SOCIAL MEDIA

Newsletter

PARTNER SITES
Select Language Select State

SIR ರದ್ದು, ಜ್ಞಾನೇಶ್ ಕುಮಾರ್ ಸಸ್ಪೆಂಡ್‌ಗೆ ಆಗ್ರಹ : ನಟ ಪ್ರಕಾಶ್ ರಾಜ್ ವಾಗ್ದಾಳಿ

ಬಹುಭಾಷಾ ನಟ ಪ್ರಕಾಶ್ ರಾಜ್, ಕೇಂದ್ರ ಸರ್ಕಾರ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ, SIR ಪ್ರಕ್ರಿಯೆಯು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಮತದಾರರ ಹಕ್ಕುಗಳನ್ನು ಕಸಿಯುವ ಉದ್ದೇಶವನ್ನು ಹೊಂದಿದೆ ಎಂದು ಕಿಡಿಕಾರಿದ್ದಾರೆ..

Reported By Krishna NK Written By Krishna NK
Published: Sep 24, 2026, 04:57 PM IST | Updated: Sep 24, 2026, 05:00 PM IST
Image Credit: Actor Prakash Raj
Join

ವಿಜಯನಗರ : ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೊಸಪೇಟೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗ ಹಾಗೂ ಕೇಂದ್ರದ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಮತದಾರರ ಪಟ್ಟಿಯಲ್ಲಿ ಜೀವಂತವಾಗಿರುವವರ ಹೆಸರುಗಳನ್ನು ಕೈಬಿಟ್ಟು, ಅವರನ್ನು ಸತ್ತಂತೆ ತೋರಿಸಲಾಗಿದೆ. ಮತದಾನದ ಹಕ್ಕಿನಿಂದ ವಂಚಿತರಾದ ಜನರನ್ನು ಮತ್ತೆ ಫಾರಂ ನಂಬರ್ 6 ತುಂಬಿ ಹೊಸ ಪಟ್ಟಿ ಮಾಡಿಸಿ ಎಂದು ಹೇಳುತ್ತಿರುವುದು ಸಂಪೂರ್ಣವಾಗಿ ತಪ್ಪಾಗಿದೆ. 2004ರಲ್ಲಿ ತಪ್ಪು ಮಾಡಿದ್ದು ಚುನಾವಣಾ ಆಯೋಗ, ಆದರೆ ಈಗ SIR ಹೆಸರಿನಲ್ಲಿ ನಮ್ಮನ್ನು ತಿದ್ದಲು ಬರುವುದೇಕೆ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ. ದೆಹಲಿ, ಹರಿಯಾಣ ಹಾಗೂ ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಹಿಂದೆ ಜ್ಞಾನೇಶ್ ಕುಮಾರ್ ಅವರ ಪಾತ್ರವಿದ್ದು, ಅದೇ ಮಾದರಿಯಲ್ಲಿ ದೇಶಾದ್ಯಂತ ಗೆಲ್ಲಲು ಈ SIR ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿಯಲ್ಲಿ 'ಆಪರೇಷನ್ ಕಮಲ' ಹಾಗೂ ಗೃಹ ಸಚಿವರಿಗೆ ದೂರು
ಬೆಳಗಾವಿಯ ಒಂದೇ ಬೂತ್‌ನಲ್ಲಿ ಬರೋಬ್ಬರಿ 200 ಮುಸ್ಲಿಂ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲು ಬಿಜೆಪಿಯ ಪರಾಜಿತ ಅಭ್ಯರ್ಥಿಯೊಬ್ಬರು ಬಿಎಲ್‌ಒಗೆ ಬೆದರಿಕೆ ಹಾಕಿದ್ದಾರೆ. ಯುವ ಮೋರ್ಚಾದ ಬಿಜೆಪಿ ಮುಖಂಡನೊಬ್ಬನೇ ಈ 200 ಅರ್ಜಿಗಳಿಗೆ ಸಹಿ ಮಾಡಿದ್ದು, ಕಾರ್ಪೊರೇಷನ್ ಹೆಸರಿನಲ್ಲಿ ಪ್ರಿಂಟೆಡ್ ಫಾರಂ ನೀಡಿ ಈ ವಂಚನೆ ಎಸಗಲಾಗಿದೆ. ಇದು ಸ್ಪಷ್ಟವಾಗಿ 'ಆಪರೇಷನ್ ಕಮಲ' ಎಂಬುದಕ್ಕೆ ಸಾಕ್ಷಿಯಾಗಿದ್ದು, ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ತಂದು ದಾಖಲೆ ಸಮೇತ ದೂರು ನೀಡಲಾಗುವುದು ಹಾಗೂ ಸಮಗ್ರ ತನಿಖೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಅಕ್ಟೋಬರ್ 15ಕ್ಕೆ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ
ಸೆಪ್ಟೆಂಬರ್ 30ರಂದು 100 ಬೂತ್‌ಗಳಲ್ಲಿ ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲಾಗುವುದು. ಅಕ್ಟೋಬರ್ 1ರಂದು ದೆಹಲಿಗೆ ಭೇಟಿ ನೀಡಿ, ಅಕ್ಟೋಬರ್ 3ರಂದು ಜ್ಞಾನೇಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆಗ್ರಹಿಸಲಾಗುತ್ತದೆ. ಅಂತಿಮವಾಗಿ ಅಕ್ಟೋಬರ್ 15ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಹೋರಾಟ ನಡೆಯಲಿದ್ದು, ಇದು ದೇಶದ ಮತ್ತೊಂದು ದೊಡ್ಡ ಸ್ವಾತಂತ್ರ್ಯ ಹೋರಾಟವಾಗಲಿದೆ ಎಂದು ಕರೆ ನೀಡಿದ್ದಾರೆ. ಅಲ್ಲದೆ 'ಕಾಕ್ರೋಚ್ ಪಾರ್ಟಿ' ಸಕ್ರಿಯವಾಗಿದ್ದು, ಸಾರ್ವಜನಿಕರು ತಮಗಾಗಿರುವ ಸಮಸ್ಯೆಗಳನ್ನು ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳ ಮುಂದೆ ಮುಕ್ತವಾಗಿಡುವಂತೆ ಕೋರಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES