SOCIAL MEDIA

Newsletter

PARTNER SITES
Select Language Select State

Canara Bank FD: 365 ದಿನ ಹಣ ಇಟ್ಟರೆ ಎಷ್ಟು ಬಡ್ಡಿ ಲಾಭ ಸಿಗುತ್ತೆ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ

ಕೆನರಾ ಬ್ಯಾಂಕ್‌ನಲ್ಲಿ FD ಮಾಡುವ ಮುನ್ನ ಗ್ರಾಹಕರು ತಮ್ಮ ಹಣಕಾಸಿನ ಅಗತ್ಯವನ್ನ ಪರಿಗಣಿಸುವುದು ಮುಖ್ಯ. ತುರ್ತು ಸಂದರ್ಭದಲ್ಲಿ ಹಣ ಬೇಕಾಗುವ ಸಾಧ್ಯತೆ ಇದ್ದರೆ, ಸಂಪೂರ್ಣ ಉಳಿತಾಯವನ್ನ ಒಂದೇ FDಯಲ್ಲಿ ಹೂಡಿಕೆ ಮಾಡುವ ಬದಲು ಬೇರೆ ಬೇರೆ ಅವಧಿಗಳಲ್ಲಿ FD ಮಾಡಬಹುದು.

Reported By Puttaraj K Alur Written By Puttaraj K Alur
Published: Sep 20, 2026, 03:38 PM IST | Updated: Sep 20, 2026, 03:48 PM IST
Image Credit: Canara Bank FD
Join

Canara Bank 365 Days FD: ಹಣವನ್ನ ಸುರಕ್ಷಿತವಾಗಿ ಹೂಡಿಕೆ ಮಾಡಿ, ನಿಶ್ಚಿತ ಆದಾಯ ಪಡೆಯಲು ಫಿಕ್ಸೆಡ್ ಡೆಪಾಸಿಟ್‌ (FD) ಪ್ರಮುಖ ಆಯ್ಕೆಗಳಲ್ಲಿ ಒಂದಾಗಿದೆ. ಮಾರುಕಟ್ಟೆಯ ಏರಿಳಿತದ ಅಪಾಯವಿಲ್ಲದೆ ನಿರ್ದಿಷ್ಟ ಅವಧಿಗೆ ಹಣವನ್ನ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು, ಅವಧಿ ಪೂರ್ಣಗೊಂಡ ಬಳಿಕ ಮೂಲಧನದ ಜೊತೆಗೆ ಬಡ್ಡಿಯನ್ನ ಪಡೆಯಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ನ 365 ದಿನಗಳ FD ಬಡ್ಡಿದರ ಗ್ರಾಹಕರ ಗಮನ ಸೆಳೆಯುತ್ತಿದೆ.

ಕೆನರಾ ಬ್ಯಾಂಕ್‌ನ ಪ್ರಸ್ತುತ ಬಡ್ಡಿದರ ಪಟ್ಟಿಯ ಪ್ರಕಾರ, 1 ವರ್ಷದಿಂದ 1 ವರ್ಷ 3 ತಿಂಗಳವರೆಗಿನ ಅವಧಿಯ ಠೇವಣಿಗಳಿಗೆ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.6.25ರಷ್ಟು ಬಡ್ಡಿ ನೀಡಲಾಗುತ್ತಿದೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಇದೇ ಅವಧಿಗೆ ಶೇ.6.75ರಷ್ಟು ಬಡ್ಡಿ ಲಭ್ಯವಿದೆ. ಅಂದರೆ ಸಾಮಾನ್ಯ ಗ್ರಾಹಕರಿಗಿಂತ ಹಿರಿಯ ನಾಗರಿಕರಿಗೆ ಶೇ.0.50ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ.  

365 ದಿನಗಳ FDಗೆ ಎಷ್ಟು ಲಾಭ?

ಉದಾಹರಣೆಗೆ ಯಾವುದೇ ಒಬ್ಬ ಸಾಮಾನ್ಯ ಗ್ರಾಹಕ 365 ದಿನಗಳ ಅವಧಿಗೆ ₹1 ಲಕ್ಷವನ್ನ FDಯಲ್ಲಿ ಹೂಡಿಕೆ ಮಾಡಿದರೆ, ಶೇ.6.25ರ ಬಡ್ಡಿದರದ ಆಧಾರದ ಮೇಲೆ ಸರಳವಾಗಿ ಲೆಕ್ಕ ಹಾಕಿದಾಗ ಸುಮಾರು ₹6,250ರಷ್ಟು ವಾರ್ಷಿಕ ಬಡ್ಡಿ ಬರುತ್ತದೆ. ಆದರೆ ನಿಜವಾದ ಮೆಚ್ಯೂರಿಟಿ ಮೊತ್ತವು ಬ್ಯಾಂಕ್‌ನ ಬಡ್ಡಿ ಲೆಕ್ಕಾಚಾರದ ವಿಧಾನ ಮತ್ತು FD ಪ್ರಕಾರವನ್ನ ಅವಲಂಬಿಸಿರುತ್ತದೆ.

ಕೆನರಾ ಬ್ಯಾಂಕ್ ತನ್ನ ಟರ್ಮ್ ಡೆಪಾಸಿಟ್‌ಗಳಲ್ಲಿ ಬಡ್ಡಿಯನ್ನ ಸಾಮಾನ್ಯವಾಗಿ ತ್ರೈಮಾಸಿಕ ಆಧಾರದ ಮೇಲೆ ಲೆಕ್ಕ ಹಾಕುತ್ತದೆ. ದಿನಗಳ ಆಧಾರದ ಮೇಲೆ ನಿರ್ದಿಷ್ಟ ಅವಧಿಯ ಠೇವಣಿಗಳಿಗೆ ಬಡ್ಡಿ ಲೆಕ್ಕಾಚಾರ ಮಾಡುವಾಗ ನಿಜವಾದ ದಿನಗಳ ಸಂಖ್ಯೆಯನ್ನ ಪರಿಗಣಿಸಲಾಗುತ್ತದೆ. ಹೀಗಾಗಿ FD ತೆರೆಯುವ ಮುನ್ನ ಗ್ರಾಹಕರು ಬ್ಯಾಂಕ್ ನೀಡುವ ಮೆಚ್ಯೂರಿಟಿ ಮೊತ್ತವನ್ನ ಪರಿಶೀಲಿಸುವುದು ಸೂಕ್ತ.  

ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ

ಹಿರಿಯ ನಾಗರಿಕರಿಗೆ FDಯಲ್ಲಿ ಹೆಚ್ಚುವರಿ ಬಡ್ಡಿ ನೀಡುವುದು ಕೆನರಾ ಬ್ಯಾಂಕ್‌ನ ಪ್ರಮುಖ ಸೌಲಭ್ಯಗಳಲ್ಲಿ ಒಂದಾಗಿದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಗ್ರಾಹಕರಿಗೆ 180 ದಿನ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಅರ್ಹ ದೇಶೀಯ ಟರ್ಮ್ ಡೆಪಾಸಿಟ್‌ಗಳಿಗೆ ಸಾಮಾನ್ಯ ದರಕ್ಕಿಂತ ಹೆಚ್ಚುವರಿ ಶೇ.0.50ರಷ್ಟು ಬಡ್ಡಿ ನೀಡಲಾಗುತ್ತದೆ.  

ಅದರಂತೆ 365 ದಿನಗಳ FDಗೆ ಸಾಮಾನ್ಯ ಗ್ರಾಹಕರಿಗೆ ಶೇ.6.25ರ ಬಡ್ಡಿ ಸಿಗುತ್ತಿದ್ದರೆ, ಹಿರಿಯ ನಾಗರಿಕರಿಗೆ ಶೇ.6.75ರ ಬಡ್ಡಿ ದೊರೆಯುತ್ತದೆ. ಉದಾಹರಣೆಗೆ ₹1 ಲಕ್ಷ ಹೂಡಿಕೆಗೆ ಶೇ.6.75ರ ಸರಳ ವಾರ್ಷಿಕ ಲೆಕ್ಕದಲ್ಲಿ ಸುಮಾರು ₹6,750 ಬಡ್ಡಿ ಬರುತ್ತದೆ. ಆದರೆ ನಿಖರ ಮೆಚ್ಯೂರಿಟಿ ಮೊತ್ತವು ಬ್ಯಾಂಕ್‌ನ ಅನ್ವಯಿಸುವ ಲೆಕ್ಕಾಚಾರ ಪದ್ಧತಿಯ ಮೇಲೆ ಅವಲಂಬಿತವಾಗಿರುತ್ತದೆ.

ಕೆನರಾ ಬ್ಯಾಂಕ್‌ನಲ್ಲಿ FD ಮಾಡುವ ಮುನ್ನ ಗ್ರಾಹಕರು ತಮ್ಮ ಹಣಕಾಸಿನ ಅಗತ್ಯವನ್ನ ಪರಿಗಣಿಸುವುದು ಮುಖ್ಯ. ತುರ್ತು ಸಂದರ್ಭದಲ್ಲಿ ಹಣ ಬೇಕಾಗುವ ಸಾಧ್ಯತೆ ಇದ್ದರೆ, ಸಂಪೂರ್ಣ ಉಳಿತಾಯವನ್ನ ಒಂದೇ FDಯಲ್ಲಿ ಹೂಡಿಕೆ ಮಾಡುವ ಬದಲು ಬೇರೆ ಬೇರೆ ಅವಧಿಗಳಲ್ಲಿ FD ಮಾಡಬಹುದು. ಇದನ್ನ ‘FD Laddering’ ಎಂದು ಕರೆಯಲಾಗುತ್ತದೆ. ಇದರಿಂದ ಅಗತ್ಯವಿದ್ದಾಗ ಒಂದು ಠೇವಣಿಯನ್ನ ಮಾತ್ರ ಮುರಿಯುವ ಅವಕಾಶ ಸಿಗಬಹುದು. ಅಲ್ಲದೆ ಬಡ್ಡಿಯನ್ನ ಅವಧಿ ಪೂರ್ಣಗೊಂಡ ನಂತರ ಪಡೆಯಬೇಕೇ ಅಥವಾ ನಿಯಮಿತವಾಗಿ ಪಡೆಯಬೇಕೇ ಎಂಬುದನ್ನೂ ಆಯ್ಕೆ ಮಾಡಬಹುದು. ಹಿರಿಯ ನಾಗರಿಕರು ಹೆಚ್ಚುವರಿ ಬಡ್ಡಿದರದ ಲಾಭ ಪಡೆಯುವ ಜೊತೆಗೆ, FD ಬಡ್ಡಿಯಿಂದ ಉಂಟಾಗುವ ತೆರಿಗೆ ಹೊಣೆಗಾರಿಕೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಬಡ್ಡಿದರಗಳು ಕಾಲಾನುಸಾರ ಬದಲಾಗುವ ಸಾಧ್ಯತೆ ಇರುವುದರಿಂದ ಹೂಡಿಕೆ ಮಾಡುವ ದಿನದಂದು ಅನ್ವಯಿಸುವ ದರವನ್ನ ಖಚಿತಪಡಿಸಿಕೊಳ್ಳುವುದು ಅಗತ್ಯ.

FD ಮಾಡುವ ಮುನ್ನ ಈ ಅಂಶ ಗಮನಿಸಿ

FDಯಲ್ಲಿ ಹೂಡಿಕೆ ಮಾಡುವಾಗ ಬಡ್ಡಿದರ ಮಾತ್ರವಲ್ಲದೆ, ಅವಧಿ, ಬಡ್ಡಿ ಪಾವತಿ ಆಯ್ಕೆ, ಮೆಚ್ಯೂರಿಟಿ ಮೊತ್ತ, ತೆರಿಗೆ ಮತ್ತು ಅವಧಿಗೂ ಮುನ್ನ ಹಣ ಹಿಂಪಡೆಯುವ ನಿಯಮಗಳನ್ನ ಪರಿಶೀಲಿಸುವುದು ಮುಖ್ಯ. ಕೆನರಾ ಬ್ಯಾಂಕ್‌ನ ಪ್ರಸ್ತುತ ನಿಯಮಗಳ ಪ್ರಕಾರ, ₹3 ಕೋಟಿಗಿಂತ ಕಡಿಮೆ ಇರುವ ಕೆಲವು ದೇಶೀಯ ಟರ್ಮ್ ಡೆಪಾಸಿಟ್‌ಗಳನ್ನ ಅವಧಿಗೂ ಮುನ್ನ ಮುಚ್ಚಿದರೆ ದಂಡ ಅನ್ವಯಿಸಬಹುದು. ಇನ್ನು FD ಬಡ್ಡಿ ಆದಾಯವು ತೆರಿಗೆ ನಿಯಮಗಳಿಗೆ ಒಳಪಟ್ಟಿರಬಹುದು. ಹೀಗಾಗಿ ದೊಡ್ಡ ಮೊತ್ತವನ್ನ FDಯಲ್ಲಿ ಹೂಡಿಕೆ ಮಾಡುವವರು ತಮ್ಮ ತೆರಿಗೆ ಸ್ಥಿತಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಯೋಜನೆ ರೂಪಿಸಿಕೊಳ್ಳುವುದು ಸೂಕ್ತ.

ಒಟ್ನಲ್ಲಿ 365 ದಿನಗಳ ಅವಧಿಗೆ FD ಮಾಡುವವರಿಗೆ ಕೆನರಾ ಬ್ಯಾಂಕ್‌ನಲ್ಲಿ ಪ್ರಸ್ತುತ ಸಾಮಾನ್ಯ ಗ್ರಾಹಕರಿಗೆ ಶೇ.6.25 ಹಾಗೂ ಹಿರಿಯ ನಾಗರಿಕರಿಗೆ ಶೇ.6.75ರ ಬಡ್ಡಿದರ ಲಭ್ಯವಿದೆ. FD ತೆರೆಯುವ ದಿನದಂದು ಅನ್ವಯಿಸುವ ಬಡ್ಡಿದರ ಹಾಗೂ ನಿಖರ ಮೆಚ್ಯೂರಿಟಿ ಮೊತ್ತವನ್ನ ಬ್ಯಾಂಕ್‌ನ ಅಧಿಕೃತ ಮೂಲದಿಂದ ಖಚಿತಪಡಿಸಿಕೊಂಡು ಹೂಡಿಕೆ ಮಾಡುವುದು ಅಗತ್ಯ.

(ಗಮನಿಸಿರಿ: ಈ ಲೇಖನವನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ಅಥವಾ ಯಾವುದೇ ಹಣಕಾಸಿನ ಅಪಾಯವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಯಾವುದೇ ರೀತಿಯ ಅಪಾಯಕ್ಕೆ Zee Kannada News ಜವಾಬ್ದಾರನಾಗಿರುವುದಿಲ್ಲ.)

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES