Dhruva Sarja birthday: ಸ್ಯಾಂಡಲ್‌ವುಡ್‌ನ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುವುದು ಪಕ್ಕಾ ಆಗಿದೆ. ಅಕ್ಟೋಬರ್ 6 ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬ ಇದೆ. ಇದೇ ವಿಶೇಷ ಸಂದರ್ಭದಲ್ಲಿ ಅವರ ನೂತನ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಲಿದೆ. ಭಾರತೀಯ ಚಿತ್ರರಂಗದ ಮುಂಚೂಣಿ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಈ ಹೊಸ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಮೂಡಿಸುವಂತಹ ವಿಶೇಷ ಪೋಸ್ಟರ್ ಹಾಗೂ ಸಾಲುಗಳನ್ನು ಹಂಚಿಕೊಂಡಿದೆ.
ಹೃದಯವೊಂದು ಕಥೆಯನ್ನು ಹೇಳಲು ಬಯಸಿದೆ, ಅದು ಹೆಚ್ಚು ಕಾಲ ಮೌನವಾಗಿರುವುದಿಲ್ಲ.. ಎರಡು ಹೆಸರುಗಳು, ಭಾವಪೂರ್ಣವಾದ ಒಂದು ಒಗ್ಗೂಡುವಿಕೆ. ಆ ಕಥೆಗೆ ಜೀವ ತುಂಬಲು ಒಂದಾಗುತ್ತಿದ್ದಾರೆ ಎಂದು ಬರೆಯುವ ಮೂಲಕ ಚಿತ್ರತಂಡ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಇದುವರೆಗೂ ಮಾಸ್ ಮತ್ತು ಹೈ-ವೋಲ್ಟೇಜ್ ಆಕ್ಷನ್ ಪಾತ್ರಗಳಲ್ಲೇ ಅಬ್ಬರಿಸುತ್ತಿದ್ದ ಧ್ರುವ ಸರ್ಜಾ, ಈ ಬಾರಿ ಸಂಪೂರ್ಣ ಭಿನ್ನವಾದ ಎಮೋಷನಲ್ ಅಥವಾ ಫೀಲ್‌ಗುಡ್ ಕಥಾಹಂದರದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
ಖ್ಯಾತ ನಿರ್ಮಾಪಕ ಟಿ.ಜಿ ವಿಶ್ವಪ್ರಸಾದ್ ಅವರ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಬೆಳೆದ ಪ್ರಮುಖ ಬ್ಯಾನರ್‌ಗಳಲ್ಲಿ ಒಂದಾಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದ ‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಈ ಸಂಸ್ಥೆ, ಈಗಾಗಲೇ ಕನ್ನಡದಲ್ಲೂ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸುತ್ತಾ ಸೈ ಎನಿಸಿಕೊಂಡಿದೆ.
ಗುಣಮಟ್ಟದ ಮೇಕಿಂಗ್ ಹಾಗೂ ಭರ್ಜರಿ ತಾಂತ್ರಿಕ ಮೌಲ್ಯಗಳಿಗೆ ಹೆಸರಾಗಿರುವ ಈ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯು, ಧ್ರುವ ಸರ್ಜಾ ಅವರ ಜೊತೆ ಕೈಜೋಡಿಸಿರುವುದು ಸಿನಿಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರದ ನಿರ್ದೇಶಕರು ಯಾರು, ತಾರಾಗಣದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಸಂಪೂರ್ಣ ವಿವರಗಳನ್ನು ಅಕ್ಟೋಬರ್ 6 ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲೇ ಅಧಿಕೃತವಾಗಿ ಚಿತ್ರತಂಡ ಬಿಡುಗಡೆ ಮಾಡಲಿದೆ.
ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇದೇ ಅಕ್ಟೋಬರ್ 6 ರಂದು 38ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತಿದೆ. ಸದ್ಯ ಸಿನಿಮಾ ಶೂಟಿಂಗ್‌ನಿಂದ ಬಿಡುವು ತೆಗೆದುಕೊಂಡ ಆಕ್ಷನ್ ಪ್ರಿನ್ಸ್ ಕುಟುಂಬದ ಜೊತೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಜೊತೆಗೆ ಹೊಸ ಸಿನಿಮಾಗಳ ಟೀಸರ್, ಟ್ರೈಲರ್, ಪೋಸ್ಟರ್ ಲಾಂಚ್‌ನಂತಹ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ಹೊಸ ನಟ, ನಟಿಯರಿಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಧ್ರುವ ಸರ್ಜಾ ಅವರು ನಟಿಸಿದ ಇತ್ತೀಚೆಗೆ ಬಿಡುಗಡೆಗೊಂಡ ಜೋಗಿ ಪ್ರೇಮ್ ನಿರ್ದೇಶನದ ಕೆಡಿ- ದಿ ಡೆವಿಲ್ ಸಿನಿಮಾ ಇದೇ ವರ್ಷದ ಏಪ್ರಿಲ್ 30 ರಂದು ಬಿಡುಗಡೆ ಆಗಿತ್ತು.
ಸದ್ಯ ಕ್ರಿಮಿನಲ್ ಎನ್ನುವ ಸಿನಿಮಾದಲ್ಲಿ ಈಗಾಗಲೇ ಧ್ರುವ ಸರ್ಜಾ ಅವರು ಅಭಿನಯ ಮಾಡುತ್ತಿದ್ದಾರೆ. ಇದರ ಜೊತೆಗೆ ಹುಟ್ಟು ಹಬ್ಬಕ್ಕೆ ಹೊಸದೊಂದು ಸಿನಿಮಾ ಘೋಷಣೆ ಮಾಡಲಿದ್ದಾರೆ. ಧ್ರುವ ಸರ್ಜಾ ನಟನೆಯ ಆಕ್ಷನ್ ಮತ್ತು ಮಾಸ್ ಕಥೆ ಇರುವಂತಹ ಕ್ರಿಮಿನಲ್ ಸಿನಿಮಾ ಸೆಟ್ಟೇರಿದೆ. ಉತ್ತರ ಕರ್ನಾಟಕದ ಸೊಗಡಿನ ಕಥೆ ಇರುವ ಈ ಸಿನಿಮಾದಲ್ಲಿ ಹಿರೋಯಿನ್ ಆಗಿ ರಚಿತಾ ರಮ್ ಅವರು ಧ್ರವ ಸರ್ಜಾಗೆ ಜೋಡಿಯಾಗಿದ್ದಾರೆ. ಈ ಇಬ್ಬರ ಕಾಂಬಿನೇಷನ್ ಎಂದರೆ ಸಿನಿಮಾ ಗೆಲುವು ಪಕ್ಕಾ ಎನ್ನಬಹುದು. ಕ್ರಿಮಿನಲ್ ಸಿನಿಮಾಗೆ ರಾಜ್‌ಗುರು ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಧ್ರುವ ಸರ್ಜಾ ಶಿವ ಹೆಸರಿನ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಇದೊಂದು ನೈಜವಾದ ಕಥೆ ಆಗಿದೆ. ಇದರಲ್ಲಿ ಹಿರಿಯ ನಟಿ ತಾರಾ ಅವರು ಧ್ರವ ಅವರಿಗೆ ಅಮ್ಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾವೆಲ್ಲ ಉತ್ತರ ಕರ್ನಾಟಕದ ಭಾಷೆಯಲ್ಲಿಯೇ ಇರಲಿದೆ.