SOCIAL MEDIA

Newsletter

PARTNER SITES
Select Language Select State

'ಲಂಬೋದರ 2.0' ಚಿತ್ರದ ಅಡ್ವಾನ್ಸ್ ಬುಕಿಂಗ್ ಶುರು: ನವೆಂಬರ್ 13ಕ್ಕೆ ತೆರೆಗೆ ಬರಲಿದೆ ಸಿಂಪಲ್ ಸುನಿ ಸಿನಿಮಾ

ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಆ್ಯಕ್ಷನ್-ಕಟ್ ಹೇಳಿರುವ, AI ಹಾಗೂ ರೋಬೋಟ್‌ನ ರೋಚಕ ಕಥಾಹಂದರ ಹೊಂದಿರುವ ಬಹುನಿರೀಕ್ಷಿತ ಸೋಶಿಯಲ್ ಥ್ರಿಲ್ಲರ್ ‘ಲಂಬೋದರ 2.0’ ಸಿನಿಮಾ ನವೆಂಬರ್ 13ರಂದು ಅದ್ಧೂರಿಯಾಗಿ ತೆರೆಕಾಣಲಿದ್ದು, ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡು ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

Written By Krishna NK
Published: Nov 11, 2026, 15:05 IST | Updated: Nov 11, 2026, 15:09 IST
Image Credit: Lambodara 2.0
Join

Lambodara 2.0 movie : ಕನ್ನಡ ಚಿತ್ರರಂಗದ ಭಿನ್ನ ಶೈಲಿಯ ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಹಾಗೂ ಹೊಸ ತಂತ್ರಜ್ಞಾನ ಆಧಾರಿತ ಸೋಶಿಯಲ್ ಥ್ರಿಲ್ಲರ್ ಸಿನಿಮಾ ‘ಲಂಬೋದರ 2.0’ ತೆರೆಕಾಣಲು ಸಜ್ಜಾಗಿದ್ದು, ಅಡ್ವಾನ್ಸ್ ಬುಕಿಂಗ್ ಸಹ ಅಧಿಕೃತವಾಗಿ ಆರಂಭಗೊಂಡಿದೆ. ನವೆಂಬರ್ 13ರ ಶುಕ್ರವಾರದಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಅದ್ಧೂರಿಯಾಗಿ ಬಿಡುಗಡೆಗೊಳ್ಳಲಿದೆ.  

ಮಹಾವೀರ್ ಜೈನ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ಮತ್ತು ‘ಮಾಸ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ಅತ್ಯಂತ ಪ್ರತಿಷ್ಠಿತವಾಗಿ ನಿರ್ಮಾಣವಾಗಿರುವ ಈ ವಿಶಿಷ್ಟ ಸಿನಿಮಾವು, ಇಂದಿನ ಡಿಜಿಟಲ್ ಯುಗದ ಅತ್ಯಂತ ಪ್ರಸ್ತುತವಾದ ಗಂಭೀರ ವಿಷಯವನ್ನು ಕೈಗೆತ್ತಿಕೊಂಡಿದೆ. ಕೃತಕ ಬುದ್ಧಿಮತ್ತೆ (AI), ಆಧುನಿಕ ಅಲ್ಗಾರಿದಮ್‌ಗಳು ಹಾಗೂ ದಿನೇ ದಿನೇ ಬೆಳೆಯುತ್ತಿರುವ ತಂತ್ರಜ್ಞಾನವು ಮನುಷ್ಯನ ದೈನಂದಿನ ಜೀವನದ ಮೇಲೆ ಬೀರುತ್ತಿರುವ ಗಾಢ ಪ್ರಭಾವದ ಸುತ್ತ ಕಥೆ ಸುತ್ತುತ್ತದೆ. ಮನುಷ್ಯನ ಸಂತೋಷದ ಹುಡುಕಾಟ, ಭಾವನೆಗಳ ಏರಿಳಿತಗಳ ಮೇಲೆ ತಂತ್ರಜ್ಞಾನ ಉಂಟುಮಾಡುವ ದುಷ್ಪರಿಣಾಮಗಳು ಹಾಗೂ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನವನ ಮೂಲ ಸ್ವಾತಂತ್ರ್ಯದಂತಹ ಆಳವಾದ ವಿಚಾರಗಳನ್ನು ನಿರ್ದೇಶಕ ಸಿಂಪಲ್ ಸುನಿ ಅತ್ಯಂತ ರೋಚಕವಾಗಿ ಹಾಗೂ ಸೂಕ್ಷ್ಮವಾಗಿ ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಈ ಚಿತ್ರದ ತಾರಾಗಣದಲ್ಲಿ ಹಲವು ವಿಶೇಷತೆಗಳಿವೆ. ಪ್ರತಿಭಾವಂತ ನಟ ಅನಿಲ್ ಶೆಟ್ಟಿ ಜೊತೆಗೆ, ಬಾಲಿವುಡ್‌ನ ಖ್ಯಾತ ನಟ ಕುನಾಲ್ ಕಪೂರ್ ಹಾಗೂ ಪ್ರತಿಭಾನ್ವಿತ ನಟಿ ಸಾಚಿ ಬಿಂದ್ರಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇಡೀ ಚಿತ್ರದ ಅತಿ ದೊಡ್ಡ ಹೈಲೈಟ್ ಎಂದರೆ, ಇದರಲ್ಲಿ ನೈಜ ಹ್ಯೂಮನಾಯ್ಡ್ ರೋಬೋಟ್ ಆಗಿರುವ 'ಜಿಯಾ' ಒಂದು ಪ್ರಮುಖ ಮತ್ತು ನಿರ್ಣಾಯಕ ಪಾತ್ರದಲ್ಲಿ ನಟಿಸಿರುವುದು. ಭಾರತೀಯ ಚಿತ್ರರಂಗದ ಮಟ್ಟಿಗೆ ಇದೊಂದು ವಿನೂತನ ಪ್ರಯೋಗವಾಗಿದ್ದು, ಸಿನಿರಸಿಕರಲ್ಲಿ ಕುತೂಹಲ ನೂರ್ಮಡಿಗೊಳ್ಳಲು ಇದುವೇ ಪ್ರಮುಖ ಕಾರಣವಾಗಿದೆ.

ಕೇವಲ ಗಂಭೀರ ತಾಂತ್ರಿಕ ವಿಚಾರಗಳಿಗೆ ಸೀಮಿತವಾಗದೆ, ಸೈನ್ಸ್ ಫಿಕ್ಷನ್ ಕಲ್ಪನೆಯ ಜತೆಗೆ ಮನರಂಜನೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಾಸ್ಯ, ಅಪ್ಪಟ ಪ್ರೇಮ, ಉಸಿರುಬಿಗಿಹಿಡಿಯುವ ಸಸ್ಪೆನ್ಸ್, ಕೌಟುಂಬಿಕ ಭಾವನೆಗಳು ಹಾಗೂ ಪ್ರೇಕ್ಷಕರನ್ನು ಆಳವಾದ ಚಿಂತನೆಗೆ ಹಚ್ಚುವ ಸಾಮಾಜಿಕ ಸಂದೇಶವನ್ನು ಈ ಚಿತ್ರ ಹೊಂದಿದೆ. ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಸಿದ್ಧಪಡಿಸಲಾಗಿದ್ದು, ಎಲ್ಲರಿಗೂ ಇದೊಂದು ವಿಭಿನ್ನ ಹಾಗೂ ನವೀನ ಸಿನಿಮಾ ಅನುಭವವನ್ನು ನೀಡಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಹೊಸತನದ ಕಥಾಹಂದರ ಹಾಗೂ ಆಧುನಿಕ ತಂತ್ರಜ್ಞಾನದ ಅದ್ಭುತ ಸಮ್ಮಿಶ್ರಣದೊಂದಿಗೆ ತಯಾರಾಗಿರುವ ‘ಲಂಬೋದರ 2.0’ ಚಿತ್ರವನ್ನು ದೇಶಾದ್ಯಂತ ಪ್ರತಿಷ್ಠಿತ ‘ಪಿವಿಆರ್ ಐನಾಕ್ಸ್ ಪಿಕ್ಚರ್ಸ್’ ವಿತರಣೆ ಮಾಡುತ್ತಿದೆ. ಬೃಹತ್ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರವು ನವೆಂಬರ್ 13ರಂದು ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಗಮನ ಸೆಳೆಯುತ್ತಿದೆ. ಮುಂಗಡ ಟಿಕೆಟ್ ಬುಕಿಂಗ್ ಭರಾಟೆ ಜೋರಾಗಿರುವುದರಿಂದ, ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುವುದಂತು ಖಂಡಿತ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES