ರಲ್ಲಿಯೂ ನಟಿಸಿ ಮಗನಿಗೆ ಸಾಥ್‌ ನೀಡಿದ್ದರು. ಹೀಗೆ ಹಲವಾರು ಚಿತ್ರದಲ್ಲಿ ಅಪ್ಪ-ಮಗನನ್ನು ಒಂದೇ ದೃಶ್ಯದಲ್ಲಿ ಕಂಡು ಅಭಿಮಾನಿಗಳು ಪುಳಕಿತರಾಗಿದ್ದರು.

ಶಿವಣ್ಣ ಅವರಿಗೆ ಒಲಿದ ಪ್ರಮುಖ ಬಿರುದುಗಳು ಮತ್ತು ಪ್ರಶಸ್ತಿಗಳು : ಡಾ. ಶಿವರಾಜ್‌ ಕುಮಾರ್‌ ಅವರ ಸುದೀರ್ಘ ವೃತ್ತಿಜೀವನದಲ್ಲಿ ಅಭಿನಯ ಮತ್ತು ಜನಪ್ರಿಯತೆಯಿಂದ ಅವರಿಗೆ ಅನೇಕ ಗೌರವದ ಬಿರುದುಗಳು ಸಂದಿವೆ. ಸತತ 3 ಮೊದಲ ಸಿನಿಮಾಗಳು ಶತದಿನ ಪೂರೈಸಿದ್ದಕ್ಕಾಗಿ "ಹ್ಯಾಟ್ರಿಕ್ ಹೀರೋ" ಗೌರವ ಲಭಿಸಿತು. ಗಾಜನೂರು ಗಂಡಿಗೆ ಲಕ್ಷಾಂತರ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗ ಅತ್ಯಂತ ಗೌರವಾನ್ವಿತ ಶೀರ್ಷಿಕೆ "ಕರುನಾಡ ಚಕ್ರವರ್ತಿ" ಎಂಬ ಟೈಟಲ್‌ ನೀಡಿ ಪ್ರೀತಿ ವ್ಯಕ್ತಪಡಿಸಿತು.  ಅಷ್ಟೇ ಅಲ್ಲದೆ, ನಾಲ್ಕು ದಶಕಗಳ ಕಾಲ ಚಿತ್ರರಂಗವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಾಯಕನಿಗೆ ಸ್ಯಾಂಡಲ್‌ವುಡ್ ಕಿಂಗ್ ಹಾಗೂ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಯಶಸ್ಸು ಕಂಡಿದ್ದಕ್ಕಾಗಿ "ಸೆಂಚುರಿ ಸ್ಟಾರ್" ಬಿರುದು ಲಭಿಸಿದೆ. ಶಿವಣ್ಣ ಅವರು 4 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 4 ಫಿಲ್ಮ್‌ಫೇರ್ ಪ್ರಶಸ್ತಿಗಳು, SIIMA ಪ್ರಶಸ್ತಿಗಳು ಹಾಗೂ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ.

ಪ್ರಮುಖ ಸಾಧನೆಗಳು ಮತ್ತು ಮೈಲಿಗಲ್ಲುಗಳು
'ಓಂ' (1995) ಎಂಬ ಕಲ್ಟ್ ಕ್ಲಾಸಿಕ್: ಉಪೇಂದ್ರ ನಿರ್ದೇಶನದ ಈ ಸಿನಿಮಾ ರೌಡಿಸಂ ಶೈಲಿಗೆ ಹೊಸ ಭಾಷೆ ಬರೆಯಿತು. ಸತ್ಯನ ಪಾತ್ರದಲ್ಲಿ ಶಿವಣ್ಣ ಅವರ ಅಭಿನಯಕ್ಕೆ ಅತ್ಯುತ್ತಮ ನಟ 'ರಾಜ್ಯ ಚಲನಚಿತ್ರ ಪ್ರಶಸ್ತಿ' ಒಲಿಯಿತು. ಈ ಚಿತ್ರ 500ಕ್ಕೂ ಹೆಚ್ಚು ಬಾರಿಗೆ ಮರು-ಬಿಡುಗಡೆಯಾಗಿ (re-release) ಭಾರತೀಯ ಚಿತ್ರರಂಗದಲ್ಲೇ ವಿಶ್ವದಾಖಲೆ ಬರೆದಿದೆ.
ದಾಖಲೆಯ 'ಜನುಮದ ಜೋಡಿ' (1996): ಗ್ರಾಮೀಣ ಹಿನ್ನೆಲೆಯ ಈ ಪ್ರೇಮಕಥಾ ಚಿತ್ರ ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ (365+ ದಿನಗಳು) ಪ್ರದರ್ಶನ ಕಂಡು ಭಾರಿ ಯಶಸ್ಸು ತಂದುಕೊಟ್ಟಿತು.
'ಜೋಗಿ' (2005) ತಂದ ಸುನಾಮಿ: ಪ್ರೇಮ್ ನಿರ್ದೇಶನದ 'ಜೋಗಿ' ಸಿನಿಮಾ ಸ್ಯಾಂಡಲ್‌ವುಡ್‌ನ ಎಲ್ಲಾ ಗಲ್ಲಾಪೆಟ್ಟಿಗೆ ದಾಖಲೆಗಳನ್ನು ಉಡೀಸ್ ಮಾಡಿತು. ಶಿವಣ್ಣ ಅವರ ಎಮೋಷನಲ್ ಅಭಿನಯಕ್ಕೆ ಮತ್ತೊಮ್ಮೆ ರಾಜ್ಯ ಪ್ರಶಸ್ತಿ ಲಭಿಸಿತು.
ಪಾನ್-ಇಂಡಿಯಾ ಸ್ಟಾರ್: 'ಜೈಲರ್' (2023) ಚಿತ್ರದ ನರಸಿಂಹ ಪಾತ್ರ ಮತ್ತು 'ಕ್ಯಾಪ್ಟನ್ ಮಿಲ್ಲರ್' (2024) ಸಿನಿಮಾಗಳ ಮೂಲಕ ಶಿವಣ್ಣ ತಮ್ಮ ಮಾಸ್ ಮ್ಯಾನರಿಸಂನಿಂದ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದಾರೆ.

ಒಟ್ಟಾರೆಯಾಗಿ ಶಿವಣ್ಣ ಎಂದರೆ ಕೇವಲ ಬಿರುದುಗಳಲ್ಲ, ಅದು ನಾಲ್ಕು ದಶಕಗಳ ಕಾಲ ನಿರಂತರವಾಗಿ ಕಷ್ಟಪಟ್ಟು ದುಡಿಯುವ ಶ್ರದ್ಧೆಯ ಸಂಕೇತ. 60ರ ಹರೆಯದಲ್ಲೂ ಯುವ ನಟರಿಗೆ ಸವಾಲು ಎಸೆಯುವಂತಹ ಎನರ್ಜಿ, ಹೊಸ ನಿರ್ದೇಶಕರಿಗೆ ಅವಕಾಶ ನೀಡುವ ಗುಣ ಹಾಗೂ ಅಭಿಮಾನಿಗಳ ಮೇಲಿರುವ ಪ್ರೀತಿಯೇ ಡಾ. ಶಿವರಾಜ್‌ಕುಮಾರ್ ಅವರನ್ನು 'ಕರುನಾಡ ಚಕ್ರವರ್ತಿ'ಯನ್ನಾಗಿ ಮಾಡಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES