SOCIAL MEDIA

Newsletter

PARTNER SITES
Select Language Select State

ವಾಟ್ಸಾಪ್‌ನಲ್ಲಿ ಬ್ಯಾಡ್‌ ಮೆಸೇಜ್, ಮಧ್ಯರಾತ್ರಿ ಮನೆಗೆ ನುಗ್ಗಿ ದೌರ್ಜನ್ಯ : ಹೆಣ್ಣೂರು ಹೆಡ್ ಕಾನ್ಸ್‌ಟೇಬಲ್ ವಿರುದ್ಧ FIR

ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ, ಮಧ್ಯರಾತ್ರಿ ಆಕೆಯ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ಅತ್ಯಾ*ಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಹೆಣ್ಣೂರು ಪೊಲೀಸ್ ಠಾಣೆಯ ಹೆಡ್-ಕಾನ್ಸ್‌ಟೇಬಲ್ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Reported By Krishna NK Written By Krishna NK
Published: Sep 26, 2026, 09:31 PM IST | Updated: Sep 26, 2026, 09:40 PM IST
Image Credit: Bengaluru Crime
Join

ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣೆಯ ಹೆಡ್-ಕಾನ್ಸ್‌ಟೇಬಲ್ ರಾಮಾಂಜನೇಯ ವಜ್ರಾಲ್ ಎಂಬುವರ ವಿರುದ್ಧ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಅ*ತ್ಯಾಚಾರ ಯತ್ನ ಹಾಗೂ ಲೈಂ*ಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆದರೆ, ಆರೋಪಿಯ ಬಂಧನ ಇನ್ನೂ ಆಗಿಲ್ಲ ಎಂದು ತಿಳಿದುಬಂದಿದೆ.

ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೂರುದಾರೆ ಮಹಿಳಾ ಸಿಬ್ಬಂದಿ, ಸಂಪಿಗೆಹಳ್ಳಿ ಬಳಿಯ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದಾರೆ. ನಿವಾಸಿಗಳ ಯೋಗಕ್ಷೇಮಕ್ಕಾಗಿ ಮಾಡಲಾಗಿದ್ದ ವಾಟ್ಸಾಪ್ ಗ್ರೂಪ್‌ನಿಂದ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದ ರಾಮಾಂಜನೇಯ ವಜ್ರಾಲ್, ಕಳೆದೆರಡು ತಿಂಗಳುಗಳಿಂದ ವಿನಾಕಾರಣ ಕರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದನು. ಕ್ವಾಟ್ರಸ್ ಸಂಘದ ಖಜಾಂಚಿಯಾಗಿದ್ದ ಆತ, ಮಹಿಳೆ ಕರೆ ಮಾಡದಂತೆ ಎಚ್ಚರಿಸಿದ್ದರೂ ಹಾಗೂ ಆತನ ಹೆಂಡತಿಗೆ ಬುದ್ಧಿ ಹೇಳುವಂತೆ ತಿಳಿಸಿದ್ದರೂ ಅನಗತ್ಯವಾಗಿ ಮಾತನಾಡಿಸುವುದನ್ನು ಮತ್ತು ಅನುಚಿತ ಸಂದೇಶ ರವಾನಿಸುವುದನ್ನು ಮುಂದುವರಿಸಿದ್ದನು ಎನ್ನಲಾಗಿದೆ.

ಮಧ್ಯರಾತ್ರಿ ಮನೆಗೆ ಅತಿಕ್ರಮ ಪ್ರವೇಶ: ದೂರಿನಲ್ಲಿ ಉಲ್ಲೇಖಿಸಿರುವಂತೆ, ದಿನಾಂಕ 21ರ ಮಧ್ಯರಾತ್ರಿ ಸುಮಾರು 01:15ರ ವೇಳೆಗೆ, ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಆರೋಪಿ ಬಾಗಿಲು ತೆರೆದು ಅತಿಕ್ರಮವಾಗಿ ಮನೆಗೆ ನುಗ್ಗಿದ್ದಾನೆ. ಬೆಡ್‌ರೂಮ್‌ಗೆ ಬಂದು ಹೆಸರು ಕರೆದಾಗ ಎಚ್ಚರಗೊಂಡ ಮಹಿಳೆ ಕಿರುಚಾಡಲು ಯತ್ನಿಸಿದ್ದಾರೆ. ತಕ್ಷಣ ಆಕೆಯ ಬಾಯಿ ಮುಚ್ಚಿದ ಆರೋಪಿ, "ಕಿರುಚಬೇಡ, ನಾನು ಹೇಳಿದಂತೆ ಸಹಕರಿಸು. ನಿನಗೆ ಏನು ಬೇಕೋ ಅದನ್ನು ಕೊಡಿಸುತ್ತೇನೆ" ಎಂದು ಹೇಳಿ ತಬ್ಬಿಕೊಂಡು ಲೈಂಗಿ*ಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ.

ಆತನಿಂದ ಬಲವಂತವಾಗಿ ತಪ್ಪಿಸಿಕೊಂಡ ಮಹಿಳೆ ಜೋರಾಗಿ ಕಿರುಚುತ್ತಾ ಮನೆಯಿಂದ ಹೊರಬಂದಿದ್ದಾರೆ. ಬಳಿಕ ಆರೋಪಿಯ ಮನೆಗೆ ತೆರಳಿ ಆತನ ಹೆಂಡತಿಗೆ ಹಾಗೂ ಎದುರು ಮನೆಯವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ವಾಟ್ಸಾಪ್ ಚಾಟಿಂಗ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷಿಯಾಗಿ ದೂರಿನೊಂದಿಗೆ ಲಗತ್ತಿಸಲಾಗಿದ್ದು, ಅತ್ಯಾ*ಚಾರ ಎಸಗುವ ಉದ್ದೇಶದಿಂದ ಮನೆಗೆ ನುಗ್ಗಿ ಲೈಂ*ಗಿಕ ಕಿರುಕುಳ ನೀಡಿದ ಹೆಡ್ ಕಾನ್ಸ್‌ಟೇಬಲ್ ರಾಮಾಂಜನೇಯ ವಜ್ರಾಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಸಂಪಿಗೆಹಳ್ಳಿ ಠಾಣೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES