ಸಿನಿಮಾ ಜಗತ್ತು ಹೊರನೋಟಕ್ಕೆ ಬಣ್ಣದ ಲೋಕವಾಗಿ ಕಾಣಿಸಿದರೂ, ಅದರ ಹಿಂದೆ ಅನೇಕ ಕಲಾವಿದರ ಬದುಕಿನ ಹೋರಾಟಗಳು ಅಡಗಿವೆ. ಒಂದೊಮ್ಮೆ ಬೆಳ್ಳಿತೆರೆಯಲ್ಲಿ ಮಿಂಚಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವರು, ಕಾಲ ಬದಲಾದಂತೆ ಅವಕಾಶಗಳಿಲ್ಲದೆ ಸಂಕಷ್ಟಕ್ಕೆ ಸಿಲುಕುವ ಸಂದರ್ಭಗಳೂ ಇವೆ. ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದರೂ ಜೀವನ ನಿರ್ವಹಣೆಗಾಗಿ ಬೇರೆ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದೀಗ ಇಂತಹದ್ದೇ ಒಬ್ಬ ನಟನ ಜೀವನದ ಕುರಿತಾದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಒಂದು ಕಾಲದಲ್ಲಿ ಜನಪ್ರಿಯ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಈ ನಟ, ಇದೀಗ ಜೀವನೋಪಾಯಕ್ಕಾಗಿ ಆಟೋ ಚಾಲನೆ ಮಾಡುತ್ತಿದ್ದಾರೆ ಎನ್ನುವ ವಿಚಾರ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಸಿನಿಮಾದಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದ ಕಲಾವಿದನ ಇಂದಿನ ಬದುಕಿನ ಬಗ್ಗೆ ತಿಳಿದುಕೊಂಡ ಅಭಿಮಾನಿಗಳು ಭಾವುಕರಾಗಿದ್ದಾರೆ.
ಇವರು ತಮಿಳು ಚಿತ್ರರಂಗದ ನಟ ಮಾರಿಮುತ್ತು. 2008ರಲ್ಲಿ ಎಂ. ಶಶಿಕುಮಾರ್ ನಿರ್ದೇಶನದಲ್ಲಿ ಬಿಡುಗಡೆಯಾದ ‘ಸುಬ್ರಮಣ್ಯಪುರಂ’ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಈ ಚಿತ್ರ ತೆಲುಗಿನಲ್ಲಿ ‘ಅನಂತಪುರಂ’ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಜಯ್, ಶಶಿಕುಮಾರ್, ಸಮುದ್ರಕನಿ, ಸ್ವಾತಿ ಹಾಗೂ ಗಂಜಾ ಕರುಪ್ಪು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಮಾರಿಮುತ್ತು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ಚಿತ್ರದ ಯಶಸ್ಸಿನ ಬಳಿಕ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಗಬಹುದು ಎಂಬ ನಿರೀಕ್ಷೆ ಅವರಲ್ಲಿತ್ತು. ಆದರೆ ನಿರೀಕ್ಷಿಸಿದಷ್ಟು ಅವಕಾಶಗಳು ದೊರೆಯಲಿಲ್ಲ ಎನ್ನಲಾಗಿದೆ. ಸಿನಿಮಾಗಳಲ್ಲಿ ನಟಿಸುವ ಆಸೆ ಇದ್ದರೂ ಜೀವನದ ಜವಾಬ್ದಾರಿಗಳು ಅವರನ್ನು ಬೇರೆ ದಾರಿಯಲ್ಲಿ ಸಾಗುವಂತೆ ಮಾಡಿದವು.
ಸಿನಿಮಾ ಅವಕಾಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಮಾರಿಮುತ್ತು ತಮ್ಮ ಹಿಂದಿನ ವೃತ್ತಿಯತ್ತ ಮರಳಿದರು ಎನ್ನಲಾಗಿದೆ. ರೇಡಿಯೋ ರಿಪೇರಿ ಹಾಗೂ ಎಲೆಕ್ಟ್ರಿಕಲ್ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸಲು ಆರಂಭಿಸಿದರು. ಬಳಿಕ ಜೀವನೋಪಾಯಕ್ಕಾಗಿ ಆಟೋ ಚಾಲನೆ ಮಾಡುವುದನ್ನೂ ಕಲಿತು ಆಟೋ ಚಾಲಕರಾಗಿ ಕೆಲಸ ಮಾಡತೊಡಗಿದರು.
ಕಷ್ಟದ ಸಮಯದಲ್ಲಿ ಅವರಿಗೆ ಕಾರ್ತಿಕಾ ಸಾಥ್ ನೀಡಿದ್ದು, ಅವರನ್ನು ವಿವಾಹವಾಗಿದ್ದಾರೆ ಎನ್ನಲಾಗಿದೆ. ಜೀವನದಲ್ಲಿ ಎದುರಾದ ಸವಾಲುಗಳ ನಡುವೆಯೂ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಲು ಅವರು ದುಡಿಯುತ್ತಿದ್ದಾರೆ.
ಇತ್ತೀಚೆಗೆ ಮಾರಿಮುತ್ತು ಆಟೋ ಚಾಲನೆ ಮಾಡುತ್ತಿರುವ ಹಾಗೂ ಆಟೋ ರಿಪೇರಿ ಕೆಲಸಗಳಲ್ಲಿ ತೊಡಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಮ್ಮೆ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದ ಇಂದು ಜೀವನಕ್ಕಾಗಿ ಆಟೋ ಓಡಿಸುತ್ತಿದ್ದಾರೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.
ಸಿನಿಮಾ ಕ್ಷೇತ್ರದಲ್ಲಿ ಅವಕಾಶಗಳು ಶಾಶ್ವತವಲ್ಲ ಎಂಬುದಕ್ಕೆ ಇಂತಹ ಘಟನೆಗಳು ಉದಾಹರಣೆಯಾಗುತ್ತವೆ. ಆದರೆ ಯಾವುದೇ ಕೆಲಸವನ್ನು ಕೀಳಾಗಿ ಕಾಣದೆ, ಕಷ್ಟಪಟ್ಟು ದುಡಿದು ಜೀವನ ಸಾಗಿಸುವ ಮನೋಭಾವ ನಿಜಕ್ಕೂ ಮೆಚ್ಚುವಂತಹದ್ದು. ಅವಕಾಶಗಳ ಕೊರತೆಯಿಂದ ಬದುಕು ನಿಂತುಹೋಗಬಾರದು ಎಂಬುದನ್ನು ಮರಿಮುತ್ತು ಅವರ ಜೀವನದ ಹೋರಾಟ ನೆನಪಿಸುತ್ತದೆ.