SOCIAL MEDIA

Newsletter

PARTNER SITES
Select Language Select State

ಧನತೇರಸ್‌ಗೂ ಮುನ್ನ ಚಿನ್ನ–ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ; ಸತತ 2ನೇ ದಿನವೂ ಮುಂದುವರಿದ ರ್ಯಾಲಿ!

ಧನತೇರಸ್ ಹಬ್ಬದ ಮುನ್ನ ಚಿನ್ನ ಮತ್ತು ಬೆಳ್ಳಿ ಬೆಲೆ ಸತತ ಎರಡನೇ ದಿನವೂ ಏರಿಕೆಯಾಗಿದೆ. ನವೆಂಬರ್ 5ರ ಬೆಳಗ್ಗೆ MCXನಲ್ಲಿ ಚಿನ್ನದ ದರ ಶೇ.1.25ರಷ್ಟು ಹೆಚ್ಚಾಗಿ 10 ಗ್ರಾಂಗೆ ₹1,45,021 ತಲುಪಿದೆ. ಬೆಳ್ಳಿ ದರ ಶೇ.0.84ರಷ್ಟು ಏರಿಕೆಯಾಗಿ ಕೆ.ಜಿಗೆ ₹1,89,314ಕ್ಕೆ ತಲುಪಿದೆ. ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ, ಕಚ್ಚಾ ತೈಲ ಬೆಲೆ ಇಳಿಕೆ, ಡಾಲರ್ ಸೂಚ್ಯಂಕದ ದುರ್ಬಲತೆ ಹಾಗೂ ಅಮೆರಿಕದ ಬಾಂಡ್ ಇಳುವರಿ ಕುಸಿತ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.

Written By Puttaraj K Alur
Published: Nov 05, 2026, 14:24 IST | Updated: Nov 05, 2026, 14:37 IST
Image Credit: Gold-Silver Price
Join

Gold and Silver Prices Rally: ಧನತೇರಸ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ದೇಶದ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮುಂದುವರಿದಿದೆ. ನವೆಂಬರ್ 5ರ ಗುರುವಾರವೂ ಎರಡೂ ಅಮೂಲ್ಯ ಲೋಹಗಳ ದರ ಹೆಚ್ಚಳ ಕಂಡಿದ್ದು, ಸತತ ಎರಡನೇ ದಿನವೂ ಏರಿಕೆಯ ಹಾದಿಯಲ್ಲಿ ಸಾಗಿವೆ. ಹಿಂದಿನ ದಿನದ ಭರ್ಜರಿ ಚೇತರಿಕೆಯ ಬಳಿಕ ಗುರುವಾರವೂ ಮಾರುಕಟ್ಟೆಯಲ್ಲಿ ಖರೀದಿ ಆಸಕ್ತಿ ಮುಂದುವರಿದಿದೆ.

ಧನತೇರಸ್ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ಶುಭದ ಸಂಕೇತವೆಂಬ ನಂಬಿಕೆ ಭಾರತೀಯ ಕುಟುಂಬಗಳಲ್ಲಿದೆ. ಸಂಪತ್ತು, ಸಮೃದ್ಧಿ ಮತ್ತು ಅದೃಷ್ಟದ ಪ್ರತೀಕವಾಗಿ ಈ ಲೋಹಗಳನ್ನ ಖರೀದಿಸುವ ಸಂಪ್ರದಾಯವೂ ಇದೆ. ಹಬ್ಬದ ಸಂದರ್ಭದಲ್ಲಿ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯ ನಡುವೆ ಬೆಲೆಗಳಲ್ಲೂ ಏರಿಕೆ ದಾಖಲಾಗಿದೆ.

MCXನಲ್ಲಿ ಚಿನ್ನದ ಬೆಲೆ ಎಷ್ಟಿದೆ?

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (MCX)ನಲ್ಲಿ ಗುರುವಾರ ಬೆಳಗ್ಗೆ 11.45ರ ವೇಳೆಗೆ ಡಿಸೆಂಬರ್‌ ತಿಂಗಳ ಚಿನ್ನದ ಫ್ಯೂಚರ್ಸ್‌ ಪ್ರತಿ 10 ಗ್ರಾಂಗೆ ₹1,45,021ರಲ್ಲಿ ವಹಿವಾಟು ನಡೆಸುತ್ತಿತ್ತು. ಹಿಂದಿನ ದರಕ್ಕೆ ಹೋಲಿಸಿದರೆ ₹1,787 ಅಥವಾ ಶೇ.1.25ರಷ್ಟು ಏರಿಕೆ ಕಂಡಿತ್ತು. ದಿನದ ವಹಿವಾಟಿನಲ್ಲಿ ಚಿನ್ನದ ಬೆಲೆ ಕನಿಷ್ಠ ₹1,44,555ಕ್ಕೆ ಇಳಿದಿದ್ದರೆ, ಗರಿಷ್ಠ ₹1,46,109ರವರೆಗೆ ತಲುಪಿತ್ತು. ಇದರಿಂದ ಚಿನ್ನದ ಮಾರುಕಟ್ಟೆಯಲ್ಲಿ ಏರಿಕೆಯ ಚಲನೆ ಮುಂದುವರಿದಿರುವುದು ಸ್ಪಷ್ಟವಾಗಿದೆ.

ಬೆಳ್ಳಿ ಬೆಲೆಯಲ್ಲೂ ಹೆಚ್ಚಳ

ಚಿನ್ನದಂತೆಯೇ ಬೆಳ್ಳಿ ದರವೂ ಏರಿಕೆ ಕಂಡಿದೆ. MCXನಲ್ಲಿ ಡಿಸೆಂಬರ್‌ ತಿಂಗಳ ಬೆಳ್ಳಿ ಫ್ಯೂಚರ್ಸ್‌ ಪ್ರತಿ ಕೆ.ಜಿಗೆ ₹1,89,314ರಲ್ಲಿ ವಹಿವಾಟು ನಡೆಸುತ್ತಿತ್ತು. ಹಿಂದಿನ ದರಕ್ಕಿಂತ ₹1,579 ಅಥವಾ ಶೇ.0.84ರಷ್ಟು ಹೆಚ್ಚಳವಾಗಿತ್ತು. ಗುರುವಾರದ ವಹಿವಾಟಿನಲ್ಲಿ ಬೆಳ್ಳಿ ದರ ಕನಿಷ್ಠ ₹1,87,411ಕ್ಕೆ ತಲುಪಿದ್ದರೆ, ಗರಿಷ್ಠ ₹1,90,946ರವರೆಗೆ ಏರಿಕೆಯಾಗಿತ್ತು.

ಇದಕ್ಕೂ ಮುನ್ನ ನವೆಂಬರ್ 4ರ ಬುಧವಾರ ಚಿನ್ನ ಮತ್ತು ಬೆಳ್ಳಿ ಎರಡೂ ಉತ್ತಮ ಏರಿಕೆ ದಾಖಲಿಸಿದ್ದವು. ಅಂದು MCXನಲ್ಲಿ ಚಿನ್ನದ ಫ್ಯೂಚರ್ಸ್‌ ಪ್ರತಿ 10 ಗ್ರಾಂಗೆ ₹1,43,234ರಲ್ಲಿ ವಹಿವಾಟು ಮುಕ್ತಾಯಗೊಳಿಸಿ ಶೇ.2.71ರಷ್ಟು ಏರಿಕೆ ಕಂಡಿತ್ತು. ಬೆಳ್ಳಿ ಫ್ಯೂಚರ್ಸ್‌ ಪ್ರತಿ ಕೆ.ಜಿಗೆ ₹1,87,735ರಲ್ಲಿ ಮುಕ್ತಾಯಗೊಂಡು ಶೇ.4.47ರಷ್ಟು ಹೆಚ್ಚಳ ದಾಖಲಿಸಿತ್ತು.

Ahmedabad1,46,6801,93,645
Bengaluru1,46,7701,93,780
Chennai1,46,8651,93,720
Delhi1,46,7801,93,695
Hyderabad1,46,8301,93,655
Jaipur1,46,6301,93,620
Kolkata1,46,3801,93,720
Mumbai1,46,5801,93,620

ಚಿನ್ನ–ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು?

ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಕಂಡುಬಂದಿರುವ ಚೇತರಿಕೆಗೆ ಅಮೆರಿಕದ ಮಧ್ಯಂತರ ಚುನಾವಣೆಯ ಫಲಿತಾಂಶ, ಕಚ್ಚಾ ತೈಲ ಬೆಲೆಯಲ್ಲಿನ ತೀವ್ರ ಕುಸಿತ ಸೇರಿದಂತೆ ಹಲವು ಅಂಶಗಳು ಕಾರಣವಾಗಿವೆ ಎಂದು ಪೃಥ್ವಿ ಫಿನ್‌ಮಾರ್ಟ್‌ನ ನಿರ್ದೇಶಕ ಹಾಗೂ ಕಮಾಡಿಟಿ ಮತ್ತು ಕರೆನ್ಸಿ ಸಂಶೋಧನಾ ವಿಭಾಗದ ಮುಖ್ಯಸ್ಥ ಮನೋಜ್ ಕುಮಾರ್ ಜೈನ್ ತಿಳಿಸಿದ್ದಾರೆ. ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸೋಲಿನ ಬಳಿಕ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ.

ಇದರ ಜೊತೆಗೆ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಇಳಿಕೆಯಾಗಿರುವುದು ಕೂಡ ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಬೆಂಬಲ ನೀಡಿದೆ. ಚುನಾವಣಾ ಫಲಿತಾಂಶದ ಬಳಿಕ ಡಾಲರ್ ಸೂಚ್ಯಂಕದಲ್ಲೂ ದುರ್ಬಲತೆ ಕಂಡುಬಂದಿದೆ. ತೈಲ ಬೆಲೆ ಇಳಿಕೆಯಿಂದ ಹಣದುಬ್ಬರದ ಆತಂಕ ಕಡಿಮೆಯಾಗಿರುವುದು, ಡಾಲರ್ ಸೂಚ್ಯಂಕ ಕುಸಿತ, ಅಮೆರಿಕದ ಬಾಂಡ್ ಇಳುವರಿಯಲ್ಲಿನ ಇಳಿಕೆ ಹಾಗೂ ಅಮೆರಿಕ–ಇರಾನ್ ಯುದ್ಧ ಅಂತ್ಯಗೊಳ್ಳುವ ಸಾಧ್ಯತೆಗಳು ಚಿನ್ನ ಮತ್ತು ಬೆಳ್ಳಿ ಬೆಲೆಗಳಿಗೆ ಪೂರಕವಾಗಿವೆ ಎಂದು ಜೈನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ಉತ್ತಮ ಏರಿಕೆ ದಾಖಲಿಸಿವೆ. ಬುಧವಾರ ಡಿಸೆಂಬರ್ ಚಿನ್ನದ ಫ್ಯೂಚರ್ಸ್‌ ಪ್ರತಿ ಟ್ರಾಯ್ ಔನ್ಸ್‌ಗೆ 4,073 ಡಾಲರ್‌ನಲ್ಲಿ ವಹಿವಾಟು ಮುಕ್ತಾಯಗೊಳಿಸಿದ್ದು, ದಿನದ ಆಧಾರದಲ್ಲಿ ಶೇ.3.37ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ ಡಿಸೆಂಬರ್ ಬೆಳ್ಳಿ ಫ್ಯೂಚರ್ಸ್‌ ಪ್ರತಿ ಟ್ರಾಯ್ ಔನ್ಸ್‌ಗೆ 52.282 ಡಾಲರ್‌ನಲ್ಲಿ ವಹಿವಾಟು ಮುಕ್ತಾಯಗೊಳಿಸಿ ಶೇ.5.08ರಷ್ಟು ಏರಿಕೆ ದಾಖಲಿಸಿದೆ. ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಗಳು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಸ್ಥಿತಿಯಲ್ಲಿದ್ದವು. ಇಂತಹ ಸಂದರ್ಭದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಮನೋಜ್ ಕುಮಾರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ಚಿನ್ನ–ಬೆಳ್ಳಿ ಬೆಲೆ ಮುಂದಿನ ದಿನಗಳಲ್ಲಿ ಹೇಗಿರಲಿದೆ?

ಈ ವಾರ ಕಚ್ಚಾ ತೈಲ ಬೆಲೆ, ಡಾಲರ್ ಸೂಚ್ಯಂಕ ಮತ್ತು ಅಮೆರಿಕದ ಉದ್ಯೋಗ ಅಂಕಿಅಂಶಗಳಲ್ಲಿನ ಬದಲಾವಣೆಗಳ ಆಧಾರದ ಮೇಲೆ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆಯಿದೆ ಎಂದು ಜೈನ್ ತಿಳಿಸಿದ್ದಾರೆ. MCX ಚಿನ್ನಕ್ಕೆ ಪ್ರತಿ 10 ಗ್ರಾಂಗೆ ₹1,42,000ರಿಂದ ₹1,41,400ರ ವಲಯದಲ್ಲಿ ಬೆಂಬಲ ಮಟ್ಟವಿದ್ದು, ₹1,44,400ರಿಂದ ₹1,45,500ರ ವಲಯದಲ್ಲಿ ಪ್ರತಿರೋಧ ಮಟ್ಟವಿದೆ ಎಂದು ಅವರು ಅಂದಾಜಿಸಿದ್ದಾರೆ.  ಬೆಳ್ಳಿಗೆ ಪ್ರತಿ ಕೆ.ಜಿಗೆ ₹1,85,500ರಿಂದ ₹1,83,000ರ ವಲಯದಲ್ಲಿ ಬೆಂಬಲ ಮಟ್ಟವಿದ್ದು, ₹1,91,100ರಿಂದ ₹1,94,400ರ ವಲಯದಲ್ಲಿ ಪ್ರತಿರೋಧ ಮಟ್ಟವಿದೆ ಎಂದು ತಿಳಿಸಿದ್ದಾರೆ.

ಚಿನ್ನವನ್ನ ₹1,42,400ರಿಂದ ₹1,41,000ರ ವ್ಯಾಪ್ತಿಯಲ್ಲಿ ಖರೀದಿಸುವ ಸಲಹೆ ನೀಡಿರುವ ಅವರು, ₹1,40,000ಕ್ಕಿಂತ ಕೆಳಗೆ ಸ್ಟಾಪ್‌ಲಾಸ್‌ ನಿಗದಿಪಡಿಸುವಂತೆ ಸೂಚಿಸಿದ್ದಾರೆ. ₹1,44,400ರಿಂದ ₹1,45,500ರವರೆಗೆ ಗುರಿ ಬೆಲೆಯನ್ನ ನಿರೀಕ್ಷಿಸಿದ್ದಾರೆ. ಅದೇ ರೀತಿ ಬೆಳ್ಳಿಯನ್ನ ₹1,86,000ರಿಂದ ₹1,83,000ರ ವ್ಯಾಪ್ತಿಯಲ್ಲಿ ಖರೀದಿಸಲು ಸಲಹೆ ನೀಡಿದ್ದು, ₹1,79,800ಕ್ಕಿಂತ ಕೆಳಗೆ ಸ್ಟಾಪ್‌ಲಾಸ್‌ ಇರಿಸುವಂತೆ ತಿಳಿಸಿದ್ದಾರೆ. ₹1,91,100ರಿಂದ ₹1,94,400ರವರೆಗೆ ಗುರಿ ಮಟ್ಟವನ್ನು ಸೂಚಿಸಿದ್ದಾರೆ.

(ಗಮನಿಸಿ: ಈ ವರದಿಯಲ್ಲಿನ MCX ದರಗಳು ನವೆಂಬರ್ 5ರಂದು ಬೆಳಗ್ಗೆ 11.45ರ ವಹಿವಾಟಿನ ಮಾಹಿತಿಯನ್ನ ಆಧರಿಸಿವೆ.)

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES