SOCIAL MEDIA

Newsletter

PARTNER SITES
Select Language Select State

ಟ್ರಾಫಿಕ್ ಫೈನ್‌ ಕಟ್ಟದಿದ್ರೆ ವಿದ್ಯುತ್ ಬಿಲ್‌ನಲ್ಲಿ ವಸೂಲಿ ಮಾಡಿ: ಸುಪ್ರೀಂಕೋರ್ಟ್

ಬಾಕಿ ಉಳಿದಿರುವ ಟ್ರಾಫಿಕ್ ಇ-ಚಲನ್‌ಗಳ ದಂಡ ವಸೂಲಿಗೆ ಸುಪ್ರೀಂಕೋರ್ಟ್ ಮಹತ್ವದ ಸಲಹೆ ನೀಡಿದೆ. ಚಲನ್ ಪಾವತಿಸದಿದ್ದರೆ ಅದನ್ನ ವಿದ್ಯುತ್ ಬಿಲ್‌ಗೆ ಸೇರಿಸುವ ಸಾಧ್ಯತೆಯನ್ನ ಪರಿಶೀಲಿಸುವಂತೆ ನ್ಯಾಯಪೀಠ ಸೂಚಿಸಿದೆ. ದೇಶದಾದ್ಯಂತ ಸುಮಾರು ₹20,000 ಕೋಟಿ ಇ-ಚಲನ್ ದಂಡ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಸಲಹೆ ಬಂದಿದೆ. ಇದು ಸದ್ಯ ಜಾರಿಗೆ ಬಂದಿರುವ ನಿಯಮವಲ್ಲ, ನ್ಯಾಯಾಲಯದ ಸಲಹೆ ಮಾತ್ರ.

Written By Puttaraj K Alur
Published: Sep 30, 2026, 03:08 PM IST | Updated: Sep 30, 2026, 03:30 PM IST
Image Credit: Supreme Court Traffic Challan
Join

Supreme Court Traffic Challan: ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ಸಲಹೆಯೊಂದನ್ನ ನೀಡಿದೆ. ಬಾಕಿ ಇರುವ ಟ್ರಾಫಿಕ್ ಇ-ಚಲನ್‌ಗಳ ದಂಡವನ್ನ ವಿದ್ಯುತ್ ಬಿಲ್‌ಗೆ ಲಿಂಕ್ ಮಾಡುವ ಸಾಧ್ಯತೆಯನ್ನ ಪರಿಶೀಲಿಸುವಂತೆ ನ್ಯಾಯಪೀಠ ಸೂಚಿಸಿದೆ. ಆದರೆ ಇದು ಸದ್ಯಕ್ಕೆ ಜಾರಿಗೆ ಬಂದಿರುವ ನಿಯಮವಲ್ಲ; ವಿಚಾರಣೆ ವೇಳೆ ನ್ಯಾಯಪೀಠ ಮುಂದಿಟ್ಟಿರುವ ಸಲಹೆ ಮಾತ್ರ ಎಂಬುದು ಗಮನಾರ್ಹ.  

ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನ ನಿಯಂತ್ರಿಸಲು ದೇಶದಾದ್ಯಂತ ಇ-ಚಲನ್ ವ್ಯವಸ್ಥೆ ಜಾರಿಯಲ್ಲಿದೆ. ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಇ-ಚಲನ್‌ಗಳನ್ನ ಜಾರಿ ಮಾಡುತ್ತಿದ್ದಾರೆ. ಆದರೆ ಚಲನ್ ಜಾರಿ ಮಾಡಿದ ನಂತರ ಅದರ ದಂಡವನ್ನ ವಸೂಲಿ ಮಾಡುವುದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ದಂಡ ವಸೂಲಿಗೆ ಪರಿಣಾಮಕಾರಿ ಮಾರ್ಗಗಳನ್ನ ಕಂಡುಕೊಳ್ಳುವ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ವಿಚಾರಣೆ ವೇಳೆ, ಕೇವಲ ಸಾವಿರಾರು ಅಥವಾ ಲಕ್ಷಾಂತರ ಇ-ಚಲನ್‌ಗಳನ್ನ ಜಾರಿ ಮಾಡುವುದು ಸಾಕಾಗುವುದಿಲ್ಲ. ವಿಧಿಸಲಾದ ದಂಡದ ಮೊತ್ತವನ್ನ ವಸೂಲಿ ಮಾಡುವ ವ್ಯವಸ್ಥೆಯೂ ಪರಿಣಾಮಕಾರಿಯಾಗಿರಬೇಕು ಎಂದು ಅಭಿಪ್ರಾಯಪಟ್ಟಿತು.  

ವಿದ್ಯುತ್ ಬಿಲ್‌ಗೆ ಚಲನ್ ಲಿಂಕ್ ಮಾಡುವ ಸಲಹೆ

ಬಾಕಿ ಇರುವ ಟ್ರಾಫಿಕ್ ದಂಡವನ್ನ ವಸೂಲಿ ಮಾಡುವ ಮಾರ್ಗಗಳ ಕುರಿತು ಚರ್ಚೆ ನಡೆಸಿದ ನ್ಯಾಯಪೀಠ, “ಜನರು ಟ್ರಾಫಿಕ್ ಚಲನ್‌ಗಳನ್ನ ಪಾವತಿಸದಿದ್ದರೆ, ಅದನ್ನ ಅವರ ವಿದ್ಯುತ್ ಬಿಲ್‌ಗೆ ಸೇರಿಸುವ ವ್ಯವಸ್ಥೆ ರೂಪಿಸಿ” ಎಂಬ ಸಲಹೆ ಮುಂದಿಟ್ಟಿತು. ವಿದ್ಯುತ್ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ, ಈ ಮೂಲಕ ಬಾಕಿ ಇರುವ ಟ್ರಾಫಿಕ್ ದಂಡವನ್ನ ವಸೂಲಿ ಮಾಡಬಹುದು ಎಂಬ ಆಲೋಚನೆಯನ್ನ ನ್ಯಾಯಪೀಠ ವ್ಯಕ್ತಪಡಿಸಿದೆ.

ಆದರೆ ಸಾರ್ವಜನಿಕರು ಈ ಸಲಹೆಯನ್ನ ಈಗಾಗಲೇ ಜಾರಿಯಾಗಿರುವ ಹೊಸ ನಿಯಮವೆಂದು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ವಿದ್ಯುತ್ ಬಿಲ್‌ಗೆ ಚಲನ್ ಮೊತ್ತವನ್ನ ಸೇರಿಸುವ ಕುರಿತು ನ್ಯಾಯಪೀಠ ಯಾವುದೇ ತಕ್ಷಣದ ರಾಷ್ಟ್ರವ್ಯಾಪಿ ಆದೇಶ ನೀಡಿಲ್ಲ. ಈ ವ್ಯವಸ್ಥೆಯನ್ನ ಹೇಗೆ ಜಾರಿಗೆ ತರಬಹುದು ಎಂಬುದನ್ನ ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ.  

₹45,000 ಕೋಟಿ ಇ-ಚಲನ್‌ಗಳ ವಿಚಾರ

ವಿಚಾರಣೆ ವೇಳೆ ದೇಶದಾದ್ಯಂತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು ₹45,000 ಕೋಟಿ ಮೌಲ್ಯದ ಇ-ಚಲನ್‌ಗಳನ್ನ ಜಾರಿ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಈ ಪೈಕಿ ಸುಮಾರು ₹25,000 ಕೋಟಿ ವಸೂಲಾಗಿದ್ದು, ಇನ್ನೂ ₹20,000 ಕೋಟಿ ಬಾಕಿ ಉಳಿದಿದೆ ಎಂದು ವರದಿಯಾಗಿದೆ. ಇಷ್ಟು ದೊಡ್ಡ ಮೊತ್ತದ ದಂಡ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ಕೇವಲ ಚಲನ್ ಜಾರಿ ಮಾಡುವುದಕ್ಕಿಂತ ಬಾಕಿ ದಂಡವನ್ನ ಪರಿಣಾಮಕಾರಿಯಾಗಿ ವಸೂಲಿ ಮಾಡುವ ವ್ಯವಸ್ಥೆ ರೂಪಿಸುವ ಅಗತ್ಯವನ್ನ ನ್ಯಾಯಪೀಠ ಒತ್ತಿ ಹೇಳಿದೆ.

ವಾಹನ ಮಾಲೀಕರಿಗೆ ಮತ್ತಷ್ಟು ನಿರ್ಬಂಧಗಳ ಸಲಹೆ

ಟ್ರಾಫಿಕ್ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ವಾಹನಗಳ ವಿರುದ್ಧ ಇತರ ಕ್ರಮಗಳ ಬಗ್ಗೆಯೂ ನ್ಯಾಯಪೀಠ ಚರ್ಚಿಸಿದೆ. ಬಾಕಿ ಚಲನ್ ಹೊಂದಿರುವ ವಾಹನಗಳನ್ನ ಪರಿವಾಹನ್ ಪೋರ್ಟಲ್‌ನಲ್ಲಿ ಬ್ಲ್ಯಾಕ್‌ಲಿಸ್ಟ್ ಮಾಡುವುದು, ವಾಹನದ ಮಾಲೀಕತ್ವ ವರ್ಗಾವಣೆಯನ್ನ ತಡೆಯುವುದು ಹಾಗೂ ನೋಂದಣಿ ಪ್ರಮಾಣಪತ್ರದ ನವೀಕರಣಕ್ಕೆ ನಿರ್ಬಂಧ ಹೇರುವಂತಹ ಕ್ರಮಗಳನ್ನ ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ. ಇದರ ಜೊತೆಗೆ ಫಿಟ್‌ನೆಸ್ ಸರ್ಟಿಫಿಕೇಟ್, ಪಿಯುಸಿ ಪ್ರಮಾಣಪತ್ರ ಹಾಗೂ ಚಾಲನಾ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ನಿರ್ಬಂಧ ಹೇರುವ ಸಾಧ್ಯತೆಯನ್ನೂ ನ್ಯಾಯಪೀಠ ಚರ್ಚಿಸಿದೆ. ಬಾಕಿ ದಂಡ ಹೊಂದಿರುವ ವಾಹನಗಳನ್ನ ಪತ್ತೆಹಚ್ಚಲು ರಸ್ತೆಯಲ್ಲಿ ಯಾದೃಚ್ಛಿಕ ತಪಾಸಣೆ ನಡೆಸುವ ಬಗ್ಗೆಯೂ ಸಲಹೆ ನೀಡಲಾಗಿದೆ.  

ಒಟ್ನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಬಳಿಕ ದಂಡ ಪಾವತಿಸದೆ ಉಳಿಯುವವರಿಂದ ಬಾಕಿ ಮೊತ್ತವನ್ನ ವಸೂಲಿ ಮಾಡಲು ಹೊಸ ಮತ್ತು ಪರಿಣಾಮಕಾರಿ ಮಾರ್ಗಗಳನ್ನ ಕಂಡುಕೊಳ್ಳುವ ಅಗತ್ಯವನ್ನ ಸುಪ್ರೀಂಕೋರ್ಟ್ ವಿಚಾರಣೆ ವೇಳೆ ಒತ್ತಿ ಹೇಳಿದೆ. ವಿದ್ಯುತ್ ಬಿಲ್‌ಗೆ ಚಲನ್ ಲಿಂಕ್ ಮಾಡುವ ವಿಚಾರ ಸದ್ಯ ಸಲಹೆಯ ಹಂತದಲ್ಲಿದ್ದು, ಅದು ಜಾರಿಗೆ ಬಂದಿರುವ ನಿಯಮವಲ್ಲ ಎಂಬುದನ್ನ ವಾಹನ ಸವಾರರು ಗಮನದಲ್ಲಿಟ್ಟುಕೊಳ್ಳಬೇಕು.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES