SOCIAL MEDIA

Newsletter

PARTNER SITES
Select Language Select State

ಸಿವಿಲ್‌ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.28ರಿಂದ ವಲಯವಾರು ಫಿಸಿಕಲ್ ಟೆಸ್ಟ್ ಆರಂಭ!

ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ಒಟ್ಟು 3,991 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ.

Written By Puttaraj K Alur
Published: Sep 27, 2026, 07:18 AM IST | Updated: Sep 27, 2026, 09:05 AM IST
Image Credit: Police Constable Recruitment
Join

Karnataka Police Constable Recruitment: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆ ಮತ್ತೊಂದು ಹಂತಕ್ಕೆ ಪ್ರವೇಶಿಸಿದೆ. ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK) ವೃಂದದ ಒಟ್ಟು 3,991 ಹುದ್ದೆಗಳ ಭರ್ತಿಗೆ ಈಗ ದೈಹಿಕ ಪರೀಕ್ಷೆ ನಡೆಯಲಿದೆ. ಕಳೆದ ಆಗಸ್ಟ್ 2ರಂದು ರಾಜ್ಯದಾದ್ಯಂತ ನಡೆದ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ 19,396 ಅಭ್ಯರ್ಥಿಗಳು ಇದೀಗ ದೇಹದಾರ್ಢ್ಯ ಪರೀಕ್ಷೆ (PST) ಮತ್ತು ಸಹಿಷ್ಣುತಾ ಪರೀಕ್ಷೆ (ET) ಎದುರಿಸಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಭ್ಯರ್ಥಿಗಳ ದೈಹಿಕ ಪರೀಕ್ಷೆಗೆ ಸಂಬಂಧಿಸಿದಂತೆ ವಲಯವಾರು ವೇಳಾಪಟ್ಟಿಯನ್ನ ಪ್ರಕಟಿಸಿದ್ದು, ಸೆಪ್ಟೆಂಬರ್ 28ರಿಂದ ವಿವಿಧ ಜಿಲ್ಲೆಗಳಲ್ಲಿ ಪರೀಕ್ಷೆಗಳು ಆರಂಭವಾಗಲಿವೆ.

3,991 ಹುದ್ದೆಗಳಿಗೆ 19,396 ಅಭ್ಯರ್ಥಿಗಳು

ರಾಜ್ಯ ಪೊಲೀಸ್ ಇಲಾಖೆಯ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ಒಟ್ಟು 3,991 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ. ಉಳಿಕೆ ಮೂಲ ವೃಂದ (RPC)ದ 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು, ಕಲ್ಯಾಣ ಕರ್ನಾಟಕ (KK) ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಮುಂದಿನ ಹಂತದಲ್ಲಿ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನ ಪರಿಶೀಲಿಸಲಾಗುತ್ತದೆ. PST ಮತ್ತು ET ಪರೀಕ್ಷೆಗಳಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯ ಮುಂದಿನ ಹಂತಕ್ಕೆ ತೆರಳಲಿದ್ದಾರೆ.

ಬೆಂಗಳೂರು ನಗರ: 9,887 ಅಭ್ಯರ್ಥಿಗಳಿಗೆ ಪರೀಕ್ಷೆ

 

 RPC ವೃಂದದಲ್ಲಿ ಅತಿ ಹೆಚ್ಚು 2,015 ಹುದ್ದೆಗಳು ಬೆಂಗಳೂರು ನಗರ ಘಟಕದಲ್ಲಿವೆ. ಈ ಹುದ್ದೆಗಳಿಗೆ 9,887 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5ರವರೆಗೆ ಬೆಂಗಳೂರಿನ ಚಾಮರಾಜಪೇಟೆಯ CAR (HQ) ಮೈದಾನ, ಆಡುಗೋಡಿಯ CAR (ದಕ್ಷಿಣ) ಹಾಗೂ ಥಣಿಸಂದ್ರ ಮುಖ್ಯ ರಸ್ತೆಯ CAR (ಉತ್ತರ) ಪೆರೇಡ್ ಮೈದಾನಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಕೇಂದ್ರ ವಲಯದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳನ್ನ ಒಳಗೊಂಡಂತೆ 200 ಹುದ್ದೆಗಳಿದ್ದು, 946 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 3ರವರೆಗೆ ಕೊರಮಂಗಲದ 3ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

 

ದಕ್ಷಿಣ ವಲಯದ ಪರೀಕ್ಷೆ

ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಘಟಕಗಳನ್ನ ಒಳಗೊಂಡ ದಕ್ಷಿಣ ವಲಯದಲ್ಲಿ 395 ಹುದ್ದೆಗಳಿಗೆ 1,891 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5ರವರೆಗೆ ಮೈಸೂರಿನ ರೇಸ್ ಕೋರ್ಸ್ ಹಿಂಭಾಗದಲ್ಲಿರುವ ಸಿಟಿ ಆರ್ಮ್ಸ್ ರಿಸರ್ವ್ (CAR) ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.

ಶಿವಮೊಗ್ಗ ಮತ್ತು ಮಂಗಳೂರು ವಲಯಗಳ ವೇಳಾಪಟ್ಟಿ

ಶಿವಮೊಗ್ಗ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗ ಘಟಕಗಳನ್ನ ಒಳಗೊಂಡ ಪೂರ್ವ ವಲಯದಲ್ಲಿ 250 ಹುದ್ದೆಗಳಿದ್ದು, 1,234 ಅಭ್ಯರ್ಥಿಗಳು ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 6ರವರೆಗೆ ಶಿವಮೊಗ್ಗದ ನವಿಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಮಂಗಳೂರು ನಗರ ಘಟಕಗಳನ್ನ ಒಳಗೊಂಡ ಪಶ್ಚಿಮ ವಲಯದಲ್ಲಿ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 3ರವರೆಗೆ ಮಂಗಳೂರಿನ ಲಾಲ್‌ಬಾಗ್‌ನ ಮಂಗಳ ಕ್ರೀಡಾಂಗಣದಲ್ಲಿ ಪರೀಕ್ಷೆ ನಡೆಯಲಿದೆ.

ಉತ್ತರ ಮತ್ತು ಬಳ್ಳಾರಿ ವಲಯ

ಗದಗ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಘಟಕಗಳನ್ನ ಒಳಗೊಂಡ ಉತ್ತರ ವಲಯದಲ್ಲಿ 110 ಹುದ್ದೆಗಳಿಗೆ 549 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದಾರೆ. ಸೆಪ್ಟೆಂಬರ್ 29 ಮತ್ತು 30ರಂದು ಬೆಳಗಾವಿಯ ಮಚ್ಚೆಯಲ್ಲಿರುವ 2ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ. ಬಳ್ಳಾರಿ ಮತ್ತು ರಾಯಚೂರು ಘಟಕಗಳನ್ನ ಒಳಗೊಂಡ ಬಳ್ಳಾರಿ ವಲಯದ RPC ವಿಭಾಗದಲ್ಲಿ 30 ಹುದ್ದೆಗಳಿಗೆ 144 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಕ್ಟೋಬರ್ 5 ಮತ್ತು 6ರಂದು ಕೊಪ್ಪಳದ ಮುನಿರಾಬಾದ್ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

KK ವೃಂದದ ಪರೀಕ್ಷೆ ಯಾವಾಗ?

ಕಲ್ಯಾಣ ಕರ್ನಾಟಕ ವೃಂದದ ದೈಹಿಕ ಪರೀಕ್ಷೆಗಳು ಅಕ್ಟೋಬರ್ ಎರಡನೇ ವಾರದಿಂದ ಆರಂಭವಾಗಲಿವೆ. ಬೆಂಗಳೂರು ನಗರ KK ವಿಭಾಗದ 171 ಹುದ್ದೆಗಳಿಗೆ 833 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಅಕ್ಟೋಬರ್ 8ರಂದು ಚಾಮರಾಜಪೇಟೆ ಮತ್ತು ಆಡುಗೋಡಿ CAR ಮೈದಾನಗಳಲ್ಲಿ ಪರೀಕ್ಷೆ ನಡೆಯಲಿದೆ. ಬಳ್ಳಾರಿ ವಲಯದ KK ವಿಭಾಗದಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಘಟಕಗಳ 174 ಹುದ್ದೆಗಳಿಗೆ 869 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅಕ್ಟೋಬರ್ 12ರಿಂದ 15ರವರೆಗೆ ಕೊಪ್ಪಳದ ಮುನಿರಾಬಾದ್‌ನಲ್ಲಿ ಪರೀಕ್ಷೆ ನಡೆಯಲಿದೆ. ಕಲಬುರಗಿ ನಗರ/ಜಿಲ್ಲೆ ಮತ್ತು ಬೀದರ್ ಘಟಕಗಳನ್ನ ಒಳಗೊಂಡ ಈಶಾನ್ಯ ವಲಯದಲ್ಲಿ 251 ಹುದ್ದೆಗಳಿಗೆ 1,240 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಕ್ಟೋಬರ್ 12ರಿಂದ 14ರವರೆಗೆ ಕಲಬುರಗಿಯ ತಾಜ್ ಸುಲ್ತಾನ್‌ಪುರದಲ್ಲಿರುವ 6ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಮಾಹಿತಿ

ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ Call Letter ಅನ್ನ KEA ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಕರೆ ಪತ್ರದಲ್ಲಿ ನಮೂದಿಸಿರುವ ದಿನಾಂಕ, ಸಮಯ ಮತ್ತು ಪರೀಕ್ಷಾ ಕೇಂದ್ರವನ್ನ ಸರಿಯಾಗಿ ಪರಿಶೀಲಿಸಿ, ಸೂಚಿಸಿರುವ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಾಗಬೇಕು. ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆ ಪಡೆಯುವ ಕನಸು ಕಾಣುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದೀಗ ನೇಮಕಾತಿ ಪ್ರಕ್ರಿಯೆಯ ಮಹತ್ವದ ಹಂತ ಎದುರಾಗಿದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು PST ಮತ್ತು ET ಪರೀಕ್ಷೆಗಳಲ್ಲಿ ಭಾಗವಹಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆಯಬೇಕಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES