SOCIAL MEDIA

Newsletter

PARTNER SITES
Select Language Select State

ಪುಟ್ನಂಜ ಸಿನಿಮಾ ಕೊಟ್ಟ ದೊಡ್ಡ ಸಂಭಾವನೆ.. ಅಂದಿನ ಕಷ್ಟದ ಬದುಕಿನ ಬಗ್ಗೆ ಉಮಾಶ್ರೀ ಭಾವುಕ ಮಾತು!

Umashree remuneration: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಉಮಾಶ್ರೀ ಅವರಿಗೆ ತಿರುವು ತಂದು ಕೊಟ್ಟ ಪುಟ್ನಂಜ ಸಿನಿಮಾ ತಂದು ಕೊಟ್ಟ ಸಂಭಾವನೆ ಎಷ್ಟು ಗೊತ್ತಾ..

Written By Ramya. R. Gowda
Published: Nov 07, 2026, 15:07 IST | Updated: Nov 07, 2026, 15:51 IST
Join

Umashree remuneration: ಸಿನಿಮಾಗಳಲ್ಲಿ ನಟಿಸಿ ಕೈತುಂಬಾ ಸಂಭಾವನೆ ಪಡೆದಾಗ ಹೊಸ ಬಟ್ಟೆ, ಒಡವೆ ಖರೀದಿಸಬೇಕು, ಐಷಾರಾಮಿ ಜೀವನ ನಡೆಸಬೇಕು ಅನ್ನೋ ಆಸೆ ಸಹಜ. ಆದ್ರೆ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಹಣಕಾಸಿನ ಶಿಸ್ತು ಮಾತ್ರ ನಿಜಕ್ಕೂ ಮಾದರಿ. ತಮಗೆ ಹೊಸ ಬಟ್ಟೆ ಖರೀದಿಸುವ ಬದಲು ಆ ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ಕೂಡಿಟ್ಟಿದ್ದಾರಂತೆ. ಅಷ್ಟೇ ಅಲ್ಲ, ಮಗನಿಗೆ ಚಿಕ್ಕ ವಯಸ್ಸಿನಿಂದಲೇ ಉಳಿತಾಯದ ಪಾಠ ಕಲಿಸಿದ್ರೆ, ಮಗಳ ವಿಚಾರದಲ್ಲಿ ಮಾತ್ರ ಉಮಾಶ್ರೀ ಅವರ ಮನಸ್ಥಿತಿ ಬೇರೆಯೇ ಇದೆ. ಹಾಗಾದ್ರೆ ಉಮಾಶ್ರೀ ಹೇಳಿದ್ದೇನು? ನೋಡೋಣ ಈ ಸ್ಟೋರಿ.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಟಿ ಉಮಾಶ್ರೀ.. ಇದೀಗ ತಮ್ಮ ಜೀವನದ ಹಣಕಾಸಿನ ಶಿಸ್ತಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಜೀ ಕನ್ನಡ ನ್ಯೂಸ್‌ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮಗೆ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿದ್ದು ಪುಟ್ನಂಜ ಸಿನಿಮಾ ಮೂಲಕ ಅಂತ ನೆನಪಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಬರೋಬ್ಬರಿ 75 ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದರಂತೆ. ಅಂದು ಆ ಹಣ ತಮಗೆ ದೊಡ್ಡ ಮೊತ್ತವಾಗಿತ್ತು. ಆ ಹಣದಲ್ಲಿ ಏನು ಮಾಡಿದ್ದೆ ಅನ್ನೋದು ನೆನಪಿಲ್ಲ ಎಂದು ನಗುತ್ತಲೇ ಹೇಳಿರುವ ಉಮಾಶ್ರೀ, ಹಣ ಉಳಿಸುವ ಅಭ್ಯಾಸ ಮಾತ್ರ ಮೊದಲಿನಿಂದಲೂ ಇತ್ತು ಎಂದಿದ್ದಾರೆ.

ಹೊಸ ಬಟ್ಟೆ ಬದಲು ಮಕ್ಕಳ ಖಾತೆಗೆ ಹಣ!
ಸಾಮಾನ್ಯವಾಗಿ ದುಡಿದ ಹಣದಲ್ಲಿ ತಮಗಿಷ್ಟವಾದ ಬಟ್ಟೆ, ಒಡವೆ ಖರೀದಿಸುವ ಆಸೆ ಇರುತ್ತೆ. ಆದ್ರೆ ಉಮಾಶ್ರೀ ಅವರ ಲೆಕ್ಕಾಚಾರವೇ ಬೇರೆ. ತಮಗೆ ಹೊಸ ಬಟ್ಟೆ ಬೇಕೆಂದು ಅನಿಸಿದಾಗಲೂ ಇದ್ದ ಬಟ್ಟೆಗಳನ್ನೇ ಬಳಸಿಕೊಳ್ಳುತ್ತಿದ್ದರಂತೆ. ಹೊಸ ಬಟ್ಟೆ ಖರೀದಿಸಲು ಖರ್ಚಾಗುವ ಹಣವನ್ನು ಮಕ್ಕಳ ಖಾತೆಗೆ ಜಮೆ ಮಾಡುತ್ತಿದ್ದರಂತೆ. ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಕೊಡಲು ಸಾಧ್ಯವಾಗದಿದ್ದರೂ, ತಮ್ಮ ಕೈಲಾದಷ್ಟು ಉತ್ತಮವಾಗಿ ಬೆಳೆಸಿದ್ದೇನೆ ಎಂದು ಹೇಳಿದ್ದಾರೆ.

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಹಣದ ಮೌಲ್ಯ ತಿಳಿಸಬೇಕು ಅನ್ನೋದು ಉಮಾಶ್ರೀ ಅವರ ನಿಲುವು. ಒಂದು ಬಟ್ಟೆ ಖರೀದಿಸಿದರೆ ಇಷ್ಟು ಹಣ ಖರ್ಚಾಗುತ್ತೆ, ಅದನ್ನು ಖರೀದಿಸದೆ ಉಳಿಸಿದರೆ ಆ ಹಣ ನಿಮ್ಮ ಖಾತೆಗೆ ಸೇರುತ್ತೆ ಎಂದು ಮಕ್ಕಳಿಗೆ ತಿಳಿಸುತ್ತಿದ್ದರಂತೆ. ಅದರಲ್ಲೂ ಮಗ ಹಣ ಮತ್ತು ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದನ್ನು ಚೆನ್ನಾಗಿ ಕಲಿತಿದ್ದಾನೆ. ಯಾವುದೇ ವಸ್ತುವಾಗಲಿ, ಆಸ್ತಿಯಾಗಲಿ ಜವಾಬ್ದಾರಿಯಿಂದ ಕಾಪಾಡಿಕೊಳ್ಳಬೇಕು ಅನ್ನೋ ಗುಣ ಆತನಲ್ಲಿದೆ ಎಂದು ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಗಳ ವಿಚಾರದಲ್ಲಿ ಉಮಾಶ್ರೀ ಮನಸ್ಥಿತಿಯೇ ಬೇರೆ!
 ಇನ್ನು ಮಗನಿಗೆ ಉಳಿತಾಯದ ಪಾಠ ಕಲಿಸಿರುವ ಉಮಾಶ್ರೀ, ಮಗಳ ವಿಚಾರದಲ್ಲಿ ಮಾತ್ರ ಸ್ವಲ್ಪ ಭಿನ್ನವಾಗಿ ಯೋಚಿಸುತ್ತಾರಂತೆ. ಬಾಲ್ಯದಲ್ಲಿ ತಮಗೆ ಸಿಗದ ಬಟ್ಟೆ, ಆಹಾರ ಮತ್ತು ಸಣ್ಣಪುಟ್ಟ ಸಂತೋಷಗಳನ್ನೆಲ್ಲ ಈಗ ಮಗಳ ಮೂಲಕ ಅನುಭವಿಸಬೇಕು ಅನ್ನೋ ಆಸೆ ಅವರಿಗಿದೆಯಂತೆ. ಆಗ ತಿನ್ನಲು ಸಾಧ್ಯವಾಗದ ಆಹಾರವನ್ನು ಈಗ ತಿನ್ನಬೇಕು, ಖರೀದಿಸಲು ಸಾಧ್ಯವಾಗದ ವಸ್ತುಗಳನ್ನು ಈಗ ಖರೀದಿಸಬೇಕು ಎಂಬ ಭಾವನೆ ಮಗಳಲ್ಲಿದೆ ಎಂದು ನಗುತ್ತಲೇ ಹೇಳಿದ್ದಾರೆ.

ಮಕ್ಕಳ ಭವಿಷ್ಯವೇ ಉಮಾಶ್ರೀ ಆಸ್ತಿ!
ಒಟ್ಟಿನಲ್ಲಿ, ಚಿತ್ರರಂಗದಲ್ಲಿ ದುಡಿದು ಸಂಪಾದಿಸಿದ ಹಣವನ್ನು ಆಡಂಬರಕ್ಕೆ ಖರ್ಚು ಮಾಡದೆ ಮಕ್ಕಳ ಭವಿಷ್ಯಕ್ಕಾಗಿ ಉಳಿಸಿದ ಉಮಾಶ್ರೀ ಅವರ ಆರ್ಥಿಕ ಶಿಸ್ತು ನಿಜಕ್ಕೂ ಮೆಚ್ಚುವಂಥದ್ದು. ಮಗನಿಗೆ ಉಳಿತಾಯದ ಪಾಠ, ಮಗಳಿಗೆ ಬಾಲ್ಯದ ಆಸೆಗಳನ್ನು ಈಡೇರಿಸುವ ಖುಷಿ.. ಹೀಗೆ ಮಕ್ಕಳಿಬ್ಬರ ಬಗ್ಗೆಯೂ ವಿಭಿನ್ನ ಕಾಳಜಿ ತೋರಿರುವ ಉಮಾಶ್ರೀ ಅವರ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ.

ಬಾಲ್ಯ ಮತ್ತು ಕುಟುಂಬ ಜೀವನ
ಉಮಾಶ್ರೀ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ, ರಂಗಭೂಮಿ ಕಲಾವಿದೆ ಹಾಗೂ ರಾಜಕಾರಣಿ. ಹಾಸ್ಯ, ಪೋಷಕ ಪಾತ್ರಗಳು ಮತ್ತು ಭಾವನಾತ್ಮಕ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿರುವ ಅವರು, ತಮ್ಮ ಪ್ರತಿಭೆಯಿಂದ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದು ಕಲಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದವರು. ಬಾಲ್ಯದಿಂದಲೇ ಸಾಕಷ್ಟು ಕಷ್ಟಗಳನ್ನು ಎದುರಿಸಿದ ಉಮಾಶ್ರೀ ಅವರು, ಜೀವನ ನಿರ್ವಹಣೆಗಾಗಿ ಹಲವು ಸವಾಲುಗಳನ್ನು ಎದುರಿಸಿದರು. ಆರ್ಥಿಕ ಸಂಕಷ್ಟಗಳ ನಡುವೆಯೂ ಕಲೆಯ ಮೇಲಿನ ಆಸಕ್ತಿಯನ್ನು ಕೈಬಿಡದೆ ರಂಗಭೂಮಿಯತ್ತ ಹೆಜ್ಜೆ ಹಾಕಿದರು. ಉಮಾಶ್ರೀ ಅವರ ಕಲಾ ಬದುಕಿಗೆ ರಂಗಭೂಮಿ ಭದ್ರ ಬುನಾದಿಯಾಯಿತು. ನಾಟಕಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡರು. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ನಂತರ ಕನ್ನಡ ಸಿನಿಮಾಗಳಲ್ಲಿ ಪ್ರಮುಖ ಪೋಷಕ ನಟಿಯಾಗಿ ಬೆಳೆದರು.ಹಾಸ್ಯ ಪಾತ್ರಗಳಿರಲಿ, ಗಂಭೀರ ಪಾತ್ರಗಳಿರಲಿ, ತಮ್ಮದೇ ಆದ ಅಭಿನಯ ಶೈಲಿಯಿಂದ ಪ್ರೇಕ್ಷಕರ ಗಮನ ಸೆಳೆದರು.

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES