SOCIAL MEDIA

Newsletter

PARTNER SITES
Select Language Select State

ಬ್ರಹ್ಮ ವಿಷ್ಣು ಶಿವ.. ಹಾಡಿನ ಹಿಂದಿನ ಜಾದೂಗಾರ ಆರ್.ಪಿ. ಪಾಟ್ನಾಯಕ್! ವಿಜ್ಞಾನಿ ಸಂಗೀತ ಮಾಂತ್ರಿಕನಾಗಿದ್ದು ಹೇಗೆ?

ಬಾಹ್ಯಾಕಾಶ ಭೌತಶಾಸ್ತ್ರದ (Astrophysics) ವಿದ್ಯಾರ್ಥಿಯಾಗಿದ್ದ ದಂತಕಥೆ ಆರ್.ಪಿ. ಪಾಟ್ನಾಯಕ್, ದಕ್ಷಿಣ ಭಾರತದ ಅತ್ಯಂತ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ನಟ ಹಾಗೂ ನಿರ್ದೇಶಕರಾಗಿ ಹೊರಹೊಮ್ಮಿದ ರೋಚಕ ಪಯಣ ಅದೆಷ್ಟೋ ಜನರಿಗೆ ಗೊತ್ತೆ ಇಲ್ಲ.. ಕನ್ನಡ, ತೆಲುಗು ಸೇರಿದಂತೆ ದಕ್ಷಿಣದಲ್ಲಿ ಭವ್ಯ ಸಂಗೀತ ಸಾಮ್ರಾಜ್ಯ ಕಟ್ಟಿದ ಪಟ್ನಾಯಕ್‌ ನಡೆದು ಬಂದ ಹಾದಿ ಇಲ್ಲಿದೆ ಓದಿ..

Reported By Krishna NK Written By Krishna NK
Published: Sep 12, 2026, 04:09 PM IST | Updated: Sep 17, 2026, 04:06 PM IST
Image Credit: Kannada excuse me movie songs fame music director RP Patnaik life story
Join

RP Patnaik Biography : ಆ ಒಂದು ಧ್ವನಿ ಕಿವಿಗೆ ಬಿದ್ದರೆ ಸಾಕು, ಮನಸ್ಸಿನಲ್ಲಿ ಅದೆಷ್ಟೋ ಮಧುರ ನೆನಪುಗಳು ಗರಿಗೆದರುತ್ತವೆ. ‘ಬ್ರಹ್ಮ ವಿಷ್ಣು ಶಿವ..’ ಎನ್ನುತ್ತಾ ತಾಯಿಯ ಮಮತೆಗೆ ಉಸಿರಾಗಿ, ಇಡೀ ಕರುನಾಡನ್ನೇ ಭಾವುಕಗೊಳಿಸಿದ ಆ ಅದ್ಭುತ ಗಾಯನ ಇಂದಿಗೂ ಪ್ರತಿಯೊಬ್ಬರ ಕಿವಿಯಲ್ಲಿ ಗುಂಯ್ಗುಡುತ್ತಲೇ ಇದೆ. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಂಗೀತ ಸಂಯೋಜಕ, ಗಾಯಕ, ನಟ ಹಾಗೂ ನಿರ್ದೇಶಕನಾಗಿ ತಮ್ಮದೇ ಆದ ಅಳಿಸಲಾಗದ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆ ರವೀಂದ್ರ ಪ್ರಸಾದ್ ಪಾಟ್ನಾಯಕ್ (ಆರ್.ಪಿ. ಪಾಟ್ನಾಯಕ್). ತಮ್ಮ ವಿಶಿಷ್ಟ ಶೈಲಿಯ ಮೆಲೋಡಿ ಹಾಡುಗಳ ಮೂಲಕ ದಕ್ಷಿಣ ಭಾರತಾದ್ಯಂತ ಮಧುರ ಸಂಚಲನ ಮೂಡಿಸಿದ ಈ ಸ್ವರಗಳ ಸರದಾರನ ಸಿನಿಮಾ ಪಯಣ ನಿಜಕ್ಕೂ ರೋಚಕ.

ವಿಜ್ಞಾನಿಯಾಗಬೇಕಿದ್ದ ಪಟ್ನಾಯಕ್‌ ಸಿನಿಮಾರಂಗಕ್ಕೆ ಬಂದಿದ್ದು ಹೇಗೆ?
1972 ಮಾರ್ಚ್ 9ರಂದು ಜನಿಸಿದ ಆರ್.ಪಿ. ಪಾಟ್ನಾಯಕ್ ಅವರ ಶಿಕ್ಷಣದ ಹಿನ್ನೆಲೆ ಕೇಳಿದರೆ ಯಾರಿಗಾದರೂ ಅಚ್ಚರಿಯಾಗದೇ ಇರದು. ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿ ಮಿಂಚಿರುವ ಇವರು, ಆಂಧ್ರ ವಿಶ್ವವಿದ್ಯಾಲಯದಲ್ಲಿ ಆಸ್ಟ್ರೋಫಿಸಿಕ್ಸ್ (ಬಾಹ್ಯಾಕಾಶ ಭೌತಶಾಸ್ತ್ರ) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೀಬೋರ್ಡ್ ಹಿಡಿದು ಸಂಗೀತ ಸಂಯೋಜಿಸುವ ಅವರ ಕೈಗಳಲ್ಲಿ, ಒಂದು ಕಾಲದಲ್ಲಿ ಬ್ರಹ್ಮಾಂಡದ ರಹಸ್ಯಗಳನ್ನು ಅರಿಯುವ ವಿಜ್ಞಾನದ ಪುಸ್ತಕಗಳಿದ್ದವು. ಇಂತಹ ಉನ್ನತ ವ್ಯಾಸಂಗದ ಹೊರತಾಗಿಯೂ, ಅವರೊಳಗಿದ್ದ ಸಿನಿಮಾ ಹುಚ್ಚು ಮಾತ್ರ ಎಂದಿಗೂ ಕಡಿಮೆಯಾಗಲಿಲ್ಲ.

ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಕೇವಲ ತಮ್ಮ ಮೇಲಿನ ನಂಬಿಕೆ ಮತ್ತು ಕಲೆಯ ಮೇಲಿನ ಪ್ರೀತಿಯಿಂದ ಅವರು ಚಿತ್ರರಂಗದ ಬಾಗಿಲು ತಟ್ಟಿದರು. ಆರಂಭದಲ್ಲಿ ಅವರು ಚಿತ್ರರಂಗಕ್ಕೆ ಬಂದಿದ್ದು ನಿರ್ದೇಶಕರಾಗಬೇಕು ಎಂಬ ಕನಸಿನಿಂದ. ಆದರೆ ವಿಧಿ ಅವರಿಗಾಗಿ ಕಾದಿರಿಸಿದ್ದು ಸಂಗೀತದ ಸಿಂಹಾಸನವನ್ನು.

‘ನೀ ಕೋಸಂ’ನಿಂದ ಆರಂಭವಾದ ಟಾಲಿವುಡ್‌ನ ಸುವರ್ಣ ಯುಗ
ಹೈದರಾಬಾದ್‌ನಲ್ಲಿ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ಪಾಟ್ನಾಯಕ್ ಅವರ ಪ್ರತಿಭೆಯನ್ನು ಗುರುತಿಸಿದ್ದು ಖ್ಯಾತ ಛಾಯಾಗ್ರಾಹಕ ಹಾಗೂ ನಿರ್ದೇಶಕ ತೇಜ. 1999ರಲ್ಲಿ ತೇಜ ತಮ್ಮ ‘ನೀ ಕೋಸಂ’ ಚಿತ್ರದ ಮೂಲಕ ಪಾಟ್ನಾಯಕ್ ಅವರಿಗೆ ಸಂಗೀತ ನಿರ್ದೇಶಕರಾಗುವ ಮೊದಲ ಅವಕಾಶ ನೀಡಿದರು. ಮೊದಲ ಯತ್ನದಲ್ಲೇ ಸೂಪರ್ ಹಿಟ್ ಹಾಡುಗಳನ್ನು ನೀಡಿ ಗಮನಸೆಳೆದ ಅವರು, ನಂತರ ಹಿಂತಿರುಗಿ ನೋಡಲೇ ಇಲ್ಲ.

2000ದಲ್ಲಿ ತೆರೆಕಂಡ ‘ಚಿತ್ರಂ’, 2001ರ ‘ನುವ್ವು ನೇನು’ ಮತ್ತು ‘ಮನಸಂತಾ ನುವ್ವೇ’ ಚಿತ್ರಗಳು ಟಾಲಿವುಡ್‌ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದವು. ‘ನುವ್ವು ನೇನು’ ಚಿತ್ರದ ಅದ್ಭುತ ಸಂಗೀತಕ್ಕಾಗಿ ಅವರಿಗೆ ಪ್ರತಿಷ್ಠಿತ ಫಿಲ್ಮ್‌ಫೇರ್ ಹಾಗೂ ನಂದಿ ಪ್ರಶಸ್ತಿಗಳು ಒಲಿದುಬಂದವು. ಆನಂತರ ಬಂದ ‘ನುವ್ವು ಲೇಕ ನೇನು ಲೇನು’, ‘ಜಯಂ’, ‘ಸಂತೋಷಂ’, ‘ದಿಲ್’ ಮತ್ತು ‘ಜೆಮಿನಿ’ ಚಿತ್ರಗಳ ಹಾಡುಗಳು ಆಡಿಯೋ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದವು. ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಮೂರು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ಇವರು ಟಾಲಿವುಡ್‌ನ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿ ಉತ್ತುಂಗಕ್ಕೇರಿದರು.

ಕರುನಾಡಿನಲ್ಲಿ ‘ಎಕ್ಸ್‌ಕ್ಯೂಸ್ ಮೀ’ ಸೃಷ್ಟಿಸಿದ ಮೆಲೋಡಿ ಹವಾ
ತೆಲುಗಿನಲ್ಲಿ ಯಶಸ್ಸಿನ ಶಿಖರದಲ್ಲಿದ್ದ ಪಾಟ್ನಾಯಕ್, 2003ರಲ್ಲಿ ನಿರ್ದೇಶಕ ಪ್ರೇಮ್ ಅವರ ‘ಎಕ್ಸ್‌ಕ್ಯೂಸ್ ಮೀ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಹಾಡುಗಳು ಕನ್ನಡಿಗರ ಹೃದಯ ಗೆದ್ದವು. ಅದರಲ್ಲೂ ‘ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ...’ ಎಂಬ ತಾಯಿ ಸೆಂಟಿಮೆಂಟ್ ಹಾಡು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ಈ ಚಿತ್ರದ ಸಂಗೀತಕ್ಕಾಗಿ ಅವರಿಗೆ ಕನ್ನಡ ವಿಭಾಗದಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಯೂ ಲಭಿಸಿತು.

ಬಳಿಕ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಆಕಾಶ್’ ಚಿತ್ರದ ‘ನೀನೆ ನೀನೆ’ ಹಾಡು ಯುವಜನತೆಯ ನೆಚ್ಚಿನ ಗೀತೆಯಾಯಿತು. ದರ್ಶನ್ ಅಭಿನಯದ ‘ದತ್ತ’, ಪ್ರೇಮ್ ನಟನೆಯ ‘ಈ ಪ್ರೀತಿ ಏಕೆ ಭೂಮಿ ಮೇಲಿದೆ’, ಉಪೇಂದ್ರ ಅಭಿನಯದ ‘ಉಪ್ಪಿ ದಾದಾ MBBS’, ‘ಒಡಹುಟ್ಟಿದವಳು’ ಹಾಗೂ ‘ವಂಶಿ’ ಸೇರಿದಂತೆ ಹಲವು ಚಿತ್ರಗಳ ಮೂಲಕ ಕನ್ನಡದಲ್ಲೂ ತಮ್ಮ ಸಂಗೀತ ಸಾಮ್ರಾಜ್ಯವನ್ನು ವಿಸ್ತರಿಸಿದರು.

ಕ್ಯಾಮೆರಾ ಮುಂದೆ ನಟ, ಹಿಂದೆ ನಿರ್ದೇಶಕ
ಸಂಗೀತ ನಿರ್ದೇಶಕರಾಗಿ ಉತ್ತುಂಗದಲ್ಲಿದ್ದರೂ ತಾವು ಚಿತ್ರರಂಗಕ್ಕೆ ಬಂದ ಮೂಲ ಉದ್ದೇಶವಾದ ನಿರ್ದೇಶನವನ್ನು ಅವರು ಮರೆಯಲಿಲ್ಲ. ಆದರೆ ನಿರ್ದೇಶಕರಾಗುವ ಮುನ್ನ, 2004ರಲ್ಲಿ ‘ಸೀನು ವಸಂತಿ ಲಕ್ಷ್ಮಿ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ಈ ಚಿತ್ರದಲ್ಲಿ ಅಂಧ ಗಾಯಕನ ಪಾತ್ರದಲ್ಲಿ ಅವರು ನೀಡಿದ ನೈಜ ಅಭಿನಯ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸಿತ್ತು.

2008ರಲ್ಲಿ ‘ಅಂದಮೈನ ಮನಸುಲೋ’ ಚಿತ್ರವನ್ನು ನಿರ್ದೇಶಿಸುವ ಮೂಲಕ ಮೊದಲ ಬಾರಿಗೆ ಮೆಗಾಫೋನ್ ಹಿಡಿದರು. ಆದರೆ ನಿರ್ದೇಶಕರಾಗಿ ಅವರಿಗೆ ದೊಡ್ಡ ಮಟ್ಟದ ಗೌರವ ತಂದುಕೊಟ್ಟಿದ್ದು 2010ರ ‘ಬ್ರೋಕರ್’ ಸಿನಿಮಾ. ಸಮಾಜದ ಭ್ರಷ್ಟಾಚಾರ ಮತ್ತು ದಲ್ಲಾಳಿ ವ್ಯವಸ್ಥೆಯ ವಿರುದ್ಧ ಕನ್ನಡಿ ಹಿಡಿದ ಈ ಚಿತ್ರದ ಕಥೆ, ನಿರ್ದೇಶನ ಹಾಗೂ ನಟನೆಗಾಗಿ ಅವರಿಗೆ ಅತ್ಯುತ್ತಮ ಕಥೆಗಾರ ವಿಭಾಗದಲ್ಲಿ 'ನಂದಿ ಪ್ರಶಸ್ತಿ' ಲಭಿಸಿತು. ನಂತರ ‘ಫ್ರೆಂಡ್ಸ್ ಬುಕ್’, ‘ತುಳಸಿ ದಳಂ’ ಹಾಗೂ ಮಾಧ್ಯಮಗಳ ಲೋಪಗಳನ್ನು ಎತ್ತಿಹಿಡಿಯುವ ‘ಮನಲೋ ಒಕ್ಕಡು’ ಚಿತ್ರಗಳನ್ನು ನಿರ್ದೇಶಿಸಿ ಪ್ರಬುದ್ಧ ನಿರ್ದೇಶಕ ಎನಿಸಿಕೊಂಡರು.

ಸರಳ ವ್ಯಕ್ತಿತ್ವದ ಅಪರೂಪದ ಪ್ರತಿಭೆ
ಸಿನಿಮಾ ರಂಗದ ಗ್ಲಾಮರ್, ಪಾರ್ಟಿ ಮತ್ತು ವಿವಾದಗಳಿಂದ ಸದಾ ದೂರವಿರುವ ಆರ್.ಪಿ. ಪಾಟ್ನಾಯಕ್ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು. ಸ್ಟಾರ್‌ಗಿರಿ ತಲೆಗೇರಿಸಿಕೊಳ್ಳದೆ ಅಪ್ಪಟ ಫ್ಯಾಮಿಲಿ ಮ್ಯಾನ್ ಆಗಿ ಜೀವನ ನಡೆಸುತ್ತಿರುವ ಇವರು, ಪ್ರಸ್ತುತ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ, ನಟನಾಗಿ ಮತ್ತು ನಿರ್ದೇಶಕನಾಗಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಹಾದಿ ನಿರ್ಮಿಸಿಕೊಂಡಿರುವ ಆರ್.ಪಿ. ಪಾಟ್ನಾಯಕ್ ಅವರ ಈ ವರ್ಣರಂಜಿತ ಸಿನಿ ಜರ್ನಿ ಮುಂಬರುವ ಪೀಳಿಗೆಗೆ ಸದಾ ಪ್ರೇರಣಾದಾಯಿ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES