SOCIAL MEDIA

Newsletter

PARTNER SITES
Select Language Select State

ಡಿಜಿಟಲ್‌ನಲ್ಲಿ ZEE5 ಅಬ್ಬರ, ಫಿಫಾ ವಿಶ್ವಕಪ್ ಯಶಸ್ಸು : ZEE ಸಮೂಹದಿಂದ ಭರ್ಜರಿ ಆದಾಯ ಗಳಿಕೆ

ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ತನ್ನ 2027ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಚಂದಾದಾರಿಕೆ, ZEE5 ಬೆಳವಣಿಗೆ, ಫಿಫಾ ವಿಶ್ವಕಪ್‌ನಂತಹ (FIFA World Cup 2026) ಐತಿಹಾಸಿಕ ಕ್ರೀಡಾ ಪ್ರಸಾರದ ಯಶಸ್ಸಿನಿಂದ ಕಂಪನಿಯ ಒಟ್ಟು ಆದಾಯದಲ್ಲಿ ಶೇ. 13ರಷ್ಟು ಬೆಳವಣಿಗೆ ಕಂಡಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 30, 2026, 09:09 PM IST | Updated: Oct 30, 2026, 09:11 PM IST
Image Credit: ZeeL
Join

ಬೆಂಗಳೂರು : ಮನರಂಜನಾ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಒಂದಾದ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (ZEEL) ತನ್ನ 2027ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ (ಸೆಪ್ಟೆಂಬರ್ 30, 2026ಕ್ಕೆ ಕೊನೆಗೊಂಡ ಅವಧಿ) ಹಣಕಾಸು ಹಾಗೂ ಕಾರ್ಯಾಚರಣೆಯ ಫಲಿತಾಂಶಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ನ ವಿಸ್ತರಣೆ, ವೈವಿಧ್ಯಮಯ ಕಂಟೆಂಟ್ ಪೋರ್ಟ್‌ಫೋಲಿಯೊ ಮತ್ತು 2026ರ ಫಿಫಾ ವಿಶ್ವಕಪ್‌ನ (FIFA World Cup 2026) ಐತಿಹಾಸಿಕ ಪ್ರಸಾರ ಯಶಸ್ಸಿನಿಂದ ಗಮನಾರ್ಹ ಆದಾಯ ಗಳಿಕೆ ಕಂಡಿದೆ..

ಆದಾಯದಲ್ಲಿ ಗಮನಾರ್ಹ ಏರಿಕೆ
ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (Q2 FY27) ಕಂಪನಿಯ ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯವು ಭರ್ಜರಿ ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿದ್ದ ₹1,969 ಕೋಟಿಯಿಂದ ಸುಮಾರು ಶೇ. 13ರಷ್ಟು ಏರಿಕೆ ಕಂಡು, ಈ ಬಾರಿ ಆದಾಯವು ₹2,225 ಕೋಟಿಗಳಿಗೆ ತಲುಪಿದೆ. ಇದಕ್ಕೆ ಮುಖ್ಯವಾಗಿ ಚಂದಾದಾರಿಕೆ (Subscription) ಕಾರಣವಾಗಿದ್ದು, ₹1,023 ಕೋಟಿಯಿಂದ ಬರೋಬ್ಬರಿ ₹1,332.4 ಕೋಟಿಗೆ ಜಿಗಿದಿದೆ.

ಆದರೂ, ಕಂಪನಿಯ ನಿವ್ವಳ ಲಾಭ ಹಾಗೂ ಇಬಿಡಿಟಿಎ (EBITDA) ವಿಷಯದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ. ಹಿಂದಿನ ಅವಧಿಯಲ್ಲಿದ್ದ ₹77 ಕೋಟಿ ನಿವ್ವಳ ಲಾಭವು ಶೇ. 37.7ರಷ್ಟು ಕುಸಿದು ಪ್ರಸ್ತುತ ₹48 ಕೋಟಿಗೆ ಬಂದು ನಿಂತಿದೆ. ಅಂತೆಯೇ, ಕಂಪನಿಯ ಒಟ್ಟು ಇಬಿಡಿಟಿಎ ಶೇ. 46.6ರಷ್ಟು ಇಳಿಕೆಯಾಗಿ ₹85.5 ಕೋಟಿಗಳಿಗೆ ತಲುಪಿದೆ ಮತ್ತು ಇಬಿಡಿಟಿಎ ಮಾರ್ಜಿನ್ ಶೇ. 8.1ರಿಂದ ಶೇ. 3.8ಕ್ಕೆ ಇಳಿದಿದೆ.

ಡಿಜಿಟಲ್ ರಂಗದಲ್ಲೂ ZEE5 ಅಬ್ಬರ
ಜೀ ಸಮೂಹದ ಡಿಜಿಟಲ್ ವಿಭಾಗವಾದ ZEE5, ಕಂಪನಿಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. Q2 FY27ರಲ್ಲಿ ZEE5 ಬರೋಬ್ಬರಿ ₹626 ಕೋಟಿ ಆದಾಯವನ್ನು ಗಳಿಸುವ ಮೂಲಕ ಕಳೆದ ವರ್ಷಕ್ಕಿಂತ ಶೇ. 101ರಷ್ಟು ಭರ್ಜರಿ ಬೆಳವಣಿಗೆ ಸಾಧಿಸಿದೆ. ವೀಕ್ಷಕರನ್ನು ಸೆಳೆಯಲು ಈ ತ್ರೈಮಾಸಿಕದಲ್ಲಿ ಒಟ್ಟು 34 ಹೊಸ ಶೋಗಳು ಮತ್ತು ಸಿನಿಮಾಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 9 ಒರಿಜಿನಲ್ ಕಂಟೆಂಟ್‌ಗಳು ಕೂಡ ಸೇರಿವೆ.

ಹೊಸ ಇತಿಹಾಸ ಸೃಷ್ಟಿಸಿದ ಜೀ ನೆಟ್‌ವರ್ಕ್
ಕ್ರೀಡಾ ಪ್ರಸಾರ ಕ್ಷೇತ್ರದಲ್ಲಿ ಜೀ ನೆಟ್‌ವರ್ಕ್ ಮೈಲಿಗಲ್ಲು ಸ್ಥಾಪಿಸಿದೆ. 'ಝೀ' ಮುಂದಿನ 8 ವರ್ಷಗಳ ಕಾಲ (2026-2034) ಪ್ರಮುಖ ಫಿಫಾ ಟೂರ್ನಮೆಂಟ್‌ಗಳನ್ನು ಪ್ರಸಾರ ಮಾಡಲು ಹಾಗೂ ಸ್ಟ್ರೀಮ್ ಮಾಡಲು ಅಧಿಕೃತ ಪಾಲುದಾರಿಕೆ ಪಡೆದುಕೊಂಡಿದೆ. 2026ರ ಫಿಫಾ ವಿಶ್ವಕಪ್ ಪ್ರಸಾರದ ವೇಳೆ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು ವೀಕ್ಷಣಾ ಸಮಯವು ಸುಮಾರು 50 ಬಿಲಿಯನ್ ನಿಮಿಷಗಳನ್ನು ತಲುಪಿದೆ. ವಿಶೇಷವೆಂದರೆ, ಒಟ್ಟು ವೀಕ್ಷಣಾ ಸಮಯದ ಶೇ. 83ರಷ್ಟು ಭಾಗ (ಸುಮಾರು 400 ಮಿಲಿಯನ್‌ಗಿಂತಲೂ ಹೆಚ್ಚು) ನೇರವಾಗಿ ಲೈವ್ ಮ್ಯಾಚ್‌ಗಳಿಂದಲೇ ಬಂದಿರುವುದು ವಿಶೇಷ. ಭಾರತದ ಶೇ. 73ರಷ್ಟು ವೀಕ್ಷಕರು ಫಿಫಾ ಪಂದ್ಯಗಳನ್ನು ತಲುಪಿಸುವಲ್ಲಿ ಜೀ ಬ್ರ್ಯಾಂಡ್‌ ಅನ್ನು ಮುಕ್ತಕಂಠದಿಂದ ಮೆಚ್ಚಿಕೊಂಡಿದ್ದಾರೆ.

ಮುಂದುವರಿದ ಪ್ರಾಬಲ್ಯ
BARC ದತ್ತಾಂಶದ ಪ್ರಕಾರ, ಜೀ ನೆಟ್‌ವರ್ಕ್ 2026ರ 24ನೇ ವಾರದಲ್ಲಿ ಶೇ. 20.0ರಷ್ಟು ಅಖಿಲ ಭಾರತ ಟಿವಿ ನೆಟ್‌ವರ್ಕ್ ಪಾಲನ್ನು (Market Share) ತನ್ನದಾಗಿಸಿಕೊಂಡಿದ್ದು, ಇದು ಕಳೆದ 7 ವರ್ಷಗಳಲ್ಲೇ ಅತ್ಯಧಿಕವಾಗಿದೆ. ಈ ಅವಧಿಯಲ್ಲಿ ‘ಸ ರೆ ಗ ಮ ಪ’ (ಝೀ ಟಿವಿ), ‘ದಿಲೋನ್ ಕಿ ರಾಮ್ ಲೀಲಾ’ (ಝೀ ಟಿವಿ), ‘ಹೋಮ್ ಮಿನಿಸ್ಟರ್’ (ಝೀ ಮರಾಠಿ) ಹಾಗೂ ‘ದದ್‌ಗಿರಿ ಅನ್‌ಲಿಮಿಟೆಡ್ S11’ (ಝೀ ಸಾರ್ಥಕ್) ನಂತಹ ಜನಪ್ರಿಯ ಕಾರ್ಯಕ್ರಮಗಳು ವೀಕ್ಷಕರನ್ನು ರಂಜಿಸುವಯಲ್ಲಿ ಯಶಸ್ವಿಯಾದವು.

ಜತೆಗೆ, ಜೀ ಮ್ಯೂಸಿಕ್ ಕಂಪನಿಯ ಚಂದಾದಾರರ ಸಂಖ್ಯೆ ಈಗ 179 ಮಿಲಿಯನ್‌ಗೆ ಏರಿದ್ದು, ಒಟ್ಟು ವೀಡಿಯೊ ವೀಕ್ಷಣೆಗಳು 59 ಬಿಲಿಯನ್‌ ಗಡಿದಾಟಿದೆ. ಈ ತ್ರೈಮಾಸಿಕದಲ್ಲಿ ಹಿಂದಿ, ಪ್ರಾದೇಶಿಕ ಭಾಷೆಗಳು ಹಾಗೂ ಸಿಂಗಲ್ಸ್ ಸೇರಿ ಒಟ್ಟು 93 ಹೊಸ ಹಾಡುಗಳು ಮತ್ತು ಆಲ್ಬಮ್‌ಗಳ ಹಕ್ಕುಗಳನ್ನು ಪಡೆದುಕೊಳ್ಳಲಾಗಿದೆ. ಒಟ್ಟಾರೆಯಾಗಿ ಜೀ ಎಂಟರ್‌ಟೈನ್‌ಮೆಂಟ್ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES