SOCIAL MEDIA

Newsletter

PARTNER SITES
Select Language Select State

ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಓ ಘಟಕಕ್ಕೆ ಸಚಿವ ಎಂ.ಬಿ.ಪಾಟೀಲ ಭೂಮಿಪೂಜೆ, 2,100 ಉದ್ಯೋಗ ಸೃಷ್ಟಿ

ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಮೂಲಕ 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಣೆ ಗುರಿ ಹೊಂದಲಾಗಿದ್ದು 60 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

Written By Yashaswini V
Published: Nov 17, 2026, 10:35 IST | Updated: Nov 17, 2026, 10:37 IST
Join

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ ಪ್ರದೇಶದಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ದೇಶದ ಮೊದಲ ವಿಮಾನ ನಿರ್ವಹಣೆ ಮತ್ತು ದುರಸ್ತಿ (ಎಂ.ಆರ್.ಒ) ಘಟಕದ ನಿರ್ಮಾಣಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ (ನ.17) ಭೂಮಿಪೂಜೆ ನೆರವೇರಿಸಿದರು.

2,100 ನೇರ ಉದ್ಯೋಗ ಸೃಷ್ಟಿ ಭರವಸೆ:
ಈ ಸಂದರ್ಭದಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು, `ಈ ಘಟಕ ನಿರ್ಮಾಣಕ್ಕೆ ಸರಕಾರವು 26 ಎಕರೆ ಜಾಗ ನೀಡಿದ್ದು, ಇಲ್ಲಿ 2,100 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಲ್ಲಿ ಬರುವ ಎಂ.ಆರ್.ಒ. ಘಟಕದ ಮೂಲಕ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ಏಷ್ಯಾ-ಪೆಸಿಫಿಕ್ ಪ್ರದೇಶದ ವಿಶಾಲ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆಗುರುತು ಮೂಡಿಸಲಿದೆ. ದೇಶದ ಏರೋಸ್ಪೇಸ್ ವಲಯದಲ್ಲಿ ಶೇಕಡ 65ರಷ್ಟು ಪಾಲು ಹೊಂದಿರುವ ಕರ್ನಾಟಕವು ಇಲ್ಲಿಂದ ರಫ್ತು ವಹಿವಾಟನ್ನೂ ನಡೆಸಲಿದೆ. ಕಂಪನಿಯು ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಹೋದ ವರ್ಷದ ನವೆಂಬರಿನಲ್ಲಿ ದೇವನಹಳ್ಳಿಯಲ್ಲೇ ಕಂಪನಿಯ ತಯಾರಿಕಾ ಘಟಕವನ್ನು ಉದ್ಘಾಟಿಸಲಾಗಿದೆ’ ಎಂದಿದ್ದಾರೆ.

2031ರೊಳಗೆ 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ:
ಇದನ್ನೆಲ್ಲ ಪರಿಗಣಿಸಿಯೇ ರಾಜ್ಯವು ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಜಾರಿಗೆ ತಂದಿದೆ. 2031ರೊಳಗೆ ಈ ವಲಯಕ್ಕೆ 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಸರಕಾರದ್ದಾಗಿದೆ. ಇದಕ್ಕಾಗಿ 7 ಮುಖ್ಯ ವಿಭಾಗಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಎಂ.ಆರ್.ಒ.ಗಳ ಅಭಿವೃದ್ಧಿ ಕೂಡ ಒಂದಾಗಿದೆ. ವಿಮಾನಗಳ ತಯಾರಿಕೆ ಬೇಕಾಗುವ ಸಮಗ್ರ ಕಾರ್ಯಪರಿಸರ ಸೃಷ್ಟಿ, ರಕ್ಷಣಾ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವುದೂ ಇದರಲ್ಲಿ ಸೇರಿವೆ ಎಂದು ಅವರು ತಿಳಿಸಿದ್ದಾರೆ.

ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕವು ಜಾಗತಿಕ ಮಟ್ಟದ ಒಇಎಂ (ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್) ಕಂಪನಿಯೊಂದು ಭಾರತದಲ್ಲಿ ಸ್ಥಾಪಿಸುತ್ತಿರುವ ಇಂತಹ ಪ್ರಪ್ರಥಮ ಘಟಕವಾಗಿದೆ. ಇದು ಎಟಿಆರ್ 42 ಮತ್ತು ಎಟಿಆರ್ 72 ಮಾದರಿಯ ವಿಮಾನಗಳಲ್ಲಿರುವ 568ಎಫ್ ಸ್ತರದ ಪ್ರೊಪೆಲ್ಲರ್ ಗಳಿಗೆ ಹಾಗೂ ಸೇನೆಯಲ್ಲಿ ಬಳಸುವ ಸಿ295 ವಿಮಾನಗಳಿಗೆ ಬೇಕಿರುವ ಸೇವೆಗಳನ್ನು ಒದಗಿಸಲಿದೆ. ಇದರಿಂದ ಬೆಂಗಳೂರು ನಗರವು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ವಿಮಾನ ಸೇವೆಗಳ ಹಬ್ ಆಗಿ ಬೆಳೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಇದರಿಂದ ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಸಹಾಯವಾಗಲಿದೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಮುಂಬರುವ ಏಪ್ರಿಲ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನವೇ ಜಾಗತಿಕ ಮಟ್ಟದ ಒಇಎಂ ಕಂಪನಿಗಳು, ಟೈಯರ್-1 ಸ್ಥಾನಮಾನ ಹೊಂದಿರುವ ಕಂಪನಿಗಳು ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಒಟ್ಟುಗೂಡಿಸಿ ಸಮಾವೇಶ ನಡೆಸಲಾಗುವುದು ಎಂದು ಪಾಟೀಲ ನುಡಿದಿದ್ದಾರೆ.

ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಜಾಲವು ವ್ಯಾಪಕ ಸ್ವರೂಪದಲ್ಲಿ ವೃದ್ಧಿಸುತ್ತಿದೆ. ರಕ್ಷಣಾ ಇಲಾಖೆಯಲ್ಲೂ ವೈಮಾನಿಕ ಸೇವೆ, ನಿರ್ವಹಣೆ, ದುರಸ್ತಿಗಳ ಅಗತ್ಯ ಹೆಚ್ಚುತ್ತಿದೆ. ಹೀಗಾಗಿ ಎಂ.ಆರ್.ಒ ಘಟಕಗಳಿಗೆ ತುಂಬಾ ಬೇಡಿಕೆ ಇದೆ. ವೈಮಾಂತರಿಕ್ಷ ವಲಯದಲ್ಲಿ ಸ್ವಾವಲಂಬನೆ ಸಾಧಿಸಿ, ಆರ್ಥಿಕ ಬೆಳವಣಿಗೆ ಹೊಂದಲು ಸ್ಥಳೀಯವಾಗಿಯೇ ಎಂ.ಆರ್.ಒ ಘಟಕಗಳನ್ನು ಅಭಿವೃದ್ಧಿ ಪಡಿಸುವುದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯವು ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಯನ್ನು ರೂಪಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಸಿಗಲಿದೆ. ಈ ನೀತಿಯಿಂದ ಉಡಾನ್ ಯೋಜನೆಗೂ ನೆರವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್, ಕಾಲಿನ್ಸ್ ಏರೋಸ್ಪೇಸ್ ಮುಖ್ಯಸ್ಥ ಅಜಯ್ ಮಹಾಜನ್, ಕಾಲಿನ್ಸ್ ಏರೋಸ್ಪೇಸ್ ನ ಪ್ರೊಪೆಲ್ಲರ್ ಸಿಸ್ಟಮ್ ಪ್ರಧಾನ ವ್ಯವಸ್ಥಾಪಕ ಜಾನ್ ಫ್ರಾಂಕೋಯಿಸ್ ಚನುವಾತ್ ಮಾತನಾಡಿದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲಿನ್ಸ್ ಸಂಸ್ಥೆಯ ಹಿರಿಯ ನಿರ್ದೇಶಕ ಬಿನು ಕೃಷ್ಣಮೂರ್ತಿ ಉಪಸ್ಥಿತರಿದ್ದರು.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES