SOCIAL MEDIA

Newsletter

PARTNER SITES
Select Language Select State

ಷೇರುಪೇಟೆಯಲ್ಲಿ ದೀಪಾವಳಿ ಸಂಭ್ರಮ; ಸೆನ್ಸೆಕ್ಸ್ 1,870 ಅಂಕ ಜಿಗಿತ, ಹೂಡಿಕೆದಾರರಿಗೆ ₹7.35 ಲಕ್ಷ ಕೋಟಿ ಲಾಭ!

ಗುರುವಾರ ಭಾರತೀಯ ಷೇರುಮಾರುಕಟ್ಟೆಯಲ್ಲಿ ಭರ್ಜರಿ ಚೇತರಿಕೆ ಕಂಡುಬಂದಿದೆ. ಸೆನ್ಸೆಕ್ಸ್‌ 1,470.42 ಅಂಕ ಏರಿಕೆಯಾಗಿ 78,771.82ಕ್ಕೆ ತಲುಪಿದರೆ, ನಿಫ್ಟಿ 431.40 ಅಂಕ ಹೆಚ್ಚಾಗಿ 24,380.15ಕ್ಕೆ ತಲುಪಿದೆ. ಬ್ಯಾಂಕಿಂಗ್, ಐಟಿ ಮತ್ತು ಆಟೋ ವಲಯದ ಷೇರುಗಳು ಏರಿಕೆಗೆ ಪ್ರಮುಖ ಬೆಂಬಲ ನೀಡಿವೆ. ಕಚ್ಚಾ ತೈಲ ಬೆಲೆ ಇಳಿಕೆ, ವಿದೇಶಿ ಹೂಡಿಕೆದಾರರ ಖರೀದಿ ಹಾಗೂ ಜಾಗತಿಕ ಅನಿಶ್ಚಿತತೆ ಕಡಿಮೆಯಾಗುವ ನಿರೀಕ್ಷೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹7.35 ಲಕ್ಷ ಕೋಟಿ ಹೆಚ್ಚಾಗಿದೆ.

Written By Puttaraj K Alur
Published: Nov 05, 2026, 13:33 IST | Updated: Nov 05, 2026, 13:54 IST
Image Credit: Stock Market
Join

Stock Market Rally: ಭಾರತೀಯ ಷೇರುಮಾರುಕಟ್ಟೆಯಲ್ಲಿ ಸತತ ಏರಿಕೆಯ ಓಟ ಮುಂದುವರಿದಿದೆ. ಗುರುವಾರದ ವಹಿವಾಟಿನಲ್ಲಿಯೂ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಭರ್ಜರಿ ಏರಿಕೆ ದಾಖಲಿಸಿವೆ. ಪ್ರಮುಖ ಕಂಪನಿಗಳ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ ಪರಿಣಾಮ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ. ಲಭ್ಯವಿರುವ ಮಾರುಕಟ್ಟೆ ವರದಿಯ ಪ್ರಕಾರ, ಸೆನ್ಸೆಕ್ಸ್ 1,888.37 (2.44%) ಅಂಕಗಳಷ್ಟು ಏರಿಕೆಯಾಗಿ 79,189.77 ಮಟ್ಟ ತಲುಪಿದೆ. ಮತ್ತೊಂದೆಡೆ ನಿಫ್ಟಿ 541.40 (2.26%) ಅಂಕಗಳ ಏರಿಕೆಯೊಂದಿಗೆ 24,502.00 ಮಟ್ಟದಲ್ಲಿ ವಹಿವಾಟು ನಡೆಸಿದೆ.

ಯಾವ ಸೂಚ್ಯಂಕ ಎಷ್ಟು ಏರಿಕೆ?

ಗುರುವಾರದ ವಹಿವಾಟಿನಲ್ಲಿ ಪ್ರಮುಖ ಸೂಚ್ಯಂಕಗಳ ಜೊತೆಗೆ ಬ್ಯಾಂಕಿಂಗ್, ಆಟೋಮೊಬೈಲ್, ಐಟಿ ಸೇರಿದಂತೆ ಹಲವು ವಲಯಗಳ ಸೂಚ್ಯಂಕಗಳೂ ಏರಿಕೆ ಕಂಡಿವೆ.

- ಸೆನ್ಸೆಕ್ಸ್: +1,888.37 (2.44%)
- ನಿಫ್ಟಿ 50: +541.40 (2.26%)
- ಬ್ಯಾಂಕ್ ನಿಫ್ಟಿ: +1,684.85 (3.01%)
- ನಿಫ್ಟಿ ಐಟಿ: +784.55 (2.45%) 
- ನಿಫ್ಟಿ ಆಟೋ: +1,102.50 (4.16%)
- ನಿಫ್ಟಿ ಪಿಎಸ್‌ಯು ಬ್ಯಾಂಕ್: +245.05 (2.95%)
- ನಿಫ್ಟಿ ಪ್ರೈವೇಟ್ ಬ್ಯಾಂಕ್: +920.00 (3.33%)
- ನಿಫ್ಟಿ ರಿಯಾಲ್ಟಿ: ಶೇ.2.74%ರಷ್ಟು ಏರಿಕೆ 
- ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್: ಶೇ.1ರಿಂದ 2ರಷ್ಟು ಏರಿಕೆ
- ನಿಫ್ಟಿ ಮೆಟಲ್: ಶೇ.1ರಿಂದ 2ರಷ್ಟು ಏರಿಕೆ

ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ವಿಭಾಗಗಳಲ್ಲಿಯೂ ಖರೀದಿ ಚಟುವಟಿಕೆ ಕಂಡುಬಂದಿದೆ. ಮಾರುಕಟ್ಟೆಯ ಬಹುತೇಕ ವಲಯಗಳಲ್ಲಿ ಏರಿಕೆ ದಾಖಲಾಗಿರುವುದು ಗುರುವಾರದ ವಹಿವಾಟಿನ ಪ್ರಮುಖ ಅಂಶವಾಗಿದೆ. 

ಹೂಡಿಕೆದಾರರಿಗೆ ₹7.35 ಲಕ್ಷ ಕೋಟಿ ಲಾಭ

ಷೇರುಮಾರುಕಟ್ಟೆಯ ಈ ಏರಿಕೆಯಿಂದ ಹೂಡಿಕೆದಾರರ ಸಂಪತ್ತಿನ ಮೌಲ್ಯದಲ್ಲಿಯೂ ಭಾರಿ ಹೆಚ್ಚಳವಾಗಿದೆ. ಬಾಂಬೆ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣ 500.79 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಹಿಂದಿನ ವಹಿವಾಟಿನ ಅವಧಿಯಲ್ಲಿ ಇದು ಸುಮಾರು 493.44 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಇದರಿಂದ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತಿಗೆ ಸುಮಾರು 7.35 ಲಕ್ಷ ಕೋಟಿ ರೂಪಾಯಿ ಸೇರ್ಪಡೆಯಾಗಿದೆ. ಷೇರುಗಳ ಬೆಲೆ ಏರಿಕೆಯಿಂದ ಹೂಡಿಕೆದಾರರ ಒಟ್ಟು ಹೂಡಿಕೆಯ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದೆ.  

ಷೇರುಮಾರುಕಟ್ಟೆ ಏರಿಕೆಗೆ ಪ್ರಮುಖ ಕಾರಣಗಳೇನು?

ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 94 ಡಾಲರ್ ಮಟ್ಟಕ್ಕೆ ಕುಸಿದಿದೆ. ಹಿಂದಿನ ದಿನವೂ ತೈಲದ ಬೆಲೆಯಲ್ಲಿ ದೊಡ್ಡ ಪ್ರಮಾಣದ ಇಳಿಕೆ ದಾಖಲಾಗಿತ್ತು. ಭಾರತವು ಕಚ್ಚಾ ತೈಲ ಆಮದಿನ ಮೇಲೆ ಅವಲಂಬಿತವಾಗಿರುವುದರಿಂದ ತೈಲ ಬೆಲೆ ಇಳಿಕೆ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

ಅಮೆರಿಕ ಮಧ್ಯಂತರ ಚುನಾವಣೆಯ ಫಲಿತಾಂಶ: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಸಾಧನೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆಗಳು ಮೂಡಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ದೊಡ್ಡ ಹಿನ್ನೆಡೆ ಉಂಟಾಗಿದ್ದು, ಅಮೆರಿಕದ ವ್ಯಾಪಾರ ಸುಂಕ ನೀತಿಯಲ್ಲಿ ಬದಲಾವಣೆ ಸಾಧ್ಯತೆ ಹಾಗೂ ಇರಾನ್ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಗಳು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿವೆ. 

ವಿದೇಶಿ ಹೂಡಿಕೆದಾರರ ಖರೀದಿ: ಹಲವು ದಿನಗಳಿಂದ ಭಾರತೀಯ ಷೇರುಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇದೀಗ ಮತ್ತೆ ಖರೀದಿಗೆ ಮುಂದಾಗಿದ್ದಾರೆ. ನವೆಂಬರ್ 4ರಂದು ವಿದೇಶಿ ಹೂಡಿಕೆದಾರರು ಸುಮಾರು 7,284 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನ ಖರೀದಿಸಿದ್ದಾರೆ. ಇದರಿಂದ ಮಾರುಕಟ್ಟೆಗೆ ಮತ್ತಷ್ಟು ಬೆಂಬಲ ದೊರೆತಿದೆ.

ರೂಪಾಯಿ ಮೌಲ್ಯದಲ್ಲಿ ಚೇತರಿಕೆ: ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಧಾರಣೆ ಕಂಡುಬಂದಿರುವುದೂ ಮಾರುಕಟ್ಟೆಯ ಸಕಾರಾತ್ಮಕ ವಾತಾವರಣಕ್ಕೆ ಪೂರಕವಾಗಿದೆ. ವಿದೇಶಿ ಬಂಡವಾಳದ ಒಳಹರಿವು ಮತ್ತು ಕಚ್ಚಾ ತೈಲ ಬೆಲೆ ಇಳಿಕೆ ರೂಪಾಯಿಗೆ ಬೆಂಬಲ ನೀಡಿವೆ.

ಬ್ಯಾಂಕಿಂಗ್ ಷೇರುಗಳ ಖರೀದಿ: ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಪ್ರಮುಖ ಕಂಪನಿಗಳ ಷೇರುಗಳಲ್ಲಿ ಖರೀದಿ ಹೆಚ್ಚಾಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಕಂಪನಿಗಳ ಷೇರುಗಳ ಏರಿಕೆ ನಿಫ್ಟಿಯ ಮುನ್ನಡೆಗೆ ನೆರವಾಗಿದೆ.  

ಒಟ್ನಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ, ವಿದೇಶಿ ಹೂಡಿಕೆದಾರರ ಖರೀದಿ, ಅಮೆರಿಕದ ಚುನಾವಣಾ ಫಲಿತಾಂಶದಿಂದ ಸುಧಾರಿಸಿದ ಜಾಗತಿಕ ವಾತಾವರಣ ಹಾಗೂ ಬ್ಯಾಂಕಿಂಗ್ ಸೇರಿದಂತೆ ವಿವಿಧ ವಲಯಗಳ ಷೇರುಗಳ ಏರಿಕೆ ಭಾರತೀಯ ಷೇರುಮಾರುಕಟ್ಟೆಗೆ ಬಲ ನೀಡಿವೆ. ಈ ಬೆಳವಣಿಗೆಗಳಿಂದ ಗುರುವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿಗೆ ಸುಮಾರು ₹7.35 ಲಕ್ಷ ಕೋಟಿ ಸೇರ್ಪಡೆಯಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES