ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಬೃಂದಾವಿಹಾರಿ' ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆ!
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ 'ಬೃಂದಾವಿಹಾರಿ' ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಮತ್ತೊಂದು ಕನ್ನಡ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದರಿಂದ ಚಿತ್ರಮಂದಿರಗಳ ಕೊರತೆ ಹಾಗೂ ಪರಸ್ಪರ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಬೆಂಗಳೂರು: ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸಿರುವ ಬಹುನಿರೀಕ್ಷಿತ 'ಬೃಂದಾವಿಹಾರಿ' ಚಿತ್ರದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಅಕ್ಟೋಬರ್ 16ರಂದು ತೆರೆಕಾಣಬೇಕಿದ್ದ ಈ ಸಿನಿಮಾ, ಈಗ ನವೆಂಬರ್ 20ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಕೆವಿಸಿ ಪ್ರೊಡಕ್ಷನ್ (KVC Production) ಹಾಗೂ ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮೃದ್ಧಿ ಮಂಜುನಾಥ್ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಶ್ರೀನಿವಾಸರಾಜು ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ, ದೇವಿಕಾ ಭಟ್, ಮಾಳವಿಕ ಶರ್ಮಾ, ರಂಗಾಯಣ ರಘು, ರಾಮ್ ಕುಮಾರ್ ಸೇರಿದಂತೆ ಹಲವಾರು ದಿಗ್ಗಜ ನಟರಿದ್ದಾರೆ..
ಚಿತ್ರದ ಬಿಡುಗಡೆ ಮುಂದೂಡಿಕೆಗೆ ಕಾರಣವೇನು?
ಸದ್ಯ ಕನ್ನಡದ ಹೊಸ ತಂಡದ 'ಪ್ರೇಮದ ಊರಲಿ' ಚಿತ್ರವು ಎಲ್ಲಾ ಕಡೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಒಂದು ವೇಳೆ ಅಕ್ಟೋಬರ್ 16ರಂದೇ 'ಬೃಂದಾವಿಹಾರಿ' ಕೂಡ ಬಿಡುಗಡೆಯಾದರೆ ಚಿತ್ರಮಂದಿರಗಳ ಕೊರತೆ ಹಾಗೂ ಹಂಚಿಕೆಯ ಸಮಸ್ಯೆ ಎದುರಾಗುವ ಸಾಧ್ಯತೆಯಿತ್ತು.
ಮತ್ತೊಂದು ಕನ್ನಡ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ಎಲ್ಲಾ ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿರುವುದರಿಂದ, ಪರಸ್ಪರ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ 'ಬೃಂದಾವಿಹಾರಿ' ಚಿತ್ರದ ಬಿಡುಗಡೆಯನ್ನು ನವೆಂಬರ್ 20ಕ್ಕೆ ಮುಂದೂಡಲಾಗಿದೆ ಎಂದು ನಿರ್ಮಾಪಕ ಸಮೃದ್ಧಿ ಮಂಜುನಾಥ್ ಹಾಗೂ ನಾಯಕ ನಟ ಗಣೇಶ್ ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರವು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಹಾಗೂ ಪರಸ್ಪರ ಸಹಕಾರಕ್ಕೆ ಉತ್ತಮ ನಿದರ್ಶನವಾಗಿದ್ದು, ನವೆಂಬರ್ 20ರಂದು ಥಿಯೇಟರ್‌ಗಳಿಗೆ ಭೇಟಿ ನೀಡಿ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.