SOCIAL MEDIA

Newsletter

PARTNER SITES
Select Language Select State

ಜೈಲಿನಲ್ಲಿ ದರ್ಶನ್-ಪವಿತ್ರಾ ರಹಸ್ಯ ಮಾತುಕತೆ..! ಇದೇಲ್ಲಾ ಕೇವಲ 4-5 ತಿಂಗಳಷ್ಟೇ ಅಂತ ಹೇಳಿದ್ದೇಕೆ ಡಿಬಾಸ್‌..?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಯಾವುದೇ ಸಂಪರ್ಕವಿಲ್ಲ, ಇಬ್ಬರೂ ದೂರವಿದ್ದಾರೆ ಎಂಬ ಸುದ್ದಿಗಳೆಲ್ಲವೂ ಇದೀಗ ಸುಳ್ಳಾಗಿದ್ದು, ಇತ್ತೀಚೆಗೆ ಕೋರ್ಟ್ ಕಲಾಪದ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇಬ್ಬರ ನಡುವೆ ಮಾತುಕತೆ ನಡೆದಿರುವ ರೋಚಕ ಸಂಗತಿ ಬೆಳಕಿಗೆ ಬಂದಿದೆ.. ಅಸಲಿಗೆ ದರ್ಶನ್‌-ಪವಿತ್ರಾ ಗೌಡ ಮಾತನಾಡಿಕೊಂಡಿದ್ದೇನು..? ಇಲ್ಲಿದೆ ಸಂಪೂರ್ಣ ವಿವರಗಳು..

Written By Krishna NK
Published: Nov 12, 2026, 18:45 IST | Updated: Nov 12, 2026, 18:48 IST
Image Credit: Actor Darshan
Join

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ನಡುವೆ ಯಾವುದೇ ಸಂಪರ್ಕವಿಲ್ಲ, ಇಬ್ಬರೂ ದೂರವಿದ್ದಾರೆ ಎಂಬ ಸುದ್ದಿಗಳೆಲ್ಲವೂ ಸತ್ಯವಲ್ಲ ಎಂಬುದು ಈಗ ಬಹಿರಂಗಗೊಂಡಿದೆ. ಜೈಲಿನಲ್ಲಿ ಇಬ್ಬರ ನಡುವೆ ಕನೆಕ್ಷನ್ ಕಟ್ ಆಗಿದೆ, ದರ್ಶನ್ ಅವರು ಪವಿತ್ರಾ ಕಡೆ ತಲೆಹಾಕಿಯೂ ಮಲಗಿಲ್ಲ ಎಂದೆಲ್ಲಾ ಬಿತ್ತರವಾಗಿದ್ದ ವರದಿಗಳಿಗೆ ತದ್ವಿರುದ್ಧವಾಗಿ, ಇತ್ತೀಚೆಗೆ ಕೋರ್ಟ್ ಕಲಾಪದ ವೇಳೆ ಇವರಿಬ್ಬರ ನಡುವೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆದಿರುವ ರೋಚಕ ಸಂಗತಿ ಹೊರಬಿದ್ದಿದೆ.

ಸಾಮಾನ್ಯವಾಗಿ ಸಿನಿಮಾಗಳಲ್ಲಿ, ಗಾಸಿಪ್‌ಗಳಲ್ಲಿ 'ಸುಬ್ಬ-ಸುಬ್ಬಿ' ಎಂದೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಈ ಜೋಡಿ, ಈಗ ಕಷ್ಟದ ಕಾಲದಲ್ಲೂ ಪರಸ್ಪರ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಆಗಿದ್ದೇನು?
ಇವತ್ತು 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ (CCH Court) ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಎಂಬಾತನ ಕ್ರಾಸ್ ಎಗ್ಸಾಮಿನೇಷನ್ (ಮರುವಿಚಾರಣೆ) ನಡೆಯುತ್ತಿತ್ತು. ಈ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ತಾಂತ್ರಿಕ ದೋಷದಿಂದಾಗಿ ಜೈಲಿನಲ್ಲಿರುವ ಆರೋಪಿಗಳು ಹಾಗೂ ಕೋರ್ಟ್ ನಡುವಿನ ವಿಡಿಯೋ ಕಾನ್ಫರೆನ್ಸ್ ಸಂಪರ್ಕದಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿ ಕನೆಕ್ಷನ್ ಕಟ್ ಆಗಿತ್ತು. ಈ ವೇಳೆ ತಾಂತ್ರಿಕ ದೋಷ ಸರಿಪಡಿಸುವ ಸಮಯದಲ್ಲಿ, ಮಹಿಳಾ ಬ್ಯಾರಕ್‌ನಲ್ಲಿದ್ದ ಪವಿತ್ರಾ ಗೌಡ ಹಾಗೂ ಪುರುಷರ ಬ್ಯಾರಕ್‌ನಲ್ಲಿದ್ದ ನಟ ದರ್ಶನ್ ಆಕಸ್ಮಿಕವಾಗಿ ಪರಸ್ಪರ ಕಣ್ಣಿಗೆ ಬಿದ್ದು ಮಾತನಾಡಿಕೊಳ್ಳಲು ಅವಕಾಶ ಸಿಕ್ಕಿದೆ. ಸುಮಾರು ಎರಡು ನಿಮಿಷಗಳ ಕಾಲ ಇಬ್ಬರ ನಡುವೆ ಈ ಮಾತುಕತೆ ನಡೆದಿದೆ ಎನ್ನಲಾಗಿದೆ.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಏನೆಲ್ಲಾ ಮಾತುಕತೆ ನಡೆಯಿತು?
ಮೂಲಗಳ ಪ್ರಕಾರ ಮತ್ತು ವರದಿಗಳ ವಿಶ್ಲೇಷಣೆಯಂತೆ, ವಿಸಿ (Video Conference) ಮೂಲಕ ಮೊದಲು ಮಾತನಾಡಿದ ಪವಿತ್ರಾ ಗೌಡ, ದರ್ಶನ್ ಬಳಿ "ಊಟ ಆಯ್ತಾ?" ಎಂದು ಕುಶಲ ವಿಚಾರಿಸಿದ್ದಾರೆ. ಇದರ ಬೆನ್ನಲ್ಲೇ ದರ್ಶನ್ ಅವರ ದೈಹಿಕ ಆರೋಗ್ಯದ ಬಗ್ಗೆಯೂ ಕಾಳಜಿ ತೋರಿದ್ದಾರೆ. ವಿಶೇಷವಾಗಿ ದರ್ಶನ್ ಕಾಡುತ್ತಿರುವ ತೀವ್ರ ಬೆನ್ನುನೋವಿನ ಸಮಸ್ಯೆ ಬಗ್ಗೆ ವಿಚಾರಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ದರ್ಶನ್, "ಬೆನ್ನು ನೋವು ಜಾಸ್ತಿಯಿದೆ, ಒಂದು ಸೆಷನ್ ಫಿಜಿಯೋಥೆರಫಿ ಆಗಿದೆ. ಸದ್ಯ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಕೂಡ ಪಡೀತಾ ಇದ್ದೀನಿ" ಎಂದು ತಮ್ಮ ಆರೋಗ್ಯದ ಸ್ಥಿತಿಯ ಬಗ್ಗೆ ವಿವರಿಸಿದ್ದಾರೆ. ತಕ್ಷಣವೇ ಆತಂಕಗೊಂಡ ಪವಿತ್ರಾ, "ಇನ್ನೂ ಎಷ್ಟು ದಿನ ಹೀಗೆಲ್ಲಾ ಇರಬೇಕಾಗುತ್ತೆ?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಯಾವುದೇ ಅಳುಕಿಲ್ಲದೆ ಉತ್ತರಿಸಿರುವ ದರ್ಶನ್, "ಇನ್ನೂ ನಾಲ್ಕೈದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಹೀಗೆಯೇ ಇರಬೇಕಾಗಬಹುದು" ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕಠಿಣ ಪರಿಸ್ಥಿತಿಯನ್ನು ವಿವರಿಸುತ್ತಾ ಪವಿತ್ರಾ ಗೌಡ, "ಇಲ್ಲಿ ಜೈಲಿನಲ್ಲಿ ನನಗೆ ಬಹಳ ಸಮಸ್ಯೆ ಆಗುತ್ತಿದೆ, ಇರಲು ತುಂಬಾ ಕಷ್ಟವಾಗುತ್ತಿದೆ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅದಕ್ಕೆ ಸಾಂತ್ವನ ಹೇಳಿದ ದರ್ಶನ್, "ನಮಗೂ ಇಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ, ಏನೇ ಮಾಡಿದರೂ ಈಗ ಏನೂ ಮಾಡಲು ಬರುವುದಿಲ್ಲ. ಸ್ವಲ್ಪ ದಿನ ತಾಳ್ಮೆಯಿಂದ ಕಾಯಲೇಬೇಕಾಗುತ್ತದೆ" ಎಂದು ಸಮಾಧಾನ ಪಡಿಸಿದ್ದಾರೆ.

ಮೌನಕ್ಕೆ ಶರಣಾದ ಜೋಡಿ, ಕೈ ಸನ್ನೆಯ ಧೈರ್ಯ
ಎರಡು ನಿಮಿಷಗಳ ಈ ಸಣ್ಣ ಸಂಭಾಷಣೆ ಮುಗಿಯುತ್ತಿದ್ದಂತೆ, ತಾಂತ್ರಿಕ ತೊಂದರೆ ಸರಿಹೋಗಿ ಕೋರ್ಟ್ ಕನೆಕ್ಷನ್ ಮರುಸ್ಥಾಪನೆಯಾಗಿದೆ. ಕೂಡಲೇ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ತಮ್ಮ ಮಾತನ್ನು ನಿಲ್ಲಿಸಿ ಸುಮ್ಮನಾಗಿದ್ದಾರೆ. ಆದರೂ ಕೊನೆಯ ಹಂತದಲ್ಲಿ ಪವಿತ್ರಾ ಅವರಿಗೆ ಧೈರ್ಯ ತುಂಬಲು ಮುಂದಾದ ದರ್ಶನ್, ಮನಸ್ಸು ಹಾಗೂ ಹೃದಯವನ್ನು ಗಟ್ಟಿ ಮಾಡಿಕೊಳ್ಳಿ ಎಂದು ಕೈ ಸನ್ನೆ ಮೂಲಕವೇ ಸಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ.

ಒಟ್ಟಾರೆಯಾಗಿ, ಇಷ್ಟು ದಿನಗಳ ಕಾಲ ಇವರಿಬ್ಬರ ನಡುವೆ ಯಾವುದೇ ಮಾತುಕತೆ ಇಲ್ಲ, ಸಂಪೂರ್ಣ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದ್ದ ಮಾತುಗಳಿಗೆ ಈ ವಿಡಿಯೋ ಕಾನ್ಫರೆನ್ಸ್ ಮಾತುಕತೆ ತೆರೆ ಎಳೆದಿದೆ. ದರ್ಶನ್ ನೀಡಿದ ಭರವಸೆಯಂತೆ ಪವಿತ್ರಾ ಗೌಡ ಜೈಲಿನಲ್ಲಿ ತಾಳ್ಮೆಯಿಂದ ದಿನಗಳನ್ನು ಕಳೆಯುತ್ತಾರಾ ಅಥವಾ ಮುಂದಿನ ದಿನಗಳಲ್ಲಿ ಕಾನೂನು ಹೋರಾಟದ ಹಾದಿ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಈ 'ಸುಬ್ಬ-ಸುಬ್ಬಿ' ಜೋಡಿಯ ಸಂಭಾಷಣೆ ನ್ಯಾಯಾಲಯದ ಆವರಣ ಹಾಗೂ ಹೊರಭಾಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES