SOCIAL MEDIA

Newsletter

PARTNER SITES
Select Language Select State

ಅಕ್ಟೋಬರ್ 1ರಿಂದ LPG ನಿಯಮ ಬದಲು: ಈ ಕೆಲಸ ಮಾಡದಿದ್ರೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ಸಿಗಲ್ಲ!

ಅಕ್ಟೋಬರ್‌ 1, 2026ರಿಂದ LPG ಸಬ್ಸಿಡಿ ದರದಲ್ಲಿ ಸಿಲಿಂಡರ್‌ ಪಡೆಯಲು ಬಯೋಮೆಟ್ರಿಕ್‌ ಆಧಾರ್‌ ದೃಢೀಕರಣ (BAA) ಅಗತ್ಯವಾಗಲಿದೆ. ಈಗಾಗಲೇ ಈ ಪ್ರಕ್ರಿಯೆ ಪೂರ್ಣಗೊಳಿಸಿರುವವರಿಗೆ ಯಾವುದೇ ಹೆಚ್ಚುವರಿ ಕ್ರಮ ಬೇಕಿಲ್ಲ. ಇನ್ನೂ ಮಾಡಿಸದವರು LPG ವಿತರಕರು ಅಥವಾ ಸಂಬಂಧಪಟ್ಟ OMC ಆ್ಯಪ್‌ ಮೂಲಕ BAA ಪೂರ್ಣಗೊಳಿಸಬಹುದು. Aadhaar ಲಿಂಕ್‌ ಮಾಡಿರುವುದು ಮತ್ತು ಬಯೋಮೆಟ್ರಿಕ್‌ ದೃಢೀಕರಣ ಪೂರ್ಣಗೊಳಿಸಿರುವುದು ಒಂದೇ ಅಲ್ಲ.

Reported By Puttaraj K Alur Written By Puttaraj K Alur
Published: Sep 20, 2026, 08:01 PM IST | Updated: Sep 20, 2026, 08:15 PM IST
Image Credit: LPG Subsidy Rule
Join

LPG Rule Change From October 1st: ದೇಶದ ಕೋಟ್ಯಂತರ LPG ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಅಪ್‌ಡೇಟ್‌ ಬಂದಿದೆ. 2026ರ ಅಕ್ಟೋಬರ್ 1ರಿಂದ ಸಬ್ಸಿಡಿ ಅನ್ವಯವಾಗುವ ದರದಲ್ಲಿ LPG ರಿಫಿಲ್ ಬುಕ್ ಮಾಡಲು ಬಯೋಮೆಟ್ರಿಕ್ ಆಧಾರ್ ದೃಢೀಕರಣ (Biometric Aadhaar Authentication - BAA) ಪೂರ್ಣಗೊಳಿಸಿರುವುದು ಅಗತ್ಯವಾಗಲಿದೆ. ಈಗಾಗಲೇ ಈ ಪ್ರಕ್ರಿಯೆ ಪೂರ್ಣಗೊಳಿಸಿರುವ ಗ್ರಾಹಕರು ಮತ್ತೆ ಯಾವುದೇ ಕ್ರಮ ಕೈಗೊಳ್ಳಬೇಕಿಲ್ಲ. ಅವರ LPG ರಿಫಿಲ್‌ಗಳು ಹಿಂದಿನಂತೆಯೇ ಮುಂದುವರಿಯಲಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.  

ಈಗಾಗಲೇ 27.43 ಕೋಟಿ ಗ್ರಾಹಕರು ಪೂರ್ಣಗೊಳಿಸಿದ್ದಾರೆ

ಸಚಿವಾಲಯದ ಸೆಪ್ಟೆಂಬರ್ 19ರ ಮಾಹಿತಿಯ ಪ್ರಕಾರ, ದೇಶದಲ್ಲಿ 27.43 ಕೋಟಿ ಸಕ್ರಿಯ ಗೃಹಬಳಕೆಯ LPG ಗ್ರಾಹಕರು, ಅಂದರೆ ಒಟ್ಟು ಗ್ರಾಹಕರ ಪೈಕಿ ಶೇ.89.9ರಷ್ಟು ಮಂದಿ ಈಗಾಗಲೇ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಿದ್ದಾರೆ. ಈ ಗ್ರಾಹಕರು ಮತ್ತೆ e-KYC ಅಥವಾ ಬಯೋಮೆಟ್ರಿಕ್ ದೃಢೀಕರಣ ಮಾಡಬೇಕಾಗಿಲ್ಲ. ಆದರೆ ಇನ್ನೂ ಈ ಪ್ರಕ್ರಿಯೆ ಪೂರ್ಣಗೊಳಿಸದಿರುವ ಗ್ರಾಹಕರು ಅಕ್ಟೋಬರ್ 1ರೊಳಗೆ BAA ಪೂರ್ಣಗೊಳಿಸುವಂತೆ ಸರ್ಕಾರ ಸೂಚಿಸಿದೆ. ಇದರಿಂದ ಸಬ್ಸಿಡಿ ಅನ್ವಯವಾಗುವ ನಿಯಂತ್ರಿತ ದರದಲ್ಲಿ LPG ರಿಫಿಲ್ ಪಡೆಯುವ ಸೌಲಭ್ಯ ಮುಂದುವರಿಯಲಿದೆ.

LPG ಸಂಪರ್ಕ ಬಂದ್ ಆಗುತ್ತಾ?

ಇದು ಗ್ರಾಹಕರಲ್ಲಿ ಹೆಚ್ಚು ಗೊಂದಲ ಉಂಟುಮಾಡುತ್ತಿರುವ ಪ್ರಶ್ನೆ. ಬಯೋಮೆಟ್ರಿಕ್ ದೃಢೀಕರಣ ಮಾಡದಿದ್ದರೆ LPG ಸಂಪರ್ಕವನ್ನೇ ಕಡಿತಗೊಳಿಸಲಾಗುತ್ತದೆ ಎಂಬುದು ಸರಿಯಲ್ಲ. ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, BAA ಪ್ರಕ್ರಿಯೆಯ ಉದ್ದೇಶ ಯಾವುದೇ ನಿಜವಾದ ಗೃಹಬಳಕೆದಾರರಿಗೆ LPG ಪೂರೈಕೆ ನಿರಾಕರಿಸುವುದಲ್ಲ. ಆದರೆ ಸಬ್ಸಿಡಿ ಅನ್ವಯವಾಗುವ ದರದಲ್ಲಿ ರಿಫಿಲ್ ಪಡೆಯಲು ದೃಢೀಕರಣ ಪೂರ್ಣಗೊಳಿಸಬೇಕಾಗುತ್ತದೆ. BAA ಮಾಡದ ಗ್ರಾಹಕರು ತಮ್ಮ ಆಯ್ಕೆಯನ್ನ ಸಂಬಂಧಪಟ್ಟ Oil Marketing Companyಯ ಡಿಜಿಟಲ್ ಚಾನೆಲ್‌ಗಳ ಮೂಲಕ ನೋಂದಾಯಿಸಿದರೆ, ಲಭ್ಯತೆಯ ಆಧಾರದ ಮೇಲೆ ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಪಡೆಯಬಹುದು. ಸರ್ಕಾರದ ಪ್ರಕಟಣೆಯ ಪ್ರಕಾರ, ಇಂತಹ ಗ್ರಾಹಕರಿಗೆ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್‌ಗಳ ಆಯ್ಕೆಯೂ ಲಭ್ಯವಿರಬಹುದು.  

Aadhaar ಲಿಂಕ್ ಮಾಡಿದ್ದರೆ ಸಾಕೇ?

ಇಲ್ಲಿ ಗ್ರಾಹಕರು ಮುಖ್ಯವಾಗಿ ಗಮನಿಸಬೇಕಾದ ಅಂಶವಿದೆ. ಗ್ಯಾಸ್ ಸಂಪರ್ಕಕ್ಕೆ Aadhaar ಲಿಂಕ್ ಮಾಡಿರುವುದು ಮತ್ತು ಬಯೋಮೆಟ್ರಿಕ್ Aadhaar Authentication ಪೂರ್ಣಗೊಳಿಸಿರುವುದು ಒಂದೇ ವಿಷಯವಲ್ಲ. Aadhaar seeding ಎಂದರೆ ಗ್ರಾಹಕರ Aadhaar ಸಂಖ್ಯೆಯನ್ನ LPG ಸಂಪರ್ಕದೊಂದಿಗೆ ಜೋಡಿಸಿರುವುದು. ಆದರೆ BAA ಸಂದರ್ಭದಲ್ಲಿ ಗ್ರಾಹಕರು ತಮ್ಮ ಗುರುತನ್ನ ಬಯೋಮೆಟ್ರಿಕ್ ಅಥವಾ ಲಭ್ಯವಿರುವ ಡಿಜಿಟಲ್ ದೃಢೀಕರಣ ವಿಧಾನಗಳ ಮೂಲಕ ಪರಿಶೀಲಿಸಬೇಕಾಗುತ್ತದೆ. ಹೀಗಾಗಿ ನಿಮ್ಮ Aadhaar ಈಗಾಗಲೇ ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಆಗಿದೆ ಎಂದು ಮಾತ್ರ ತಿಳಿದುಕೊಂಡು BAA ಪೂರ್ಣಗೊಂಡಿದೆ ಎಂದು ಭಾವಿಸಬೇಡಿ. ನಿಮ್ಮ LPG ವಿತರಕರು ಅಥವಾ ಸಂಬಂಧಪಟ್ಟ OMC ಆ್ಯಪ್‌ನಲ್ಲಿ ಸ್ಥಿತಿಯನ್ನ ಪರಿಶೀಲಿಸುವುದು ಉತ್ತಮ.

BAA ಮಾಡುವುದು ಹೇಗೆ?

ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸಲು ಗ್ರಾಹಕರಿಗೆ ಹಲವು ಮಾರ್ಗಗಳನ್ನ ಸರ್ಕಾರ ನೀಡಿದೆ.

ಸಿಲಿಂಡರ್ ಡೆಲಿವರಿ ವೇಳೆ: LPG ಸಿಲಿಂಡರ್ ಮನೆಗೆ ತಲುಪಿಸುವಾಗಲೇ ಡೆಲಿವರಿ ಸಿಬ್ಬಂದಿಯ OMC ಮೊಬೈಲ್ ಅಪ್ಲಿಕೇಶನ್ ಮೂಲಕ BAA ಪೂರ್ಣಗೊಳಿಸಬಹುದು.

LPG ವಿತರಕರ ಕಚೇರಿಯಲ್ಲಿ: ನಿಮ್ಮ ಗ್ಯಾಸ್ ಏಜೆನ್ಸಿ ಅಥವಾ ವಿತರಕರ ಶೋರೂಮ್‌ಗೆ ಭೇಟಿ ನೀಡಿ ದೃಢೀಕರಣ ಪೂರ್ಣಗೊಳಿಸಬಹುದು.

ಮೊಬೈಲ್ ಆ್ಯಪ್ ಮೂಲಕ: ಮನೆಯಲ್ಲೇ ಕುಳಿತು ಸಂಬಂಧಪಟ್ಟ OMCಯ ಅಧಿಕೃತ ಮೊಬೈಲ್ ಆ್ಯಪ್ ಬಳಸಿ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶವಿದೆ. Indane ಗ್ರಾಹಕರು IndianOil ONE, Bharatgas ಗ್ರಾಹಕರು HelloBPCL, HP Gas ಗ್ರಾಹಕರು HP PAY ಆ್ಯಪ್ ಬಳಸಬಹುದು. 

ಸಬ್ಸಿಡಿ ಪಡೆಯುವವರಿಗೆ ಹೆಚ್ಚು ಮುಖ್ಯ

LPG ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರಿಗೆ ಈ ನಿಯಮ ವಿಶೇಷವಾಗಿ ಗಮನಾರ್ಹವಾಗಿದೆ. ಸರ್ಕಾರದ ಮಾಹಿತಿಯ ಪ್ರಕಾರ, ದೇಶೀಯ LPGಯನ್ನ ಅದರ ಸಂಪೂರ್ಣ ಪೂರೈಕೆ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸೆಪ್ಟೆಂಬರ್ 2026ರಲ್ಲಿ 14.2 ಕೆಜಿ ಸಿಲಿಂಡರ್‌ಗೆ ಅಂದಾಜು ₹210ರಷ್ಟು implicit subsidy ಇದೆ ಎಂದು ಸಚಿವಾಲಯ ತಿಳಿಸಿದೆ. ಅದಕ್ಕಾಗಿಯೇ ಸಬ್ಸಿಡಿ ನಿಜವಾದ ಮತ್ತು ಅರ್ಹ ಗ್ರಾಹಕರಿಗೆ ತಲುಪುವಂತೆ ಮಾಡಲು ಬಯೋಮೆಟ್ರಿಕ್ ದೃಢೀಕರಣವನ್ನ ಕಡ್ಡಾಯಗೊಳಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ನಿಯಮ ಜಾರಿಗೆ ತರುವ ಉದ್ದೇಶವೇನು?

ಸರ್ಕಾರದ ಪ್ರಕಾರ, BAA ಮೂಲಕ LPG ಸಂಪರ್ಕವನ್ನ ನೈಜ ಗ್ರಾಹಕರೊಂದಿಗೆ ದೃಢೀಕರಿಸುವುದರಿಂದ ನಕಲಿ ಅಥವಾ ಡುಪ್ಲಿಕೇಟ್ ಸಂಪರ್ಕಗಳನ್ನ ಗುರುತಿಸುವುದು, ಅನರ್ಹ ಸಂಪರ್ಕಗಳನ್ನ ತೆಗೆದುಹಾಕುವುದು ಮತ್ತು ಸಬ್ಸಿಡಿ ಸಿಲಿಂಡರ್‌ಗಳ ವಾಣಿಜ್ಯ ಅಥವಾ ಕೈಗಾರಿಕಾ ಬಳಕೆಗೆ ತಿರುಗಿಸುವುದನ್ನ ತಡೆಯುವುದು ಸಾಧ್ಯವಾಗುತ್ತದೆ. ಇದರಿಂದ ಸಬ್ಸಿಡಿ ವ್ಯವಸ್ಥೆ ಹೆಚ್ಚು ಪಾರದರ್ಶಕವಾಗಲಿದೆ ಎಂದು ಸಚಿವಾಲಯ ಹೇಳಿದೆ.  

ಈ ಪ್ರಕ್ರಿಯೆ ಹೊಸದಾಗಿ ಆರಂಭವಾದದ್ದಲ್ಲ. 2023ರ ಅಕ್ಟೋಬರ್‌ನಿಂದಲೇ Oil Marketing Companies ದೇಶದಾದ್ಯಂತ LPG ಗ್ರಾಹಕರಿಗೆ BAA ಪೂರ್ಣಗೊಳಿಸಲು ಮಾಹಿತಿ ನೀಡುತ್ತಿವೆ. ಸಚಿವಾಲಯದ ಪ್ರಕಾರ, ಗ್ರಾಹಕರಿಗೆ 12 ಕೋಟಿಗೂ ಹೆಚ್ಚು SMS ಮತ್ತು WhatsApp ಸಂದೇಶಗಳನ್ನ ಕಳುಹಿಸಲಾಗಿದೆ. ವಿತರಕರ ಕಚೇರಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನೂ ನಡೆಸಲಾಗಿದೆ.  

ಕೊನೆಯ ದಿನಾಂಕಕ್ಕೂ ಮುನ್ನ ಮಾಡಿಕೊಳ್ಳಿ

ಹೀಗಾಗಿ ನೀವು LPG ಸಬ್ಸಿಡಿ ಪಡೆಯುತ್ತಿದ್ದರೆ ಅಥವಾ ನಿಮ್ಮ BAA ಪೂರ್ಣಗೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಅಕ್ಟೋಬರ್ 1ಕ್ಕೂ ಮುನ್ನ ಸ್ಥಿತಿಯನ್ನ ಪರಿಶೀಲಿಸಿ. ಈಗಾಗಲೇ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಿರುವವರಿಗೆ ಯಾವುದೇ ಹೆಚ್ಚುವರಿ ಕ್ರಮದ ಅಗತ್ಯವಿಲ್ಲ. LPG ಸೇವೆಗಳಿಗೆ ಸಂಬಂಧಿಸಿದ ಸಹಾಯಕ್ಕಾಗಿ ಸರ್ಕಾರ ನೀಡಿರುವ ಟೋಲ್‌ಫ್ರೀ ಸಹಾಯವಾಣಿ 1800 2333 555 ಸಂಪರ್ಕಿಸಬಹುದು.  

ಒಟ್ನಲ್ಲಿ ಅಕ್ಟೋಬರ್ 1ರಿಂದ ಬದಲಾವಣೆ ಮುಖ್ಯವಾಗಿ ಸಬ್ಸಿಡಿ ದರದಲ್ಲಿ LPG ರಿಫಿಲ್ ಪಡೆಯುವ ನಿಯಮಕ್ಕೆ ಸಂಬಂಧಿಸಿದೆ. ಆದ್ದರಿಂದ LPG ಗ್ರಾಹಕರು ಕೊನೆಯ ಕ್ಷಣದವರೆಗೆ ಕಾಯದೆ ತಮ್ಮ BAA ಸ್ಥಿತಿಯನ್ನ ಪರಿಶೀಲಿಸಿ ಅಗತ್ಯವಿದ್ದರೆ ಪ್ರಕ್ರಿಯೆ ಪೂರ್ಣಗೊಳಿಸುವುದು ಮುಖ್ಯ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES