SOCIAL MEDIA

Newsletter

PARTNER SITES
Select Language Select State

ಅಪ್ಪು ವಿರುದ್ಧ ಯುವಕನಿಂದ ಅವಹೇಳನಕಾರಿ ಪೋಸ್ಟ್ : ಮಹತ್ವದ ತೀರ್ಪು ನೀಡಿದ ಹೈಕೋರ್ಟ್‌

ನಟ ಪುನೀತ್‌ ರಾಜ್‌ಕುಮಾರ್‌ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ಕೈಯಲ್ಲಿ ಮೊಬೈಲ್ ಇದೆ ಅದರಲ್ಲಿ ಅಂತರ್ಜಾಲ ಇದೆ ಅಂತ ಏನ್‌ ಬೇಕಾದರೂ ಪೋಸ್ಟ್ ಮಾಡಬಹುದು ಎಂದು ಭಾವಿಸಿದ್ರೆ ಅದು ತಪ್ಪು ಎಂದು ಯುವಕನಿಗೆ ಪಾಠ ಮಾಡಿದೆ.. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ..

Reported By Krishna NK Written By Krishna NK
Published: Sep 18, 2026, 04:13 PM IST | Updated: Sep 18, 2026, 04:23 PM IST
Image Credit: Puneeth rajkumar case
Join

ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ‘ಕರ್ನಾಟಕ ರತ್ನ’ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದ ಸಂದರ್ಭದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಅವಹೇಳನಕಾರಿ ಮತ್ತು ಅಸಭ್ಯ ಪೋಸ್ಟ್‌ ಹಂಚಿಕೊಂಡಿದ್ದ ವಿದ್ಯಾರ್ಥಿ ರಿತ್ವಿಕ್‌ ಶರ್ಮಾನನ್ನು ಕರ್ನಾಟಕ ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಆದರೆ, ಯುವಕನ ವಯಸ್ಸು, ಆತನ ಶೈಕ್ಷಣಿಕ ಹಿನ್ನೆಲೆ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಆತನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಯನ್ನು ಕಠಿಣ ಎಚ್ಚರಿಕೆ ನೀಡುವ ಮೂಲಕ ನ್ಯಾಯಾಲಯ ರದ್ದುಗೊಳಿಸಿದೆ.

ಹೌದು.. ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ತತ್ಸಂಬಂಧಿತ ಕಾನೂನು ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ 22 ವರ್ಷದ ರಿತ್ವಿಕ್‌ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ವಿಚಾರಣೆ ವೇಳೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ
ವಿಚಾರಣೆಯ ವೇಳೆಯಲ್ಲಿ ಅರ್ಜಿದಾರನ ಬೇಜವಾಬ್ದಾರಿಯುತ ನಡವಳಿಕೆ ಹಾಗೂ ಸಾಮಾಜಿಕ ಜಾಲತಾಣದ ದುರ್ಬಳಕೆಯನ್ನು ನ್ಯಾಯಾಲಯ ಅತ್ಯಂತ ಕಟು ಶಬ್ದಗಳಿಂದ ಖಂಡಿಸಿತು. ಇಡೀ ನಾಡಿನ ಜನತೆಯಷ್ಟೇ ಅಲ್ಲದೆ, ಕೋಟ್ಯಂತರ ಅಭಿಮಾನಿಗಳು ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದ ದುಃಖದಲ್ಲಿದ್ದಾಗ ಇಂತಹ ವಿಕೃತ ಮತ್ತು ಕೆಟ್ಟ ಸಂದೇಶ ಹಂಚಿಕೊಂಡಿರುವುದು ಅಕ್ಷಮ್ಯ ಅಪರಾಧ. ಸೋಶಿಯಲ್ ಮೀಡಿಯಾ ಕೈಯಲ್ಲಿದೆ ಎಂಬ ಮಾತ್ರಕ್ಕೆ ಪ್ರಚಾರಕ್ಕಾಗಿ ಅಥವಾ ತಮಾಷೆಗಾಗಿ ಏನು ಬೇಕಾದರೂ ಪೋಸ್ಟ್ ಮಾಡಬಹುದು ಎಂದು ಭಾವಿಸುವುದು ತಪ್ಪು ಎಂದು ಪಾಠ ಮಾಡಿತು.

ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ: ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ಜೀವಿತಾವಧಿಯಲ್ಲಿ ಯುವಜನತೆಯ ಮಧ್ಯಪಾನ ಚಟವನ್ನು ತೀವ್ರವಾಗಿ ವಿರೋಧಿಸುತ್ತಿದ್ದವರು. ಅಂತಹ ವ್ಯಕ್ತಿಯ ಸಾವಿನ ಸಂದರ್ಭದಲ್ಲಿ ಬಿಯರ್ ಬಾಟಲಿಯ ಫೋಟೊ ಮುಂಭಾಗದಲ್ಲಿಟ್ಟುಕೊಂಡು ಅಸಭ್ಯ ಪದಗಳನ್ನು ಬಳಸಿ ಪೋಸ್ಟ್ ಮಾಡಿರುವುದು ತೀವ್ರ ಆಕ್ಷೇಪಾರ್ಹವಾಗಿದ್ದು, ಇದು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಅಪರಾಧವಾಗಿದೆ ಎಂದು ಎಚ್ಚರಿಸಿತು.

ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ವಿನಾಯಿತಿ
ಯುವಕನ ಮುಂದಿನ ವೃತ್ತಿಜೀವನ ಹಾಗೂ ವಿದ್ಯಾಭ್ಯಾಸದ ಮೇಲಾಗುವ ಪರಿಣಾಮವನ್ನು ಪರಿಗಣಿಸಿದ ಹೈಕೋರ್ಟ್, ಆತನಿಗೆ ಶಿಕ್ಷೆಯಾಗುವುದಕ್ಕಿಂತ ತಿದ್ದುಪಡಿ ಅವಕಾಶ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು. ಅಷ್ಟೇ ಅಲ್ಲದೆ, ಅರ್ಜಿದಾರ ಮೂಲತಃ ಭಾರತೀಯ ನಿವಾಸಿಯಾಗಿರಲಿಲ್ಲ ಮತ್ತು ಇತ್ತೀಚೆಗಷ್ಟೇ ಲಂಡನ್‌ನಿಂದ ಭಾರತಕ್ಕೆ ಬಂದಿದ್ದಾನೆ. ಪ್ರಸ್ತುತ ಆತ ಪ್ರತಿಷ್ಠಿತ 'ಅಶೋಕ ವಿಶ್ವವಿದ್ಯಾಲಯ'ದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಈ ಹಂತದಲ್ಲೇ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮುಂದುವರಿದರೆ ಆತನ ಇಡೀ ಶೈಕ್ಷಣಿಕ ಭವಿಷ್ಯ ಹಾಗೂ ವೃತ್ತಿಜೀವನ ಸಂಪೂರ್ಣವಾಗಿ ಹಾಳಾಗಲಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.

ಈ ಕಾರಣಗಳನ್ನು ನೀಡಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67 ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 153ಎ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿತು. ಇದೇ ವೇಳೆ, ಇನ್ನುಮುಂದೆ ಇಂತಹ ಗಂಭೀರ ತಪ್ಪುಗಳು ಮರುಕಳಿಸದಂತೆ ಯುವಕನಿಗೆ ಸೂಕ್ತ ಕೌನ್ಸೆಲಿಂಗ್ ನೀಡಬೇಕೆಂದು ಆತನ ಪರ ವಕೀಲರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಅರ್ಜಿದಾರನ ಪರ ವಕೀಲರ ವಾದ
ಅರ್ಜಿದಾರ ರಿತ್ವಿಕ್ ಪರ ವಾದ ಮಂಡಿಸಿದ ವಕೀಲೆ ಪದ್ಮಾವತಿ ಅವರು, "ಅರ್ಜಿದಾರ ಲಂಡನ್‌ನಲ್ಲಿ ಬೆಳೆದು ಬಂದವನಾಗಿದ್ದು, ಕೇವಲ ಎರಡು ವರ್ಷಗಳ ಹಿಂದಷ್ಟೇ ಭಾರತಕ್ಕೆ ಬಂದಿದ್ದಾನೆ. ಹೀಗಾಗಿ ಆತನಿಗೆ ಇಲ್ಲಿನ ಸಾಂಸ್ಕೃತಿಕ ಸೂಕ್ಷ್ಮತೆಗಳು ಮತ್ತು ಆ ಪೋಸ್ಟ್‌ನಿಂದಾಗುವ ತೀವ್ರ ಪರಿಣಾಮದ ಅರಿವಿರಲಿಲ್ಲ. ತನ್ನ ಪ್ರಮಾದಕ್ಕೆ ಆತ ಮನಸ್ಪೂರ್ವಕವಾಗಿ ಪಶ್ಚಾತ್ತಾಪ ಪಟ್ಟಿದ್ದಾನೆ. ಕ್ರಿಮಿನಲ್ ಪ್ರಕರಣದಿಂದ ಆತನ ಉಜ್ವಲ ಭವಿಷ್ಯಕ್ಕೆ ಧಕ್ಕೆಯಾಗುವ ಆತಂಕವಿದ್ದು, ದಯವಿಟ್ಟು ಪ್ರಕರಣವನ್ನು ರದ್ದುಗೊಳಿಸಬೇಕು," ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಪ್ರಕರಣದ ಹಿನ್ನೆಲೆ ಏನು?
2021ರ ನವೆಂಬರ್‌ 1ರಂದು (ಪುನೀತ್‌ ರಾಜ್‌ಕುಮಾರ್‌ ಅವರು ನಿಧನರಾದ ಕೆಲವೇ ದಿನಗಳಲ್ಲಿ) ರಿತ್ವಿಕ್ ಶರ್ಮಾ, ಕಿಂಗ್‌ಫಿಷರ್‌ ಬಿಯರ್‌ ಬಾಟಲಿಯ ಫೋಟೊ ಜೊತೆಗೆ ಪುನೀತ್‌ ಅವರನ್ನು ನಿಂದಿಸುವಂತಹ ಅಶ್ಲೀಲ ಇಂಗ್ಲಿಷ್ ಪದವನ್ನು ಬಳಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದನು. ಈ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಹಾಗೂ ಅಪ್ಪು ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಸಾಮಾಜಿಕ ಶಾಂತಿ ಕದಡುವ ಯತ್ನ ಮತ್ತು ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪ್ರಸ್ತುತ ಹೈಕೋರ್ಟ್ ಆದೇಶದಿಂದ ಯುವಕನ ಮೇಲಿದ್ದ ಕಾನೂನು ಸಂಕಷ್ಟ ತೆರವಾದಂತಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES