SOCIAL MEDIA

Newsletter

PARTNER SITES
Select Language Select State

ಷೇರುಪೇಟೆಯಲ್ಲಿ ಯಶಸ್ಸಿಗೆ ಭಾವನಾತ್ಮಕತೆಗಿಂತ ಭರವಸೆ ನಿರ್ಧಾರ ಅಗತ್ಯ: ಕೆ.ಜಿ. ಕೃಪಾಲ್

ಷೇರುಪೇಟೆಗೆ ಹೊಸ ಹೂಡಿಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ, ಆರ್ಥಿಕ ಸಾಕ್ಷರತೆ ಮತ್ತು ಜಾಗೃತಿಯೊಂದಿಗೆ ಹೂಡಿಕೆ ಮಾಡುವುದು ಅಗತ್ಯ ಎಂದು ಈ ಲೇಖನ ಒತ್ತಿಹೇಳುತ್ತದೆ. ಮಾಧ್ಯಮಗಳ ಟಿಪ್ಸ್‌ ಮತ್ತು ಶಿಫಾರಸುಗಳನ್ನು ಮಾತ್ರ ಅವಲಂಬಿಸದೆ, ಕಂಪನಿಯ ಸಾಧನೆ, ನಿರ್ವಹಣೆ ಹಾಗೂ ಮೌಲ್ಯವನ್ನು ಪರಿಶೀಲಿಸಬೇಕು. IPO ಮತ್ತು OFS ನಡುವಿನ ವ್ಯತ್ಯಾಸವನ್ನು ಅರಿತು, ಭಾವನಾತ್ಮಕತೆಯ ಬದಲು ಮೌಲ್ಯಾಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಸೂಕ್ತ ಸಮಯದಲ್ಲಿ ಲಾಭವನ್ನು ನಗದೀಕರಿಸುವುದು ಷೇರುಪೇಟೆಯಲ್ಲಿ ಅಪಾಯವನ್ನು ಕಡಿಮೆ ಮಾಡಲು ಸಹಾಯಕ ಎಂದು ಈ ಲೇಖನವು ತಿಳಿಸುತ್ತದೆ.

Edited By Puttaraj K Alur
Published: Oct 03, 2026, 07:18 PM IST | Updated: Oct 03, 2026, 08:16 PM IST
Image Credit: Stock Market Success
Join

ಷೇರುಪೇಟೆ ಎಂಬ ಮಾಯಾಲೋಕ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಒಂದು ಲಕ್ಷಕ್ಕೂ ಹೆಚ್ಚಿನ ಹೊಸ ಹೂಡಿಕೆದಾರರು ಪೇಟೆಯ ಚಟುವಟಿಕೆಗೆ ಹೊಸದಾಗಿ ಪ್ರವೇಶಕ್ಕೆ ನೋಂದಾಯಿಸಿಕೊಳ್ಳುತ್ತಿದ್ದಾರೆ. ಈ ಸಂಖ್ಯೆಯು ಈಗಾಗಲೇ ಸುಮಾರು 26 ಕೋಟಿ ದಾಟಿದೆ. 2020ರಲ್ಲಿ ಈ ಸಂಖ್ಯೆಯು ಸುಮಾರು 5 ಕೋಟಿ ಇತ್ತು. ಇದು ಜನಸಾಮಾನ್ಯರಲ್ಲಿ ಷೇರುಪೇಟೆ ಬಗ್ಗೆ ಮೂಡುತ್ತಿರುವ ಕುತೂಹಲ, ಆಸಕ್ತಿಗೆ ನಿದರ್ಶನವಾಗಿದೆ. ಇದು ಸದ್ಯಕ್ಕೆ ಪ್ರೋತ್ಸಾಹದಾಯಕ ವಿಚಾರವಾಗಿದೆ. ಆದರೆ ಈ ಹೊಸ ಹೂಡಿಕೆದಾರರಿಗೆ ಷೇರುಪೇಟೆ ವಿಚಾರದಲ್ಲಿ ಎಷ್ಟರಮಟ್ಟಿಗೆ ಮಾಹಿತಿ, ಅರಿವು, ಜಾಗೃತಿ ಇದೆ ಎಂಬುದು ಮುಖ್ಯ.

ಷೇರುಪೇಟೆ, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ತೇಲಿಬರುತ್ತಿರುವ ಅಗಾಧವಾದ ಸಂಪನ್ಮೂಲಕ್ಕೆ ಅನುಗುಣವಾಗ ಷೇರುಪೇಟೆಯಲ್ಲಿ ಲಭ್ಯವಿರುವ ಕಂಪನಿಗಳ ಸಂಖ್ಯೆ, ವಿಶೇಷವಾಗಿ ಅತ್ಯಧಿಕ ಲಿಸ್ಟಿಂಗ್ ಕಂಪನಿಗಳು, ಬಿಎಸ್‌ಇಯಲ್ಲಿ ಈಗ ಸುಮಾರು 5 ಸಾವಿರ ಕಂಪನಿಗಳಿದ್ದು, ಅದರಲ್ಲಿ ಕೆಲವು ಅಮಾನತುಗೊಂಡಿವೆ, ಕೆಲವು ನಿಯಂತ್ರಿತ ವ್ಯವಸ್ಥೆಯ ಕಾರಣ ವಾರಕ್ಕೊಮ್ಮೆ ವಹಿವಾಟಾಗುತ್ತವೆ, ಕೆಲವು ದಿನನಿತ್ಯ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ. ಹಾಗಾಗಿ ವಹಿವಾಟಾಗುತ್ತಿರುವ ಕಂಪನಿಗಳ ಸಂಖ್ಯೆ ಸುಮಾರು 4,500ರ ಸಮೀಪವಿರುತ್ತದೆ.

ಈ ಕಾರಣ ಹೂಡಿಕೆದಾರರ ದಟ್ಟಣೆಯಿಂದ ಷೇರುಪೇಟೆಗಳು ತುಂಬಿವೆ. ನಮ್ಮ ದೇಶದಲ್ಲಿ ಶೇ.27ರಷ್ಟು ಜನ ಮಾತ್ರ ಆರ್ಥಿಕ ಸಾಕ್ಷರತಾ ಮಟ್ಟದಲ್ಲಿದ್ದು, ಆರ್ಥಿಕ ಸಾಕ್ಷರತಾ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಈ ಕಾರಣ ಆರ್ಥಿಕ ಚಟುವಟಿಕೆಗಳಲ್ಲಿ, ವಿಶೇಷವಾಗಿ ಷೇರುಪೇಟೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವವರು ಮಾಧ್ಯಮಗಳಲ್ಲಿ ತೇಲಿಬರುವ ಟಿಪ್ಸ್‌, ಶಿಫಾರಸುಗಳನ್ನು ಅವಲಂಬಿಸಿ ಚಟುವಟಿಕೆ ನಡೆಸುವರು. ಈ ವಿಚಾರಗಳು ಎಷ್ಟರಮಟ್ಟಿಗೆ ಸರಿ ಇರುತ್ತವೆ ಎಂಬ ಅಂಶಗಳನ್ನು ತುಲನೆ ಮಾಡುವ ವಿಚಾರದ ಅರಿವು ಹೆಚ್ಚಿನವರಲ್ಲಿರುವುದಿಲ್ಲ.

ಷೇರುಪೇಟೆ ಹೂಡಿಕೆ, ಚಿನ್ನ ಬೆಳ್ಳಿಗಳ ಮೇಲೆ ಹೂಡಿಕೆ ಮಾಡುವ ವಿಧಗಳಿಗಿಂತ ವಿಭಿನ್ನವಾದ ವಿಚಾರಗಳಾಗಿವೆ. ಚಿನ್ನ ಬೆಳ್ಳಿಗಳು ಆಂತರಿಕವಾಗಿ ಜಡವಾದವುಗಳಾಗಿವೆ. ಆದರೆ ಷೇರುಪೇಟೆ ಹೂಡಿಕೆಯಲ್ಲಿ ಸಂಬಂಧಿತ ಕಂಪನಿಗಳ ಉತ್ಪಾದನೆ, ಬೇಡಿಕೆ, ಗುಣಮಟ್ಟ, ಸಾಧನೆಗಳೊಂದಿಗೆ ಕಂಪನಿಯ ಗಾತ್ರ, ಕಾರ್ಯವೈಖರಿ, ಎಲ್ಲಕ್ಕೂ ಮಿಗಿಲಾಗಿ ಆಡಳಿತ ಮಂಡಳಿಗಳ ಚಿಂತನೆ ಅಂದರೆ ಅವರ ನಡೆ, ಕಾರ್ಯವೈಖರಿಗಳು ಹೂಡಿಕೆದಾರರ ಹಿತದಲ್ಲಿದೆಯೇ ಎಂಬ ಅಂಶಗಳ ಪ್ರಭಾವಿಯಾಗುತ್ತವೆ. ಇವೆಲ್ಲವೂ ನಿಖರವಾಗಿ ಮಾಪನ ಮಾಡುವಂತಹ ಮಾನದಂಡ ಹೊಂದಿರದೆ ಬದಲಾಗುತ್ತಿರುತ್ತವೆ. ಅದಕ್ಕನುಗುಣವಾಗಿ ವಿಶ್ಲೇಷಣೆಗಳು, ಚಿಂತನೆಗಳು ಬೇಡಿಕೆ-ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡುತ್ತವೆ. ಈ ಕಾರಣ ಷೇರಿನ ಬೆಲೆಗಳಲ್ಲಿ ಏರಿಳಿತಗಳನ್ನುಂಟುಮಾಡುತ್ತವೆ.

ಈಗ ಚಟುವಟಿಕೆಗಳು ಅಭೌತಿಕ ರೂಪದಲ್ಲಿ ಚುಕ್ತಾ ಆಗುವುದರಿಂದ ಚುಕ್ತಾ ಚಕ್ರದಲ್ಲಿ ವಿಳಂಬವಾಗದೆ ಸುಲಭವಾಗಿ ಪೂರ್ಣಗೊಳ್ಳಲು ಸಾಧ್ಯವಾಗುವಂತೆ ನಿಯಮಿತ ಸಮಯದಲ್ಲಿ ವಿಲೇವಾರಿ-ಪಾವತಿಗಳು ಸುಸೂತ್ರವಾಗಿರುತ್ತವೆ. ಆದರೆ ಸಣ್ಣ ಹೂಡಿಕೆದಾರರಲ್ಲಿರುವ ಮಾಹಿತಿ ಮತ್ತು ಅರಿವಿನ ಕೊರತೆಯನ್ನು ಅನೇಕರು, ಕಂಪನಿಗಳು ತಮ್ಮ ಹಿತಕ್ಕಾಗಿ ಬಳಸಿಕೊಳ್ಳುವುದಕ್ಕೂ ಸಾಧ್ಯವಿದೆ. ಮೊದಲಿಗೆ ಅರಿಯಬೇಕಾಗಿರುವ ಅಂಶ ಎಂದರೆ ಆರಂಭಿಕ ಷೇರು ವಿತರಣೆ ಮತ್ತು ಮರು ಮಾರಾಟ ವಿಧಗಳ ನಡುವೆ ಇರುವ ವ್ಯತ್ಯಾಸ. ಸದ್ಯದ ಪರಿಸ್ಥಿತಿಯಲ್ಲಿ ಅನೇಕರಿಗೆ ಇವೆರಡರ ನಡುವಿನ ವ್ಯತ್ಯಾಸದ ಅರಿವೇ ಇರುವುದಿಲ್ಲ. ಆರಂಭಿಕ ಷೇರು ವಿತರಣೆ ಎಂದರೆ IPO (Initial Public Offer) ಮತ್ತು ಮರು ಮಾರಾಟ ವಿಧ ಎಂದರೆ OFS (Offer For Sale). ಆರಂಭಿಕ ಷೇರು ವಿತರಣೆ ಎಂದರೆ ವಿತರಿಸುತ್ತಿರುವ ಕಂಪನಿಯು ಈ ಮೂಲಕ ತನ್ನ ಬಂಡವಾಳದ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. ಅಂದರೆ ಸಂಗ್ರಹಣೆಯಾದ ಹಣವು ನೇರವಾಗಿ ಕಂಪನಿಯ ಖಜಾನೆಗೆ ಸೇರುತ್ತದೆ ಎಂದು. ಇದು ಸಹಜವಾಗಿ ಹೊಸದಾಗಿ ವಿತರಣೆಯಾಗುತ್ತಿರುವ ಷೇರುಗಳಾಗಿವೆ.

ಮರು ಮಾರಾಟ — OFS

ಮತ್ತೊಂದು ವಿಧ ಮರು ಮಾರಾಟ ವಿಧ. ಇದರ ಮೂಲಕ ಹೊಸ ಷೇರುಗಳನ್ನು ವಿತರಿಸುವುದಿಲ್ಲ. ಈಗಾಗಲೇ ಇರುವ ಷೇರುದಾರರು ತಮ್ಮಲ್ಲಿರುವ ಷೇರುಗಳನ್ನು ಮಾರಾಟ ಮಾಡುತ್ತಿರುವ ಪ್ರಕ್ರಿಯೆ. ಈ ವಿಧದಿಂದ ಕಂಪನಿಯ ಬಂಡವಾಳ ಗಾತ್ರದಲ್ಲಿ ಯಾವುದೇ ರೀತಿಯ ಬದಲಾವಣೆಯಾಗದೆ, ಮಾರಾಟ ಮಾಡುವ ಷೇರುದಾರರಿಂದ ಖರೀದಿಸುವ ಷೇರುದಾರರಿಗೆ ಕೈಬದಲಾಗುತ್ತದೆ. ಇತ್ತೀಚೆಗೆ ವಿತರಣೆಯಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಷೇರುಗಳ ಸಹ ಮರು ಮಾರಾಟವೇ ಹೊರತು ಅದು ಆರಂಭಿಕ ಷೇರು ವಿತರಣೆಯಲ್ಲ. ಹಾಗೆಯೇ 2017ರಲ್ಲಿ ಬಿಎಸ್‌ಇ ಲಿಮಿಟೆಡ್ ವಿತರಣೆ ಮರು ಮಾರಾಟ ವಿಧವಾಗಿತ್ತು. ಇತ್ತೀಚೆಗೆ ಹೊಸದಾಗಿ ಪೇಟೆ ಪ್ರವೇಶಿಸುತ್ತಿರುವ ಕಂಪನಿಗಳಲ್ಲಿ ಎರಡು ವಿಧಗಳ ಸಮ್ಮಿಶ್ರ ಶೈಲಿ ಅಳವಡಿಕೆಯಾಗಿದ್ದು, ಅಂದರೆ ಆರಂಭಿಕ ಷೇರು ವಿತರಣೆಯೊಂದಿಗೆ ಹಾಲಿ ಷೇರುದಾರರು ತಮ್ಮ ಪಾಲ್ತಿಯ ಷೇರುಗಳನ್ನು ಪೂರ್ಣವಾಗಿ ಅಥವಾ ಭಾಗಶಃವಾಗಿ ಮಾರಾಟ ಮಾಡುತ್ತಿರುವುದು ಸಹಜ ಪ್ರಕ್ರಿಯೆಯಾಗುತ್ತಿದೆ.

ಈ ಹಿಂದೆ ಇನ್ಫೋಸಿಸ್‌ನಂತಹ ಕಂಪನಿಗಳು ಆರಂಭಿಕ ಷೇರು ವಿತರಣೆ ಮಾಡಿದ ಸಮಯದಲ್ಲಿ ಈ ರೀತಿಯ ದ್ವಂದ್ವ ಚಿಂತನೆಗಳಿರದೆ, ಸಂಗ್ರಹಿಸಿದ ಮೊತ್ತವು ಸಂಪೂರ್ಣವಾಗಿ ಕಂಪನಿಯ ಖಜಾನೆಗೆ ಸೇರುತ್ತಿತ್ತು. ಈಗ ಷೇರು ಮರು ಮಾರಾಟ ವಿಧಗಳ ಮೂಲಕ ಅನೇಕ ತೆರೆಮರೆಯಲ್ಲಿರುವ, ಅಂದರೆ ವೈವಿಧ್ಯಮಯ ಕಾರಣಗಳಿಂದ ಅಮಾನತುಗೊಂಡ ಕಂಪನಿಗಳು ಪುನಶ್ಚೇತನಗೊಂಡು ಪೇಟೆಯಲ್ಲಿ ಮರುಲಿಸ್ಟಿಂಗ್ ಮಾಡಿಕೊಳ್ಳಲು ಯಶಸ್ವಿಯಾಗಿವೆ. ಅಂತಹ ಪಟ್ಟಿಯಲ್ಲಿ ಒಂದು ಹೆಸರಿಸಬಹುದಾದ ಕಂಪನಿ ಎಂದರೆ ಇಂಡೋ ಸೋಲಾರ್ ಲಿಮಿಟೆಡ್. ಈ ಕಂಪನಿಯು ತನ್ನ ರೂ.10ರ ಮುಖಬೆಲೆ ಷೇರನ್ನು 2010ರಿಂದಲೇ ಲಿಸ್ಟಿಂಗ್ ಮಾಡಿಕೊಂಡು ಚಟುವಟಿಕೆಗೊಳಗಾಗಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನ ಕಾರಣ ಅಮಾನತುಗೊಂಡಿತು. 2022ರಲ್ಲಿ ಕಂಪನಿ ಕಾನೂನು ನ್ಯಾಯಮಂಡಳಿವಾರಿ ಸಮೂಹದ ಸಾಲ ಪರಿಹಾರ ಯೋಜನೆಯನ್ನು ಅಂಗೀಕರಿಸಿದ ಕಾರಣ ಇಂಡೋ ಸೋಲಾರ್ ಕಂಪನಿಯು ವಾರೀ ಸಮೂಹದ ತೆಕ್ಕೆಗೆ ಸೇರಿತು.

ಈ ಯೋಜನೆಯಂತೆ ಕಂಪನಿಯ ಷೇರುಗಳನ್ನು 37.2 ಕೋಟಿಯಿಂದ 37.2 ಲಕ್ಷ ಷೇರುಗಳಿಗೆ ಇಳಿಸಿ ಉಳಿದ ಷೇರುಗಳನ್ನು ಕಡಿತಗೊಳಿಸಲಾಯಿತು. ಮೊದಲಿನ ಪ್ರವರ್ತಕರ ಪಾಲನ್ನು ಸಂಪೂರ್ಣವಾಗಿ ಶೂನ್ಯೀಕರಿಸಲಾಯಿತು. 2025ರ ಜೂನ್ ತಿಂಗಳಲ್ಲಿ ಹೊಸ ಪ್ರವರ್ತಕರ ತೆಕ್ಕೆಗೆ ಸೇರಿದ ನಂತರ 4,76,495 ಷೇರುಗಳನ್ನು ಮುಖಬೆಲೆ ರೂ.10ರಂತೆ ಮರುಮಾರಾಟ ಮಾಡಲಾಯಿತು. ಉತ್ತಮ ಸ್ಪಂದನೆ ದೊರೆಯಿತು. ಈ ಸ್ಪಂದನೆಯ ಪ್ರೇರಣೆಯಿಂದ ನಂತರದ ತಿಂಗಳು ಜುಲೈನಲ್ಲಿ 10 ಲಕ್ಷ ಷೇರುಗಳನ್ನು ಮರುಮಾರಾಟ (OFS) ಮಾಡಲು ಪ್ರವರ್ತಕರು ಮುಂದಾದರು. ಈ ಮರುಮಾರಾಟದ ಸಮಯದಲ್ಲಿ ಹೆಚ್ಚಿನ ಪ್ರೀಮಿಯಂ ಅಂದರೆ ರೂ.265ರ ಮೂಲಬೆಲೆಯಲ್ಲಿ ಮಾರಾಟ ಮಾಡಲು ಮುಂದಾದರು. ಆದರೆ ಸಾರ್ವಜನಿಕ ಸ್ಪಂದನೆ ಅತ್ಯಧಿಕವಾಗಿದ್ದ ಕಾರಣ ವಿತರಣೆಯ ಬೆಲೆಯನ್ನು ರೂ.378.80ರಂತೆ ನಿಗದಿಪಡಿಸಲಾಯಿತು. ಈ ರೀತಿಯ ಅಭೂತಪೂರ್ವ ಸ್ಪಂದನೆ ಮತ್ತು ಜನಬೆಂಬಲದಿಂದ ಪ್ರೇರಿತರಾಗಿ ಪ್ರವರ್ತಕರು ಮತ್ತೆ ಸೆಪ್ಟೆಂಬರ್ 2025ರಲ್ಲಿ 61 ಲಕ್ಷ ಷೇರುಗಳನ್ನು ಮರುಮಾರಾಟ ಮಾಡಲು ಮುಂದಾದರು. ಆದರೆ ಈ ಬಾರಿ ಮೂಲಬೆಲೆಯನ್ನು ರೂ.500ರಂತೆ ನಿಗದಿಪಡಿಸಲಾಯಿತು.

ಪೇಟೆಗೆ ನುಸುಳುತ್ತಿರುವ ಹೊಸ ಹೊಸ ಹೂಡಿಕೆದಾರರಲ್ಲಿ ಷೇರು ಖರೀದಿ, ಅದರಲ್ಲೂ ಸೋಲಾರ್ ವಲಯದ ಕಂಪನಿ ಎಂಬ ಭಾವನೆಯು ಭಾರೀ ಪ್ರಮಾಣದ ಬೇಡಿಕೆಯನ್ನು ಉಂಟುಮಾಡಿತು. ಈ ಕಾರಣ ಷೇರಿನ ಬೇಡಿಕೆ ಅತಿಹೆಚ್ಚಿದ್ದು ಅಂತಿಮ ಬೆಲೆಯನ್ನು ರೂ.612ಕ್ಕೆ ನಿಗದಿಪಡಿಸಲಾಯಿತು. ಜೂನ್ ತಿಂಗಳಲ್ಲಿ ರೂ.10ರಂತೆ ಮಾರಾಟ ಮಾಡಿದ ಕಂಪನಿ, ಜುಲೈನಲ್ಲಿ ರೂ.378.80ರಂತೆ ಮಾರಾಟ ಮಾಡಿತು, ಸೆಪ್ಟೆಂಬರ್‌ನಲ್ಲಿ ರೂ.612ಕ್ಕೆ ಮಾರಾಟದ ಬೆಲೆ ನಿಗದಿಪಡಿಸಿತು ಎಂದರೆ ನಮ್ಮ ಸಣ್ಣ ಹೂಡಿಕೆದಾರರಲ್ಲಿ ಷೇರುಗಳ ಬಗ್ಗೆ ಕೇವಲ ಭಾವನಾತ್ಮಕತೆ ಬೇರೂರಿದೆ ಎಂಬುದನ್ನು ತೋರಿಸುತ್ತದೆ. ಕೇವಲ ಮೂರು-ನಾಲ್ಕು ತಿಂಗಳಲ್ಲಿ ರೂ.10ರಿಂದ ರೂ.612ರವರೆಗೆ OFSನಲ್ಲಿ ಮಾರಾಟ ಮಾಡಲಾಗಿದೆ. ಆದರೆ ಈ ಏರಿಕೆಯ ಹಿಂದೆ ಕಂಪನಿಯ ಸಾಧನೆ ಅಡಕವಾಗಿದೆಯೇ ಎಂಬ ಚಿಂತನೆ ಕಣ್ಮರೆಯಾಗುತ್ತದೆ. ನಂತರದ ತಿಂಗಳಲ್ಲಿ ಅಂದರೆ 2025ರ ಅಕ್ಟೋಬರ್ ತಿಂಗಳಲ್ಲಿ ಷೇರಿನ ಬೆಲೆ ವಾರ್ಷಿಕ ಗರಿಷ್ಠ ರೂ.725ರವರೆಗೆ ಜಿಗಿಯಿತು. ಇದರ ನಂತರ ‘ಲಿಫ್ಟ್’ನಲ್ಲಿ ಇಳಿದು ಬರುತ್ತದ್ದು, ಅಕ್ಟೋಬರ್ 2026ರ ದಿನಾಂಕ 1ರಂದು ರೂ.199ರ ಸಮೀಪಕ್ಕೆ ಜಾರಿ ವಾರ್ಷಿಕ ಕನಿಷ್ಠಕ್ಕೆ ಕುಸಿದಿದೆ.

ದೀರ್ಘಕಾಲೀನ ಹೂಡಿಕೆ ಎಂಬ ಚಿಂತನೆಯಿಂದ ಹೆಚ್ಚಿನ ಬೆಲೆಯಲ್ಲಿ ಹೂಡಿಕೆ ಮಾಡಿದವರು ಶಾಶ್ವತ ಹೂಡಿಕೆದಾರರಾಗಬಹುದು, ಲಾಭ ಗಳಿಕೆ ಅವಕಾಶ ವಂಚಿತರಾಗಬಹುದು. ಈ ಹಂತದಲ್ಲಿ ಷೇರಿನ ಬೆಲೆ ಕುಸಿತ ಕಂಡಂತಹ ಈ ವಾತಾವರಣದ ಬಳಕೆ ಮಾಡಿಕೊಳ್ಳಲು ಕಂಪನಿಯ ಪ್ರವರ್ತಕರಾದ ವಾರೀ ಸಮೂಹವು ಈ ಕಂಪನಿಯನ್ನು ತನ್ನ ಅಗ್ರ ಕಂಪನಿ ವಾರೀ ಎನರ್ಜೀಸ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಿಕೊಳ್ಳಲು ನಿರ್ಧರಿಸಿದೆ. ವಿಲೀನದ ಅನುಪಾತ ಅನೇಕರಿಗೆ ಆಘಾತಕಾರಿಯಾಗಿದೆ. ಪ್ರತಿ **11 ಷೇರು ಇಂಡೋ ಸೋಲಾರ್ ಲಿಮಿಟೆಡ್‌ಗೆ 1 ಷೇರು ವಾರೀ ಎನರ್ಜೀಸ್ ಲಿಮಿಟೆಡ್ ಷೇರು ನೀಡುವ ಅನುಪಾತ ಈಗಿನ ಪೇಟೆಯ ದರವನ್ನು ಆಧರಿಸಿ ನಿರ್ಧರಿಸಿರುವುದು ಆಡಳಿತಾತ್ಮಕವಾಗಿ ಸ್ವಾಗತಾರ್ಹ ಬೆಳವಣಿಗೆಗಳಾದರೂ, ಒಂದು ವರ್ಷದ ಹಿಂದೆ ರೂ.600ರ ಸಮೀಪ ಖರೀದಿಸಿದವರ ಗತಿ ಏನು? ಪ್ರವರ್ತಕ ಕಂಪನಿಯಾದ ವಾರೀ ಎನರ್ಜೀಸ್ ಲಿಮಿಟೆಡ್ ಷೇರಿನ ಬೆಲೆಯ ಸಹ 2026ರ ಅಕ್ಟೋಬರ್ 1ರಿಂದ ವಾರ್ಷಿಕ ಕನಿಷ್ಠಕ್ಕೆ ಜಾರಿದೆ.

ಕೊನೆಯ ಸಂದೇಶ

ಷೇರುಪೇಟೆಯ ಚಟುವಟಿಕೆಗಳಲ್ಲಿ ಯಶಸ್ಸು ಕಾಣಬೇಕೆಂದರೆ ‘ಮೌಲ್ಯಾಧಾರಿತ ಖರೀದಿ-ಗರಿಷ್ಠದ ಹಂತದಲ್ಲಿ ಲಾಭದ ನಗದೀಕರಣ’ ಶೈಲಿಯಿಂದಲೇ ಇಂದಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಸುರಕ್ಷತೆಯಿಂದ ಕೂಡಿರಲು ಸಾಧ್ಯ. “SETTLEMENT SHOULD BE PRIORITY THAN THE SENTIMENTS”

ಲೇಖಕರು:  ಕೆ.ಜಿ. ಕೃಪಾಲ್ (ಆರ್ಥಿಕ ಅಂಕಣಕಾರರು, ಷೆೇರುಪೆೇಟೆ ಮಧ್ಯವರ್ತಿಗಳು, ತರಬೆೇತುದಾರರು ʼಷೆೇರುಪೆೇಟೆ ವಿಚಾರ ಮಂಟಪʼ ಸ್ಥಾಪಕ ಸಂಚಾಲಕರು)

(Disclaimer: "ಆರ್ಥಿಕ ಸಾಕ್ಷರತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಷ್ಟೇ" ಈ ಲೇಖನವನ್ನು ಬರೆಯಲಾಗಿದೆ. ಇದು ಯಾವುದೇ ರೀತಿಯ ಷೇರುಗಳನ್ನು ಕೊಳ್ಳಲು ಪ್ರಚೋದಿಸುವುದಿಲ್ಲ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ನಿಮ್ಮ ಚಿಂತನೆ , ವಿವೇಚನೆ, ಬಳಸಿಕೊಂಡು, ಅಗತ್ಯವೆನಿಸಿದರೆ ತಮ್ಮ ಹಣಕಾಸು ಸಲಹೆಗಾರರನ್ನು  ಸಂಪರ್ಕಿಸಿ ಸೂಕ್ತವಾಗಿ ನಿರ್ಧರಿಸಿ. ಯಾವುದೇ ರೀತಿಯ ಆಗುಹೋಗುಗಳಿಗೆ Zee Kannada News ಹಾಗೂ ಆರ್ಥಿಕ ಅಂಕಣಕಾರರು ಜವಾಬ್ದಾರಿಯಾಗಿರುವುದಿಲ್ಲ.)

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES