SOCIAL MEDIA

Newsletter

PARTNER SITES
Select Language Select State

ಖ್ಯಾತ ನಟ ಟೈಗರ್ ಶ್ರಾಫ್ ಮೇಲಿನ ದಾಳಿಯ ನಂತರ ಬಾಲಿವುಡ್​ನ ಕಾಡೋಕೆ ಶುರುವಾಗಿದೆಯಾ ಆ ಭಯ?

Tiger shraff: ಖ್ಯಾತ ನಟ ಟೈಗರ್‌ ಶ್ರಾಫ್‌ ಮೇಲಿನ ದಾಳಿಯ ನಂತರ ಬಾಲಿವುಡ್‌ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

Written By Ramya. R. Gowda
Published: Oct 21, 2026, 01:48 PM IST | Updated: Oct 21, 2026, 02:11 PM IST
Join

Tiger shraff:  ಭಾನುವಾರ ಸಂಜೆ ಜುಹುವಿನಲ್ಲಿ ಟೈಗರ್‌ ಶ್ರಾಫ್‌ ಮೇಲೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾಡರ್ನ್‌ ಸೆಮಿ ಆಟೋಮ್ಯಾಟಿಕ್‌ ಜಿಗಾನಾ ಹ್ಯಾಂಡ್‌ಗನ್‌ನಿಂದ ಅವರ ಕಾರಿನ ಮೇಲೆ ಏಳು ಸುತ್ತು ಗುಂಡು ಹಾರಿಸಿದ ಘಟನೆ ಬಾಲಿವುಡ್‌ನೇ ಬೆಚ್ಚಿ ಬೀಳಿಸಿದೆ.

ಬಾಲಿವುಡ್‌ನಲ್ಲಿ ಮತ್ತೆ ಭೂಗತ ಜಗತ್ತಿನ ಕರಿನೆರಳು ಆವರಿಸಿದೆಯಾ? ದಶಕಗಳ ಹಿಂದೆ ಚಿತ್ರರಂಗವನ್ನು ನಡುಗಿಸಿದ್ದ ಮಾಫಿಯಾ ಭೀತಿ ಮತ್ತೆ ಮರುಕಳಿಸುತ್ತಿದೆಯಾ? ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿರುವುದಾಗಿ ವರದಿಯಾಗಿದ್ದು, ಚಿತ್ರರಂಗದಲ್ಲಿ ಆತಂಕ ಹೆಚ್ಚಾಗಿದೆ. ಸಲ್ಮಾನ್ ಖಾನ್‌ನಿಂದ ರೋಹಿತ್ ಶೆಟ್ಟಿವರೆಗೆ ಹಲವು ಸೆಲೆಬ್ರಿಟಿಗಳಿಗೆ ಬೆದರಿಕೆ ಎದುರಾಗಿರುವ ಹಿನ್ನೆಲೆ, ಬಾಲಿವುಡ್ ಸ್ಟಾರ್‌ಗಳ ಭದ್ರತೆ ಈಗ ಮತ್ತೆ ಚರ್ಚೆಗೆ ಬಂದಿದೆ. ಹಾಗಾದ್ರೆ, ಮತ್ತೆ ಮುಂಬೈ ಚಿತ್ರರಂಗದ ಮೇಲೆ ಗ್ಯಾಂಗ್‌ಸ್ಟರ್‌ಗಳ ನೆರಳು ಬಿದ್ದಿದ್ಯಾ? ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಟೈಗರ್ ಶ್ರಾಫ್ ಕಾರಿನ ಮೇಲೆ ಫೈರಿಂಗ್!
ಬಾಲಿವುಡ್‌ನ ಆ್ಯಕ್ಷನ್ ಹೀರೋ ಟೈಗರ್ ಶ್ರಾಫ್ ಮೇಲೆ ದಾಳಿಯಾಗಿದೆ ಎಂಬ ಸುದ್ದಿ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ವರದಿಯ ಪ್ರಕಾರ, ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಟನ ಕಾರಿನ ಮೇಲೆ ಸೆಮಿ-ಆಟೋಮ್ಯಾಟಿಕ್ ಜಿಗಾನಾ ಹ್ಯಾಂಡ್‌ಗನ್‌ನಿಂದ ಏಳು ಸುತ್ತು ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ನಟನ ಚಾಲಕ ಹಾಗೂ ಸಮೀಪದಲ್ಲಿದ್ದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸಂಜೆ ಏಳು ಗಂಟೆಯ ಸಮಯ.. ಜನರಿಂದ ತುಂಬಿ ತುಳುಕುತ್ತಿದ್ದ ಜುಹು ಪ್ರದೇಶ.. ಇಂಥ ಜನನಿಬಿಡ ಸ್ಥಳದಲ್ಲಿ ನಡೆದಿರುವ ಈ ದಾಳಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಟೈಗರ್ ಶ್ರಾಫ್ ಅವರ ದಿನಚರಿ ಹಾಗೂ ಅವರು ನಿಯಮಿತವಾಗಿ ಫುಟ್‌ಬಾಲ್ ಆಡಲು ತೆರಳುತ್ತಿದ್ದ ಸ್ಥಳದ ಬಗ್ಗೆ ದಾಳಿಕೋರರಿಗೆ ಮೊದಲೇ ಮಾಹಿತಿ ಇತ್ತಾ ಎಂಬ ಪ್ರಶ್ನೆಯೂ ಎದ್ದಿದೆ.

ಮತ್ತೆ ಶುರುವಾಯ್ತಾ 90ರ ದಶಕದ ಮಾಫಿಯಾ ಭೀತಿ?
ಒಂದು ಕಾಲದಲ್ಲಿ ಮುಂಬೈ ಚಿತ್ರರಂಗದ ಮೇಲೆ ಭೂಗತ ಜಗತ್ತಿನ ಪ್ರಭಾವ ದೊಡ್ಡ ಮಟ್ಟದಲ್ಲಿತ್ತು. ಸುಲಿಗೆ, ಬೆದರಿಕೆ, ಗುಂಡಿನ ದಾಳಿ ಹಾಗೂ ಹತ್ಯೆಗಳ ಸುದ್ದಿಗಳು ಬಾಲಿವುಡ್‌ನಲ್ಲಿ ಆತಂಕ ಸೃಷ್ಟಿಸಿದ್ದವು. ಚಿತ್ರ ನಿರ್ಮಾಪಕರು ಮತ್ತು ನಟರು ಗ್ಯಾಂಗ್‌ಸ್ಟರ್‌ಗಳ ಬೆದರಿಕೆಗೆ ಒಳಗಾಗುತ್ತಿದ್ದ ಕಾಲವದು. ಆದರೆ ಕಾಲಕ್ರಮೇಣ ಚಿತ್ರರಂಗ ಆ ಕರಿನೆರಳಿನಿಂದ ಹೊರಬಂದಿತ್ತು. ಈಗ ಮತ್ತೆ ಸೆಲೆಬ್ರಿಟಿಗಳ ಮೇಲೆ ದಾಳಿ ಮತ್ತು ಬೆದರಿಕೆಗಳ ವರದಿಗಳು ಕೇಳಿಬರುತ್ತಿರುವುದು ಹಳೆಯ ಆತಂಕವನ್ನು ಮರುಕಳಿಸುವಂತೆ ಮಾಡಿದೆ. ಟೈಗರ್ ಶ್ರಾಫ್ ಮೇಲಿನ ದಾಳಿಯ ವರದಿ ಕೂಡ ಇದೇ ಚರ್ಚೆಗೆ ಮತ್ತಷ್ಟು ಕಿಚ್ಚು ಹಚ್ಚಿದೆ.

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್‌ನ ಹಲವು ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆಗಳು ಎದುರಾಗಿರುವ ವರದಿಗಳಿವೆ. ನಟ ಸಲ್ಮಾನ್ ಖಾನ್ ಅವರಿಗೆ ಈಗಾಗಲೇ ವೈ ಪ್ಲಸ್ ಭದ್ರತೆಯ ಜೊತೆಗೆ ಖಾಸಗಿ ಭದ್ರತೆಯೂ ಇದೆ. 2022ರಲ್ಲಿ ಅವರ ತಂದೆ ಸಲೀಂ ಖಾನ್ ಅವರಿಗೆ ಬೆದರಿಕೆ ಸಂದೇಶವಿದ್ದ ಚೀಟಿ ಸಿಕ್ಕಿತ್ತು ಎಂಬ ವರದಿಯೂ ಇದೆ.

2024ರಲ್ಲಿ ಸಲ್ಮಾನ್ ಖಾನ್ ಅವರ ಆಪ್ತರಾಗಿದ್ದ ರಾಜಕಾರಣಿ ಬಾಬಾ ಸಿದ್ದಿಕಿ ಹತ್ಯೆ ಚಿತ್ರರಂಗವನ್ನು ಬೆಚ್ಚಿಬೀಳಿಸಿತ್ತು. ಅದೇ ಅವಧಿಯಲ್ಲಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫಾರೂಕಿ ಅವರಿಗೆ ಬೆದರಿಕೆಗಳ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆ ನೀಡಲಾಗಿತ್ತು ಎಂದು ವರದಿಯಾಗಿದೆ.

ಇನ್ನು ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದ ಘಟನೆಯೂ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಸಿನಿಮಾ ಸೆಟ್‌ಗಳಲ್ಲೂ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ. ನಟರು, ತಂತ್ರಜ್ಞರು ಹಾಗೂ ಸಿಬ್ಬಂದಿಯ ಪ್ರವೇಶದ ಮೇಲೂ ನಿಯಂತ್ರಣ ಇರಿಸಲಾಗುತ್ತಿದೆ ಎನ್ನಲಾಗಿದೆ.

ಸ್ಟಾರ್‌ಗಳಿಗೆ ಖಾಸಗಿ ಭದ್ರತೆಯೇ ಆಧಾರ!
ಟೈಗರ್ ಶ್ರಾಫ್ ಮೇಲಿನ ದಾಳಿಯ ವರದಿ ಹೊರಬಂದ ಬೆನ್ನಲ್ಲೇ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈಗಾಗಲೇ ಖಾಸಗಿ ಅಂಗರಕ್ಷಕರನ್ನು ಹೊಂದಿರುವ ತಾರೆಯರು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಸಾಧ್ಯತೆಯೂ ಇದೆ. ಸಾರ್ವಜನಿಕ ಕಾರ್ಯಕ್ರಮಗಳು, ಸಿನಿಮಾ ಚಿತ್ರೀಕರಣ ಮತ್ತು ವೈಯಕ್ತಿಕ ಭೇಟಿಗಳ ಸಂದರ್ಭದಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಭಿಮಾನಿಗಳೊಂದಿಗೆ ಬೆರೆಯುವುದು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದು ಕೂಡ ಕೆಲವು ನಟರಿಗೆ ಸವಾಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಚಿತ್ರರಂಗದ ವ್ಯಕ್ತಿಗಳಿಂದ ಸುಲಿಗೆ ಅಥವಾ ದರೋಡೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಔಪಚಾರಿಕ ದೂರುಗಳು ಬಂದಿಲ್ಲ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಸೆಲೆಬ್ರಿಟಿಗಳ ಮೇಲಿನ ದಾಳಿ ಹಾಗೂ ಬೆದರಿಕೆಗಳ ವರದಿಗಳು ಚಿತ್ರರಂಗದ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಟೈಗರ್ ಶ್ರಾಫ್ ಮೇಲಿನ ದಾಳಿಯ ಹಿಂದೆ ಯಾರಿದ್ದಾರೆ? ದಾಳಿಕೋರರ ಉದ್ದೇಶವೇನು? ಇದಕ್ಕೂ ಹಿಂದಿನ ಬೆದರಿಕೆ ಪ್ರಕರಣಗಳಿಗೂ ಸಂಬಂಧವಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯ ಅಧಿಕೃತ ಮಾಹಿತಿ ಮತ್ತು ಪೊಲೀಸರ ಹೇಳಿಕೆಗಳಿಂದಷ್ಟೇ ಸ್ಪಷ್ಟ ಉತ್ತರ ಸಿಗಬೇಕಿದೆ.

ಒಟ್ಟಿನಲ್ಲಿ, ಬಾಲಿವುಡ್‌ನಲ್ಲಿ ಮತ್ತೆ ಭದ್ರತೆಯ ಆತಂಕ ಹೆಚ್ಚಾಗಿದೆ. ಒಂದು ಕಾಲದಲ್ಲಿ ಮಾಫಿಯಾ ಭೀತಿಯಿಂದ ನಲುಗಿದ್ದ ಚಿತ್ರರಂಗ, ಈಗ ಮತ್ತೆ ಅಂತಹ ಪರಿಸ್ಥಿತಿ ಎದುರಾಗದಿರಲಿ ಎಂದು ಆಶಿಸುತ್ತಿದೆ. ಆದರೆ ಸೆಲೆಬ್ರಿಟಿಗಳ ಸುರಕ್ಷತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಈಗ ದೊಡ್ಡ ಸವಾಲಾಗಿದೆ. ಟೈಗರ್ ಶ್ರಾಫ್ ಮೇಲಿನ ದಾಳಿ ಪ್ರಕರಣದ ಕುರಿತು ಅಧಿಕೃತ ತನಿಖಾ ಮಾಹಿತಿ ಹೊರಬಂದ ಬಳಿಕವಷ್ಟೇ ಇದರ ಹಿಂದಿನ ಸತ್ಯ ಸ್ಪಷ್ಟವಾಗಲಿದೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES