• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ವ್ಯಾಪಾರ
  • /BRICS Summit 2026: ಭಾರತಕ್ಕೆ ನಿಜವಾಗಿಯೂ ಏನು ಲಾಭ? ಡಾಲರ್‌ಗೆ ಪರ್ಯಾಯ ಎಂದರೇನು?

BRICS Summit 2026: ಭಾರತಕ್ಕೆ ನಿಜವಾಗಿಯೂ ಏನು ಲಾಭ? ಡಾಲರ್‌ಗೆ ಪರ್ಯಾಯ ಎಂದರೇನು?

ಭಾರತವು ರಷ್ಯಾ, ಬ್ರೆಜಿಲ್‌, UAE, ಇರಾನ್‌ ಸೇರಿದಂತೆ BRICS ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸುತ್ತದೆ. ಭವಿಷ್ಯದಲ್ಲಿ ಕೆಲವು ವ್ಯವಹಾರಗಳನ್ನು ರೂಪಾಯಿ ಸೇರಿದಂತೆ ಸ್ಥಳೀಯ ಕರೆನ್ಸಿಗಳಲ್ಲಿ ನಡೆಸಲು ಸಾಧ್ಯವಾದರೆ, ಪ್ರತಿ ವ್ಯವಹಾರದಲ್ಲೂ ಡಾಲರ್‌ ಮೂಲಕ ಹೋಗಬೇಕಾದ ಅಗತ್ಯ ಕಡಿಮೆಯಾಗಬಹುದು.

Reported ByPuttaraj K AlurEdited ByPuttaraj K Alur
Published: Sep 13, 2026, 08:52 AM IST|Updated: Sep 17, 2026, 04:00 PM IST
joinshare
BRICS Summit 2026: ಭಾರತಕ್ಕೆ ನಿಜವಾಗಿಯೂ ಏನು ಲಾಭ? ಡಾಲರ್‌ಗೆ ಪರ್ಯಾಯ ಎಂದರೇನು?
Image Credit: BRICS Summit

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

BRICS Summit 2026: ಭಾರತದ ಆತಿಥ್ಯದಲ್ಲಿ ಸೆಪ್ಟೆಂಬರ್‌ 12–13ರವರೆಗೂ ನವದೆಹಲಿಯಲ್ಲಿ 18ನೇ BRICS ಶೃಂಗಸಭೆ ನಡೆಯುತ್ತಿದೆ. ಜಾಗತಿಕ ವ್ಯಾಪಾರ, ಭದ್ರತೆ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ಮತ್ತು ಬಹುಧ್ರುವೀಯ ಜಾಗತಿಕ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಈ ಬಾರಿಯ BRICS ಸಭೆಯಲ್ಲಿ ಚರ್ಚೆಯಾಗಿವೆ. ಹಾಗಾದರೆ BRICSನಿಂದ ಭಾರತಕ್ಕೆ ನಿಜವಾಗಿಯೂ ಏನು ಲಾಭ? ಈ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಸಾಮಾನ್ಯ ಭಾರತೀಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಇಲ್ಲಿದೆ ಸಂಪೂರ್ಣ ಮಾಹಿತಿ...  

BRICS ಎಂದರೇನು?

BRICS ಎನ್ನುವುದು ಉದಯೋನ್ಮುಖ ಆರ್ಥಿಕ ಶಕ್ತಿಗಳ ನಡುವಿನ ಸಹಕಾರದ ವೇದಿಕೆಯಾಗಿದೆ. ಆರಂಭದಲ್ಲಿ ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಪ್ರಮುಖ ಸದಸ್ಯರಾಗಿದ್ದವು. ನಂತರ ಸಂಘಟನೆ ವಿಸ್ತರಿಸಿದ್ದು, ಈ ಬಾರಿ ಒಟ್ಟು 11 ಸದಸ್ಯ ರಾಷ್ಟ್ರಗಳೊಂದಿಗೆ BRICS ಕಾರ್ಯನಿರ್ವಹಿಸುತ್ತಿದೆ. ಭಾರತ 2026ರಲ್ಲಿ BRICS ಅಧ್ಯಕ್ಷತೆ ವಹಿಸಿಕೊಂಡಿದ್ದು, “Building for Resilience, Innovation, Cooperation and Sustainability” ಎಂಬ ಧ್ಯೇಯದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒತ್ತು ನೀಡಿದೆ.  

ಭಾರತಕ್ಕೆ ಮೊದಲ ದೊಡ್ಡ ಲಾಭ — ಜಾಗತಿಕ ಪ್ರಭಾವ

BRICSನಂತಹ ವೇದಿಕೆ ಭಾರತಕ್ಕೆ ತನ್ನ ವಿದೇಶಾಂಗ ಮತ್ತು ಆರ್ಥಿಕ ಆದ್ಯತೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಗಳು, ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ವಿಚಾರಗಳಲ್ಲಿ ಭಾರತ ತನ್ನ ನಿಲುವನ್ನು ಬಲಪಡಿಸಬಹುದು. ನವದೆಹಲಿಯಲ್ಲಿ ಅಂಗೀಕರಿಸಲಾದ ಘೋಷಣೆಯಲ್ಲಿ ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಯ ಅಗತ್ಯವನ್ನು BRICS ಒತ್ತಿಹೇಳಿದೆ. ಇದು ದೀರ್ಘಾವಧಿಯಲ್ಲಿ ಭಾರತದ ಜಾಗತಿಕ ಪಾತ್ರಕ್ಕೆ ಮಹತ್ವದ್ದಾಗಿದೆ.

ಡಾಲರ್‌ಗೆ ಪರ್ಯಾಯ ಎಂದರೆ ಏನು?

BRICS ಬಗ್ಗೆ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ De-dollarisation. ಅಂದರೆ, ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರದಲ್ಲಿ ಅಮೆರಿಕನ್ ಡಾಲರ್ ಮೇಲಿನ ಅವಲಂಬನೆಯನ್ನು ಹಂತಹಂತವಾಗಿ ಕಡಿಮೆ ಮಾಡುವುದು. ಆದರೆ ಇಲ್ಲಿ ಒಂದು ಪ್ರಮುಖ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. BRICS ದೇಶಗಳು ತಕ್ಷಣವೇ “BRICS Currency” ಎಂಬ ಹೊಸ ಸಾಮಾನ್ಯ ಕರೆನ್ಸಿಯನ್ನು ಬಿಡುಗಡೆ ಮಾಡುತ್ತಿವೆ ಎಂಬುದಲ್ಲ. ಈ ಬಾರಿ ಹೆಚ್ಚು ಗಮನ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಮತ್ತು ಗಡಿಯಾಚೆಗಿನ ಪಾವತಿ ವ್ಯವಸ್ಥೆಗಳನ್ನು ಸುಲಭಗೊಳಿಸುವುದರ ಮೇಲೆ ಇದೆ. BRICS Payment Task Force ಸದಸ್ಯ ರಾಷ್ಟ್ರಗಳ ಪಾವತಿ ವ್ಯವಸ್ಥೆಗಳ ನಡುವೆ ಹೆಚ್ಚಿನ ಸಂಪರ್ಕ ಸಾಧಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.  

ಭಾರತಕ್ಕೆ ಇದರಿಂದ ಏನು ಪ್ರಯೋಜನ?

ಭಾರತವು ರಷ್ಯಾ, ಬ್ರೆಜಿಲ್‌, UAE, ಇರಾನ್‌ ಸೇರಿದಂತೆ BRICS ರಾಷ್ಟ್ರಗಳೊಂದಿಗೆ ವ್ಯಾಪಾರ ನಡೆಸುತ್ತದೆ. ಭವಿಷ್ಯದಲ್ಲಿ ಕೆಲವು ವ್ಯವಹಾರಗಳನ್ನು ರೂಪಾಯಿ ಸೇರಿದಂತೆ ಸ್ಥಳೀಯ ಕರೆನ್ಸಿಗಳಲ್ಲಿ ನಡೆಸಲು ಸಾಧ್ಯವಾದರೆ, ಪ್ರತಿ ವ್ಯವಹಾರದಲ್ಲೂ ಡಾಲರ್‌ ಮೂಲಕ ಹೋಗಬೇಕಾದ ಅಗತ್ಯ ಕಡಿಮೆಯಾಗಬಹುದು. ಇದರಿಂದ ವಿದೇಶಿ ವಿನಿಮಯ ವೆಚ್ಚ ಮತ್ತು ಪಾವತಿ ಪ್ರಕ್ರಿಯೆಯ ಕೆಲವು ವೆಚ್ಚಗಳು ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ ಇದು ತಕ್ಷಣವೇ ರೂಪಾಯಿ ಜಾಗತಿಕ ಕರೆನ್ಸಿಯಾಗುತ್ತದೆ ಅಥವಾ ಡಾಲರ್‌ನ ಸ್ಥಾನ ಸಂಪೂರ್ಣವಾಗಿ ಕುಸಿಯುತ್ತದೆ ಎಂದರ್ಥವಲ್ಲ. ತಜ್ಞರ ಪ್ರಕಾರ, BRICS ಪ್ರಸ್ತುತ ಸಾಮಾನ್ಯ ಕರೆನ್ಸಿಗಿಂತ ಪಾವತಿ ವ್ಯವಸ್ಥೆಯ ಸುಧಾರಣೆಗೆ ಹೆಚ್ಚು ಒತ್ತು ನೀಡುತ್ತಿದೆ.

AI ಕ್ಷೇತ್ರದಲ್ಲಿ ಭಾರತಕ್ಕೆ ದೊಡ್ಡ ಅವಕಾಶ

ಈ ಬಾರಿ BRICSನಲ್ಲಿ Artificial Intelligence ಕೂಡ ಪ್ರಮುಖ ವಿಚಾರವಾಗಿದೆ. AI ತಂತ್ರಜ್ಞಾನವು ಕೆಲವೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ದೊಡ್ಡ ಕಂಪನಿಗಳ ಕೈಯಲ್ಲಿ ಸೀಮಿತವಾಗಬಾರದು ಎಂಬ ನಿಲುವಿಗೆ ಒತ್ತು ನೀಡಲಾಗಿದೆ. ವಿಶ್ವದ Global South ರಾಷ್ಟ್ರಗಳಿಗೆ ಅನುಕೂಲವಾಗುವಂತೆ ವಿಶ್ವಾಸಾರ್ಹ, ಎಲ್ಲರಿಗೂ ಲಭ್ಯವಾಗುವ ಮತ್ತು ಶಕ್ತಿ-ದಕ್ಷ AI ವ್ಯವಸ್ಥೆಗಳ ಅಭಿವೃದ್ಧಿಗೆ ಸಹಕಾರ ನೀಡುವ ಬಗ್ಗೆ ಘೋಷಣೆಯಲ್ಲಿ ಗಮನ ಹರಿಸಲಾಗಿದೆ. ಭಾರತ ಈಗಾಗಲೇ AI ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ BRICS ಮೂಲಕ AI ಸಂಶೋಧನೆ, ಡೇಟಾ, ಕೌಶಲ್ಯಾಭಿವೃದ್ಧಿ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ಸಹಕಾರ ಹೆಚ್ಚಾದರೆ ಭಾರತಕ್ಕೆ ದೊಡ್ಡ ಅವಕಾಶ ಸಿಗಬಹುದು.

ಡಿಜಿಟಲ್‌ ಕ್ಷೇತ್ರದಲ್ಲೂ ಭಾರತದ ಹೆಜ್ಜೆ

ಭಾರತದ Digital Public Infrastructure (DPI) ಮಾದರಿಗೂ BRICS ವೇದಿಕೆಯಲ್ಲಿ ಗಮನ ಸಿಕ್ಕಿದೆ. ಭಾರತವು BRICS Digital Public Infrastructure Repository ಸೇರಿದಂತೆ ಹಲವು ಉಪಕ್ರಮಗಳನ್ನು ಮುಂದಿಟ್ಟಿದೆ. ಇದು ಭಾರತದ UPI, ಡಿಜಿಟಲ್ ಗುರುತಿನ ವ್ಯವಸ್ಥೆ ಮತ್ತು ಇತರೆ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯಗಳ ಅನುಭವವನ್ನು ಇತರ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಅವಕಾಶ ನೀಡಬಹುದು.  

ಆರೋಗ್ಯ ಕ್ಷೇತ್ರದಲ್ಲಿ ಸಹಕಾರ

ಆರೋಗ್ಯ ಕ್ಷೇತ್ರದಲ್ಲೂ ಭಾರತ ಪ್ರಮುಖ ಉಪಕ್ರಮಗಳನ್ನು ಮುಂದಿಟ್ಟಿದೆ. BRICS Training Hub Network for Health Training ಹಾಗೂ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ NIMHANS ಅನ್ನು ಸಂಯೋಜನಾ ಕೇಂದ್ರವಾಗಿ ಬಳಸುವ ಪ್ರಸ್ತಾಪಗಳು ಗಮನ ಸೆಳೆದಿವೆ. ಇದರಿಂದ ವೈದ್ಯಕೀಯ ತರಬೇತಿ, ಆರೋಗ್ಯ ಸೇವೆ, ಮಾನಸಿಕ ಆರೋಗ್ಯ ಮತ್ತು ಸಾಮರ್ಥ್ಯ ನಿರ್ಮಾಣದಲ್ಲಿ ಸದಸ್ಯ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರಕ್ಕೆ ದಾರಿ ತೆರೆದುಕೊಳ್ಳಬಹುದು.

ಭಾರತ-ಚೀನಾ ಸಂಬಂಧಕ್ಕೂ ಮಹತ್ವದ ವೇದಿಕೆ

ಈ BRICS ಶೃಂಗಸಭೆಯ ಮತ್ತೊಂದು ಪ್ರಮುಖ ಬೆಳವಣಿಗೆ ಎಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆ. ಇಬ್ಬರೂ ನಾಯಕರು ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಭಾರತ-ಚೀನಾ ಸಂಬಂಧ ಸುಧಾರಿಸಲು ಅತ್ಯಂತ ಮುಖ್ಯವೆಂದು ಒಪ್ಪಿಕೊಂಡಿದ್ದಾರೆ. ವ್ಯಾಪಾರ, ಪೂರೈಕೆ ಸರಪಳಿ, ಮಾರುಕಟ್ಟೆ ಪ್ರವೇಶ ಮತ್ತು ಆರ್ಥಿಕ ಸಹಕಾರದ ವಿಚಾರಗಳೂ ಚರ್ಚೆಯಾಗಿವೆ. ಭಾರತ ಮತ್ತು ಚೀನಾದ ನಡುವಿನ ವ್ಯಾಪಾರ ಅಸಮತೋಲನ ದೊಡ್ಡದಾಗಿರುವ ಹಿನ್ನೆಲೆಯಲ್ಲಿ, ಈ ಮಾತುಕತೆ ಆರ್ಥಿಕ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.

ಭಯೋತ್ಪಾದನೆ ವಿಚಾರದಲ್ಲಿ ಭಾರತದ ನಿಲುವಿಗೆ ಬೆಂಬಲ

ನವದೆಹಲಿಯ BRICS ಘೋಷಣೆಯಲ್ಲಿ ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವಿಗೆ ಒತ್ತು ನೀಡಲಾಗಿದೆ. ಪಹಲ್ಗಾಮ್‌ ದಾಳಿಯ ಉಲ್ಲೇಖವೂ ಭಾರತದ ದೃಷ್ಟಿಯಿಂದ ಪ್ರಮುಖವಾಗಿದೆ. ಎಲ್ಲ ರೀತಿಯ ಭಯೋತ್ಪಾದನೆಗೆ ಯಾವುದೇ ಸಮರ್ಥನೆ ಇರಬಾರದು ಮತ್ತು ಭಯೋತ್ಪಾದನೆಗೆ ಹಣಕಾಸು ಹಾಗೂ ಆಶ್ರಯ ನೀಡುವ ವ್ಯವಸ್ಥೆಗಳ ವಿರುದ್ಧ ಕ್ರಮ ಅಗತ್ಯ ಎಂಬ ಸಂದೇಶವನ್ನು BRICS ನೀಡಿದೆ.  

ಹಾಗಾದರೆ ಸಾಮಾನ್ಯ ಜನರಿಗೆ ಏನು ಲಾಭ?

BRICS ಶೃಂಗಸಭೆಯ ನಿರ್ಧಾರಗಳಿಂದ ಸಾಮಾನ್ಯ ಜನರಿಗೆ ನಾಳೆಯಿಂದಲೇ ನೇರವಾಗಿ ಹಣ ಅಥವಾ ಸಬ್ಸಿಡಿ ಸಿಗುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ಪರಿಣಾಮ ಬೀರುವ ಹಲವು ಕ್ಷೇತ್ರಗಳಿವೆ. ವಿದೇಶಿ ವ್ಯಾಪಾರ ಸುಲಭವಾದರೆ ಭಾರತೀಯ ಕಂಪನಿಗಳಿಗೆ ಹೊಸ ಮಾರುಕಟ್ಟೆಗಳು ಸಿಗಬಹುದು. ಸ್ಥಳೀಯ ಕರೆನ್ಸಿ ಪಾವತಿಗಳು ವಿಸ್ತರಿಸಿದರೆ ಕೆಲವು ವ್ಯಾಪಾರ ವೆಚ್ಚಗಳು ಕಡಿಮೆಯಾಗಬಹುದು. AI ಮತ್ತು ಡಿಜಿಟಲ್‌ ಕ್ಷೇತ್ರದಲ್ಲಿ ಸಹಕಾರ ಹೆಚ್ಚಾದರೆ ಉದ್ಯೋಗ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಬಹುದು. ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿ ಸಹಕಾರವೂ ದೇಶದ ಮಾನವ ಸಂಪನ್ಮೂಲಕ್ಕೆ ನೆರವಾಗಬಹುದು.

ಸವಾಲುಗಳೇನು?

BRICS ಒಂದು ಏಕೀಕೃತ ಆರ್ಥಿಕ ಒಕ್ಕೂಟವಲ್ಲ. ಸದಸ್ಯ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳು ಹಲವು ಬಾರಿ ಭಿನ್ನವಾಗಿರುತ್ತವೆ. ಭಾರತ-ಚೀನಾ ಸಂಬಂಧದಲ್ಲಿರುವ ಗಡಿ ಸಮಸ್ಯೆ, ಸದಸ್ಯ ರಾಷ್ಟ್ರಗಳ ನಡುವಿನ ವ್ಯಾಪಾರ ಅಸಮತೋಲನ ಮತ್ತು ವಿವಿಧ ದೇಶಗಳ ವಿಭಿನ್ನ ವಿದೇಶಾಂಗ ನೀತಿಗಳು ಒಗ್ಗಟ್ಟಿನ ನಿರ್ಧಾರಗಳಿಗೆ ಸವಾಲಾಗಬಹುದು. ಹೀಗಾಗಿ BRICS ತಕ್ಷಣವೇ ಡಾಲರ್‌ಗೆ ಪರ್ಯಾಯವಾಗುತ್ತದೆ ಅಥವಾ ಹೊಸ ಜಾಗತಿಕ ಕರೆನ್ಸಿ ಹುಟ್ಟುತ್ತದೆ ಎಂದು ನಿರೀಕ್ಷಿಸುವುದು ವಾಸ್ತವಿಕವಲ್ಲ. ಪ್ರಸ್ತುತ ನಡೆಯುತ್ತಿರುವುದು ಹೆಚ್ಚು ಹಂತಹಂತದ ಆರ್ಥಿಕ ಮತ್ತು ಪಾವತಿ ವ್ಯವಸ್ಥೆಯ ಸಹಕಾರ.

ಒಟ್ನಲ್ಲಿ 2026ರ BRICS ಶೃಂಗಸಭೆ ಭಾರತಕ್ಕೆ ಕೇವಲ ರಾಜತಾಂತ್ರಿಕ ಕಾರ್ಯಕ್ರಮವಲ್ಲ. ಜಾಗತಿಕ ಆಡಳಿತದಲ್ಲಿ ಹೆಚ್ಚಿನ ಪಾತ್ರ, ಸ್ಥಳೀಯ ಕರೆನ್ಸಿ ವ್ಯಾಪಾರ, ಡಿಜಿಟಲ್‌ ಪಬ್ಲಿಕ್‌ ಇನ್‌ಫ್ರಾಸ್ಟ್ರಕ್ಚರ್‌, AI, ಆರೋಗ್ಯ ಮತ್ತು ಕೈಗಾರಿಕಾ ಸಹಕಾರದ ಮೂಲಕ ಭಾರತ ತನ್ನ ಪ್ರಭಾವವನ್ನು ವಿಸ್ತರಿಸಲು ಇದು ಪ್ರಮುಖ ವೇದಿಕೆಯಾಗಿದೆ. ಆದರೆ ಇದರ ನಿಜವಾದ ಫಲಿತಾಂಶ ನಿರ್ಧಾರಗಳನ್ನು ಎಷ್ಟು ವೇಗವಾಗಿ ಕಾರ್ಯರೂಪಕ್ಕೆ ತರಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಡಾಲರ್‌ ಬದಲಿಗೆ ನಾಳೆಯಿಂದ BRICS ಕರೆನ್ಸಿ ಬರುತ್ತದೆ ಎಂಬುದಕ್ಕಿಂತ, ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಮತ್ತು ಪರ್ಯಾಯ ಪಾವತಿ ವ್ಯವಸ್ಥೆಗಳನ್ನು ನಿರ್ಮಿಸುವ ಪ್ರಯತ್ನವೇ ಈ ಶೃಂಗಸಭೆಯ ನಿಜವಾದ ಮಹತ್ವವಾಗಿದೆ.

Add Zee News as a Preferred Source
TAGS:
Business