ಸರ್ಕಾರಿ ಸ್ವಾಮ್ಯದ ಜನರಲ್ ವಿಮಾ ಕಂಪನಿಗಳ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಹಣಕಾಸು ಸಚಿವಾಲಯ, ಕ್ಲೈಮ್ ಅನುಪಾತಗಳನ್ನು ಕಡಿಮೆ ಮಾಡಲು ಹಾಗೂ ದೂರದ ಪ್ರದೇಶಗಳಲ್ಲಿ ವಿಮಾ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಈ ಸಂಬಂಧ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.
ಸೆಪ್ಟೆಂಬರ್ 02, 2026ರಂದು ಆರ್ಥಿಕ ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಲೋಹಿಯಾ ಅಧ್ಯಕ್ಷತೆಯಲ್ಲಿ ನಡೆದ 2025-26ರ ವಿತ್ತೀಯ ವರ್ಷದ ಪರಿಶೀಲನಾ ಸಭೆಯಲ್ಲಿ ಲಕ್ಷಾಂತರ ಪಾಲಿಸಿದಾರರ ಹಿತದೃಷ್ಟಿಯಿಂದ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇವುಗಳಲ್ಲಿ ಮುಖ್ಯವಾಗಿ ಸಾಮಾನ್ಯ ಗ್ರಾಹಕರಿಗೆ ಅನುಕೂಲವಾಗುವಂತೆ ಪಾಲಿಸಿ ಕ್ಲೈಮ್‌ಗಳ ಅನಗತ್ಯ ವಿಳಂಬಕ್ಕೆ ಬ್ರೇಕ್ ಹಾಕಲಾಗಿದ್ದು ಪಾಲಿಸಿದಾರರ ಕ್ಲೈಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ಸೂಚಿಸಲಾಗಿದೆ. ಜೊತೆಗೆ ಪಾಲಿಸಿದಾರರ ದೂರುಗಳಿಗೆ ವೇಗವಾಗಿ ಪರಿಹರಿಸುವಂತೆಯೂ ನಿರ್ದೇಶಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ...
ತ್ವರಿತ ಕ್ಲೈಮ್ ಇತ್ಯರ್ಥ:
ಹಣಕಾಸು ಸಚಿವಾಲಯವು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿದೆ ಕ್ಲೈಮ್ ಅನುಪಾತ ಮತ್ತು ಡಿಜಿಟಲೀಕರಣ ಪ್ರಕ್ರಿಯೆಗಳನ್ನು ಸಮತೋಲನಗೊಳಿಸುವ ಮೂಲಕ ನಗದು ರಹಿತ ವೈದ್ಯಕೀಯ ಕ್ಲೈಮ್‌ಗಳು ಅಥವಾ ಕಾರು ಅಪಘಾತದ ಕ್ಲೈಮ್‌ಗಳನ್ನು ವೇಗವಾಗಿ ಇತ್ಯರ್ಥ ಪಡಿಸಲು ಸೂಚಿಸಿದೆ.
ಪಾಲಿಸಿದಾರರ ಕುಂದುಕೊರತೆಗಳಿಗೆ ಪರಿಹಾರ:
ಪಾಲಿಸಿದಾರರ ಕ್ಲೈಮ್‌ಗಳು ಯಾವುದೇ ಕಾರಣವಿಲ್ಲದೆ ರಿಜೆಕ್ಟ್ ಆದರೆ ಅಂತಹ ಫೈಲ್‌ಗಳನ್ನು ಇನ್ಮುಂದೆ ದೃಢವಾದ ಕುಂದುಕೊರತೆ ಪರಿಹಾರ ವ್ಯವಸ್ಥೆಯ ಮೂಲಕ ತಕ್ಷಣವೇ ಮತ್ತೆ ಕ್ಲೈಮ್ ಸಲ್ಲಿಸಲು ಅನುವು ಮಾಡಿಕೊಡಬಹುದು.
ಕೈಗೆಟುಕುವ ವಿಮಾ ಉತ್ಪನ್ನಗಳ ಪ್ರಾರಂಭ:
ದೇಶದ ಮೂಲೆ ಮೂಲೆಗೂ ವಿಮಾ ಸೌಲಭ್ಯಗಳು ಲಭಿಸುವಂತಾಗಬೇಕು ಎಂಬ ಮಹಾ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳು ಕಡಿಮೆ ಆದಾಯ ಹೊಂದಿರುವವರಿಗಾಗಿ ಕೈಗೆಟುಕುವ ಸೂಕ್ಷ್ಮ ವಿಮಾ ಉತ್ಪನ್ನಗಳನ್ನು ಪ್ರಾರಂಭಿಸಲು ತಯಾರಿ ನಡೆಸಿವೆ.
ಅನುಷ್ಠಾನ ಕಾಲಮಿತಿ:
ಇನ್ನು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳು ತಮ್ಮ ಡಿಜಿಟಲ್ ಮತ್ತು ಕುಂದುಕೊರತೆ ವ್ಯವಸ್ಥೆಯನ್ನು ಸುಧಾರಿಸಲು ಪ್ರಸಕ್ತ ವಿತ್ತೀಯ ವರ್ಷ 2025-26ರ ಉಳಿದ ತಿಂಗಳುಗಳಿಗೆ ಕಠಿಣ ಗುರಿಗಳನನು ನೀಡಲಾಗಿದ್ದು ಮುಂದಿನ ತ್ರೈಮಾಸಿಕದಲ್ಲಿ ಇದರ ಪರಿಣಾಮ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ.
2025-26ರ ವಿತ್ತೀಯ ವರ್ಷದ ಪರಿಶೀಲನಾ ಸಭೆಯಲ್ಲಿ ಕೈಗೊಂಡ ಇತರ ಪ್ರಮುಖ ನಿರ್ಧಾರಗಳೆಂದರೆ..
* ಹಣಕಾಸು ಸಚಿವಾಲಯವು ಇನ್‌ಕರ್ಡ್ ಕ್ಲೈಮ್ ರೇಷಿಯೋ (ICR) ಕಡಿಮೆ ಮಾಡಲು ಸೂಚಿಸಿದೆ.
* ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳು ಇನ್ಮುಂದೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ತಮ್ಮ ಕಾರ್ಯಕ್ಷಮತೆಯ ಬಗ್ಗೆ ವರದಿ ಸಲ್ಲಿಸಬೇಕಾಗುತ್ತದೆ.
* ಹಣಕಾಸು ಸಚಿವಾಲಯದ ಈ ಕ್ರಮವು, ವಿಮಾ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
* ಕುಂದುಕೊರತೆಗಳ ಪರಿಹಾರಕ್ಕೆ ಆದ್ಯತೆ ನೀಡಲು ಸೂಚನೆ.
* ಅಷ್ಟೇ ಅಲ್ಲ, ಈ ಕ್ರಮದಿಂದ ಸರ್ಕಾರಿ ವಿಮಾ ಕಂಪನಿಗಳ ಕಾರ್ಯಾಚರಣೆ ಹಿಂದೆಂದಿಗಿಂತಲೂ ಹೆಚ್ಚು ಪಾರದರ್ಶಕಗೊಳ್ಳಲಿದ್ದು, ಪಾಲಿಸಿದಾರರಲ್ಲಿ ವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಇನ್‌ಕರ್ಡ್ ಕ್ಲೈಮ್ ರೇಷಿಯೋ (ICR) ಎಂದರೆ ಏನು? ಇದನ್ನು ಕಡಿಮೆ ಮಾಡುವುದು ಏಕೆ ಅಗತ್ಯವಾಗಿದೆ?
ವಿತ್ತೀಯ ಸಚಿವಾಲಯವು ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಲಾಭದಾಯಕ ವ್ಯವಹಾರಗಳ ಮೇಲೆ ಗಮನ ಕೇಂದ್ರೀಕರಿಸಲು, ಅವುಗಳ ಇನ್‌ಕರ್ಡ್ ಕ್ಲೈಮ್ ರೇಷಿಯೋ (ICR) ಕಡಿಮೆ ಮಾಡಲು ಸೂಚನೆ ನೀಡಿದೆ. ಸಾಮಾನ್ಯವಾಗಿ, ಇನ್‌ಕರ್ಡ್ ಕ್ಲೈಮ್ ರೇಷಿಯೋ (ICR)ಎನ್ನುವುದು ವಿಮಾ ಕಂಪನಿಯ ಒಟ್ಟು ಪ್ರೀಮಿಯಂಗಳಲ್ಲಿ ಗ್ರಾಹಕರ ಹಕ್ಕುಗಳನ್ನು ಪಾವತಿಸಲು ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ಸಂಕೇತಿಸುತ್ತದೆ.
ಯಾವುದೇ ಒಂದು ವಿಮಾ ಕಂಪನಿಯ ಕ್ಲೈಮ್ ಅನುಪಾತವು ಶೇ. 100ಕ್ಕಿಂತ ಹೆಚ್ಚಾದರೆ, ಕಂಪನಿಯು ಪ್ರೀಮಿಯಂಗಳಿಂದ ಲಾಭ ಗಳಿಸುವುದಕ್ಕಿಂತ ಹೆಚ್ಚಿನ ಹಣವನ್ನು ಕ್ಲೈಮ್‌ಗಳನ್ನು ಇತ್ಯರ್ಥಪಡಿಸಲು ಖರ್ಚು ಮಾಡುತ್ತದೆ ಎಂದು ಅರ್ಥ. ಒಂದೊಮ್ಮೆ ಹೀಗಾದಲ್ಲಿ ಇದುಕಂಪನಿಯ ಅಂಡರ್‌ರೈಟಿಂಗ್ ಸಾಮರ್ಥ್ಯದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಆ ವಿಮಾ ಕಂಪನಿಯ ಆರ್ಥಿಕ ನಷ್ಟವನ್ನು ಕೂಡ ಹೆಚ್ಚಿಸುತ್ತದೆ.
ವಿಮಾ ಕಂಪನಿಗಳು ಬಲವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು, ನಿಜವಾದ ಗ್ರಾಹಕರು ಸಕಾಲಿಕವಾಗಿ ತಮ್ಮ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಪಾಯವನ್ನು ನಿಖರವಾಗಿ ನಿರ್ಣಯಿಸಲು ಸಚಿವಾಲಯವು ಕಂಪನಿಗಳಿಗೆ ನಿರ್ದೇಶಿಸಿದೆ.
ಪ್ರತಿ ʼಮೂರುʼ ತಿಂಗಳಿಗೆ ಒಮ್ಮೆ ಕಾರ್ಯಕ್ಷಮತೆ ಪರಿಶೀಲನೆ:
ಆರ್ಥಿಕ ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಲೋಹಿಯಾ ಅಧ್ಯಕ್ಷತೆಯಲ್ಲಿ ನಡೆದ 2025-26ರ ವಿತ್ತೀಯ ವರ್ಷದ ಪರಿಶೀಲನಾ ಸಭೆಯು, ವಿಮಾ ಕಂಪನಿಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಸಾಮಾನ್ಯ ಮತ್ತು ಪ್ರಾಮಾಣೀಕೃತ ಪ್ರಮುಖ ಕಾರ್ಯಕ್ಷಮತೆ ಸೂಚಕ- ಕೆಪಿಐ ಚೌಕಟ್ಟನ್ನು ಜಾರಿಗೆ ತರುವ ಅಗತ್ಯತೆಯನ್ನು ಒತ್ತಿ ಹೇಳಿದೆ. ಈ ಹೊಸ ವ್ಯವಸ್ಥೆಯ ಅಡಿಯಲ್ಲಿ, ನಾಲ್ಕು ಪ್ರಮುಖ ಸಾರ್ವಜನಿಕ ವಿಮಾ ಕಂಪನಿಗಳ ವಿತ್ತೀಯ ಹಾಗೂ ವಿತ್ತೀಯೇತರ ಕಾರ್ಯಕ್ಷಮತೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಲಾಗುವುದು ಎಂದು ತಿಳಿದುಬಂದಿದೆ.
ವಿಮಾ ಕಂಪನಿಗಳು ಕೇವಲ ಪ್ರೀಮಿಯಂ ಸಂಗ್ರಹಕ್ಕೆ ಸೀಮಿತಗೊಳ್ಳಬಾರದು. ಇದರ ಬದಲಿಗೆ, ಐಟಿ ವೆಚ್ಚಗಳನ್ನು ನಿಯಂತ್ರಿಸುವಾಗ ತ್ವರಿತವಾಗಿ ಡಿಜಿಟಲೀಕರಣಗೊಳಿಸಬೇಕು ಎಂದು ಹಣಕಾಸು ಸೇವೆಗಳ ಇಲಾಖೆಯ ಆರ್ಥಿಕ ವರ್ಷದ ಪರಿಶೀಲನಾ ಸಭೆಯದ ಅಧ್ಯಕ್ಷತೆ ವಹಿಸಿದ್ದ ಸಂಜಯ್ ಲೋಹಿಯಾ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಸಹ ಕೆಲವು ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಿಗೆ ಜೀವ ವಿಮಾ ರಕ್ಷಣೆ ಹಾಗೂ ಆರೋಗ್ಯ ವಿಮಾ ರಕ್ಷಣೆ ತಲುಪಿಲ್ಲ. ದೇಶದ ಮೂಲೆ ಮೂಲೆಗಳಿಗೆ ಆರೋಗ್ಯ, ಜೀವ ವಿಮಾ ಸೌಲಭ್ಯಗಳು ತಲುಪುವಂತಾಗಬೇಕು. ಇದಕ್ಕಾಗಿ ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ವೇದಿಕೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಾದ ಅಗತ್ಯತೆಯನ್ನು ಸಂಜಯ್ ಲೋಹಿಯಾ ಸಭೆಯಲ್ಲಿ ಒತ್ತಿ ಹೇಳಿದ್ದಾರೆ.
ಗ್ರಾಹಕರ ಕುಂದುಕೊರತೆಗಳ ಪರಿಹಾರಕ್ಕೆ ಆದ್ಯತೆ:
ಕ್ಲೈಮ್‌ಗಳ ಇತ್ಯರ್ಥಕ್ಕೆ ಸರ್ಕಾರಿ ಕಂಪನಿಗಳ ಕಚೇರಿಗಳಿಗೆ ಪದೇ ಪದೇ ಅಲೆದಾಡಬೇಕಾಗುತ್ತದೆ ಎಂಬುದು ಪಾಲಿಸಿದಾರರ ಪ್ರಮುಖ ದೂರಾಗಿದೆ. ಇದನನು ನಿವಾರಿಸಲು ಕಂಪನಿಗಳು ಮೊದಲು ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು ಎಂದು ಕಾರ್ಯದರ್ಶಿಗಳು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ತಾಕೀತು ಮಾಡಿದರು. ಈಗ ಗ್ರಾಹಕರ ದೂರುಗಳನ್ನು ಕೇವಲ ಮುಚ್ಚಿದ ಫೈಲ್‌ಗಳ ಸಂಖ್ಯೆಯಿಂದ ಅಲ್ಲ ಗುಣಮಟ್ಟದ ಪರಿಹಾರದಿಂದ ಗುರುತಿಸಬೇಕು ಎಂದವರು ನಿರ್ದೇಶನ ನೀಡಿದ್ದಾರೆ.
ಹಣಕಾಸು ಸಚಿವಾಲಯದ ನಿರ್ಧಾರದಿಂದ ಪಾಲಿಸಿದಾರರಿಗೆ ಏನು ಪ್ರಯೋಜನ:
ಇತ್ತೀಚಿಗೆ ಆರ್ಥಿಕ ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಲೋಹಿಯಾ ಅಧ್ಯಕ್ಷತೆಯಲ್ಲಿ ನಡೆದ 2025-26ರ ವಿತ್ತೀಯ ವರ್ಷದ ಪರಿಶೀಲನಾ ಸಭೆಯಲ್ಲಿ ಕೈಗೊಳ್ಳಲಾದ ಈ ಕೆಲವು ಪ್ರಮುಖ ಕ್ರಮಗಳು ಸಾಮಾನ್ಯ ಜನರಿಗೆ ಜಾಕ್‌ಪಾಟ್ ಎಂತಲೇ ಹೇಳಬಹುದು. ಹಣಕಾಸು ಸಚಿವಾಲಯದ ಈ ಮಹತ್ವದ ನಿರ್ದೇಶನವು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಗಳಿಂದ ಆರೋಗ್ಯ, ವಾಹನ, ಬೆಳೆ, ಅಂಗಡಿ ಸೇರಿದಂತೆ ನಾನಾ ಬಗೆಯ ವಿಮೆ ಖರೀದಿಸುವ ಕೋಟ್ಯಂತರ ಗ್ರಾಹಕರ ಮೇಲೆ ಇದು ನೇರ ಪರಿಣಾಮವನ್ನು ಉಂಟು ಮಾಡುತ್ತದೆ.