ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣೆಯ ಹೆಡ್-ಕಾನ್ಸ್‌ಟೇಬಲ್ ರಾಮಾಂಜನೇಯ ವಜ್ರಾಲ್ ಎಂಬುವರ ವಿರುದ್ಧ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಅ*ತ್ಯಾಚಾರ ಯತ್ನ ಹಾಗೂ ಲೈಂ*ಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಆದರೆ, ಆರೋಪಿಯ ಬಂಧನ ಇನ್ನೂ ಆಗಿಲ್ಲ ಎಂದು ತಿಳಿದುಬಂದಿದೆ.
ಸಂಚಾರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೂರುದಾರೆ ಮಹಿಳಾ ಸಿಬ್ಬಂದಿ, ಸಂಪಿಗೆಹಳ್ಳಿ ಬಳಿಯ ಪೊಲೀಸ್ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದಾರೆ. ನಿವಾಸಿಗಳ ಯೋಗಕ್ಷೇಮಕ್ಕಾಗಿ ಮಾಡಲಾಗಿದ್ದ ವಾಟ್ಸಾಪ್ ಗ್ರೂಪ್‌ನಿಂದ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದ ರಾಮಾಂಜನೇಯ ವಜ್ರಾಲ್, ಕಳೆದೆರಡು ತಿಂಗಳುಗಳಿಂದ ವಿನಾಕಾರಣ ಕರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದನು. ಕ್ವಾಟ್ರಸ್ ಸಂಘದ ಖಜಾಂಚಿಯಾಗಿದ್ದ ಆತ, ಮಹಿಳೆ ಕರೆ ಮಾಡದಂತೆ ಎಚ್ಚರಿಸಿದ್ದರೂ ಹಾಗೂ ಆತನ ಹೆಂಡತಿಗೆ ಬುದ್ಧಿ ಹೇಳುವಂತೆ ತಿಳಿಸಿದ್ದರೂ ಅನಗತ್ಯವಾಗಿ ಮಾತನಾಡಿಸುವುದನ್ನು ಮತ್ತು ಅನುಚಿತ ಸಂದೇಶ ರವಾನಿಸುವುದನ್ನು ಮುಂದುವರಿಸಿದ್ದನು ಎನ್ನಲಾಗಿದೆ.
ಮಧ್ಯರಾತ್ರಿ ಮನೆಗೆ ಅತಿಕ್ರಮ ಪ್ರವೇಶ: ದೂರಿನಲ್ಲಿ ಉಲ್ಲೇಖಿಸಿರುವಂತೆ, ದಿನಾಂಕ 21ರ ಮಧ್ಯರಾತ್ರಿ ಸುಮಾರು 01:15ರ ವೇಳೆಗೆ, ಮಹಿಳೆಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಆರೋಪಿ ಬಾಗಿಲು ತೆರೆದು ಅತಿಕ್ರಮವಾಗಿ ಮನೆಗೆ ನುಗ್ಗಿದ್ದಾನೆ. ಬೆಡ್‌ರೂಮ್‌ಗೆ ಬಂದು ಹೆಸರು ಕರೆದಾಗ ಎಚ್ಚರಗೊಂಡ ಮಹಿಳೆ ಕಿರುಚಾಡಲು ಯತ್ನಿಸಿದ್ದಾರೆ. ತಕ್ಷಣ ಆಕೆಯ ಬಾಯಿ ಮುಚ್ಚಿದ ಆರೋಪಿ, "ಕಿರುಚಬೇಡ, ನಾನು ಹೇಳಿದಂತೆ ಸಹಕರಿಸು. ನಿನಗೆ ಏನು ಬೇಕೋ ಅದನ್ನು ಕೊಡಿಸುತ್ತೇನೆ" ಎಂದು ಹೇಳಿ ತಬ್ಬಿಕೊಂಡು ಲೈಂಗಿ*ಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ.
ಆತನಿಂದ ಬಲವಂತವಾಗಿ ತಪ್ಪಿಸಿಕೊಂಡ ಮಹಿಳೆ ಜೋರಾಗಿ ಕಿರುಚುತ್ತಾ ಮನೆಯಿಂದ ಹೊರಬಂದಿದ್ದಾರೆ. ಬಳಿಕ ಆರೋಪಿಯ ಮನೆಗೆ ತೆರಳಿ ಆತನ ಹೆಂಡತಿಗೆ ಹಾಗೂ ಎದುರು ಮನೆಯವರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ವಾಟ್ಸಾಪ್ ಚಾಟಿಂಗ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷಿಯಾಗಿ ದೂರಿನೊಂದಿಗೆ ಲಗತ್ತಿಸಲಾಗಿದ್ದು, ಅತ್ಯಾ*ಚಾರ ಎಸಗುವ ಉದ್ದೇಶದಿಂದ ಮನೆಗೆ ನುಗ್ಗಿ ಲೈಂ*ಗಿಕ ಕಿರುಕುಳ ನೀಡಿದ ಹೆಡ್ ಕಾನ್ಸ್‌ಟೇಬಲ್ ರಾಮಾಂಜನೇಯ ವಜ್ರಾಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಸಂಪಿಗೆಹಳ್ಳಿ ಠಾಣೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.