SOCIAL MEDIA

Newsletter

PARTNER SITES
Select Language Select State

ಪ್ರಮೋಷನ್ ನೆಪದಲ್ಲಿ ನಂಬರ್ ಪಡೆದು ಟಾರ್ಚರ್ : ಪೊಲೀಸ್ ಠಾಣೆ ಮೆಟ್ಟಿಲೇರಿದ ರೇಷ್ಮಾ

ಡಾನ್ಸ್‌, ಕಾಮಿಡಿ ರೀಲ್ಸ್ ಹಾಗೂ ಕಿರುತೆರೆ ರಿಯಾಲಿಟಿ ಶೋಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿರುವ ನಟಿ ರೇಷ್ಮಾಗೆ ಸೈಬರ್ ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಮೋಷನ್ ನೆಪದಲ್ಲಿ ಮೊಬೈಲ್ ಸಂಖ್ಯೆ ಪಡೆದು ತೇಜೋವಧೆ ಮಾಡುತ್ತಿದ್ದ ಭದ್ರಾವತಿ ಮೂಲದ ಯುವಕನ ವಿರುದ್ಧ ಬೇಸತ್ತ ನಟಿ ರೇಷ್ಮಾ, ಇದೀಗ ನಗರದ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ..

Reported By Krishna NK Written By Krishna NK
Published: Sep 30, 2026, 12:40 PM IST | Updated: Sep 30, 2026, 12:42 PM IST
Image Credit: Reshma Aunty
Join

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಮಾಷೆಯ ರೀಲ್ಸ್ ಮೂಲಕ ಜನರನ್ನು ನಗಿಸುತ್ತಿದ್ದ ಸೋಷಿಯಲ್ ಮೀಡಿಯಾ ಇನ್ಫ್ಲುಎನ್ಸರ್, ಕಿರುತೆರೆ ರಿಯಾಲಿಟಿ ಶೋ ಸ್ಪರ್ಧಿ ಹಾಗೂ ನಟಿ ರೇಷ್ಮಾಗೆ ಸೈಬರ್ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಟ್ರೋಲ್ ಮಾಡುವ ನೆಪದಲ್ಲಿ ಹದ್ದುಮೀರಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಭದ್ರಾವತಿ ಮೂಲದ ಫಯಾಜ್ ಎಂಬಾತನ ವಿರುದ್ಧ ರೇಷ್ಮಾ ಅವರು ಪೊಲೀಸರ ಮೆಟ್ಟಿಲೇರಿದ್ದಾರೆ.

ಪ್ರಮೋಷನ್ ನೆಪದಲ್ಲಿ ನಂಬರ್ ಪಡೆದು ಟಾರ್ಚರ್   ನವೀನ್ (ಅಲಿಯಾಸ್ ಕಟ್ಟಪ್ಪ) ಅವರೊಂದಿಗೆ ರೀಲ್ಸ್ ಮಾಡುತ್ತಾ ಜನಪ್ರಿಯತೆ ಗಳಿಸಿರುವ ರೇಷ್ಮಾ, ಸಿನಿಮಾಗಳು ಹಾಗೂ ಖಾಸಗಿ ವಾಹಿನಿಯ ರಿಯಾಲಿಟಿ ಶೋಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ. ಬಿಜಿನೆಸ್ ಪ್ರಮೋಷನ್ ಮಾಡುವ ನೆಪದಲ್ಲಿ ಫಯಾಜ್ ಎಂಬಾತ ರೇಷ್ಮಾಗೆ ಕರೆ ಮಾಡಿ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದ. ಬಳಿಕ ಆ ಸಂಖ್ಯೆಯನ್ನು ಸುಖಾಸುಮ್ಮನೆ ಇತರರಿಗೆ ಹಂಚಿ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ, ರೇಷ್ಮಾಗೆ ಕರೆ ಮಾಡಿ ಸಂಭಾಷಣೆಯನ್ನು ರೆಕಾರ್ಡ್ ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಟ್ಟು ಸಾರ್ವಜನಿಕವಾಗಿ ತೇಜೋವಧೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.  

ಧರ್ಮದ ಹೆಸರಿನಲ್ಲಿ ಸೈಬರ್ ಟ್ರೋಲ್ ಮುಸ್ಲಿಂ ಧರ್ಮಕ್ಕೆ ಸೇರಿದ ರೇಷ್ಮಾ ದೇವಸ್ಥಾನಕ್ಕೆ ಹೋಗುವುದು ಮತ್ತು ಹಣೆಗೆ ಬೊಟ್ಟು ಇಟ್ಟುಕೊಳ್ಳುವುದನ್ನು ಪ್ರಶ್ನಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಟ್ರೋಲ್ ಮಾಡಲಾಗುತ್ತಿತ್ತು. ಈ ಬಗ್ಗೆ ಆಕ್ರೋಶ ಹೊರಹಾಕಿರುವ ರೇಷ್ಮಾ, "ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ಬೇರೆ ಧರ್ಮದವಳಾದ ತಕ್ಷಣ ನಾನು ದೇವಸ್ಥಾನಕ್ಕೆ ಹೋಗಬಾರದೇ? ಇದನ್ನು ಪ್ರಶ್ನೆ ಮಾಡಲು ಅವನು ಯಾರು?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.  

ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಎದುರಾಗುತ್ತಿರುವ ಕಿರುಕುಳ ಹಾಗೂ ಟ್ರೋಲ್‌ಗೆ ಬೇಸತ್ತ ರೇಷ್ಮಾ, ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಲು ಮುಂದಾಗಿದ್ದರು. ಪೊಲೀಸ್ ಕಮಿಷನರ್ ಅವರ ಸೂಚನೆಯಂತೆ, ರೇಷ್ಮಾ ಅವರು ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES