ತುಟ್ಟಿಭತ್ಯೆ ಹೆಚ್ಚಳ: ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ
ರಾಜ್ಯ ಸರ್ಕಾರಿ ನೌಕರರಿಗೆ ಈವರೆಗೆ ಮೂಲ ವೇತನದ ಶೇ.14.25ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿತ್ತು. ಇದೀಗ ಸರ್ಕಾರ ಅದನ್ನ ಶೇ.15.75ಕ್ಕೆ ಹೆಚ್ಚಿಸಿದೆ. ಅಂದರೆ ತುಟ್ಟಿಭತ್ಯೆ ದರದಲ್ಲಿ ಶೇ.1.50ರಷ್ಟು ಹೆಚ್ಚಳವಾಗಿದೆ. 2026ರ ಜನವರಿ 1ರಿಂದ ಅನ್ವಯವಾಗುವಂತೆ ಈ ಪರಿಷ್ಕರಣೆ ಮಾಡಲಾಗಿದೆ.
DA Hike 2026: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ನಿವೃತ್ತ ನೌಕರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದು, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುವ ತುಟ್ಟಿಭತ್ಯೆ (Dearness Allowance – DA) ದರವನ್ನ ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಪ್ರಸ್ತುತ ಮೂಲ ವೇತನದ ಶೇ.14.25ರಷ್ಟಿದ್ದ ತುಟ್ಟಿಭತ್ಯೆಯನ್ನ ಶೇ.15.75ಕ್ಕೆ ಹೆಚ್ಚಿಸಲಾಗಿದೆ.
ಈ ಪರಿಷ್ಕರಣೆ 2026ರ ಜನವರಿ 1ರಿಂದಲೇ ಜಾರಿಗೆ ಬರಲಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಈ ಕುರಿತು ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ 2026ರ ಮೇ 11ರಂದು ಸರ್ಕಾರಿ ಆದೇಶ ಹೊರಡಿಸಿದೆ. 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ತುಟ್ಟಿಭತ್ಯೆ ದರ ಅನ್ವಯವಾಗಲಿದೆ.
ಶೇ.14.25ರಿಂದ ಶೇ.15.75ಕ್ಕೆ ಏರಿಕೆ
ರಾಜ್ಯ ಸರ್ಕಾರಿ ನೌಕರರಿಗೆ ಈವರೆಗೆ ಮೂಲ ವೇತನದ ಶೇ.14.25ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿತ್ತು. ಇದೀಗ ಸರ್ಕಾರ ಅದನ್ನ ಶೇ.15.75ಕ್ಕೆ ಹೆಚ್ಚಿಸಿದೆ. ಅಂದರೆ ತುಟ್ಟಿಭತ್ಯೆ ದರದಲ್ಲಿ ಶೇ.1.50ರಷ್ಟು ಹೆಚ್ಚಳವಾಗಿದೆ. 2026ರ ಜನವರಿ 1ರಿಂದ ಅನ್ವಯವಾಗುವಂತೆ ಈ ಪರಿಷ್ಕರಣೆ ಮಾಡಲಾಗಿದೆ. 2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಹೊಸ ದರದಂತೆ ತುಟ್ಟಿಭತ್ಯೆ ಮಂಜೂರು ಮಾಡಲು ಸರ್ಕಾರ ಅನುಮೋದನೆ ನೀಡಿದೆ.
ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೂ ಲಾಭ
ಸರ್ಕಾರದ ಈ ಆದೇಶವು ಕೇವಲ ಸೇವೆಯಲ್ಲಿರುವ ನೌಕರರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು ಹಾಗೂ ಕುಟುಂಬ ನಿವೃತ್ತಿ ವೇತನದಾರರಿಗೂ ತುಟ್ಟಿಭತ್ಯೆ ಹೆಚ್ಚಳದ ಪ್ರಯೋಜನ ದೊರೆಯಲಿದೆ. ಪ್ರಸ್ತುತ ಮೂಲ ಪಿಂಚಣಿ ಅಥವಾ ಕುಟುಂಬ ಪಿಂಚಣಿಯ ಶೇ.14.25ರಷ್ಟಿದ್ದ ತುಟ್ಟಿಭತ್ಯೆಯನ್ನ ಜನವರಿ 1, 2026ರಿಂದ ಜಾರಿಗೆ ಬರುವಂತೆ ಶೇ.15.75ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದ ಸಂಚಿತ ನಿಧಿಯಿಂದ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರಿಗೂ ಈ ಪರಿಷ್ಕರಣೆ ಅನ್ವಯವಾಗಲಿದೆ. ಇದರ ಜೊತೆಗೆ ಯುಜಿಸಿ, ಎಐಸಿಟಿಇ ಮತ್ತು ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ನೌಕರರಿಗೂ ಈ ಆದೇಶ ಅನ್ವಯಿಸುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಯಾವ ನೌಕರರಿಗೆ ಅನ್ವಯವಾಗಲಿದೆ?
ಸರ್ಕಾರದ ಆದೇಶದ ಪ್ರಕಾರ, ರಾಜ್ಯ ಸರ್ಕಾರದ ಪೂರ್ಣಾವಧಿ ನೌಕರರು ಹಾಗೂ ಜಿಲ್ಲಾ ಪಂಚಾಯಿತಿಗಳ ಪೂರ್ಣಾವಧಿ ನೌಕರರಿಗೆ ಪರಿಷ್ಕೃತ ತುಟ್ಟಿಭತ್ಯೆ ದರ ಅನ್ವಯವಾಗಲಿದೆ. ಕಾಲಿಕ ವೇತನ ಶ್ರೇಣಿ (Time Scale of Pay) ಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರಿಗೂ ಇದರ ಪ್ರಯೋಜನ ಸಿಗಲಿದೆ. ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೂರ್ಣಾವಧಿ ನೌಕರರಿಗೂ ಈ ಆದೇಶ ಅನ್ವಯವಾಗುತ್ತದೆ. ಇನ್ನು ಯುಜಿಸಿ, ಎಐಸಿಟಿಇ ಮತ್ತು ಐಸಿಎಆರ್ ವೇತನ ಶ್ರೇಣಿಗಳಲ್ಲಿ ಪ್ರಸ್ತುತ ವೇತನ ಪಡೆಯುತ್ತಿರುವ ನೌಕರರು ಹಾಗೂ ಎನ್‌ಜೆಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನ ಹೊರಡಿಸಲಾಗುವುದು ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ತುಟ್ಟಿಭತ್ಯೆ ಪಾವತಿ ಕುರಿತು ಸರ್ಕಾರದ ಸೂಚನೆ
ಪರಿಷ್ಕೃತ ತುಟ್ಟಿಭತ್ಯೆಯನ್ನ ಮುಂದಿನ ಆದೇಶ ಹೊರಬರುವವರೆಗೆ ನಗದು ರೂಪದಲ್ಲಿ ಪಾವತಿಸಬೇಕೆಂದು ಸರ್ಕಾರ ಸೂಚಿಸಿದೆ. ತುಟ್ಟಿಭತ್ಯೆ ಲೆಕ್ಕಾಚಾರ ಮಾಡುವಾಗ ಐವತ್ತು ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಭಿನ್ನಾಂಕ ಬಂದರೆ ಅದನ್ನ ಮುಂದಿನ ಪೂರ್ಣ ರೂಪಾಯಿಗೆ ಹೆಚ್ಚಿಸಬೇಕು. ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಜನವರಿ 1, 2026ರಿಂದ ಅನ್ವಯವಾಗುವ ತುಟ್ಟಿಭತ್ಯೆ ಹೆಚ್ಚಳದ ಬಾಕಿ ಮೊತ್ತವನ್ನ 2026ರ ಮೇ ತಿಂಗಳ ವೇತನ ಅಥವಾ ಪಿಂಚಣಿ ವಿತರಣೆಗೆ ಮೊದಲು ಪಾವತಿಸಬಾರದು ಅಂತಾ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಅಲ್ಲದೆ ತುಟ್ಟಿಭತ್ಯೆಯನ್ನ ಸಂಬಳದ ಪ್ರತ್ಯೇಕ ಅಂಶವಾಗಿ ತೋರಿಸಬೇಕು. ಯಾವುದೇ ಉದ್ದೇಶಕ್ಕಾಗಿ ತುಟ್ಟಿಭತ್ಯೆಯನ್ನ ವೇತನವೆಂದು ಪರಿಗಣಿಸಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೇ 11ರಂದು ಅಧಿಕೃತ ಆದೇಶ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಉಮಾ.ಕೆ. ಅವರು ಈ ಆದೇಶ ಹೊರಡಿಸಿದ್ದಾರೆ. ಒಟ್ನಲ್ಲಿ ರಾಜ್ಯ ಸರ್ಕಾರಿ ನೌಕರರು, ಜಿಲ್ಲಾ ಪಂಚಾಯಿತಿ ನೌಕರರು, ವಿವಿಧ ವರ್ಗದ ಪೂರ್ಣಾವಧಿ ನೌಕರರು ಹಾಗೂ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆ ದರವನ್ನ ಶೇ.14.25ರಿಂದ ಶೇ.15.75ಕ್ಕೆ ಹೆಚ್ಚಿಸಲಾಗಿದೆ. ಈ ಪರಿಷ್ಕರಣೆ 2026ರ ಜನವರಿ 1ರಿಂದಲೇ ಜಾರಿಗೆ ಬರಲಿದ್ದು, ಬಾಕಿ ಪಾವತಿ ಮತ್ತು ವೇತನ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರ ಆದೇಶದಲ್ಲಿ ನಿರ್ದಿಷ್ಟ ಸೂಚನೆಗಳನ್ನ ನೀಡಲಾಗಿದೆ.