SOCIAL MEDIA

Newsletter

PARTNER SITES
Select Language Select State

ಹಬ್ಬದ ಸೀಸನ್‌ನಲ್ಲಿ ಹೊಸ ವಾಹನ ಖರೀದಿಯ ಉತ್ಸಾಹ : ಈ ತಪ್ಪುಗಳನ್ನು ಮಾಡಿದ್ರೆ ನಷ್ಟ ಗ್ಯಾರಂಟಿ!

ದೀಪಾವಳಿಯಂತಹ ವಿಶೇಷ ದಿನಗಳಲ್ಲಿ ಕಾರು ಮತ್ತು ಬೈಕ್ ಶೋರೂಂಗಳ ಮುಂದೆ 'ಬಿಗ್‌ ಆಫರ್‌', 'ಕ್ಯಾಶ್‌ಬ್ಯಾಕ್' ಹಾಗೂ 'ಗಿಫ್ಟ್‌'ಗಳ ಬೋರ್ಡ್‌ಗಳು ರಾರಾಜಿಸುತ್ತವೆ. ಗ್ರಾಹಕರನ್ನು ಸೆಳೆಯಲು ಡೀಲರ್‌ಗಳು ನೀಡುವ ಈ ಆಫರ್‌ಗಳು ಮೇಲ್ನೋಟಕ್ಕೆ ಭಾರಿ ಉಳಿತಾಯ ಎಂದೆನಿಸಿದರೂ, ಅವರು ಹಿಂಬಾಗಿಲಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಹಬ್ಬದ ಸಂಭ್ರಮದಲ್ಲಿ ಹಣ ನಷ್ಟವಾಗದಂತೆ ಹೊಸ ವಾಹನವನ್ನು ಮನೆಗೆ ತರುವಾಗ ತೆಗೆದುಕೊಳ್ಳಬೇಕಾದ ಪ್ರಮುಖ ಮುನ್ನೆಚ್ಚರಿಕೆಗಳ ವಿವರ ಇಲ್ಲಿದೆ..

Written By Krishna NK
Published: Nov 04, 2026, 09:22 PM IST | Updated: Nov 04, 2026, 09:30 PM IST
Image Credit: Deepavali 2026
Join

Diwali vehicle purchase tips : ದೀಪಾವಳಿ ಹಬ್ಬ ಬಂತೆಂದರೆ ಸಾಕು, ಮಾರುಕಟ್ಟೆಯಲ್ಲಿ ವಾಹನಗಳ ಆಫರ್‌ಗಳ ಸುರಿಮಳೆಯೇ ಆಗುತ್ತದೆ. ಕಾರು ಮತ್ತು ಬೈಕ್ ತಯಾರಿಕಾ ಕಂಪನಿಗಳು ಹಾಗೂ ಶೋರೂಂ ಮಾಲೀಕರು ಗ್ರಾಹಕರನ್ನು ಸೆಳೆಯಲು ಭಾರಿ ರಿಯಾಯಿತಿಗಳು, ಕ್ಯಾಶ್‌ಬ್ಯಾಕ್ ಮತ್ತು ಉಚಿತ ಕೊಡುಗೆಗಳನ್ನು ಪ್ರಕಟಿಸುತ್ತಾರೆ. ಇಂತಹ ಜಾಹೀರಾತುಗಳನ್ನು ನೋಡಿ ತಕ್ಷಣವೇ ವಾಹನ ಖರೀದಿಗೆ ಮುಂದಾಗುವುದು ಸಾಮಾನ್ಯ. ಆದರೆ, ಕೇವಲ ರಿಯಾಯಿತಿ ಅಥವಾ ಆಫರ್‌ಗಳನ್ನು ನೋಡಿ ವಾಹನ ಖರೀದಿಸುವುದು ಎಷ್ಟು ಮಟ್ಟಿಗೆ ಸರಿ?

ಮೇಲ್ನೋಟಕ್ಕೆ ದೊಡ್ಡ ಮಟ್ಟದ ಆಫರ್ ನೀಡುತ್ತಿರುವಂತೆ ಕಂಡರೂ, ಆಂತರಿಕವಾಗಿ ವಿಮೆ, ಅಕ್ಸೆಸರೀಸ್ (ಬಿಡಿಭಾಗಗಳು) ಮತ್ತು ಸಾಲದ ಪ್ರಕ್ರಿಯೆಗಳಲ್ಲಿ ಹೆಚ್ಚುವರಿ ಶುಲ್ಕಗಳನ್ನು ಸೇರಿಸಿ ಗ್ರಾಹಕರಿಂದ ಹಣ ವಸೂಲಿ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಬ್ಬದ ಸಮಯದಲ್ಲಿ ಹೊಸ ವಾಹನವನ್ನು ಮನೆಗೆ ತರುವ ಮುನ್ನ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ.

ಕನಿಷ್ಠ 3 ಶೋರೂಂಗಳ ಬೆಲೆ ಹೋಲಿಕೆ ಮಾಡಿ
ಯಾವುದೇ ಕಾರು ಅಥವಾ ಬೈಕ್ ಅನ್ನು ಒಂದೇ ಶೋರೂಂನಲ್ಲಿ ನೋಡಿ ತಕ್ಷಣ ಬುಕ್ ಮಾಡಬೇಡಿ. ನೀವು ಆಯ್ಕೆ ಮಾಡಿದ ಮಾದರಿ (Model) ಮತ್ತು ರೂಪಾಂತರಕ್ಕೆ (Variant) ಕನಿಷ್ಠ ಮೂರು ಬೇರೆ ಬೇರೆ ಡೀಲರ್‌ಶಿಪ್‌ಗಳಿಂದ ಲಿಖಿತ 'ಆನ್-ರೋಡ್ ಬೆಲೆ' (On-Road Price) ಪಟ್ಟಿಯನ್ನು ಪಡೆದುಕೊಳ್ಳಿ. ಈ ಆನ್-ರೋಡ್ ಬೆಲೆಯಲ್ಲಿ ಎಕ್ಸ್-ಶೋರೂಂ ದರ, ಆರ್‌ಟಿಒ ನೋಂದಣಿ ಶುಲ್ಕ, ವಿಮೆ ಮತ್ತು ಇತರ ವೆಚ್ಚಗಳು ಸೇರಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ಶೋರೂಂನಲ್ಲಿ 50,000 ರಿಯಾಯಿತಿ ನೀಡಿದರೆ, ಮತ್ತೊಂದರಲ್ಲಿ 65,000 ರಿಯಾಯಿತಿ ಸಿಗಬಹುದು. ಆದರೆ, ಹೆಚ್ಚಿನ ರಿಯಾಯಿತಿ ನೀಡುವ ಡೀಲರ್ ಹಿಂಬಾಗಿಲ ಮೂಲಕ ಇತರ ಸೇವಾ ಶುಲ್ಕಗಳನ್ನು ಹೆಚ್ಚಿಸಿದ್ದಾರೆಯೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ.

ವಿಮೆ ಮತ್ತು ವಾಹನ ಸಾಲಗಳ ಸೂಕ್ತ ಪರಿಶೀಲನೆ
ವಾಹನ ಖರೀದಿಸುವ ಶೋರೂಂನಿಂದಲೇ ವಿಮೆ ಪಡೆಯಬೇಕು ಎಂಬ ಯಾವುದೇ ಕಡ್ಡಾಯ ನಿಯಮವಿಲ್ಲ. ಗ್ರಾಹಕರು ಹೊರಗಿನ ಯಾವುದೇ ನಂಬಿಕಸ್ಥ ವಿಮಾ ಕಂಪನಿಯಿಂದ ಪಾಲಿಸಿ ಖರೀದಿಸಲು ಸ್ವತಂತ್ರರು. ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಪ್ರೀಮಿಯಂ ಮತ್ತು ಅದರಿಂದ ಸಿಗುವ ಪ್ರಯೋಜನಗಳನ್ನು ಹೋಲಿಸಿ ನೋಡಿ ಸೂಕ್ತ ವಿಮೆಯನ್ನು ಆಯ್ದುಕೊಳ್ಳಿ. ಅದೇ ರೀತಿ ವಾಹನ ಸಾಲ (Car/Bike Loan) ತೆಗೆದುಕೊಳ್ಳುವಾಗ, ಬೇರೆ ಬೇರೆ ಬ್ಯಾಂಕ್‌ಗಳ ಬಡ್ಡಿದರ, ಪ್ರೊಸೆಸಿಂಗ್ ಫೀಸ್ ಮತ್ತು ಒಟ್ಟು ಮರುಪಾವತಿ ಮೊತ್ತವನ್ನು ಹೋಲಿಕೆ ಮಾಡುವುದು ಜಾಣತನ.

ಅನಗತ್ಯ ಬಿಡಿಭಾಗಗಳ (Accessories) ಪ್ಯಾಕೇಜ್ ನಿರಾಕರಿಸಿ
ಸಾಮಾನ್ಯವಾಗಿ ಶೋರೂಂನವರು ಕಾರಿನ ಜೊತೆಗೆ ಸೀಟ್ ಕವರ್‌ಗಳು, ಮ್ಯಾಟ್‌ಗಳು, ಮಡ್ ಫ್ಲಾಪ್‌ಗಳು ಮತ್ತು ಡೋರ್ ಗಾರ್ಡ್‌ಗಳನ್ನೊಳಗೊಂಡ ಅಕ್ಸೆಸರೀಸ್ ಪ್ಯಾಕೇಜ್‌ಗಳನ್ನು ಕಡ್ಡಾಯ ಎಂಬಂತೆ ಮಾರಾಟ ಮಾಡಲು ಯತ್ನಿಸುತ್ತಾರೆ. ಇವು ವಾಹನದ ಅಂತಿಮ ಬೆಲೆಗೆ 20,000 ದಿಂದ 35,000 ವರೆಗೆ ಹೆಚ್ಚುವರಿ ಹೊರೆಯಾಗುತ್ತವೆ. ಆದ್ದರಿಂದ, ನಿಮಗೆ ನಿಜವಾಗಿಯೂ ಅಗತ್ಯವಿರುವ ವಸ್ತುಗಳನ್ನು ಮಾತ್ರ ಆಯ್ಕೆ ಮಾಡಿ, ಪ್ರತಿಯೊಂದರ ಬಿಡಿ ಬೆಲೆಯನ್ನು ಕೇಳಿ ತಿಳಿಯಿರಿ. ಅನಗತ್ಯ ವಸ್ತುಗಳನ್ನು ಕೈಬಿಡುವುದರಿಂದ ಸಾವಿರಾರು ರೂಪಾಯಿ ಉಳಿತಾಯವಾಗುತ್ತದೆ.

ವಾಹನದ ಸಮಗ್ರ ತಪಾಸಣೆ (Pre-Delivery Inspection)
ಹೊಸ ವಾಹನವನ್ನು ಡೆಲಿವರಿ ಪಡೆಯುವ ಮುನ್ನ ಹಗಲಿನ ಬೆಳಕಿನಲ್ಲಿ ಸಂಪೂರ್ಣವಾಗಿ ಪರಿಶೀಲಿಸಿ. ವಾಹನದ ಮೇಲೆ ಯಾವುದೇ ಗೀರುಗಳು, ಡೆಂಟ್‌ಗಳು, ಬಣ್ಣದ ವ್ಯತ್ಯಾಸಗಳು ಅಥವಾ ಟೈರ್ ಮತ್ತು ವಿಂಡ್‌ಶೀಲ್ಡ್‌ನಲ್ಲಿ ದೋಷಗಳಿವೆಯೇ ಎಂದು ನೋಡಿ. ಇದರೊಂದಿಗೆ ದೂರಮಾಪಕ (Odometer), ಹೆಡ್‌ಲೈಟ್‌ಗಳು, ಇಂಡಿಕೇಟರ್‌ಗಳು, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳನ್ನು ಚಾಲನೆ ಮಾಡಿ ಪರೀಕ್ಷಿಸಿ. ಮುಖ್ಯವಾಗಿ ವಾಹನ ಮತ್ತು ಅದರ ಟೈರ್‌ಗಳ ತಯಾರಿಕಾ ದಿನಾಂಕವನ್ನು (Manufacturing Date) ಪರಿಶೀಲಿಸುವುದು ಮರೆಯಬೇಡಿ.

ದಾಖಲೆಗಳನ್ನು ಕಡ್ಡಾಯವಾಗಿ ತಾಳೆ ನೋಡಿ
ವಾಹನದ ಕೀ ಪಡೆದುಕೊಳ್ಳುವ ಮುನ್ನ ಪಾವತಿಸಿದ ಹಣದ ರಶೀದಿ, ವಿಮಾ ಪಾಲಿಸಿ ಪ್ರತಿ, ಮಾಲೀಕರ ಕೈಪಿಡಿ (Owner's Manual) ಮತ್ತು ಎಲ್ಲಾ ವಾರಂಟಿ ಕಾರ್ಡ್‌ಗಳನ್ನು ಸರಿಯಾಗಿ ಪರಿಶೀಲಿಸಿ ಪಡೆಯಿರಿ. ಡೀಲರ್ ನೀಡುತ್ತೇನೆಂದು ಭರವಸೆ ನೀಡಿದ ಎಲ್ಲಾ ಕೊಡುಗೆಗಳು ಮತ್ತು ಸೌಲಭ್ಯಗಳು ಡೆಲಿವರಿ ಚಾಟ್ ಅಥವಾ ರಶೀದಿಯಲ್ಲಿ ನಮೂದಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.

ಹಬ್ಬದ ಗಡಿಬಿಡಿಯಲ್ಲಿ ಶೋರೂಂ ಸಿಬ್ಬಂದಿಯ ಆತುರಕ್ಕೆ ಮಣಿಯದೆ, ಎಲ್ಲಾ ದಾಖಲೆಗಳು ಮತ್ತು ವಾಹನದ ಸ್ಥಿತಿಯನ್ನು ಸಂಪೂರ್ಣವಾಗಿ ತೃಪ್ತಿಕರವಾಗಿ ಪರಿಶೀಲಿಸಿದ ನಂತರವೇ ವಾಹನವನ್ನು ಮನೆಗೆ ಕೊಂಡೊಯ್ಯಿರಿ. ಸಣ್ಣ ಜಾಗರೂಕತೆ ನಿಮ್ಮ ಶ್ರಮದ ಹಣವನ್ನು ಉಳಿಸುವುದಲ್ಲದೆ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಮಾನಸಿಕ ಕಿರಿಕಿರಿಯನ್ನು ತಪ್ಪಿಸುತ್ತದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES