Ramya Krishnan Divorce Rumours: ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ, ಇಬ್ಬರೂ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿಗಳು ಹಲವು ವರ್ಷಗಳಿಂದ ಹರಿದಾಡುತ್ತಿವೆ. ಇಬ್ಬರೂ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿರುವುದೇ ಇಂತಹ ವದಂತಿಗಳಿಗೆ ಪ್ರಮುಖ ಕಾರಣವಾಗಿತ್ತು. ಇದೀಗ ಈ ಊಹಾಪೋಹಗಳಿಗೆ ನಟಿ ರಮ್ಯಾ ಕೃಷ್ಣನ್ ತೆರೆ ಎಳೆದಿದ್ದು, ತಮ್ಮ ವೈವಾಹಿಕ ಜೀವನದ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ‘ರಾ ಟಾಕ್ಸ್ ವಿತ್ ವಿಕೆ’ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ರಮ್ಯಾ ಕೃಷ್ಣನ್, ಪತಿ ಕೃಷ್ಣ ವಂಶಿ ಜೊತೆಗಿನ ಸಂಬಂಧದ ಕುರಿತು ಮಾತನಾಡಿದ್ದಾರೆ. “ನಾವಿಬ್ಬರೂ ಈಗಲೂ ಶೇ.100ರಷ್ಟು ಪತಿ-ಪತ್ನಿಯಾಗಿಯೇ ಇದ್ದೇವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಸಂತೋಷದಿಂದ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ನಮ್ಮ ನಡುವೆ ಯಾವುದೇ ಸಮಸ್ಯೆಯಿಲ್ಲ” ಎಂದು ಹೇಳುವ ಮೂಲಕ ವಿಚ್ಛೇದನದ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ.
ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿರುವುದರ ಹಿಂದಿನ ಕಾರಣವನ್ನೂ ಅವರು ವಿವರಿಸಿದ್ದಾರೆ. ಮಗನ ಶಿಕ್ಷಣದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ನಟಿ ತಿಳಿಸಿದ್ದಾರೆ. ಟಿವಿ ಕಾರ್ಯಕ್ರಮದ ಚಿತ್ರೀಕರಣ ಆರಂಭವಾದ ಸಂದರ್ಭದಲ್ಲಿ ಮಗ ಚಿಕ್ಕವನಾಗಿದ್ದ. ಆಗ ಕುಟುಂಬ ಹೈದರಾಬಾದ್‌ನಲ್ಲಿ ನೆಲೆಸಿತ್ತು. ಆದರೆ ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ಆಗಾಗ್ಗೆ ಮುಷ್ಕರಗಳು ನಡೆಯುತ್ತಿದ್ದವು. ಶಾಲೆಗಳಿಗೆ ರಜೆ ಘೋಷಣೆಯಾಗುತ್ತಿದ್ದರಿಂದ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿತ್ತು. ಅಲ್ಲದೆ, ತಾವು ಚಿತ್ರೀಕರಣಕ್ಕಾಗಿ ಹೊರಗಿದ್ದಾಗ ಮಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದ. ಈ ಎಲ್ಲ ಕಾರಣಗಳಿಂದ ಆತನನ್ನು ಚೆನ್ನೈ ಶಾಲೆಗೆ ಸೇರಿಸುವ ನಿರ್ಧಾರ ಮಾಡಿದ್ದಾಗಿ ರಮ್ಯಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮದುವೆ ವ್ಯವಸ್ಥೆಯ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಮದುವೆಗೆ ಸಮಾಜದಲ್ಲಿ ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಪ್ರತಿಯೊಂದು ಸಂಬಂಧಕ್ಕೂ ಮದುವೆಯ ಮುದ್ರೆ ಅನಿವಾರ್ಯವಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
“ಕೃಷ್ಣ ವಂಶಿ ಅವರು ಆಗಲೇ ಮದುವೆ ಯಾಕೆ? ನಾವಿಬ್ಬರೂ ಲಿವ್-ಇನ್ ಸಂಬಂಧದಲ್ಲಿರೋಣ ಎಂದು ಹೇಳುತ್ತಿದ್ದರು. ಬಹುಶಃ ಅಂದೇ ಅವರ ಮಾತಿಗೆ ಒಪ್ಪಿಕೊಳ್ಳಬೇಕಿತ್ತು ಎನಿಸುತ್ತದೆ. ಮದುವೆಯಾದ ಬಳಿಕ ಇಬ್ಬರ ಕುಟುಂಬಗಳು ಮತ್ತು ಸುತ್ತಮುತ್ತಲಿನ ಜನರು ಕೂಡ ಸಂಬಂಧದ ಭಾಗವಾಗುತ್ತಾರೆ. ಆಗ ಸಂಗಾತಿಯ ಜೊತೆಗೆ ಇತರ ಸಂಬಂಧಗಳಿಗೂ ಉತ್ತರದಾಯಿಗಳಾಗಬೇಕಾಗುತ್ತದೆ. ಆದರೆ, ವಂಶಿ ಮತ್ತು ನನ್ನ ನಡುವಿನ ಸಂಬಂಧ ಚೆನ್ನಾಗಿದೆ. ನಮ್ಮ ಸಂಬಂಧ ಯಾವಾಗಲೂ ಹೀಗೆಯೇ ಇರಲಿದೆ ಎಂಬ ನಂಬಿಕೆ ನನಗಿದೆ” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅಂದಹಾಗೆ, ರಮ್ಯಾ ಕೃಷ್ಣನ್ ಮತ್ತು ಕೃಷ್ಣ ವಂಶಿ 2003ರಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನ ‘ಗುಲಾಬಿ’, ‘ನಿನ್ನೆ ಪೆಲ್ಲಾಡತ’ ಮತ್ತು ‘ಸಿಂಧೂರಂ’ ಸಿನಿಮಾಗಳ ಮೂಲಕ ಇಬ್ಬರಿಗೂ ಪರಿಚಯವಾಗಿತ್ತು. ಬಳಿಕ ‘ಚಂದ್ರಲೇಖ’ (1998), ‘ಶ್ರೀ ಆಂಜನೇಯಂ’ (2004) ಹಾಗೂ ‘ರಂಗ ಮಾರ್ತಾಂಡ’ (2023) ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ದಂಪತಿಗೆ ರಿತ್ವಿಕ್ ವಂಶಿ ಎಂಬ ಪುತ್ರನಿದ್ದು, 2005ರಲ್ಲಿ ಜನಿಸಿದ್ದಾರೆ.
ಒಟ್ಟಿನಲ್ಲಿ, ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕೆ ದಂಪತಿ ವಿಚ್ಛೇದನ ಪಡೆದಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿದ್ದವು. ಆದರೆ ಇದೀಗ ರಮ್ಯಾ ಕೃಷ್ಣನ್ ನೀಡಿರುವ ಸ್ಪಷ್ಟನೆಯಿಂದ ಈ ಸುದ್ದಿಗಳಿಗೆ ಪೂರ್ಣವಿರಾಮ ಬಿದ್ದಿದೆ. ತಮ್ಮ ವೈಯಕ್ತಿಕ ನಿರ್ಧಾರಗಳು ಮತ್ತು ಮಗನ ಶಿಕ್ಷಣದ ಕಾರಣದಿಂದ ಪ್ರತ್ಯೇಕ ನಗರಗಳಲ್ಲಿ ನೆಲೆಸಿದ್ದೇವೆ ಹೊರತು, ದಾಂಪತ್ಯದಲ್ಲಿ ಯಾವುದೇ ಬಿರುಕು ಇಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.