SOCIAL MEDIA

Newsletter

PARTNER SITES
Select Language Select State

ಬ್ಯಾಂಕ್‌ ಗ್ರಾಹಕರೇ ಗಮನಿಸಿ! ಎಲ್ಲಾ ಶನಿವಾರ ಬ್ಯಾಂಕ್‌ ಕ್ಲೋಸ್‌? ಇಲ್ಲಿದೆ ನೋಡಿ ಅಸಲಿ ಸತ್ಯ

SBI ಸೇರಿದಂತೆ ಎಲ್ಲಾ ಸರ್ಕಾರಿ ಬ್ಯಾಂಕ್‌ಗಳಿಗೆ ಇನ್ನು ಮುಂದೆ ಪ್ರತಿ ಶನಿವಾರ ರಜೆ ಎಂಬ ವೈರಲ್‌ ನೋಟಿಫಿಕೇಶನ್‌ ನಕಲಿ ಎಂದು PIB ಸ್ಪಷ್ಟಪಡಿಸಿದೆ. ಸದ್ಯ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಬ್ಯಾಂಕ್‌ಗಳಿಗೆ ರಜೆ ಇದ್ದು, ಐದು ದಿನಗಳ ಬ್ಯಾಂಕಿಂಗ್‌ ವಾರದ ಬೇಡಿಕೆ ಇನ್ನೂ ಚರ್ಚೆಯ ಹಂತದಲ್ಲಿದೆ.

Written By Puttaraj K Alur
Published: Oct 01, 2026, 04:02 PM IST | Updated: Oct 01, 2026, 04:11 PM IST
Image Credit: Saturday Bank Holiday
Join

Saturday Bank Holiday: ದೇಶದ ಸರ್ಕಾರಿ ಬ್ಯಾಂಕ್‌ಗಳಿಗೆ ಇನ್ಮುಂದೆ ಪ್ರತಿ ಶನಿವಾರವೂ ರಜೆ ಇರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ (Public Sector Banks) ಪ್ರತಿ ಶನಿವಾರವನ್ನ ಸಾರ್ವಜನಿಕ ರಜೆಯಾಗಿ ಘೋಷಿಸಲಾಗಿದೆ ಎಂದು ಹೇಳುವ ಗಜೆಟ್ ನೋಟಿಫಿಕೇಶನ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ವೈರಲ್‌ ನೋಟಿಫಿಕೇಶನ್‌ ನಕಲಿ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.  

ವೈರಲ್‌ ನೋಟಿಫಿಕೇಶನ್‌ನಲ್ಲಿ ಏನಿತ್ತು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ದಾಖಲೆಯಲ್ಲಿ, ಕೇಂದ್ರ ಸರ್ಕಾರವು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಪ್ರತಿ ಶನಿವಾರವೂ ಸಾರ್ವಜನಿಕ ರಜೆ ಘೋಷಿಸಿದೆ ಎಂದು ಹೇಳಲಾಗಿತ್ತು. ಸೆಪ್ಟೆಂಬರ್ 30, 2026ರ ದಿನಾಂಕ ಹೊಂದಿರುವ ಈ ದಾಖಲೆಯನ್ನ ಸರ್ಕಾರಿ ಗಜೆಟ್ ನೋಟಿಫಿಕೇಶನ್‌ನಂತೆ ಬಿಂಬಿಸಲಾಗಿತ್ತು. ಈ ನೋಟಿಫಿಕೇಶನ್‌ನಲ್ಲಿ Negotiable Instruments Act, 1881ರ ಸೆಕ್ಷನ್ 25ರ ಅಡಿಯಲ್ಲಿ ಎಲ್ಲಾ ಶನಿವಾರಗಳನ್ನ ಸಾರ್ವಜನಿಕ ರಜೆಯಾಗಿ ಘೋಷಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ PIB ಫ್ಯಾಕ್ಟ್ ಚೆಕ್ ಈ ದಾಖಲೆಯನ್ನ ಪರಿಶೀಲಿಸಿದ ಬಳಿಕ ಅದು ನಕಲಿ ಎಂದು ತಿಳಿಸಿದೆ.  

PIB ನೀಡಿದ ಸ್ಪಷ್ಟನೆ ಏನು?

ಸರ್ಕಾರಿ ಮಾಹಿತಿಯನ್ನ ಪರಿಶೀಲಿಸುವ PIB Fact Check ಘಟಕವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದಾಖಲೆ ನಕಲಿ ಎಂದು ಸ್ಪಷ್ಟಪಡಿಸಿದೆ. ಹಣಕಾಸು ಸಚಿವಾಲಯದ Department of Financial Services ವತಿಯಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಪ್ರತಿ ಶನಿವಾರ ಸಾರ್ವಜನಿಕ ರಜೆ ಘೋಷಿಸುವ ಯಾವುದೇ ಅಧಿಕೃತ ನೋಟಿಫಿಕೇಶನ್‌ ಹೊರಡಿಸಲಾಗಿಲ್ಲವೆಂದು ತಿಳಿಸಿದೆ. ಹೀಗಾಗಿ ವೈರಲ್‌ ಆಗಿರುವ ದಾಖಲೆಯನ್ನ ಆಧರಿಸಿ ಬ್ಯಾಂಕ್‌ಗಳ ಕೆಲಸದ ದಿನಗಳಲ್ಲಿ ಬದಲಾವಣೆ ಆಗಿದೆ ಎಂದು ಪರಿಗಣಿಸಬಾರದು. 

ಹಾಗಾದ್ರೆ ಸದ್ಯ ಬ್ಯಾಂಕ್‌ಗಳ ಶನಿವಾರ ರಜೆ ನಿಯಮ ಏನು?

ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ. ಉಳಿದ ಶನಿವಾರಗಳಲ್ಲಿ ಸಾಮಾನ್ಯ ಬ್ಯಾಂಕಿಂಗ್‌ ಸೇವೆಗಳು ಲಭ್ಯವಿರುತ್ತವೆ. ಎಲ್ಲಾ ಶನಿವಾರಗಳನ್ನ ರಜೆಯಾಗಿ ಘೋಷಿಸುವ ಯಾವುದೇ ಹೊಸ ಅಧಿಕೃತ ನಿರ್ಧಾರ ಸದ್ಯ ಪ್ರಕಟವಾಗಿಲ್ಲ. 

ಐದು ದಿನಗಳ ಬ್ಯಾಂಕಿಂಗ್‌ ವಾರದ ಬೇಡಿಕೆ

ಇದೇ ವೇಳೆ ಬ್ಯಾಂಕ್‌ ಉದ್ಯೋಗಿಗಳ ಸಂಘಟನೆಗಳು ಬಹುಕಾಲದಿಂದ ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರಬೇಕೆಂದು ಬೇಡಿಕೆ ಇಟ್ಟಿವೆ. ಸೆಪ್ಟೆಂಬರ್ 2026ರಲ್ಲಿ ಬ್ಯಾಂಕ್‌ ಸಂಘಟನೆಗಳ ವತಿಯಿಂದ ಈ ಬೇಡಿಕೆಯನ್ನ ಮುಂದಿಟ್ಟುಕೊಂಡು ಮುಷ್ಕರಕ್ಕೂ ಕರೆ ನೀಡಲಾಗಿತ್ತು. ಸರ್ಕಾರ ಮತ್ತು ಬ್ಯಾಂಕ್‌ ಸಂಘಟನೆಗಳ ನಡುವೆ ಈ ವಿಚಾರವಾಗಿ ಚರ್ಚೆಗಳು ನಡೆದಿವೆ. 

ಆದರೆ ಐದು ದಿನಗಳ ಬ್ಯಾಂಕಿಂಗ್‌ ವಾರವನ್ನ ಜಾರಿಗೆ ತರುವ ಅಂತಿಮ ಅಧಿಕೃತ ಅಧಿಸೂಚನೆ ಹೊರಬಂದಿಲ್ಲ. ಸೆಪ್ಟೆಂಬರ್ 21ರಂದು ಹೊರಡಿಸಿದ PIB ಪ್ರಕಟಣೆಯಲ್ಲೂ ಐದು ದಿನಗಳ ಬ್ಯಾಂಕಿಂಗ್‌ ವಾರದ ಬೇಡಿಕೆ ಇನ್ನೂ ಚರ್ಚೆಯಲ್ಲಿರುವ ವಿಷಯವೆಂದು ತಿಳಿಸಲಾಗಿತ್ತು. ಸರ್ಕಾರದೊಂದಿಗೆ ಬ್ಯಾಂಕ್‌ ಸಂಘಟನೆಗಳ ಮಾತುಕತೆ ಮುಂದುವರಿದಿರುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿತ್ತು. 

ಗ್ರಾಹಕರು ಏನು ಗಮನಿಸಬೇಕು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸರ್ಕಾರಿ ನೋಟಿಫಿಕೇಶನ್‌ಗಳನ್ನ ಪರಿಶೀಲಿಸದೆ ನಂಬುವುದು ಅಥವಾ ಹಂಚಿಕೊಳ್ಳುವುದು ಸೂಕ್ತವಲ್ಲ. ಬ್ಯಾಂಕ್‌ ರಜೆ, ಬಡ್ಡಿದರ, ನಿಯಮ ಬದಲಾವಣೆ ಸೇರಿದಂತೆ ಹಣಕಾಸು ಸಂಬಂಧಿತ ಪ್ರಮುಖ ಮಾಹಿತಿಗೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌, RBI ಅಥವಾ ಕೇಂದ್ರ ಸರ್ಕಾರದ ಅಧಿಕೃತ ಮೂಲಗಳನ್ನ ಪರಿಶೀಲಿಸುವುದು ಸೂಕ್ತ.

ಹೀಗಾಗಿ SBI ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಎಲ್ಲಾ ಶನಿವಾರ ರಜೆ ಎಂಬ ಸುದ್ದಿ ಸದ್ಯಕ್ಕೆ ಸುಳ್ಳು. ಐದು ದಿನಗಳ ಬ್ಯಾಂಕಿಂಗ್‌ ವಾರದ ಬೇಡಿಕೆ ಕುರಿತು ಚರ್ಚೆ ನಡೆಯುತ್ತಿದ್ದರೂ, ಪ್ರತಿ ಶನಿವಾರವನ್ನ ರಜೆಯಾಗಿ ಘೋಷಿಸುವ ಯಾವುದೇ ಅಧಿಕೃತ ಸರ್ಕಾರಿ ಆದೇಶ ಇದುವರೆಗೆ ಹೊರಬಂದಿಲ್ಲ. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES