SOCIAL MEDIA

Newsletter

PARTNER SITES
Select Language Select State

ಅಣ್ಣನಿಗೆ ಆರೋಗ್ಯ ಸಮಸ್ಯೆ.. ಬೆಂಗಳೂರಿಗೆ ಧಾವಿಸಿದ ಸೂಪರ್‌ಸ್ಟಾರ್‌ ರಜನೀಕಾಂತ್‌!

ತಮಿಳಿನ ಸೂಪರ್‌ಸ್ಟಾರ್ ರಜನೀಕಾಂತ್‌ ಬೆಂಗಳೂರಿಗೆ ಆಗಮಿಸಿದ್ದಾರೆ.

Written By Ramya. R. Gowda
Published: Nov 05, 2026, 14:45 IST | Updated: Nov 05, 2026, 14:53 IST
Join

ತಮಿಳಿನ ಸೂಪರ್‌ಸ್ಟಾರ್ ರಜನೀಕಾಂತ್‌ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಬಾರಿ ಅವರ ಬೆಂಗಳೂರು ಭೇಟಿ ಅಭಿಮಾನಿಗಳ ಭೇಟಿಗಲ್ಲ, ಬದಲಾಗಿ ಅಣ್ಣನ ಆರೋಗ್ಯ ವಿಚಾರಿಸುವುದಕ್ಕಾಗಿ ಬಂದಿದ್ದಾರೆ

ಹೌದು, ರಜನೀಕಾಂತ್‌ ಅವರ ಸಹೋದರ ಸತ್ಯನಾರಾಯಣ ಅವರು ಇತ್ತೀಚೆಗೆ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅಣ್ಣನಿಗೆ ಗಾಯವಾಗಿರುವ ವಿಷಯ ತಿಳಿಯುತ್ತಿದ್ದಂತೆ ರಜನೀಕಾಂತ್‌ ಬೆಂಗಳೂರಿಗೆ ಧಾವಿಸಿದ್ದಾರೆ. ನಿನ್ನೆಯೇ ನಗರಕ್ಕೆ ಆಗಮಿಸಿದ್ದ ಅವರು, ಇಂದು ರಾಷ್ಟ್ರೋತ್ಥಾನ ಆಸ್ಪತ್ರೆಗೆ ಭೇಟಿ ನೀಡಿ ಸಹೋದರನ ಆರೋಗ್ಯ ವಿಚಾರಿಸಿದ್ದಾರೆ.

ಅಣ್ಣನ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು, ಅವರೊಂದಿಗೆ ಕೆಲಕಾಲ ಸಮಯ ಕಳೆದಿದ್ದಾರೆ. ಸದ್ಯ ರಜನೀಕಾಂತ್‌ ಅವರ ಆಸ್ಪತ್ರೆ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.ಅಣ್ಣನ ಮೇಲಿನ ಪ್ರೀತಿ, ಕಾಳಜಿ ತೋರಿದ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರ ಈ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಟೈಲ್, ಮ್ಯಾನರಿಸಂ ಮತ್ತು ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ನಟ ಸೂಪರ್‌ಸ್ಟಾರ್ ರಜನೀಕಾಂತ್. ಅಭಿಮಾನಿಗಳು ಪ್ರೀತಿಯಿಂದ ಅವರನ್ನು 'ತಲೈವಾ' ಎಂದು ಕರೆಯುತ್ತಾರೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಜೀವನ ನಿರ್ವಹಣೆಗಾಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿ, ಬಳಿಕ ಚಿತ್ರರಂಗಕ್ಕೆ ಕಾಲಿಟ್ಟು ವಿಶ್ವದಾದ್ಯಂತ ಖ್ಯಾತಿ ಗಳಿಸಿದ ಅವರ ಜೀವನವೇ ಒಂದು ಅದ್ಭುತ ಕಥೆ.

ಇಂದು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಸೂಪರ್‌ಸ್ಟಾರ್ ಒಂದು ಕಾಲದಲ್ಲಿ ಜೀವನ ನಿರ್ವಹಣೆಗಾಗಿ ಸಾಮಾನ್ಯ ಕೆಲಸಗಳನ್ನು ಮಾಡುತ್ತಿದ್ದರು.ಶಾಲಾ ಶಿಕ್ಷಣ ಮುಗಿಸಿದ ಬಳಿಕ ಕೂಲಿ ಕೆಲಸ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿದರು. ನಂತರ ಬೆಂಗಳೂರಿನ ಬೆಂಗಳೂರು ಸಾರಿಗೆ ಸೇವೆಯಲ್ಲಿ (BTS) ಬಸ್ ಕಂಡಕ್ಟರ್ ಆಗಿ ಕೆಲಸಕ್ಕೆ ಸೇರಿದರು.ಬಸ್‌ನಲ್ಲಿ ಟಿಕೆಟ್ ನೀಡುವ ಅವರ ವಿಭಿನ್ನ ಶೈಲಿ, ಪ್ರಯಾಣಿಕರೊಂದಿಗೆ ಮಾತನಾಡುವ ರೀತಿ ಮತ್ತು ವಿಶಿಷ್ಟ ಮ್ಯಾನರಿಸಂ ಜನರ ಗಮನ ಸೆಳೆಯುತ್ತಿತ್ತು.ಆದರೆ ಅವರ ಮನಸ್ಸಿನಲ್ಲಿ ನಟನಾಗಬೇಕೆಂಬ ಕನಸು ಮಾತ್ರ ಸದಾ ಜೀವಂತವಾಗಿತ್ತು.ಸ್ನೇಹಿತ ರಾಜ್ ಬಹದ್ದೂರ್ ಅವರ ಪ್ರೋತ್ಸಾಹ ಮತ್ತು ಆರ್ಥಿಕ ನೆರವಿನಿಂದ ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಸೇರಿ ನಟನಾ ತರಬೇತಿ ಪಡೆದರು.

 

1975ರಲ್ಲಿ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶನದ 'ಅಪೂರ್ವ ರಾಗಂಗಳ್' ಚಿತ್ರದ ಮೂಲಕ ರಜನೀಕಾಂತ್ ತಮಿಳು ಚಿತ್ರರಂಗಕ್ಕೆ ಪ್ರವೇಶಿಸಿದರು.ಆರಂಭದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ನಟಿಸುತ್ತಿದ್ದರು. ಅವರ ಅಭಿನಯ ಮತ್ತು ವಿಭಿನ್ನ ಮ್ಯಾನರಿಸಂ ಪ್ರೇಕ್ಷಕರ ಗಮನ ಸೆಳೆಯಿತು.ಕೆ. ಬಾಲಚಂದರ್ ಅವರೇ ಶಿವಾಜಿ ರಾವ್ ಗಾಯಕ್ವಾಡ್ ಅವರಿಗೆ 'ರಜನೀಕಾಂತ್' ಎಂಬ ಸಿನಿಮಾ ಹೆಸರನ್ನು ನೀಡಿದರು.1976ರಲ್ಲಿ 'ಕಥಾ ಸಂಗಮ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಪ್ರವೇಶಿಸಿದರು.

ರಜನೀಕಾಂತ್ ಅವರು 2017ರ ಡಿಸೆಂಬರ್ 31ರಂದು ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ್ದರು. ಬಳಿಕ 'ರಜನಿ ಮಕ್ಕಳ್ ಮಂಡ್ರಂ' ಸಂಘಟನೆಯ ಮೂಲಕ ರಾಜಕೀಯ ಚಟುವಟಿಕೆ ನಡೆಸಿದರು.ಆದರೆ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ 2020ರಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವ ನಿರ್ಧಾರದಿಂದ ಹಿಂದೆ ಸರಿದರು. 2021ರಲ್ಲಿ ರಾಜಿನಿ ಮಕ್ಕಳ್ ಮಂಡ್ರಂ ಸಂಘಟನೆಯನ್ನು ವಿಸರ್ಜಿಸಿದರು.

ರಜನೀಕಾಂತ್ ಅವರ ಯಶಸ್ಸಿಗೆ ಕೇವಲ ಅಭಿನಯವಷ್ಟೇ ಕಾರಣವಲ್ಲ. ಅವರ ಸರಳ ವ್ಯಕ್ತಿತ್ವ, ವಿಭಿನ್ನ ಸ್ಟೈಲ್, ಡೈಲಾಗ್ ಡೆಲಿವರಿ, ಆಕ್ಷನ್ ಮತ್ತು ಹಾಸ್ಯ ಪ್ರಜ್ಞೆ ಅಭಿಮಾನಿಗಳನ್ನು ಸೆಳೆಯುತ್ತವೆ.ಒಂದು ಕಾಲದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸೂಪರ್‌ಸ್ಟಾರ್ ಆಗಿದ್ದಾರೆ.

 

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES