Motivational story for students : ಬೀಡಿ ಕಟ್ಟಿ ಕುಟುಂಬ ಸಾಗಿಸುವ ತಾಯಿಯೊಬ್ಬನ ಮಗ ರಾತ್ರಿ ವೇಳೆ ನೈಟ್ ವಾಚ್‌ಮನ್ ಆಗಿ ಕೆಲಸ ಮಾಡುತ್ತಲೇ ಓದಿ, ಒಂದಲ್ಲ, ಎರಡಲ್ಲ, ಸತತವಾಗಿ ಮೂರು ಸರ್ಕಾರಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುವ ಮೂಲಕ ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ಅದ್ಭುತ ಸಾಧನೆ ಮಾಡಿದ ಹಠವಾದಿ ಯುವಕನ ಹೆಸರು ಗೊಲ್ಲೆ ಪ್ರವೀಣ್ ಕುಮಾರ್.
ತಾಯಿಯ ಶ್ರಮ, ಆರ್ಥಿಕ ಸಂಕಷ್ಟ
ತೆಲಂಗಾಣ ರಾಜ್ಯದ ಮಂಚೇರಿಯಲ್ ಜಿಲ್ಲೆಯ ತೀರಾ ಹಿಂದುಳಿದ ಹಾಗೂ ಸರಳ ಕುಟುಂಬವೊಂದರಲ್ಲಿ ಜನಿಸಿದ ಗೊಲ್ಲೆ ಪ್ರವೀಣ್ ಕುಮಾರ್ ಅವರ ಬಾಲ್ಯವೇನೂ ಸುಖಕರವಾಗಿರಲಿಲ್ಲ. ಮನೆಯಲ್ಲಿದ್ದ ಆರ್ಥಿಕ ಮುಗ್ಗಟ್ಟು ಮತ್ತು ಪ್ರತಿದಿನದ ಊಟಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಅವರದ್ದಾಗಿತ್ತು. ಕುಟುಂಬವನ್ನು ಮುನ್ನಡೆಸಲು ಪ್ರವೀಣ್ ಅವರ ತಾಯಿ ಹಗಲಿಡೀ ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದರೆ, ಅವರ ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದರು. ಕುಟುಂಬದಲ್ಲಿದ್ದ ಈ ಸವಾಲುಗಳ ನಡುವೆಯೂ ಶಿಕ್ಷಣದ ಮಹತ್ವವನ್ನು ಅರಿತಿದ್ದ ಪ್ರವೀಣ್, ಯಾವುದೇ ಕಾರಣಕ್ಕೂ ತಮ್ಮ ವ್ಯಾಸಂಗವನ್ನು ಅರ್ಧಕ್ಕೇ ನಿಲ್ಲಿಸಬಾರದು ಎಂಬ ದೃಢ ನಿರ್ಧಾರ ತಳೆದಿದ್ದರು. ಕಷ್ಟಪಟ್ಟು ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು, ಉನ್ನತ ಶಿಕ್ಷಣದ ಕನಸು ಹೊತ್ತು ಹೈದರಾಬಾದ್‌ನ ಪ್ರಸಿದ್ಧ ಉಸ್ಮಾನಿಯಾ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದರು.
ಎಂ.ಕಾಮ್, ಬಿ.ಎಡ್ ಮತ್ತು ಎಂ.ಎಡ್ ವ್ಯಾಸಂಗ
ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಕಾಲಿಟ್ಟ ಪ್ರವೀಣ್ ಅವರ ಶೈಕ್ಷಣಿಕ ಹಸಿವು ಮತ್ತಷ್ಟು ಹೆಚ್ಚಾಯಿತು. ಒಂದರ ಹಿಂದೆ ಒಂದರಂತೆ ಉನ್ನತ ಪದವಿಗಳನ್ನು ಪಡೆಯಲು ಆರಂಭಿಸಿದ ಇವರು ಎಂ.ಕಾಮ್, ಬಿ.ಎಡ್ ಹಾಗೂ ತದನಂತರ ಎಂ.ಎಡ್ ಸ್ನಾತಕೋತ್ತರ ಪದವಿಗಳನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಆದರೆ, ವಿಶ್ವವಿದ್ಯಾಲಯದಲ್ಲಿದ್ದಾಗ ಅವರ ಮುಂದಿದ್ದ ದೊಡ್ಡ ಸವಾಲೆಂದರೆ ದಿನನಿತ್ಯದ ವೈಯಕ್ತಿಕ ಖರ್ಚುಗಳು, ಪುಸ್ತಕಗಳ ವೆಚ್ಚ ಹಾಗೂ ಪರೀಕ್ಷಾ ಶುಲ್ಕಗಳನ್ನು ಭರಿಸುವುದು. ತಾಯಿ ಬೀಡಿ ಕಟ್ಟಿ ಕಳುಹಿಸುತ್ತಿದ್ದ ಅಲ್ಪಸ್ವಲ್ಪ ಹಣದಲ್ಲಿ ಹೈದರಾಬಾದ್‌ನಂತಹ ಮಹಾನಗರದಲ್ಲಿ ಜೀವನ ನಡೆಸುವುದು ಅತ್ಯಂತ ಸವಾಲಿನದ್ದಾಗಿತ್ತು. ಹಾಗೆಯೇ, ಈಗಾಗಲೇ ಕಷ್ಟಪಡುತ್ತಿರುವ ಕುಟುಂಬಕ್ಕೆ ತಾನು ಮತ್ತಷ್ಟು ಆರ್ಥಿಕ ಹೊರೆಯಾಗಬಾರದು ಎಂಬ ಸ್ವಭಿಮಾನ ಪ್ರವೀಣ್ ಅವರಲ್ಲಿ ಜಾಗೃತವಾಯಿತು.
ಹಗಲು ಓದು, ರಾತ್ರಿ ಕಾವಲು
ತನ್ನ ಖರ್ಚನ್ನು ತಾನೇ ನೋಡಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರವೀಣ್ ಕಂಡುಕೊಂಡ ಹಾದಿಯೇ ನೈಟ್ ವಾಚ್‌ಮನ್ ಕೆಲಸ. ತಾವು ಓದುತ್ತಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯದ ಆವರಣದಲ್ಲೇ ರಾತ್ರಿ ಕಾವಲುಗಾರನಾಗಿ ಸೇರಿಕೊಂಡ ಪ್ರವೀಣ್ ಅವರ ದಿನಚರಿ ಅಲ್ಲಿಂದ ಮುಂದೆ ಸಂಪೂರ್ಣವಾಗಿ ಬದಲಾಯಿತು. ಹಗಲಿಡೀ ವಿಶ್ವವಿದ್ಯಾಲಯದಲ್ಲಿ ತರಗತಿಗಳಿಗೆ ಹಾಜರಾಗುವುದು, ಗ್ರಂಥಾಲಯದಲ್ಲಿ ಅಭ್ಯಾಸ ಮಾಡುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದರಲ್ಲಿ ನಿರತರಾಗಿದ್ದರೆ, ರಾತ್ರಿಯಾಗುತ್ತಿದ್ದಂತೆ ಯೂನಿಫಾರ್ಮ್ ಧರಿಸಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ರಾತ್ರಿ ವೇಳೆ ಕಾವಲು ಕಾಯುವಾಗ ಸಿಗುತ್ತಿದ್ದ ಸಮಯವನ್ನು ವ್ಯರ್ಥ ಮಾಡದೆ, ದೀಪದ ಬೆಳಕಿನಲ್ಲಿ ಪುಸ್ತಕಗಳನ್ನು ಹಿಡಿದು ಕಷ್ಟಪಟ್ಟು ಓದುತ್ತಿದ್ದರು.
ಈ ಹಂತದಲ್ಲಿ ಅವರಿಗೆ ಎದುರಾದ ಮಾನಸಿಕ ಸವಾಲುಗಳು ಸಣ್ಣದೇನಲ್ಲ. ಜೊತೆಯಲ್ಲಿ ಓದುತ್ತಿದ್ದ ಕೆಲವು ಸಹಪಾಠಿಗಳು ಹಾಗೂ ಪರಿಚಿತರು ಪ್ರವೀಣ್ ಮಾಡುತ್ತಿದ್ದ ವಾಚ್‌ಮನ್ ಕೆಲಸವನ್ನು ನೋಡಿ ಗೇಲಿ ಮಾಡಿದರು. ಉನ್ನತ ಪದವಿ ಪಡೆದರೂ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾನೆ ಎಂದು ವ್ಯಂಗ್ಯವಾಡಿದರು. ಆದರೆ, ಪ್ರವೀಣ್ ಈ ಯಾವುದೇ ಮಾತುಗಳಿಗೆ ಕುಗ್ಗದೆ, ಗೇಲಿ ಮಾಡಿದವರ ಮಾತುಗಳನ್ನು ಎಡಗೈಯಲ್ಲೇ ತಳ್ಳಿಹಾಕಿ ತಮ್ಮ ಅಂತಿಮ ಗುರಿಯಾದ ಸರ್ಕಾರಿ ಉದ್ಯೋಗದ ಕಡೆಗೆ ಮಾತ್ರ ಗಮನ ಕೇಂದ್ರೀಕರಿಸಿದರು.
ಶ್ರಮಕ್ಕೆ ತಕ್ಕ ಪ್ರತಿಫಲ : ಸತತ 3 ಸರ್ಕಾರಿ ಉದ್ಯೋಗಗಳು
ವರ್ಷಗಳ ಕಾಲ ಹಗಲು-ರಾತ್ರಿ ನಡೆಸಿದ ನಿರಂತರ ಶ್ರಮ, ಕಣ್ಣೀರು ಮತ್ತು ತ್ಯಾಗಕ್ಕೆ ಕೊನೆಗೂ ಕಾಲವೇ ಉತ್ತರಿಸಿತು. ತೆಲಂಗಾಣ ಸರ್ಕಾರ ನಡೆಸಿದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದ ಪ್ರವೀಣ್ ಕುಮಾರ್, ಫಲಿತಾಂಶ ಬಂದಾಗ ಇಡೀ ರಾಜ್ಯವೇ ಹುಬ್ಬೇರಿಸುವಂತಹ ಸಾಧನೆ ಮಾಡಿದ್ದರು. ಇವರು ಗುರುಕುಲ ಶಿಕ್ಷಣ ಸಂಸ್ಥೆಗಳಲ್ಲಿ ಜೂನಿಯರ್ ಲೆಕ್ಚರರ್ (ರಾಜ್ಯ ಮಟ್ಟದಲ್ಲಿ 17 ನೇ ರ್ಯಾಂಕ್), ಪೋಸ್ಟ್ ಗ್ರಾಜುಯೇಟ್ ಟೀಚರ್ (PGT) ಹಾಗೂ ಟ್ರೇನ್ಡ್ ಗ್ರಾಜುಯೇಟ್ ಟೀಚರ್ (TGT) ಹುದ್ದೆಗಳಿಗೆ ಒಂದೇ ಬಾರಿಗೆ ಸತತವಾಗಿ ಆಯ್ಕೆಯಾಗುವ ಮೂಲಕ ತಮ್ಮ ಶಕ್ತಿಯೇನು ಎಂಬುದನ್ನು ಸಾಬೀತುಪಡಿಸಿದರು.
ಯಾವ ಕಚೇರಿಯಲ್ಲಿ ಮತ್ತು ಯಾವ ಆವರಣದಲ್ಲಿ ಪ್ರವೀಣ್ ನೈಟ್ ವಾಚ್‌ಮನ್ ಆಗಿ ಕೆಲಸ ಮಾಡಿದ್ದರೋ, ಅದೇ ಕಚೇರಿಯಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರವೀಣ್ ಅವರನ್ನು ವೇದಿಕೆಗೆ ಕರೆದು ಅತ್ಯಂತ ವಿಜೃಂಭಣೆಯಿಂದ ಸನ್ಮಾನಿಸಿದರು. ತಾವು ಕಾವಲುಗಾರನಾಗಿ ಕಾರ್ಯನಿರ್ವಹಿಸಿದ ಸ್ಥಳದಲ್ಲೇ ಇಂತಹ ಉನ್ನತ ಗೌರವ ಸ್ವೀಕರಿಸಿದ್ದು ಪ್ರವೀಣ್ ಅವರ ಜೀವನದ ಅತ್ಯಂತ ಭಾವನಾತ್ಮಕ ಹಾಗೂ ಹೆಮ್ಮೆಯ ಕ್ಷಣವಾಯಿತು.
ಯುವಜನತೆಗೆ ಪ್ರವೀಣ್ ಸ್ಪೂರ್ತಿ ಮಂತ್ರ
ತಮ್ಮ ಈ ಅದ್ಭುತ ಯಶಸ್ಸಿನ ನಂತರ ಮಾತನಾಡಿದ ಗೊಲ್ಲೆ ಪ್ರವೀಣ್ ಕುಮಾರ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ದೇಶದ ಲಕ್ಷಾಂತರ ಯುವಜನತೆಗೆ ಅತ್ಯಂತ ಜವಾಬ್ದಾರಿಯುತ ಹಾಗೂ ಸ್ಪೂರ್ತಿದಾಯಕ ಸಂದೇಶ ನೀಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಎನ್ನುವುದು ಪ್ರತಿಯೊಬ್ಬರಿಗೂ ಒಂದೇ ಸಮಯದಲ್ಲಿ ಸಿಗುವುದಿಲ್ಲ ಎಂದು ಅವರು ಹೇಳುತ್ತಾರೆ. ಕೆಲವರಿಗೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗಬಹುದು, ಇನ್ನು ಕೆಲವರಿಗೆ ಎರಡನೇ ಅಥವಾ ಮೂರನೇ ಪ್ರಯತ್ನದಲ್ಲಿ ಸಿಗಬಹುದು. ಆದರೆ, ನಮಗೆ ಸೋಲು ಎದುರಾಯಿತು ಎಂದು ಎಂದಿಗೂ ನಿರಾಶರಾಗಬಾರದು. ತಾಳ್ಮೆ ಮತ್ತು ಸತತ ಅಭ್ಯಾಸವೇ ಯಶಸ್ಸಿನ ಮೂಲಮಂತ್ರವಾಗಿದ್ದು, ನಿರಂತರವಾಗಿ ಶ್ರಮಿಸುತ್ತಾ ಕಾಯ್ದರೆ ಯಶಸ್ಸು ಖಂಡಿತವಾಗಿಯೂ ಪ್ರತಿಯೊಬ್ಬರ ಬಾಗಿಲನ್ನೂ ತಟ್ಟುತ್ತದೆ ಎಂಬ ಕಟು ಸತ್ಯವನ್ನು ಅವರು ನೆನಪಿಸಿದ್ದಾರೆ.
ಒಟ್ಟಾರೆಯಾಗಿ ಬಡತನ, ಸೌಲಭ್ಯಗಳ ಕೊರತೆ ಅಥವಾ ಜನರ ಗೇಲಿ ಮಾತುಗಳನ್ನು ನೆಪವಾಗಿಟ್ಟುಕೊಂಡು ಗುರಿಯಿಂದ ಹಿಂದೆ ಸರಿಯುವ ಇಂದಿನ ಯುವ ಪೀಳಿಗೆಗೆ ಗೊಲ್ಲೆ ಪ್ರವೀಣ್ ಕುಮಾರ್ ಅವರ ಜೀವನ ಪಯಣ ಪ್ರತ್ಯಕ್ಷ ಸಾಕ್ಷಿಯಾಗಿದೆ. ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮವಿದ್ದರೆ ಎಂತಹ ಕತ್ತಲೆಯಿಂದಲೂ ಬೆಳಕಿನೆಡೆಗೆ ಸಾಗಬಹುದು ಎಂಬುದನ್ನು ಪ್ರವೀಣ್ ಸಾಬೀತುಪಡಿಸಿದ್ದಾರೆ. ಇವರ ಈ ಸಾಧನೆ ತೆಲಂಗಾಣ ಮಾತ್ರವಲ್ಲದೆ ಇಡೀ ದೇಶದ ಯುವಜನತೆಗೆ ಪ್ರೇರಣೆಯಾಗಿದೆ.