SOCIAL MEDIA

Newsletter

PARTNER SITES
Select Language Select State

ದೀಪಾವಳಿಗೆ ಪ್ರತ್ಯಕ್ಷರಾದ 'ಸಾರಥಿ' ಬೆಡಗಿ ದೀಪಾ ಸನ್ನಿಧಿ..! ಏನಾಯ್ತು.. ಎಲ್ಲಿಗೆ ಹೋಗಿದ್ರಂತೆ ಗೊತ್ತೆ?

ಚಿತ್ರರಂಗದಿಂದ ದೂರ ಉಳಿದು ವರ್ಷಗಳೇ ಕಳೆದಿದ್ದ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ದೀಪಾ ಸನ್ನಿಧಿ, ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ‘ಸಾರಥಿ’ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿಯ ಹೊಸ ಲುಕ್‌ ಹಾಗೂ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ.

Written By Krishna NK
Published: Nov 09, 2026, 18:54 IST | Updated: Nov 09, 2026, 18:57 IST
Image Credit: Deepa Santhidhi
Join

Sandalwood News : ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿ, ಬಳಿಕ ದಿಢೀರ್ ಅಂತ ತೆರೆಯಿಂದ ದೂರ ಸರಿದಿದ್ದ ಜನಪ್ರಿಯ ನಟಿ ದೀಪಾ ಸನ್ನಿಧಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸುದೀರ್ಘ ಕಾಲದಿಂದ ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಕಾಣಿಸಿಕೊಳ್ಳದ ಅವರು, ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ತಮ್ಮ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.

ನಟಿ ದೀಪಾ ಸನ್ನಿಧಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ 'ಸಾರಥಿ'ಯ ಮೂಲಕ. ಮಂಗಳೂರಿನ ಮೂಲದವರಾದ ಇವರ ಅಸಲಿ ಹೆಸರು ರಹಸ್ಯ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸುತ್ತಿದ್ದ ಕಾಲೇಜು ದಿನಗಳಲ್ಲಿಯೇ ಇವರಿಗೆ 'ಸಾರಥಿ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆಡಿಷನ್ ಮೂಲಕ ಆಯ್ಕೆಯಾದ ದೀಪಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತೆರೆ ಹಂಚಿಕೊಂಡರು. ಮೊದಲ ಸಿನಿಮಾವೇ ಭರ್ಜರಿ ಯಶಸ್ಸು ಕಂಡಿದ್ದರಿಂದ ಇವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು.

ಅದೇ ವರ್ಷ ಅಂದರೆ 2011ರಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ 'ಪರಮಾತ್ಮ' ಸಿನಿಮಾ ಕೂಡ ಬಿಡುಗಡೆಯಾಗಿ ಸದ್ದು ಮಾಡಿತು. 'ಸಾರಥಿ' ತೆರೆಕಂಡ ಕೇವಲ ಒಂದೇ ವಾರದಲ್ಲಿ 'ಪರಮಾತ್ಮ' ರಿಲೀಸ್ ಆಗಿದ್ದು ವಿಶೇಷ. ನಂತರ ರಾಕಿಂಗ್ ಸ್ಟಾರ್ ಯಶ್ ಜೊತೆ 'ಜಾನು' ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಸಕ್ಕರೆ' ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ನೆಚ್ಚಿನ ನಟಿಯಾದರು. ಕೆಲವೇ ವರ್ಷಗಳಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ಸ್ಟಾರ್ ನಟರ ಜೊತೆ ನಟಿಸುವ ಮೂಲಕ ಬೇಡಿಕೆಯ ನಾಯಕಿಯಾಗಿ ಬೆಳೆದು ನಿಂತರು.

'ಎಂದೆಂದು ನಿನ್ನಗಾಗಿ', 'ಚೌಕ' ಮುಂತಾದ ಚಿತ್ರಗಳಲ್ಲಿ ನಟಿಸಿದ ಅವರು, ಕೊನೆಯದಾಗಿ ಕಾಣಿಸಿಕೊಂಡಿದ್ದು 2017ರಲ್ಲಿ ತೆರೆಕಂಡ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದಲ್ಲಿ. ಆ ಬಳಿಕ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದುಕೊಂಡರು. ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚು ಸಕ್ರಿಯವಾಗಿರದ ಅವರು, ವೈಯಕ್ತಿಕ ವಿಚಾರಗಳನ್ನು ಯಾರ ಜೊತೆಗೂ ಹಂಚಿಕೊಳ್ಳುತ್ತಿರಲಿಲ್ಲ. ಕೇವಲ ಸಾಂದರ್ಭಿಕ ಬರಹಗಳಿರುವ ನೋಟ್‌ಗಳನ್ನು ಮಾತ್ರ ಆಗಾಗ ಶೇರ್ ಮಾಡುತ್ತಿದ್ದರು.

 ಇದೀಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳ ಬಹಳ ದಿನಗಳ ಕೋರಿಕೆಯನ್ನು ದೀಪಾ ಸನ್ನಿಧಿ ಈಡೇರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೊಸ ಸೆಲ್ಫಿ ಫೋಟೋ ಒಂದನ್ನು ಹಂಚಿಕೊಳ್ಳುವುದರ ಜೊತೆಗೆ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಫೋಟೋದೊಂದಿಗೆ ಭಾವನಾತ್ಮಕ ಸಂದೇಶ ಬರೆದುಕೊಂಡಿರುವ ಅವರು, "ಈಗಲೂ ನನಗೆ ಸೆಲ್ಫಿ ಕ್ಲಿಕ್ಕಿಸಲು ಮುಜುಗರವಾಗುತ್ತೆ. ಆದರೂ ನಿಮ್ಮ ಅಪಾರ ಪ್ರೀತಿಗೆ ಮನಸೋತು ಈ ಫೋಟೋ ಹಂಚಿಕೊಳ್ಳುತ್ತಿದ್ದೇನೆ. ಇಷ್ಟು ವರ್ಷಗಳಿಂದ ನನಗೆ ಪ್ರೀತಿಯ ಸುರಿಮಳೆ ಸುರಿಸುತ್ತಿರುವ ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಆಭಾರಿ" ಎಂದು ತಿಳಿಸಿದ್ದಾರೆ.

ನಟಿಯ ಈ ದಿಢೀರ್ ಆಗಮನ ಹಾಗೂ ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ "ಲಕ್ಷ್ಮಿ ಹಬ್ಬಕ್ಕೆ ಲಕ್ಷ್ಮಿ ಬರಲಿಲ್ಲ, ಸರಸ್ವತಿ ಹಬ್ಬಕ್ಕೆ ಸರಸ್ವತಿ ಬರಲಿಲ್ಲ, ಆದರೆ ದೀಪಾವಳಿ ಹಬ್ಬಕ್ಕೆ ದೀಪಾ ಬಂದರು" ಎಂದು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿ ತಮ್ಮ ನೆಚ್ಚಿನ ನಟಿಯ ಮರಳುವಿಕೆಯನ್ನು ಸಂಭ್ರಮಿಸುತ್ತಿದ್ದಾರೆ. ಹಲವು ವರ್ಷಗಳ ಬಳಿಕ ದೀಪಾ ಸನ್ನಿಧಿ ಅವರನ್ನು ಮತ್ತೆ ನೋಡಿದ ಸ್ಯಾಂಡಲ್‌ವುಡ್ ಸಿಹಿಸುದ್ದಿ ಸಿಕ್ಕಂತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES