"ಈ ರಾಜಕಾರಣಿ ನಮ್ಮ ಮನೆ ಬಾಗಿಲು ಕಾಯ್ತಿದ್ದ" : ನಟ ಧನ್ವೀರ್‌ದು ಎನ್ನಲಾದ ಸ್ಫೋಟಕ ಆಡಿಯೋ ವೈರಲ್!
ಈ ಆಡಿಯೋದಲ್ಲಿ ರಾಜಕಾರಣಿಗಳು ಮತ್ತು ಕೆಲವು ವ್ಯಕ್ತಿಗಳ ಬಗ್ಗೆ ಅವಾಚ್ಯ ಪದಗಳನ್ನು ನಟ ಧನ್ವೀರ್ ಗೌಡ ಬಳಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
Dhanveer Gowda Viral Audio: ಕನ್ನಡ ಚಿತ್ರರಂಗದಲ್ಲಿ ನಟ ಧನ್ವೀರ್ ಗೌಡ ಅವರ ಹೆಸರು ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದೆ. ನಟ ಧನ್ವೀರ್ ಗೌಡ ಅವರದ್ದು ಎಂದು ಹೇಳಲಾಗುತ್ತಿರುವ ಮತ್ತೊಂದು ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಆಡಿಯೋದಲ್ಲಿ ರಾಜಕಾರಣಿಗಳು ಮತ್ತು ಕೆಲವು ವ್ಯಕ್ತಿಗಳ ಬಗ್ಗೆ ಅವಾಚ್ಯ ಪದಗಳನ್ನು ನಟ ಧನ್ವೀರ್ ಗೌಡ ಬಳಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋದಲ್ಲಿ ಕರ್ನಾಟಕದ ಪವರ್ ಫುಲ್ ರಾಜಕಾರಣಿಯೊಬ್ಬರ ಪುತ್ರನ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಕೆಲವು ರಾಜಕೀಯ ವ್ಯಕ್ತಿಗಳ ಬಗ್ಗೆಯೂ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಭಾಷಣೆಯಲ್ಲಿ ತಮ್ಮ ತಂದೆ ಕುಳಿತ ಜಾಗದಿಂದಲೇ ಯಾರನ್ನೂ ಬೇಕಾದರೂ ಅವರನ್ನು ಸಂಪರ್ಕಿಸಬಲ್ಲರು ಎಂಬ ಅರ್ಥದ ಮಾತುಗಳೂ ಇವೆ ಎಂದು ವರದಿಯಾಗಿದೆ.
ಆಡಿಯೋದಲ್ಲಿನ ಹೇಳಿಕೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಆದರೆ ಈ ಸಂಭಾಷಣೆಯ ಸಂಪೂರ್ಣ ಹಿನ್ನೆಲೆ ಏನು, ಯಾವ ಸಂದರ್ಭದಲ್ಲಿ ಈ ಮಾತುಗಳನ್ನು ಆಡಲಾಗಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೆ, ಆಡಿಯೋದಲ್ಲಿ ಕೇಳಿಬರುವ ಧ್ವನಿ ನಟ ಧನ್ವೀರ್ ಅವರದ್ದೇ ಎಂಬುದೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಆದರೆ ಈ ವೈರಲ್ ಆಡಿಯೋ ಇದೀಗ ನಟ ಧನ್ವೀರ್ ಅವರಿಗೆ ಹೊಸ ಸಂಕಷ್ಟ ತಂದೊಡ್ಡಿದೆ. ಧನ್ವಿರ್ ಅವರದ್ದು ಎನ್ನಲಾಗುತ್ತಿರುವ ಈ ಆಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ವೈರಲ್ ಆಗುತ್ತಿವೆ. ಈ ವೈರಲ್ ಆಡಿಯೋದಲ್ಲಿ ಕೆಲವು ಹಿರಿಯ ರಾಜಕೀಯ ವ್ಯಕ್ತಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಲಾಗಿದೆ. ಅಲ್ಲದೇ ಅವಾಚ್ಯ ಪದಗಳಿಂದ ನಿಂದಿಸಲಾಗಿದೆ. ಈ ಆಡಿಯೋ ವೈರಲ್ ಆಗ್ತಿದ್ದಂತೆ ಈ ರೀತಿಯ ಪದ ಬಳಕೆ ಮಾಡುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ.
ವಿಜಯಲಕ್ಷ್ಮಿ ದರ್ಶನ್ ಹೆಸರು ಪ್ರಸ್ತಾಪವಾಗಿದ್ದ ಆಡಿಯೋದಿಂದ ವಿವಾದ:
ಇದಕ್ಕೂ ಮೊದಲು ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಹೆಸರು ಪ್ರಸ್ತಾಪವಾಗಿದೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ದರ್ಶನ್ ಅವರ ಆಪ್ತರ ಬಗ್ಗೆ ಅವಾಚ್ಯವಾಗಿ ಮಾತನಾಡಿರುವುದು ಹಾಗೂ ಕೆಲವರಿಗೆ ಬೆದರಿಕೆ ಹಾಕಿರುವ ಆರೋಪಗಳು ಆ ಸಂಭಾಷಣೆಗೆ ಸಂಬಂಧಿಸಿದಂತೆ ಕೇಳಿಬಂದಿದ್ದವು. ಈ ಬೆಳವಣಿಗೆಯ ಬೆನ್ನಲ್ಲೇ ಮತ್ತೊಂದು ಆಡಿಯೋ ಹರಿದಾಡುತ್ತಿರುವುದು ವಿವಾದಕ್ಕೆ ಹೊಸ ತಿರುವು ನೀಡಿದೆ.
ಒಂದರ ಹಿಂದೆ ಮತ್ತೊಂದು ಆಡಿಯೋ ತುಣುಕು ವೈರಲ್ ಆಗುತ್ತಿರುವುದರಿಂದ ನಟ ಧನ್ವೀರ್ ಸುತ್ತಲಿನ ವಿವಾದದ ಬಗ್ಗೆ ಚರ್ಚೆ ಹೆಚ್ಚಾಗಿದೆ. ಕೆಲವರು ಆಡಿಯೋದಲ್ಲಿನ ಹೇಳಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದರೆ, ಮತ್ತೊಂದೆಡೆ ಧ್ವನಿಯ ಮೂಲವನ್ನು ಪರಿಶೀಲಿಸದೆ ಯಾವುದೇ ತೀರ್ಮಾನಕ್ಕೆ ಬರಬಾರದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.
ಸದ್ಯಕ್ಕೆ ಈ ಆಡಿಯೋದಲ್ಲಿನ ಹೇಳಿಕೆಗಳ ಸತ್ಯಾಸತ್ಯತೆ ದೃಢಪಟ್ಟಿಲ್ಲ. ಧ್ವನಿ ಯಾರದ್ದು, ಸಂಭಾಷಣೆಯ ಮೂಲ ಯಾವುದು ಮತ್ತು ಮಾತುಗಳನ್ನು ಯಾವ ಸಂದರ್ಭದಲ್ಲಿ ಆಡಲಾಗಿದೆ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಸಂಬಂಧಪಟ್ಟವರ ಅಧಿಕೃತ ಪ್ರತಿಕ್ರಿಯೆ ಹಾಗೂ ತನಿಖೆಯ ನಂತರವೇ ಪ್ರಕರಣದ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ. ಅಲ್ಲಿಯವರೆಗೆ ವೈರಲ್ ಆಡಿಯೋದಲ್ಲಿನ ಆರೋಪಗಳನ್ನು ಸಾಬೀತಾದ ಸಂಗತಿಗಳೆಂದು ಪರಿಗಣಿಸುವುದು ಸೂಕ್ತವಲ್ಲ.