Bengal Bangari movie muhurat: ಯುವ ರಾಜಕುಮಾರ್ ಅಭಿನಯದ ಎಕ್ಕಾ ಸಿನಿಮಾದ ಬ್ಯಾಂಗಲ್ ಬಂಗಾರಿ ತುಂಬಾ ಜನಪ್ರಿಯವಾದ ಹಾಡು ಆಗಿದೆ. ಈಗ ಆ ಹಾಡಿನ ಮೊದಲ ಸಾಲೇ ಚಿತ್ರದ ಶೀರ್ಷಿಕೆಯಾಗಿದೆ. ಶಂಕರ್ ರಾಮರೆಡ್ಡಿ ನಿರ್ಮಾಣದ, ಮರಡಿಹಳ್ಳಿ ಚಂದ್ರ ನಾಗ್ ಅವರು ನಿರ್ದೇಶಿಸುತ್ತಿರುವ ನೂತನ ಚಿತ್ರಕ್ಕೆ ಬ್ಯಾಂಗಲ್ ಬಂಗಾರಿ ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನಂದಿನಿ ಬಡಾವಣೆಯ ಬಲಮುರಿ ಪ್ರಸಿದ್ಧಿ ಶ್ರೀವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಮುಂಗಾರು ಮಳೆ ಸಿನಿಮಾದ ನಿರ್ಮಾಪಕರಾದ ಇ.ಕೃಷ್ಣಪ್ಪ ಅವರು ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಶಾಸಕ ಗೋಪಲಯ್ಯ ಅವರು ಕ್ಯಾಮೆರಾಗೆ ಚಾಲನೆ ನೀಡಿದರು. ಇಬ್ಬರು ಗಣ್ಯರು ಸಿನಿಮಾ ಯಶಸ್ವಿ ಆಗಲಿ ಎಂದು ಹಾರೈಸಿದರು.
ಶುಕ್ರವಾರ, ಅನಂತ ಚತುರ್ದಶಿಯ ಶುಭದಿನ ನಮ್ಮ ಬ್ಯಾಂಗಲ್ ಬಂಗಾರಿ ಸಿನಿಮಾಗೆ ಚಾಲನೆ ಸಿಕ್ಕಿದೆ. ಇದೊಂದು ಪ್ರೇಮಕಥೆ. ಜೊತೆಗೆ ಕ್ರೈಮ್ ಕೂಡ ಇದೆ. ಸುನೀಲ್ ಶಶಿಧರ್, ಪ್ರಕೃತಿ ರಾಜೇಂದ್ರ ಹೀರೋ, ಹೀರೋಯಿನ್ ಆಗಿ ಅಭಿನಯ ಮಾಡುತ್ತಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ರವಿ ಕಾಳೆ, ಸಂಪತ್ ಮೈತ್ರೇಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಟಾಪ್ ಸ್ಟಾರ್ ರೇಣು ಸಂಗೀತ ನಿರ್ದೇಶನ, ಸತೀಶ್ ಕೆ ಛಾಯಾಗ್ರಹಣ ಹಾಗೂ ಗಿರೀಶ್ ಕುಮಾರ್ ಅವರ ಸಂಕಲನವಿರುವ ಈ ಸಿನಿಮಾಕ್ಕೆ ಫುಲ್ ಮೀಲ್ಸ್ ಸಿನಿಮಾದ ನಿರ್ದೇಶಕ ಎನ್ ವಿನಾಯಕ ಸಂಭಾಷಣೆ ಬರೆದಿದ್ದಾರೆ.
ಹಾಡುಗಳನ್ನು ಕೆ ಕಲ್ಯಾಣ್, ಲೋಕೇಶ್ ಕೃಷ್ಣ ಹಾಗೂ ಟಾಪ್ ಸ್ಟಾರ್ ರೇಣು ರಚಿಸಿದ್ದಾರೆ. ವಿಜಯ್ ಪ್ರಕಾಶ್, ಕೈಲಾಶ್ ಖೇರ್, ಜಸ್ಕರಣ್ ಸಿಂಗ್, ಅನುರಾಧಾ ಭಟ್ ಹಾಡುಗಳನ್ನು ಹಾಡಲಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಎರಡನೇ ಹಂತದ ಚಿತ್ರೀಕರಣ ಸಕಲೇಶಪುರದಲ್ಲಿ ನಡೆಸಲು ಸಿದ್ಧತೆ ನಡೆಯುತ್ತಿದೆ. ನಾನೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದೇನೆ. ಶಂಕರ್ ರಾಮ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಮರಡಿಹಳ್ಳಿ ಚಂದ್ರ ನಾಗ್ ತಿಳಿಸಿದರು.
ಇದು ನನಗೆ ನಾಯಕನಾಗಿ ಎರಡನೇ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ನಾನು AI ಎಂಜಿನಿಯರ್. ಆಡಿಷನ್ ಮೂಲಕ ಆಯ್ಕೆ ಆಗಿದೆ. ನಟನೆಗೆ ಬೇಕಾದ ತರಬೇತಿ ಪಡೆದುಕೊಂಡು ಬಂದಿದ್ದೇನೆ ಎಂದು ನಾಯಕ ಸುನೀಲ್ ಶಶಿಧರ್ ಅವರು ಹೇಳಿದ್ದಾರೆ. ಈ ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಕಾವ್ಯ. ನಿರ್ದೇಶಕರು ನನ್ನ ಪಾತ್ರದ ಬಗ್ಗೆ ಹೇಳಿದ ತಕ್ಷಣ ತುಂಬಾ ಇಷ್ಡವಾಯಿತು. ನಾನು ಮೂಲತಃ ನೃತ್ಯಗಾರ್ತಿ. ಈ ಚಿತ್ರದಲ್ಲೂ ನೃತ್ಯ ಮಾಡಲು ಅವಕಾಶವಿದೆ ಎಂದರು ನಾಯಕಿ ಪ್ರಕೃತಿ ರಾಜೇಂದ್ರ.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡುತ್ತಿರುವುದಾಗಿ ಹೇಳಿದ ನಿರ್ಮಾಪಕ ಶಂಕರ್ ರಾಮ್ ರೆಡ್ಡಿ ಅವರು, ಆಗಮಿಸಿದ ಅತಿಥಿಗಳಿಗೆ ಹಾಗೂ ಸಿನಿಮಾ ತಂಡದ ಸದಸ್ಯರಿಗೆ ಧನ್ಯವಾದ ಹೇಳಿದರು. ಸಂಗೀತ ನಿರ್ದೇಶಕ ಟಾಪ್ ಸ್ಟಾರ್ ರೇಣು, ಛಾಯಾಗ್ರಾಹಕ ಸತೀಶ್, ನಟ ಸಂಪತ್ ಮೈತ್ರೇಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಡಾ ರಾಜ್‌ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್‌ಕುಮಾರ್ ಅವರು ಅಭಿನಯದ ಎಕ್ಕ ಸಿನಿಮಾವೂ ಬ್ಯಾಂಗಲ್ ಬಂಗಾರಿ ಸಾಂಗ್ ಮೂಲಕ ಹೆಚ್ಚು ಖ್ಯಾತಿ ಗಳಿಸಿತ್ತು. ಕರ್ನಾಟಕದ ಪ್ರತಿ ಮೂಲೆ ಮೂಲೆಗೂ ಈ ಬ್ಯಾಂಗಲ್ ಬಂಗಾರಿ ಸಾಂಗ್ ಹರಡಿತ್ತು. ಸದ್ಯ ಈಗಲೂ ಈ ಸಿನಿಮಾ ಫೇಮಸ್ ಅಂತಲೇ ಹೇಳಬಹುದು. ಬ್ಯಾಂಗಲ್ ಬಂಗಾರಿ ಹಾಡಿನ ಹೆಸರನ್ನೇ ಸಿನಿಮಾಗೆ ಟೈಟಲ್ ಇಡಲಾಗಿದ್ದು ಸಖತ್ ಹಿಟ್ ಆಗುವ ನಿರೀಕ್ಷೆಯಂತೂ ಇದೆ. ಏಕೆಂದರೆ ಈಗಾಗಲೇ ಈ ಟೈಟಲ್ ಎಲ್ಲರಿಗೂ ಗೊತ್ತಿರುವ ಸಂಗತಿ. ಅದನ್ನು ಪ್ರಚಾರ ಮಾಡೋದೆ ಬೇಕಾಗಿಲ್ಲ. ಒಂದು ಬಾರಿ ಹೇಳಿದರೆ ಸಾಕು ಎಲ್ಲರಿಗೂ ಬ್ಯಾಂಗಲ್ ಬಂಗಾರಿ ಹೆಸರು ತಲೆಯಲ್ಲಿ ಉಳಿದುಕೊಳ್ಳುತ್ತದೆ.