SOCIAL MEDIA

Newsletter

PARTNER SITES
Select Language Select State

ಜಾಗತಿಕ ಷೇರುಪೇಟೆ ಕುಸಿತದ ನಡುವೆಯೂ 6 ವರ್ಷಗಳ ದಾಖಲೆ ಬರೆದ ಸೆನ್ಸೆಕ್ಸ್–ನಿಫ್ಟಿ; ಏನಿದು ಏರಿಕೆಯ ಹಿಂದಿನ ಲೆಕ್ಕಾಚಾರ?

ಜಾಗತಿಕ ಷೇರುಮಾರುಕಟ್ಟೆಗಳು ಕುಸಿತ ಕಂಡರೂ ಭಾರತೀಯ ಷೇರುಪೇಟೆ ಮಾತ್ರ ಭರ್ಜರಿ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 1,718 ಅಂಕಗಳಷ್ಟು ಜಿಗಿದು 81,028 ಅಂಕಗಳಿಗೆ ತಲುಪಿದರೆ, ನಿಫ್ಟಿ 25,000ರ ಗಡಿ ದಾಟಿದೆ. ವಾರದ ಲೆಕ್ಕಾಚಾರದಲ್ಲಿ ಸೆನ್ಸೆಕ್ಸ್ ಶೇ.8.8 ಮತ್ತು ನಿಫ್ಟಿ ಶೇ.8.6ರಷ್ಟು ಏರಿಕೆ ಕಂಡಿವೆ. ವಿದೇಶಿ ಹೂಡಿಕೆದಾರರ ಖರೀದಿ, ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಪಶ್ಚಿಮ ಏಷ್ಯಾದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಈ ಏರಿಕೆಗೆ ಪ್ರಮುಖ ಕಾರಣಗಳಾಗಿವೆ. ಈ ಮೂಲಕ ಭಾರತೀಯ ಷೇರುಪೇಟೆ ಆರು ವರ್ಷಗಳಲ್ಲೇ ಅತ್ಯುತ್ತಮ ವಾರದ ಏರಿಕೆ ದಾಖಲಿಸಿದೆ.

Written By Puttaraj K Alur
Published: Nov 07, 2026, 09:24 IST | Updated: Nov 07, 2026, 09:33 IST
Image Credit: Indian Stock Market
Join

Indian Stock Market: ಜಾಗತಿಕ ಷೇರುಮಾರುಕಟ್ಟೆಗಳು ಕುಸಿತದ ಹಾದಿಯಲ್ಲಿದ್ದರೂ ಭಾರತೀಯ ಷೇರುಪೇಟೆ ಮಾತ್ರ ಭರ್ಜರಿ ಏರಿಕೆ ದಾಖಲಿಸಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳ ಮಾರುಕಟ್ಟೆಗಳಲ್ಲಿ ಹಿನ್ನಡೆ ಕಂಡುಬಂದಿರುವ ಸಮಯದಲ್ಲೇ ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ವಾರದ ಅಂತ್ಯಕ್ಕೆ ಗಮನಾರ್ಹ ಏರಿಕೆ ಕಂಡಿವೆ. ವಿಶೇಷವೆಂದರೆ ಕಳೆದ ಆರು ವರ್ಷಗಳಲ್ಲಿ ಯಾವುದೇ ವಾರದಲ್ಲಿ ಕಾಣದಷ್ಟು ದೊಡ್ಡ ಮಟ್ಟದ ಏರಿಕೆಯನ್ನ ಭಾರತೀಯ ಷೇರುಮಾರುಕಟ್ಟೆ ದಾಖಲಿಸಿರುವುದು ಹೂಡಿಕೆದಾರರ ಗಮನ ಸೆಳೆದಿದೆ.

ನವೆಂಬರ್ 6ರ ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇಕಡಾ ಎರಡಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಸೆನ್ಸೆಕ್ಸ್ ಒಂದೇ ದಿನದಲ್ಲಿ 1,718 ಅಂಕಗಳಷ್ಟು ಜಿಗಿದು 81,028.02 ಅಂಕಗಳಿಗೆ ತಲುಪಿದೆ. ಇದೇ ವೇಳೆ ನಿಫ್ಟಿ ಕೂಡ 25,000 ಅಂಕಗಳ ಗಡಿ ದಾಟಿದೆ. ವಾರದ ಲೆಕ್ಕಾಚಾರದಲ್ಲಿ ಸೆನ್ಸೆಕ್ಸ್ ಶೇಕಡಾ 8.8ರಷ್ಟು ಮತ್ತು ನಿಫ್ಟಿ ಶೇಕಡಾ 8.6ರಷ್ಟು ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್‌ಗೆ ಕಳೆದ ಆರು ವರ್ಷಗಳಲ್ಲಿ ಇಷ್ಟು ದೊಡ್ಡ ವಾರದ ಏರಿಕೆ ಕಂಡಿರಲಿಲ್ಲ. ನಿಫ್ಟಿಯೂ 2021ರ ಬಳಿಕ ಇಂತಹ ಏರಿಕೆಯನ್ನ ದಾಖಲಿಸಿದೆ. 

ಜಾಗತಿಕ ಮಾರುಕಟ್ಟೆ ಕುಸಿತದ ನಡುವೆಯೂ ಭಾರತದ ಓಟ

ಭಾರತೀಯ ಷೇರುಪೇಟೆಯ ಏರಿಕೆಯ ವಿಶೇಷತೆ ಎಂದರೆ, ಇದೇ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಗಳು ಒತ್ತಡಕ್ಕೆ ಒಳಗಾಗಿದ್ದವು. ಅಮೆರಿಕದ ನಾಸ್ಡಾಕ್ ಕಾಂಪೊಸಿಟ್, ಎಸ್‌ ಆ್ಯಂಡ್‌ ಪಿ 500 ಹಾಗೂ ಡೌ ಜೋನ್ಸ್ ಸೂಚ್ಯಂಕಗಳು ಶೇಕಡಾ 3.44ರಿಂದ 5.52ರವರೆಗೆ ಕುಸಿತ ಕಂಡಿದ್ದವು. ದಕ್ಷಿಣ ಕೊರಿಯಾ, ಜಪಾನ್ ಸೇರಿದಂತೆ ಇತರ ಕೆಲವು ದೇಶಗಳ ಷೇರುಮಾರುಕಟ್ಟೆಗಳಲ್ಲಿಯೂ ಹಿನ್ನಡೆ ದಾಖಲಾಗಿತ್ತು. ಆದರೆ ಈ ಜಾಗತಿಕ ಬೆಳವಣಿಗೆಗಳ ನಡುವೆಯೂ ಭಾರತೀಯ ಮಾರುಕಟ್ಟೆ ಸತತ ಏರಿಕೆಯ ಹಾದಿ ಹಿಡಿದಿರುವುದು ಗಮನಾರ್ಹವಾಗಿದೆ.

AI ಷೇರುಗಳ ಕುಸಿತದ ಪರಿಣಾಮ

ಜಾಗತಿಕ ಮಾರುಕಟ್ಟೆಗಳ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಸೆಮಿಕಂಡಕ್ಟರ್ ವಲಯದ ಕಂಪನಿಗಳ ಷೇರುಗಳಲ್ಲಿನ ಮಾರಾಟದ ಒತ್ತಡವೂ ಒಂದಾಗಿದೆ. AI ತಂತ್ರಜ್ಞಾನ ಅಭಿವೃದ್ಧಿಗೆ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೂ, ಅದಕ್ಕೆ ತಕ್ಕ ಆದಾಯ ದೊರೆಯುವ ಬಗ್ಗೆ ಹೂಡಿಕೆದಾರರಲ್ಲಿ ನಿರೀಕ್ಷಿತ ವಿಶ್ವಾಸ ಇಲ್ಲದಿರುವುದು ಮಾರಾಟದ ಒತ್ತಡಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ AI ಸಂಬಂಧಿತ ಕಂಪನಿಗಳ ಷೇರುಗಳಿಂದ ಹೂಡಿಕೆದಾರರು ಹಿಂದೆ ಸರಿಯುತ್ತಿರುವ ಬೆಳವಣಿಗೆ ಮುಂದುವರಿದಿದೆ. ಇದರಿಂದ ಅಮೆರಿಕದ ಮಾರುಕಟ್ಟೆ ಸೇರಿದಂತೆ ಜಾಗತಿಕ ಷೇರುಪೇಟೆಗಳಲ್ಲಿ ಕುಸಿತ ಕಂಡುಬಂದಿದೆ. ಆದರೆ ಭಾರತದ ಮಾರುಕಟ್ಟೆಯ ಚಲನೆ ಈ ಜಾಗತಿಕ ಪ್ರವೃತ್ತಿಗೆ ವಿರುದ್ಧವಾಗಿರುವುದು ಈ ವಾರದ ವಹಿವಾಟಿನ ಪ್ರಮುಖ ಅಂಶವಾಗಿದೆ.

ವಿದೇಶಿ ಹೂಡಿಕೆದಾರರ ಖರೀದಿ ಮಾರುಕಟ್ಟೆಗೆ ಬಲ

ಭಾರತೀಯ ಷೇರುಪೇಟೆಯ ಏರಿಕೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FII) ಖರೀದಿ ಪ್ರಮುಖ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳಲ್ಲಿ ನಿರಂತರವಾಗಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಈ ಖರೀದಿ ಪ್ರವೃತ್ತಿ ವಾರದ ಕೊನೆಯ ದಿನವೂ ಮುಂದುವರಿದಿದೆ. ವಿದೇಶಿ ಹೂಡಿಕೆದಾರರಿಂದ ಮಾರುಕಟ್ಟೆಗೆ ಹಣ ಹರಿದುಬರುತ್ತಿರುವುದು ಪ್ರಮುಖ ಸೂಚ್ಯಂಕಗಳ ಏರಿಕೆಗೆ ಬೆಂಬಲ ನೀಡಿದೆ.

ಷೇರುಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆದಾರರ ಚಟುವಟಿಕೆಗಳು ಸೂಚ್ಯಂಕಗಳ ಚಲನೆಯ ಮೇಲೆ ಪರಿಣಾಮ ಬೀರುತ್ತವೆ. ಈ ವಾರ ಭಾರತೀಯ ಮಾರುಕಟ್ಟೆಯಲ್ಲಿ ಅವರ ಖರೀದಿ ಹೆಚ್ಚಾಗಿರುವುದು ಮಾರುಕಟ್ಟೆಯ ಉತ್ಸಾಹಕ್ಕೆ ಪ್ರಮುಖ ಕಾರಣವಾಗಿ ಗುರುತಿಸಲಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ AI ಷೇರುಗಳ ಮಾರಾಟ ನಡೆಯುತ್ತಿದ್ದರೂ ಭಾರತದ ಷೇರುಗಳಲ್ಲಿ ಹೂಡಿಕೆ ಹೆಚ್ಚಾಗಿರುವುದು ಈ ವಾರದ ವಹಿವಾಟಿನ ಮತ್ತೊಂದು ವಿಶೇಷವಾಗಿದೆ.

ಕಚ್ಚಾ ತೈಲ ಬೆಲೆ ಇಳಿಕೆ, ಪಶ್ಚಿಮ ಏಷ್ಯಾದ ಬೆಳವಣಿಗೆಗಳ ನಿರೀಕ್ಷೆ

ಭಾರತೀಯ ಷೇರುಪೇಟೆಯ ಏರಿಕೆಗೆ ಮತ್ತೊಂದು ಕಾರಣ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದು. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾಗಿರುವುದು ಭಾರತದ ಮಾರುಕಟ್ಟೆಯ ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಜೊತೆಗೆ ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಯುದ್ಧದ ವಾತಾವರಣ ಮುಂದಿನ ದಿನಗಳಲ್ಲಿ ತಿಳಿಯಾಗಬಹುದು ಎಂಬ ನಿರೀಕ್ಷೆಯೂ ಹೂಡಿಕೆದಾರರ ಮನೋಭಾವಕ್ಕೆ ಬಲ ನೀಡಿದೆ. ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿನ ಅನಿಶ್ಚಿತತೆ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಮಾರುಕಟ್ಟೆಯಲ್ಲಿ ಮೂಡಿರುವ ನಿರೀಕ್ಷೆಯೂ ಭಾರತೀಯ ಷೇರುಪೇಟೆಯ ಏರಿಕೆಗೆ ಪೂರಕವಾಗಿದೆ.

ಆರು ವರ್ಷಗಳ ಬಳಿಕ ದಾಖಲೆಯ ವಾರದ ಏರಿಕೆ

ಒಟ್ಟಾರೆ ನೋಡಿದರೆ ಈ ವಾರದ ಭಾರತೀಯ ಷೇರುಮಾರುಕಟ್ಟೆಯ ಏರಿಕೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ನಿರಂತರ ಖರೀದಿ, ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಪಶ್ಚಿಮ ಏಷ್ಯಾದ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಗಳು ಪ್ರಮುಖ ಕಾರಣಗಳಾಗಿವೆ. ಮತ್ತೊಂದೆಡೆ AI ಮತ್ತು ಸೆಮಿಕಂಡಕ್ಟರ್ ಕಂಪನಿಗಳ ಷೇರುಗಳಲ್ಲಿನ ಕುಸಿತದಿಂದ ಜಾಗತಿಕ ಮಾರುಕಟ್ಟೆಗಳು ಒತ್ತಡ ಎದುರಿಸಿವೆ. ಈ ಎರಡು ವಿಭಿನ್ನ ಬೆಳವಣಿಗೆಗಳ ನಡುವೆ ಭಾರತೀಯ ಷೇರುಪೇಟೆ ವಾರದ ಅಂತ್ಯಕ್ಕೆ ಭರ್ಜರಿ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 81 ಸಾವಿರ ಅಂಕಗಳ ಗಡಿ ದಾಟಿದ್ದು, ನಿಫ್ಟಿ 25 ಸಾವಿರದ ಮಟ್ಟವನ್ನ ತಲುಪಿದೆ. ಆರು ವರ್ಷಗಳಲ್ಲೇ ಅತ್ಯುತ್ತಮ ವಾರದ ಏರಿಕೆ ದಾಖಲಿಸಿರುವುದು ಈ ವಾರದ ಷೇರುಮಾರುಕಟ್ಟೆಯ ಪ್ರಮುಖ ಬೆಳವಣಿಗೆಯಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES